ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಜಾಗೃತಿಗೆ ಪೋಸ್ಟರ್‌ ಅಭಿಯಾನ

ಕಸ ತಡೆಗಟ್ಟಲು ನಗರಸಭೆ ವತಿಯಿಂದ ವಿನೂತನ ಕಾರ್ಯಕ್ರಮ
Last Updated 20 ಫೆಬ್ರುವರಿ 2017, 7:29 IST
ಅಕ್ಷರ ಗಾತ್ರ

ಹಾಸನ: ನಗರದ ಜನರಿಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಲು ನಗರಸಭೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಅವುಗಳ ಸಾಲಿಗೆ ಈಗ ಆಟೊ ಮತ್ತು ಕಸ ಸಂಗ್ರಹ ಟಿಪ್ಪರ್‌ಗಳಿಗೆ ಪೋಸ್ಟರ್‌ ಅಂಟಿಸುವ ಕಾರ್ಯಕ್ರಮ ಸೇರ್ಪಡೆ ಯಾಗಿದೆ.

ಸ್ವಚ್ಛ ಭಾರತ ಯೋಜನೆ ಅಂಗವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಆಟೊ, ಕಸ ಸಾಗಿಸುವ ಟಿಪ್ಪರ್‌ಗಳು ಹಾಗೂ ಇತರೆ ಸ್ಥಳಗಳಲ್ಲಿ ಅರಿವು ಮೂಡಿಸುವ ಭಿತ್ತಿಪತ್ರವನ್ನು ಅಂಟಿಸುವ ಕಾರ್ಯ ನಡೆಯುತ್ತಿದೆ.

ನಗರದ ಹಳೇ ಬಸ್‌ ನಿಲ್ದಾಣದ ಬಳಿ ಇರುವ ಆಟೊಗಳಿಗೆ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಅಭಿಯಾನಕ್ಕೆ ನಗರಸಭೆ ಅಧ್ಯಕ್ಷ ಎಚ್‌.ಎಸ್‌. ಅನಿಲ್‌ಕುಮಾರ್‌ ಚಾಲನೆ ನೀಡಿದರು. ಇದೇ ರೀತಿ ನಗರದ ವಿವಿಧ ಬಡಾವಣೆಗಳ ಆಟೊಗಳಿಗೆ ಭಿತ್ತಿ ಪತ್ರ ಅಂಟಿಸಲಾಗುತ್ತಿದೆ.

ಕೆಲ ದಿನಗಳ ಹಿಂದೆಯಷ್ಟೇ ಗುತ್ತಿಗೆ ಪೌರ ಕಾರ್ಮಿಕರು ಹಾಗೂ ನಗರಸಭೆ ನಡುವೆ ತಿಕ್ಕಾಟ ನಡೆದಿತ್ತು. ಕಾರಣ ನೀಡದೆ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಆರೋಪಿಸಿ ಪೌರಕಾರ್ಮಿಕರು ಪ್ರತಿಭಟನೆಯನ್ನು ನಡೆಸಿದ್ದರು. ಇದರ ಪರಿಣಾಮ ನಗರದ ಸೌಂದರ್ಯದ ಮೇಲೆ ಬೀರಿತ್ತು. ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರ ಮಧ್ಯೆ ಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿತು.

ಈಗಲೂ ನಗರದ ಪ್ರಮುಖ ಸ್ಥಳಗಳಲ್ಲಿ ಕಸದ ರಾಶಿ ನೋಡಬಹುದು. ಅದರಲ್ಲೂ ಕಟ್ಟಿನಕೆರೆ, ಸಂತೆಪೇಟೆ, ಬಿ.ಎಂ. ನಗರ, ಎಂ.ಜಿ. ರಸ್ತೆ ಹೀಗೆ ಹಲವೆಡೆ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ಮೂಗು ಮುಚ್ಚಿ ಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ.

ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಬಿಸಾಡದೆ ಮನೆ ಮುಂದೆ ಬರುವ ಆಟೊ ಮತ್ತು ಟಿಪ್ಪರ್‌ಗಳಿಗೆ ಹಸಿ ಮತ್ತು ಒಣ ಕಸ ಬೇರ್ಪಡಿಸಿ ಹಾಕುವ ಮೂಲಕ ಸ್ವಚ್ಛತೆ ಕಾಪಾಡುವಂತೆ ನಗರಸಭೆ ಮನವಿ ಮಾಡಿದೆ.

‘ಪ್ರಜಾವಾಣಿ’ ಜತೆ ಮಾತನಾಡಿದ ನಗರಸಭೆ ಅಧ್ಯಕ್ಷ ಅನಿಲ್‌ ಕುಮಾರ್‌, ‘ನಗರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಸಾರ್ವಜನಿಕರು ನಗರಸಭೆ ಸಿಬ್ಬಂದಿಗೆ ಅಗತ್ಯ ಸಹಕಾರ ನೀಡಬೇಕು. ತಮ್ಮ ಮನೆಗಳಲ್ಲಿಯೇ ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸುವ ಮೂಲಕ ಕಸ ವಿಲೇವಾರಿಯನ್ನು ಸುಲಭವಾಗಿ ನಿರ್ವಹಣೆ ಮಾಡಲು ಅನುಕೂಲ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

‘ಬಯಲು ಬಹಿರ್ದೆಸೆ ನಿಲ್ಲಿಸಿ ಮನೆಯಲ್ಲಿಯೇ ಶೌಚಾಲಯ ನಿರ್ಮಿಸಿ ಕೊಂಡು ಕಡ್ಡಾಯವಾಗಿ ಬಳಸಬೇಕು. ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡುತ್ತಿದೆ. ಇದನ್ನು ಸಮ ರ್ಪಕವಾಗಿ ಬಳಸಿಕೊಳ್ಳಬೇಕು. ನಿಗದಿತ ಸಮಯಕ್ಕೆ ಆಸ್ತಿ ಮತ್ತು ನೀರಿನ ತೆರಿಗೆ ಪಾವತಿಸಿ ಸೌಲಭ್ಯ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT