ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತ ಕಚೇರಿಗೆ ಅಂತಿಮವಾಗದ ಸ್ಥಳ

ಜಿಲ್ಲಾ ಆಡಳಿತ ಕಚೇರಿ ಸಂಕೀರ್ಣ ಸ್ಥಳ ಇನ್ನೂ ನಿಗೂಢ
Last Updated 20 ಫೆಬ್ರುವರಿ 2017, 5:49 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ಕಟ್ಟಡ ಜಿಲ್ಲೆಯ ಜನರ ಪಾಲಿಗೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಇದಕ್ಕೆ ರಾಜ್ಯ ಸರ್ಕಾರ ₹ 48 ಕೋಟಿ ಬಿಡುಗಡೆ ಮಾಡಿದರೂ ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲೆಯ ಅಧಿಕಾರಿಗಳು ಇನ್ನೂ ಸ್ಥಳ ಗೊತ್ತುಪಡಿಸಿಲ್ಲ. ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಖಜಾನೆಯಲ್ಲಿ ಹಣ ಕೊಳೆಯುತ್ತಿದೆ.

2012ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಡಾ.ಪಿ.ಸಿ.ಜಾಫರ್‌ ಅವರು ನಗರದ ಚಿಕ್ಕಪೇಟ್‌ನಲ್ಲಿ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. 2013ರಲ್ಲಿ ಕಲಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತು. ನಂತರ ಚಿಕ್ಕಪೇಟ್‌ ತಗ್ಗುಪ್ರದೇಶದಲ್ಲಿರುವ ಕಾರಣ ಬೇರೆ ಕಡೆ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣ ಮಾಡಬೇಕು ಎನ್ನುವ ಒತ್ತಡ ಬಂದವು. ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಅವರು ಮತ್ತೆ ಹೊಸ ನೀಲನಕ್ಷೆ ಸಿದ್ಧಪಡಿಸಿ ಮಾಮನಕೇರಿ ಗುಡ್ಡದ ಮೇಲೆ ಜಾಗ ಗುರುತಿಸಿ ಜಾಗವನ್ನು ಅಂತಿಮಗೊಳಿಸಲು ಪ್ರಾದೇಶಿಕ ಆಯುಕ್ತರ ಮೂಲಕ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಮಾಮನಕೇರಿ ಗುಡ್ಡದ ಮಾರ್ಗದಲ್ಲಿ ಜನವಸತಿ ಇಲ್ಲ. ಸಾರಿಗೆ ಸಂಪರ್ಕವೂ ಇಲ್ಲ. ಬಸವಕಲ್ಯಾಣ, ಹುಮನಾಬಾದ್ ಹಾಗೂ ಭಾಲ್ಕಿ ತಾಲ್ಲೂಕಿನಿಂದ ಬರುವ ಜನರಿಗೆ ಹೆಚ್ಚು ಸಮಸ್ಯೆಯಾಗಲಿದೆ. ಬೀದರ್‌ ಪಟ್ಟಣಕ್ಕೆ ಬಂದು ಇನ್ನೊಂದು ಬಸ್‌ನಲ್ಲಿ ಮಾಮನಕೇರಿಗೆ ಹೋಗಬೇಕಾಗಲಿದೆ. ಇದರಿಂದ ಪ್ರಯಾಣ ವೆಚ್ಚವೂ ಹೊರೆಯಾಗಲಿದೆ. ಸಾರ್ಜಜನಿಕರಿಗೆ ಅನುಕೂಲವಾಗುವ ಸ್ಥಳದಲ್ಲಿಯೇ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಿಸಬೇಕು ಎಂದು ಕಲಬುರ್ಗಿಯ ಪ್ರಾದೇಶಿಕ ಆಯುಕ್ತರು ಸ್ಪಷ್ಟವಾಗಿ ಸೂಚನೆ ನೀಡಿದ್ದರು.

ಆದರೂ ಜಿಲ್ಲಾ ಆಡಳಿತ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿ ಜಾಗ ನೀಡಲು ಮನವಿ ಮಾಡಿಕೊಂಡಿತು. ಅರಣ್ಯ ಸಚಿವ ರಮಾನಾಥ ರೈ ಅವರು ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯಲ್ಲಿರುವ ಅಧಿಕಾರಿ ಎಂ.ಆರ್.ಜಿ.ರೆಡ್ಡಿ ಅವರಿಗೆ ಪತ್ರ ಬರೆದು ಕಡತ ವಿಲೇವಾರಿ ಮಾಡಿಕೊಡುವಂತೆ ಕೇಳಿದ್ದರು ಎನ್ನಲಾಗಿದೆ.  ಜನವರಿ ಕೊನೆಯ ವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ಆದರೆ ಸಭೆಯ ನಂತರ ಏನಾಯಿತು ಎನ್ನುವುದು ಯಾರಿಗೂ ತಿಳಿದಿಲ್ಲ.

ಮಾಮನಕೇರಿಯಲ್ಲಿ ಕಟ್ಟಡ ನಿರ್ಮಾಣ ಮಾಡುವುದರಿಂದ ಅನಾನುಕೂಲಗಳೇ ಅಧಿಕ. ಮಾಮನಕೇರಿ ಗುಡ್ಡದ ಮೇಲೆ ಜಲ ಮೂಲಗಳಿಲ್ಲ. ಮಾಮನಕೇರಿಯ ಗುಡ್ಡದ ಮಣ್ಣು ಬಹುಮಹಡಿಯ ಕಟ್ಟಡ ಕಟ್ಟಲು ಸೂಕ್ತವಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೂ ಜಿಲ್ಲಾ ಆಡಳಿತ ಹಠಕ್ಕೆ ಬಿದ್ದಂತೆ ಅಲ್ಲೇ ಕಟ್ಟಡ ನಿರ್ಮಾಣ ಮಾಡಲು ಹೊರಟಿದೆ.

‘ರಿಯಲ್‌ ಎಸ್ಟೇಟ್‌ ಮಾಲೀಕರ ಒತ್ತಡಕ್ಕೆ ಚುನಾಯಿತ ಪ್ರತಿನಿಧಿಗಳು ಮಣಿದಿರುವುದು ಗುಟ್ಟಾಗಿ ಉಳಿದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೇರಿದ ಜಾಗವೂ ಅಲ್ಲೇ ಇದೆ. ಬೀದರ್‌ ಪಟ್ಟಣ ಒಂದೇ ದಿಕ್ಕಿನಲ್ಲಿ ಬೆಳೆದಿದೆ. ಮಾಮನಕೇರಿಯಲ್ಲಿ ಕಟ್ಟಡ ನಿರ್ಮಾಣ ಮಾಡಿದರೆ ಪೂರ್ವದಲ್ಲೂ ನಗರ ವಿಸ್ತರಣೆಗೆ ಅನುಕೂಲವಾಗಲಿದೆ ಎನ್ನುವ ಒಂದೇ ವಾದಕ್ಕೆ ಅಂಟಿಕೊಂಡಿದ್ದಾರೆ. ಅಲ್ಲಿ ನೀರಿನ ಸಮಸ್ಯೆ ಇದೆ. ವಕ್ಫ್‌ ಆಸ್ತಿ ಹಾಗೂ ಅರಣ್ಯ ಇಲಾಖೆಯ ಜಾಗ ಇದೆ.

ವಿವಾದ ಇದ್ದರೂ ಜಿಲ್ಲಾ ಆಡಳಿತ ಮಾಮನಕೇರಿಯಲ್ಲಿಯೇ ಭವನ ನಿರ್ಮಿಸಲು ಹೊರಟಿದೆ’ ಎಂದು ಹೇಳುತ್ತಾರೆ ಮಾಜಿ ಶಾಸಕ ಜುಲ್ಫೇಕಾರ್ ಹಾಸ್ಮಿ.
‘ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳ ಮೇಲೆ ಹಿಡಿತ ಇಲ್ಲವಾಗಿದೆ. ಅಧಿಕಾರಿಗಳು ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ’ ಎನ್ನುತ್ತಾರೆ  ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ  ಬಿ.ಜಿ. ಶೆಟಕಾರ್.

‘ಏಳು ವರ್ಷ ಕಳೆದರೂ ನಗರದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾಗಿಲ್ಲ. ನಾಲ್ಕು ವರ್ಷ ಕಳೆದರೂ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ಜಾಗ ಅಂತಿಮಗೊಂಡಿಲ್ಲ. ಜಿಲ್ಲೆಯಲ್ಲಿ ಏನು ನಡೆದಿದೆ ತಿಳಿಯುತ್ತಿಲ್ಲ’ ಎನ್ನುತ್ತಾರೆ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ. ಶಾಸಕ ರಹೀಂ ಖಾನ್ ಇವತ್ತಿಗೂ ತಮ್ಮ  ನಿಲುವು ಸ್ಪಷ್ಟಪಡಿಸಿಲ್ಲ. ಎಲ್ಲಾದರೂ ಆಗಲಿ ನನ್ನ ಕ್ಷೇತ್ರದಲ್ಲಿ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣವಾಗಲಿ ಎಂದೇ ಹೇಳುತ್ತಿದ್ದಾರೆ.

ಹಿಂದೆ 20 ತಿಂಗಳ ಅವಧಿಗೆ ಜಿಲ್ಲಾ ಉಸ್ತುವಾರಿ ಸಚಿವನಾದರೂ ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ಪ್ರಸ್ತುತ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿದ್ದರೂ ಅಭಿವೃದ್ಧಿ ಕುಂಠಿತಗೊಂಡಿದೆ
- ಬಂಡೆಪ್ಪ ಕಾಶೆಂಪುರ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT