ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ ಸಾಹಿತ್ಯದ ನೈಜ ಸಂಶೋಧನೆ ನಡೆಯಲಿ

ಉರಿಲಿಂಗಪೆದ್ದಿ ಉತ್ಸವದಲ್ಲಿ ಶಾಸಕ ಮಲ್ಲಿಕಾರ್ಜುನ ಖೂಬಾ ಸಲಹೆ
Last Updated 20 ಫೆಬ್ರುವರಿ 2017, 6:00 IST
ಅಕ್ಷರ ಗಾತ್ರ

ಬಸವಕಲ್ಯಾಣ: ಶರಣ ಸಾಹಿತ್ಯದ ನೈಜ ಸಂಶೋಧನೆ ಆಗಬೇಕು. ಶರಣ ಉರಿಲಿಂಗಪೆದ್ದಿ , ಇತರೆ ಶರಣರ ಬಗ್ಗೆ ಸಂಪೂರ್ಣ ಮಾಹಿತಿ ಜನರಿಗೆ ಒದಗಿಸುವ ಅಗತ್ಯವಿದೆ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.

ತಾಲ್ಲೂಕಿನ ಬೇಲೂರಿನ ಶರಣ ಉರಿಲಿಂಗ ಪೆದ್ದಿ ಮಠದಿಂದ ಶಿವಲಿಂಗೇಶ್ವರರ 48 ನೇ ಸ್ಮರಣೋತ್ಸವ ಅಂಗವಾಗಿ ಭಾನುವಾರ ಅಯೋಜಿಸಿದ್ದ ಶರಣ ಸಾಹಿತ್ಯ ಸಂಶೋಧನಾ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಕಲ್ಯಾಣದಲ್ಲಿರುವ ಶರಣ ಉರಿಲಿಂಗ ಪೆದ್ದಿ ಸ್ಮಾರಕವನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿರುವ ಮಠದ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ₹20 ಲಕ್ಷ ದೇಣಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ, ಉರಿಲಿಂಗಪೆದ್ದಿ ಮಠಕ್ಕೆ ಯಾವುದೇ ಆಸ್ತಿ ಇಲ್ಲದಿದ್ದರೂ ಗಡಿನಾಡಿನಲ್ಲಿ ಶರಣಸಂಸ್ಕೃತಿ ಮತ್ತು ಕನ್ನಡದ ಪ್ರಚಾರ ಕಾರ್ಯ ನಡೆಯುತ್ತಿದೆ. ಇತರೆ ಮಠಗಳಿಗೆ ಈ ಮಠ ಮಾದರಿಯಾಗಿದೆ ಎಂದರು.

ಶರಣ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಯಬೇಕಾಗಿದೆ. ಡಾ.ಎಂ.ಎಂ.ಕಲಬುರ್ಗಿ ಅವರು ಲಿಂಗಾಯತ ಮತ್ತು ವಚನ ಸಾಹಿತ್ಯದ ಬಗ್ಗೆ ಸಾಕಷ್ಟು ಸಂಶೋಧನೆ ಕೈಗೊಂಡರು. ಫ.ಗು.ಹಳಕಟ್ಟಿ ಅವರ ನಂತರದಲ್ಲಿ ವಚನ ಸಾಹಿತ್ಯವನ್ನು ಬೆಳಕಿಗೆ ತರುವಲ್ಲಿ ಕಲಬುರ್ಗಿ ಅವರು ಸತತವಾಗಿ ಪರಿಶ್ರಮಪಟ್ಟರು. ಆದರೆ ಸತ್ಯ ಸಂಗತಿಯನ್ನು ಹೇಳಿದಕ್ಕಾಗಿ ಅವರನ್ನು ಗುಂಡಿಟ್ಟು ಕೊಲ್ಲಲಾಯಿತು. ಸಂಶೋಧಕರಿಗೆ ಇಂಥ ಪರಿಸ್ಥಿತಿ ಬರದಂತೆ ನೋಡಿಕೊಳ್ಳಬೇಕು ಎಂದರು.

ವಚನ ಸಾಹಿತ್ಯ ನಡೆ ಮತ್ತು ನುಡಿ ಒಂದಾಗಿಸಿದ ಹಾಗೂ ಅನುಭವದ ಸಾಹಿತ್ಯವಾಗಿದೆ. ಶರಣತತ್ವದ ಪ್ರಚಾರಕ್ಕೆ ಜಾತಿ ಮತ್ತು ಜ್ಯೋತಿಷ್ಯವೇ ಅಡ್ಡಿ ಆಗುತ್ತಿದೆ ಎಂದರು.

ಡಾ.ಗವಿಸಿದ್ದಪ್ಪ ಪಾಟೀಲ ಮಾತನಾಡಿ, ಮಠದಿಂದ ಇದುವರೆಗೆ ಜನಪದ, ದಲಿತ ಹಾಗೂ ಇತರೆ ಸಮ್ಮೇಳನಗಳು ನಡೆದಿದ್ದು, ಈ ಭಾಗದ ಸಾಹಿತ್ಯ ಮತ್ತು ಸಾಹಿತಿಗಳ ಬೆಳವಣಿಗೆಗೆ ಪ್ರಯತ್ನಿಸಲಾಗುತ್ತಿದೆ ಎಂದರು. ಸಮ್ಮೇಳನಾಧ್ಯಕ್ಷ ಡಾ.ರಘುಶಂಖ ಭಾತಂಬ್ರಾ ಮಾತನಾಡಿದರು.

ಮಠಾಧಿಪತಿ ಪಂಚಾಕ್ಷರಿ ಉರಿಲಿಂಗಪೆದ್ದಿ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಪ್ರಾಚಾರ್ಯ ನಾಗೇಂದ್ರ ಢೋಲೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಅಮ್ರಪಾಲಿ ದೊಡ್ಮನಿ, ಸುಧೀರ ಕಾಡಾದಿ, ಸುರೇಶ ಕಾನೇಕರ್ ಪಾಲ್ಗೊಂಡಿದ್ದರು. ಸಾಹಿತಿಗಳಾದ ಎಂ.ಜಿ.ದೇಶಪಾಂಡೆ, ಹಂಶಕವಿ, ಚಂದ್ರಪ್ಪ ಹೆಬ್ಬಾಳಕರ್, ಕಲಾವಿದ ಸತ್ಯವಾನ ಯಮ್ಹಾನ ಹಾರಕೂಡ, ಪುಂಡಲೀಕಪ್ಪ ಕಣಜೆ, ಪಪ್ಪುಖಾನ್, ಜಯಶ್ರೀ ಮುಡಬಿಕರ್, ಡಾ.ಸಂಧ್ಯಾ ಸುರೇಶ ಕಾನೇಕರ್ ಅವರನ್ನು ಸನ್ಮಾನಿಸಲಾಯಿತು. ಅಶೋಕ ವಕಾರೆ ಸ್ವಾಗತಿಸಿದರು. ಕಾರ್ಯಕ್ರಮದ ಮೊದಲು ಗ್ರಾಮದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಡೊಳ್ಳುಕುಣಿತ, ಇತರೆ ಕಲಾ ತಂಡ ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT