ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ಪರಿಹಾರಕ್ಕೆ ಸಿಬ್ಬಂದಿ ಒತ್ತಾಯ

ಅರಣ್ಯ ರಕ್ಷಕ ಮುರಗಪ್ಪ ತಮ್ಮನಗೋಳ ಶವ ಇಟ್ಟು ಪ್ರತಿಭಟನೆ
Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಮೈಸೂರು: ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಕಾಳ್ಗಿಚ್ಚು ನಂದಿಸುವ ವೇಳೆ ಮೃತಪಟ್ಟ ಅರಣ್ಯ ರಕ್ಷಕ ಮುರಗಪ್ಪ ತಮ್ಮನಗೋಳ ಅವರ ಶವವನ್ನು ಅರಣ್ಯ ಭವನದ ಮುಂದೆ ಇಟ್ಟು ಪೊಲೀಸ್ ಇಲಾಖೆ ಮಾದರಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಭಾನುವಾರ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಕರ್ತವ್ಯನಿರತರಾಗಿದ್ದಾಗ ಮೃತಪಟ್ಟರೆ ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಪರಿಹಾರ ಸಿಗುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟರೆ ₹ 5 ಲಕ್ಷವಷ್ಟೇ ಪರಿಹಾರ ಸಿಗುತ್ತದೆ. ಬೆಂಕಿ ನಂದಿಸಲು ಇಲಾಖೆಯಲ್ಲಿ ಆಧುನಿಕ ಉಪಕರಣಗಳಿಲ್ಲ. ಈಗಲೂ ಸೊಪ್ಪಿನಿಂದಲೇ ನಿಯಂತ್ರಿಸಬೇಕಾಗಿದೆ. ಕಾಡೆಲ್ಲವೂ ಒಣಗಿರುವಾಗ ಹಸಿರು ಸೊಪ್ಪನ್ನು ಹುಡುಕುವುದಾದರೂ ಎಲ್ಲಿ ಎಂದು ಪ್ರಶ್ನಿಸಿದರು.

ಇಲಾಖೆಯ ಕಚೇರಿಗಳು ಬಿಲ್ಲುಗಳನ್ನು ತಯಾರಿಸುವ ಕಾರ್ಖಾನೆಗಳಾಗಿವೆ. ಅಧಿಕಾರಿಗಳಿಗೆ ಕೆಳಗಿನ ಹಂತದಲ್ಲಿರುವ ಸಿಬ್ಬಂದಿಯ ಕಷ್ಟದ ಅರಿವಿಲ್ಲ. ನ್ಯಾಯ ಕೇಳಲು ಹೋದರೆ ಅಮಾನತುಪಡಿಸುವುದಾಗಿ ಬೆದರಿಸುತ್ತಾರೆ. ಇದರ ನಡುವೆ ಸಿಬ್ಬಂದಿ ಉಸಿರು ಬಿಗಿ ಹಿಡಿದು ಕೆಲಸ ಮಾಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದುವರೆಗೂ ಜನಪ್ರತಿನಿಧಿಯೊಬ್ಬರೂ ಸಂತಾಪ ವ್ಯಕ್ತಪಡಿಸಿಲ್ಲ. ಸ್ಥಳಕ್ಕೆ ಉಸ್ತುವಾರಿ ಸಚಿವ, ಅರಣ್ಯ ಸಚಿವ ಬರಲೇಬೇಕು ಎಂದು ಪಟ್ಟು ಹಿಡಿದರು.

₹ 25 ಲಕ್ಷ ಪರಿಹಾರದ ಭರವಸೆ: ಪ್ರತಿಭಟನಾಕಾರರ ಮಾತುಗಳನ್ನು ಆಲಿಸಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜೆ.ಹೊಸಮಠ (ವನ್ಯಜೀವಿ) ಹುಲಿ ರಕ್ಷಿತಾರಣ್ಯದ ನಿಧಿಯಿಂದ ₹ 20 ಲಕ್ಷ ಹಾಗೂ ಇಲಾಖೆಯಿಂದ ₹ 5 ಲಕ್ಷ ಪರಿಹಾರ ನೀಡುವುದರ ಜತೆಗೆ, ಮುರಗಪ್ಪ ಪತ್ನಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೊಡಿಸುವ ಭರವಸೆ ನೀಡಿದರು.

ಭರವಸೆಯನ್ನು ತಿರಸ್ಕರಿಸಿದ ಪ್ರತಿಭಟನಾನಿರತರು ಹುಲಿ ರಕ್ಷಿತಾರಣ್ಯದಲ್ಲಿ ಮೃತಪಟ್ಟವರಿಗೆ ಇಷ್ಟು ಪರಿಹಾರ ಸಿಗುತ್ತದೆ. ಇದನ್ನು ಬಿಟ್ಟು ಬೇರೆ ಮೀಸಲು ಅರಣ್ಯದಲ್ಲಿ ಮೃತಪಟ್ಟ ಸಿಬ್ಬಂದಿಗೆ ಪರಿಹಾರ ಸಿಗುವುದಿಲ್ಲ. ಪೊಲೀಸ್ ಇಲಾಖೆ ಮಾದರಿಯಲ್ಲಿಯೇ ಎಲ್ಲ ಸಿಬ್ಬಂದಿಗೂ ಪರಿಹಾರ ಸಿಗಬೇಕು. ಅರಣ್ಯ ಸಚಿವರು ಸ್ಥಳಕ್ಕೆ ಬರುವವರೆಗೂ ಶವ ತೆಗೆಯಲು ಬಿಡುವುದಿಲ್ಲ ಎಂದು ಪ್ರತಿಭಟನೆ ಮುಂದುವರಿಸಿದರು.

ಕೈಮುಗಿದ ಹೊಸಮಠ! ಮುರಗಪ್ಪ ಅವರ ಪತ್ನಿ 7 ತಿಂಗಳ ಗರ್ಭಿಣಿ. ವಿಜಯಪುರ ಜಿಲ್ಲೆಗೆ ಶವ ಒಯ್ಯಬೇಕಿದೆ. ಈ ಹಂತದಲ್ಲಿ ಜನಪ್ರತಿನಿಧಿಗಳಿಗಾಗಿ ಕಾಯುತ್ತಾ ಕೂರುವುದು ಸರಿಯಲ್ಲ. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ. ಸೋಮವಾರ ಮುಖ್ಯಮಂತ್ರಿಯೊಂದಿಗೆ ಸಭೆ ಇದ್ದು, ಅಲ್ಲಿ ಶಾಶ್ವತ ಪರಿಹಾರ ಕುರಿತ ಪ್ರಸ್ತಾವ ಸಲ್ಲಿಸುತ್ತೇನೆ ಎಂದು ಭಾವೋದ್ವೇಗಕ್ಕೆ ಒಳಗಾದ ಹೊಸಮಠ ಕೈ ಮುಗಿದರು. ಇವರ ಮನವಿಗೆ ಓಗೊಟ್ಟ ಸಿಬ್ಬಂದಿ ಪ್ರತಿಭಟನೆ ವಾಪಸ್
ಪಡೆದರು.

ತಪ್ಪು ಮಾಹಿತಿ ನೀಡಿದ ಅಧಿಕಾರಿಗಳು?
ಉಸಿರುಗಟ್ಟಿ ಮುರಗಪ್ಪ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದರು. ಆದರೆ, ಕಾಳ್ಗಿಚ್ಚಿನ ನಡುವೆ ಸುಟ್ಟು ಕರಕಲಾದ ಮುರಗಪ್ಪ ಅವರ ದೇಹವನ್ನು ಸಿಬ್ಬಂದಿ ಮೊಬೈಲ್‌ನಲ್ಲಿ ತೋರಿಸುತ್ತಾ, ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಮುರಗಪ್ಪ ಸಜೀವ ದಹನವಾಗಿದ್ದಾರೆ ಎಂದು ತಿಳಿಸಿದರು.

ಮುರಗಪ್ಪ ಮೃತಪಟ್ಟ ಸುದ್ದಿಯನ್ನು ಅಧಿಕಾರಿಗಳು ತಡರಾತ್ರಿಯವರೆಗೂ ಅವರ ಕುಟುಂಬಕ್ಕೆ ತಿಳಿಸಲಿಲ್ಲ ಎಂದು ಸಂಬಂಧಿಕರು ದೂರಿದರು.
ಟಿ.ವಿ ನೋಡಿ ಸುದ್ದಿ ತಿಳಿದು, ನಿಜವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಹೌದು ಎಂಬ ಉತ್ತರ ದೊರೆಯಿತು ಎಂದು ಸುದ್ದಿಗಾರರ ಬಳಿ ಕಿಡಿಕಾರಿದರು. ₹ 40 ಲಕ್ಷ ಪರಿಹಾರ ನೀಡುವಂತೆ  ಆಗ್ರಹಿಸಿದರು.

*
ಬಂಡೀಪುರ ಕಾಡ್ಗಿಚ್ಚಿನಲ್ಲಿ ಪ್ರಾಣ ಕಳೆದುಕೊಂಡ ಅರಣ್ಯ ರಕ್ಷಕ ಮುರಗಪ್ಪ ಕುಟುಂಬಕ್ಕೆ ಸಂತಾಪ ಸೂಚಿಸುವೆ. ಅವರ ಕುಟುಂಬಕ್ಕೆ ಸರ್ಕಾರ ನೆರವು ನೀಡಲಿದೆ.
–ಸಿದ್ದರಾಮಯ್ಯ,
ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT