ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಗಣತಿಗೆ ಸ್ವಯಂಚಾಲಿತ ವಿಧಾನ

ನಿಖರ ಮಾಹಿತಿ ಕಲೆಹಾಕಲು ದೇಶದಲ್ಲೇ ಮೊದಲ ಬಾರಿ ಹೊಸ ಪದ್ಧತಿ ಅಳವಡಿಕೆ
Last Updated 19 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕೋಪಯೋಗಿ ಇಲಾಖೆ ಇದೇ ಮೊದಲ ಬಾರಿ ಸಿಸಿ ಕ್ಯಾಮೆರಾ ಬಳಸಿ ಸ್ವಯಂಚಾಲಿತ ವಿಶ್ಲೇಷಣಾತ್ಮಕ ವಿಧಾನದ ಮೂಲಕ ರಾಜ್ಯದ ಪ್ರಮುಖ ರಸ್ತೆಗಳ ಮೇಲೆ ಸಂಚರಿಸುವ ವಾಹನಗಳ ಗಣತಿ ಕಾರ್ಯ ನಡೆಸುತ್ತಿದೆ.

ವಾಹನಗಳ ಗಣತಿ ಕಾರ್ಯ ಇದೇ ತಿಂಗಳ 22ರಿಂದ 24ರವರೆಗೆ ನಿರಂತರ 48 ಗಂಟೆ ಹಮ್ಮಿಕೊಳ್ಳಲಾಗಿದ್ದು, ಶಿವಮೊಗ್ಗ ವೃತ್ತದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಈ ಹೊಸ ವಿಧಾನ ಅನುಸರಿಸಲಾಗುತ್ತಿದೆ.

ಲೋಕೋಪಯೋಗಿ ಇಲಾಖೆ ದಶಕಗಳಿಂದಲೂ ಪ್ರತಿ ವರ್ಷ ಎರಡು ಬಾರಿ ವಾಹನಗಳ ಗಣತಿ ಕಾರ್ಯ ನಡೆಸುತ್ತಾ ಬಂದಿದೆ. ವರ್ಷದ ಆರಂಭದಲ್ಲಿ 2 ದಿನ ಹಾಗೂ 6 ತಿಂಗಳ ನಂತರ 7 ದಿನ ಹಗಲು–ರಾತ್ರಿ ನಿರಂತರವಾಗಿ ವಾಹನಗಳ ಗಣತಿ ಮಾಡಲಾಗುತ್ತದೆ.

ಮಾನವ ಸಂಪನ್ಮೂಲ ಪೂರೈಸುವ ಕಂಪೆನಿಗಳಿಗೆ ಇದುವರೆಗೂ ಗಣತಿ ಕಾರ್ಯ ನಡೆಸಿಕೊಡಲು ಹೊರಗುತ್ತಿಗೆ ನೀಡಲಾಗುತ್ತಿತ್ತು. ಗುತ್ತಿಗೆ ಪಡೆದ ಕಂಪೆನಿಗಳು ಗುರುತಿಸಿದ ಪ್ರದೇಶಗಳಲ್ಲಿ ಟೆಂಟ್‌ ಹಾಕಿಕೊಂಡು ಸಿಬ್ಬಂದಿ ಮೂಲಕ ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಲೆಕ್ಕಹಾಕಿ ಇಲಾಖೆಗೆ ವರದಿ ಸಲ್ಲಿಸುತ್ತಿದ್ದವು.

ಹೊರಗುತ್ತಿಗೆ ಸಿಬ್ಬಂದಿ ವಾಹನಗಳ ಲೆಕ್ಕಹಾಕುವಾಗ ರಾತ್ರಿ ಸಮಯದಲ್ಲಿ ನಿದ್ದೆ ಹೋದರೆ ಅಥವಾ ಕೆಲಸದಲ್ಲಿ ನಿರ್ಲಕ್ಷ್ಯ ತೋರಿದರೆ ವಾಹನಗಳ ನಿಖರ ಮಾಹಿತಿ ದೊರೆಯುತ್ತಿರಲಿಲ್ಲ.

ಒಟ್ಟಾರೆ ಗಣತಿಯ ವರದಿ ಸಲ್ಲಿಸುವಾಗ ಪ್ರತಿ ವರ್ಷಕ್ಕಿಂತ ಒಂದಿಷ್ಟು ಶೇಕಡವಾರು ವಾಹನಗಳ ಸಂಚಾರ ದಟ್ಟಣೆ ಹೆಚ್ಚಿದೆ ಎಂದೇ ಬಿಂಬಿಸಲಾಗುತ್ತಿತ್ತು. ಹಾಗಾಗಿ ವಾಹನ ಗಣತಿಯ ನಿಖರ ಮಾಹಿತಿ ದೊರೆಯುತ್ತಿರಲಿಲ್ಲ. ಇಂತಹ ಅಂದಾಜು ಗಣತಿಗಿಂತ ನಿಖರವಾಗಿ ವಾಹನಗಳ ಸಂಚಾರ ದಟ್ಟಣೆ ಲೆಕ್ಕ ಹಾಕಲು ಇದೇ ಮೊದಲ ಬಾರಿ ಸಿಸಿ ಕ್ಯಾಮೆರಾ ಬಳಸಿ ಸ್ವಯಂಚಾಲಿತ ವಿಶ್ಲೇಷಣಾತ್ಮಕ ವಿಧಾನದ ಮೂಲಕ ಗಣತಿ ಕೈಗೊಳ್ಳಲಾಗಿದೆ.

ರಸ್ತೆಗಳ ವಿಸ್ತರಣೆ, ಅಭಿವೃದ್ಧಿಗೆ ಗಣ ತಿಯೇ ಆಧಾರ: ಯಾವುದೇ ರಸ್ತೆಗಳ ವಿಸ್ತರಣೆ, ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳಾಗಿ, ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸಲು, ರಸ್ತೆಗಳ ಗುಣಮಟ್ಟದ ಪ್ರಮಾಣ ನಿರ್ಧರಿಸಲು ಇಲಾಖೆ ನಡೆಸುವ ಈ ವಾಹನ ಗಣತಿಯೇ ಆಧಾರ.

‘ಶಿವಮೊಗ್ಗ ವೃತ್ತ ವ್ಯಾಪ್ತಿಯಲ್ಲಿ ಒಟ್ಟು 8 ಸಾವಿರ ಕಿ.ಮೀ. ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಪ್ರಮುಖ ರಸ್ತೆಗಳು ಹಾದು ಹೋಗಿವೆ. ಪ್ರತಿ ವರ್ಷದಂತೆ ಈ ವರ್ಷವೂ 402 ವಾಹನ ಗಣತಿ ಕೇಂದ್ರ ತೆರೆಯಲಾಗಿದೆ. ಅವುಗಳಲ್ಲಿ 200 ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಉಳಿದ 202 ಕೇಂದ್ರಗಳಲ್ಲಿ ಹೊರ ಗುತ್ತಿಗೆ ಸಿಬ್ಬಂದಿ ಗಣತಿ ಕಾರ್ಯ ನಡೆಸಲಿದ್ದಾರೆ.

ಇದರ ಯಶಸ್ವಿನ ಆಧಾರದಲ್ಲಿ ಸರ್ಕಾರ ರಾಜ್ಯದ ಎಲ್ಲೆಡೆ ಈ ಹೊಸ ವಿಧಾನ ಅಳವಡಿಸುತ್ತದೆ’ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್‌ ಬಿ.ಎಸ್‌.ಬಾಲಕೃಷ್ಣ.

ಹೊಸ ವಿಧಾನದಿಂದ ವಾಹನಗಳ ದಟ್ಟಣೆಯ ನಿಖರ ಮಾಹಿತಿ ದೊರೆಯುವ ಜತೆಗೆ, ಭವಿಷ್ಯದಲ್ಲಿ ಅಗತ್ಯ ಇರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು, ನಿರ್ವಹಣಾ ವೆಚ್ಚ ತಗ್ಗಿಸಲು, ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. ರಸ್ತೆಗಳಿಗೆ ಅವೈಜ್ಞಾನಿಕವಾಗಿ ಖರ್ಚು ಮಾಡುವ ಆರ್ಥಿಕ ಹೊರೆಯೂ ಸರ್ಕಾರಕ್ಕೆ ಕಡಿಮೆಯಾಗಲಿದೆ.

ಹೀಗಿದೆ ಹೊಸ ಕಾರ್ಯ ವಿಧಾನ: ಶಿವಮೊಗ್ಗ ವೃತ್ತ ವ್ಯಾಪ್ತಿಯ 200 ಸ್ಥಳಗಳಲ್ಲಿ ಉನ್ನತ ತಾಂತ್ರಿಕ ಕೌಶಲ ಇರುವ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ರಸ್ತೆ ಮೂಲಕ ಹಾದು ಹೋಗುವ ಪ್ರತಿ ವಾಹನಗಳ ಚಿತ್ರ ಸೆರೆಹಿಡಿದು ನಂತರ ಅದಕ್ಕಾಗಿಯೇ ಸಿದ್ಧಪಡಿಸಿರುವ ಸಾಫ್ಟ್‌ವೇರ್‌ ತಂತ್ರಾಂಶಕ್ಕೆ ರವಾನಿಸುತ್ತವೆ.

ಈ ಸಾಫ್ಟ್‌ವೇರ್‌ ಎಲ್ಲ ವಾಹನಗಳನ್ನೂ ಪ್ರತ್ಯೇಕವಾಗಿ ಲೆಕ್ಕಹಾಕಿ, ವಿಂಗಡಿಸುತ್ತದೆ. ಕ್ಯಾಮೆರಾದ ಮುಂದೆ ಒಂದು ವಾಹನ ಹಾದು ಹೋದಾಗಲೂ, ಆ ಕ್ಷಣವೇ ಅದು ಯಾವ ವಾಹನ ಎಂದು ವಿಂಗಡಿಸುವ ಜತೆಗೆ, ಒಟ್ಟು ಎಷ್ಟು ವಾಹನಗಳಾದವು ಎಂದು ನಿಖರ ಅಂಕಿ–ಅಂಶ ನೀಡುತ್ತದೆ.

ಈ ಹೊಸ ವಿಧಾನ ಜಾರಿಯ ಹೊಣೆಗಾರಿಕೆಯನ್ನು ಬೆಂಗಳೂರು ಹಾಗೂ ಚಿಕ್ಕಮಗಳೂರು ಮೂಲದ ಎರಡು ಕಂಪೆನಿಗಳು ಗುತ್ತಿಗೆ ಪಡೆದಿವೆ. ಗಣತಿ ಆರಂಭಕ್ಕೂ ಮೊದಲು 20 ಕೇಂದ್ರಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ.

ವಿದ್ಯುತ್‌ ವ್ಯತ್ಯಯದ ಸವಾಲು
ಜಪಾನ್‌, ಅಮೆರಿಕ, ಯೂರೋಪ್‌ ನಂತಹ ಮುಂದುವರಿದ ದೇಶಗಳಲ್ಲಿ ಈ ವಿಧಾನ ಬಳಸಿ ಗಣತಿ ನಡೆಸಲಾಗುತ್ತದೆ. ಅಮೆರಿಕ 1937ರಲ್ಲೇ ಸ್ವಯಂಚಾಲಿತ ಗಣತಿಗೆ ಚಾಲನೆ ನೀಡಿತ್ತು. ಭಾರತದಲ್ಲಿ ಮಾತ್ರ ಈ ಪದ್ಧತಿ ಅಳವಡಿಕೆ ಇದೇ ಮೊದಲು. ಹೊಸ ವಿಧಾನದ ಯಶಸ್ಸಿಗೆ ನಿರಂತರ ವಿದ್ಯುತ್‌ ಪೂರೈಕೆಯೂ ಮುಖ್ಯ.

‘ಫೆ. 22ರ ಬೆಳಿಗ್ಗೆ 6ರಿಂದ ಫೆ 24ರ ಬೆಳಿಗ್ಗೆ 6ರವರೆಗೆ ಮೂರೂ ಜಿಲ್ಲೆಗಳಲ್ಲಿ ನಿರಂತರ ವಿದ್ಯುತ್ ಪೂರೈಸಲು ಲೋಕೋಪಯೋಗಿ ಸಚಿವರು, ಪ್ರಧಾನ ಕಾರ್ಯದರ್ಶಿಗಳು ಇಂಧನ ಇಲಾಖೆಗೆ ಸೂಚಿಸಿದ್ದಾರೆ. ಹಾಗಾಗಿ, ವಿದ್ಯುತ್‌ ವ್ಯತ್ಯಯದ ಸಮಸ್ಯೆ ಎದುರಾಗುವುದಿಲ್ಲ. ಪ್ರತಿ ಕ್ಯಾಮೆರಾ ಸಂರಕ್ಷಣೆಗೂ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದೆ. 170 ಎಂಜಿನಿಯರ್‌ಗಳು ಗಣತಿಯ ಮೇಲೆ ನಿಗಾ ಇರಿಸುತ್ತಾರೆ’ ಎನ್ನುತ್ತಾರೆ ಎಂಜಿನಿಯರ್‌ ಬಾಲಕೃಷ್ಣ.

*
ಈ ವಿಧಾನದಿಂದ ಅತ್ಯಂತ ನಿಖರ ಮಾಹಿತಿ ಲಭಿಸುತ್ತದೆ. ಪ್ರತಿ ರಸ್ತೆಗಳಿಗೂ ಅಗತ್ಯ ಇರುವಷ್ಟು ಹಣ ಮಾತ್ರ ವೆಚ್ಚ ಮಾಡಬಹುದು. ಇದರಿಂದ ಆರ್ಥಿಕ ಹೊರೆ ತಗ್ಗಲಿದೆ.
–ಬಿ.ಎಸ್‌.ಬಾಲಕೃಷ್ಣ , ಅಧೀಕ್ಷಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT