ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಕ್ರಿಕೆಟ್ ಕ್ಲಬ್‌ಗೆ ಸುಲಭ ಜಯ

Last Updated 20 ಫೆಬ್ರುವರಿ 2017, 6:11 IST
ಅಕ್ಷರ ಗಾತ್ರ

ಬಾಗಲಕೋಟೆ:  ಎರಡನೇ ಪಂದ್ಯದಲ್ಲಿ ಪುಟಿದೆದ್ದ ವಿಜಯಪುರದ ಕರ್ನಾಟಕ ಕ್ರಿಕೆಟ್ ಕ್ಲಬ್ ತಂಡ ಭಾನುವಾರ ತಮ್ಮದೇ ಊರಿನ ಬ್ರದರ್ಸ್ ಕ್ರಿಕೆಟ್‌ ಕ್ಲಬ್‌ ವಿರುದ್ಧ ಏಳು ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಶನಿವಾರ ಶಾಹು ಕ್ಲಬ್‌ ವಿರುದ್ಧ ಅನುಭವಿಸಿದ್ದ ಹೀನಾಯ ಸೋಲಿನ ಕಹಿ ಮರೆಯಿತು.

ಇಲ್ಲಿನ ವಿದ್ಯಾಗಿರಿಯ ಕೆಎಸ್‌ಸಿಎ ರಾಯಚೂರು ವಲಯದ 2ನೇ ಡಿವಿಜನ್ ಲೀಗ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದ ಬ್ರದರ್ಸ್ ಕ್ರಿಕೆಟ್ ಕ್ಲಬ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಕರ್ನಾಟಕ ಕ್ಲಬ್‌ನ ನಾಯಕ ಪ್ರಶಾಂತ್‌ ಹಜೇರಿ, ರವಿ ಬಿದರಿ ಬೌಲಿಂಗ್‌ ದಾಳಿಗೆ ತತ್ತರಿಸಿ ನಿಗದಿತ 50 ಓವರ್ ಪೂರೈಸದೇ 34.1 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 121 ರನ್‌ ಮಾತ್ರ ಗಳಿಸಿತು.

ಬ್ರದರ್ಸ್ ತಂಡದ ಪರ ಮೆಹಬೂಬ ತೊರವಿ 29 ರನ್ ಗಳಿಸಿದರೆ ರಿಯಾಜ್ ಹಡಗಲಿ 21 ಹಾಗೂ ನಾಯಕ ರೇಣುಕರಾಜ್ 15 ಮಾತ್ರ ಎರಡಂಕಿ ಮೊತ್ತ ಮುಟ್ಟಿದರು.

122 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಕರ್ನಾಟಕ ಕ್ರಿಕೆಟ್ ಕ್ಲಬ್ ತಂಡ 18.5 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 123 ರನ್‌ಗಳಿಸಿತು. ಮುಂಜಾನೆ ಬೌಲಿಂಗ್‌ನಲ್ಲಿ ಮೂರು ವಿಕೆಟ್ ಪಡೆದಿದ್ದ ಪ್ರಶಾಂತ್ ಹಜೇರಿ ಬ್ಯಾಟಿಂಗ್‌ನಲ್ಲೂ ಮಿಂಚಿದರು. ಕೇವಲ 23 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 32 ರನ್‌ ಗಳಿಸಿದರು. ಅವರಿಗೆ ಸಾಥ್ ನೀಡಿದ ಪವನ್ ಕುಲಕರ್ಣಿ 23 ಎಸೆತಗಳಲ್ಲಿ ಆರು ಬೌಂಡರಿಗಳೊಂದಿಗೆ 29 ರನ್ ಗಳಿಸಿದರು. ಅಂಗವೈಕಲ್ಯದ ನಡುವೆಯೂ ಉತ್ತಮ ಲೆಗ್‌ಸ್ಪಿನ್ ಬೌಲಿಂಗ್ ಪ್ರದರ್ಶಿಸಿ ಗಮನ ಸೆಳೆದ ಬ್ರದರ್ಸ್ ತಂಡದ ಶಂಕರ್ 15ರನ್ ನೀಡಿ ಮೂರು ವಿಕೆಟ್ ಪಡೆದು ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾದರು.

ಬ್ರದರ್ಸ್ ಕ್ರಿಕೆಟ್ ಕ್ಲಬ್: ಮೆಹಬೂಬ ತೊರವಿ–29 (40 ಎಸೆತ, 4 ಬೌಂಡರಿ), ರಿಯಾಜ್ ಹಡಗಲಿ– 21 (49 ಎಸೆತ, ಮೂರು ಬೌಂಡರಿ), ರೇಣುಕಾರಾಜ್– 15 (33 ಎಸೆತ, ಒಂದು ಬೌಂಡರಿ).

ಬೌಲಿಂಗ್ ವಿವರ: ಪ್ರಶಾಂತ್ ಹಜೇರಿ –ಮೂರು ವಿಕೆಟ್‌ (10:32:3), ರವಿ ಬಿದರಿ – ಎರಡು ವಿಕೆಟ್ (10:12:2), ಅಮಿತ್‌ ಬುದಿ 21 ರನ್‌ ನೀಡಿ ಎರಡು ವಿಕೆಟ್ ಪಡೆದರು.

ಕರ್ನಾಟಕ ಕ್ರಿಕೆಟ್ ಕ್ಲಬ್: ಪ್ರಶಾಂತ ಹಜೇರಿ 32 (23 ಎಸೆತ, ನಾಲ್ಕು ಬೌಂಡರಿ, ಒಂದು ಸಿಕ್ಸರ್), ಪವನ್ ಕುಲಕರ್ಣಿ 29 (23 ಎಸೆತ, ಆರು ಬೌಂಡರಿ). ಬೌಲಿಂಗ್ ವಿವರ: ಶಂಕರ್ – ಮೂರು ವಿಕೆಟ್ (10:15:3).

ಪಂದ್ಯ ಪುರುಷೋತ್ತಮ: ಪ್ರಶಾಂತ ಹಜೇರಿ.

ಪಂದ್ಯಾವಳಿಗೂ ಮುನ್ನ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ನಾಡಗೌಡ ಕ್ರೀಡಾಂಗಣಕ್ಕೆ ಭೇಟಿ ನೀಡಿ ಎರಡೂ ತಂಡಗಳ ಆಟಗಾರರ ಪರಿಚಯ ಮಾಡಿಕೊಂಡು ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT