ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬಿಡುವುದಿಲ್ಲ– ನರಸಿಂಹಸ್ವಾಮಿ

ಜೆಡಿಎಸ್‌ ಸೇರುವುದಾಗಿ ವದಂತಿ–ಅಪ್ಪ, ಮಕ್ಕಳ ಪಕ್ಷಕ್ಕೆ ಹೋಗುವುದಿಲ್ಲ
Last Updated 20 ಫೆಬ್ರುವರಿ 2017, 8:39 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಯಡಿಯೂರಪ್ಪ ಅವರು ನನ್ನನ್ನು ಬಿಜೆಪಿಗೆ ಕರೆತಂದವರು. ಅವರು ಬಿಜೆಪಿಯಲ್ಲಿ ಇರುವವರೆಗೂ ನಾನು ಬಿಜೆಪಿಯನ್ನು ಬಿಡುವ ಪ್ರಶ್ನೆಯೇ ಇಲ್ಲ. ತಾಲ್ಲೂಕಿನಲ್ಲಿ ನನ್ನ ಏಳಿಗೆಯನ್ನು ಸಹಿಸದವರು ಸುಳ್ಳು ಸುದ್ಧಿಗಳನ್ನು ಹರಡುವ ಮೂಲಕ ಜನರಲ್ಲಿ ಗೊಂದಲವನ್ನು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಹೇಳಿದರು.

ಅವರು ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್‌ ಪಕ್ಷಕ್ಕೆ ಸೇರುತ್ತೇನೆ ಎನ್ನುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ, ಕೆಲ ಪತ್ರಿಕೆಗಳಲ್ಲಿ ವದಂತಿ ಹರಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ಅವು ಬೇಸರ  ತಂದಿವೆ ಎಂದರು.

ಒಂದೇ ತಟ್ಟೆಯಲ್ಲಿ ಕುಳಿತು ಊಟ ಮಾಡುವಂತಹ ಸ್ನೇಹಿತರಾಗಿದ್ದ ಮಾಗಡಿ ಶಾಸಕ ಬಾಲಕೃಷ್ಣ, ಚಲುವರಾಯಸ್ವಾಮಿ, ಜಮೀರ್‌ ಸೇರಿದಂತೆ ಜೆಡಿಎಸ್‌ನ 8 ಜನ ಶಾಸಕರೇ ಇವತ್ತು ಜೆಡಿಎಸ್‌ನಲ್ಲಿನ ಅಪ್ಪ, ಮಕ್ಕಳ ಕಾಟಕ್ಕೆ ಬೇಸತ್ತು ಪಕ್ಷ ಬಿಟ್ಟಿದ್ದಾರೆ. ಇಂತಹ ಪಕ್ಷಕ್ಕೆ ನಾನು ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಒಂದೇ ಹೈಕಮಾಂಡ್‌: ತಾಲ್ಲೂಕಿನಲ್ಲಿ ಪಕ್ಷದ ಎಲ್ಲರು ಸೇರಿಯೇ ಒಂದು ತೀರ್ಮಾನವನ್ನು ತೆಗೆದುಕೊಳ್ಳುವ ಮೂಲಕ ಪಕ್ಷವನ್ನು ಸಂಘಟಿಸಲಾಗುತ್ತಿದೆ. ಇಲ್ಲಿ ಯಾರು ಸಹ ನಾನೇ ಹೈಕಮಾಂಡ್‌ ಎನ್ನುವಂತಿಲ್ಲ. ಇಡೀ ರಾಜ್ಯಕ್ಕೆ ಪಕ್ಷದ ರಾಜ್ಯ ಮುಖಂಡರನ್ನು ಒಳಗೊಂಡ ಸಮಿತಿ  ಒಂದೇ ಹೈಕಮಾಂಡ್‌. ಅವರ ನಿರ್ದೇಶನದಂತೆ ಪಕ್ಷವನ್ನು ಮುನ್ನಡೆಸಲಾಗುತ್ತಿದೆ ಎಂದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದೇ ಬಾರಿಗೆ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹700 ಕೋಟಿ ಹಣ ನೀಡಿದ್ದರು. ಇವತ್ತು ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಹೋಗಿ ಕೇಳಿದರೂ ಜನರು ಅಂದು ನಡೆದಿರುವ ಕಾಮಗಾರಿಗಳ ಬಗ್ಗೆ ನೆನಪಿಸಿಕೊಳ್ಳುತ್ತಾರೆ ಎಂದರು.
ಚುನಾವಣೆಯಲ್ಲಿನ ಸೋಲಿಗೆ ಕೆಲಸ ಮಾಡಿಸಿದ್ದು ಅಥವಾ ಮಾಡಿಸದೇ ಇದ್ದದ್ದು ಮಾತ್ರ ಒಂದನ್ನೇ ಕಾರಣವಾಗಿ ನೋಡಲು ಸಾಧ್ಯ ಇಲ್ಲ. ಸೋಲು, ಗೆಲುವಿಗೆ ಹಲವಾರು ಕಾರಣಗಳು ಇರುತ್ತವೆ. ಆದರೆ  2018ರ ವಿಧಾನಸಭಾ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಬಿಜೆಪಿ ಶಾಸಕನಾಗಿ ಇರುತ್ತೇನೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಡಳಿತ ಇದ್ದಾಗ ಸಹಜ: ಇತ್ತೀಗೆ ನಡೆಯುತ್ತಿರುವ ಸಹಕಾರಿ ಸಂಸ್ಥೆ ಹಾಗೂ ಕೆಲ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳೇ ಗೆಲುವು ಸಾಧಿಸಲು ತಾಲ್ಲೂಕಿನಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ಇರುವುದು ಕಾರಣವಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಶಿವಶಂಕರ್‌, ಜಿಲ್ಲಾ ಉಪಾಧ್ಯಕ್ಷ ಗೋಪಿ, ಜಿಲ್ಲಾ ಒಬಿಸಿ ಉಪಾಧ್ಯಕ್ಷ ಸುನಿಲ್‌ಕುಮಾರ್‌, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಕಾರ್ಯದರ್ಶಿ ನಾಗರಾಜ್‌, ಉಪಾಧ್ಯಕ್ಷ ಅಶ್ವತ್ಥನಾರಾಯಣಗೌಡ,ವೀರಭದ್ರ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವಶಂಕರ್‌, ನಗರ ಅಧ್ಯಕ್ಷ ವೆಂಕಟೇಶ್‌, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲಾ, ತಾಲ್ಲೂಕು ಒಬಿಸಿ ಅಧ್ಯಕ್ಷ ರಾಮಕೃಷ್ಣ, ಅಲ್ಪಸಂಖ್ಯಾತ ಮೋರ್ಚಾ ತಾಲ್ಲೂಕು ಅಧ್ಯಕ್ಷ ಅದೀಲ್‌ ಮತ್ತಿತರರಿದ್ದರು.

ಶಾಸಕ ಸುಳ್ಳಿನ ಸರದಾರ
ನಗರಕ್ಕೆ ಕುಡಿಯುವ ನೀರಿನ ಜಕ್ಕಲಮಡಗು ಯೋಜನೆ ರೂಪಿಸಿದ್ದು ಅಂದಿನ ಸಂಸತ್‌ ಸದಸ್ಯರಾಗಿದ್ದ ಆರ್‌.ಎಲ್‌.ಜಾಲಪ್ಪ ಅವರು. ನಂತರದ ದಿನಗಳಲ್ಲಿ ಜಕ್ಕಲಮಡಗು ಕಾಮಗಾರಿ ಹಣಕಾಸಿನ ಕೊರತೆಯಿಂದ ಕಾಮಗಾರಿ ಸ್ಥಗಿತವಾಗಿದ್ದಾಗ ಸದಾನಂದಗೌಡವರು ಮುಖ್ಯಮಂತ್ರಿಗಳಾಗಿದ್ದಾಗ ₹5 ಕೋಟಿ ನೀಡಿದ ನಂತರ ಕಾಮಗಾರಿ ತ್ವರಿತವಾಗಿ ನಡೆಯಿತು ಎಂದು ಜೆ.ನರಸಿಂಹಸ್ವಾಮಿ ತಿಳಿಸಿದರು.

ಜಲಾಶಯದಲ್ಲಿ ನೀರು ಇಲ್ಲದ್ದರಿಂದ ಹಾಗೂ ಚುನಾವಣೆ ಸಮೀಪವಾಗಿದ್ದರಿಂದ ನಗರಕ್ಕೆ ನೀರು ತರುವುದು ವಿಳಂಬವಾಯಿತು. ಆದರೆ ಹಾಲಿ ಶಾಸಕರು ತಮ್ಮ ಆಡಳಿತದಲ್ಲೇ ನಗರಕ್ಕೆ ಕುಡಿಯುವ ನೀರು ತಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ನಗರದಲ್ಲಿ ರೈಲ್ವೆ ಮೇಲ್ಸೇತುವೆಗಳು  ಸದಾನಂದ ಗೌಡರು ರೈಲ್ವೆ ಸಚಿವರಾಗಿದ್ದಾಗ ಮಂಜೂರಾಗಿದ್ದವು, ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ನಗರಕ್ಕೆ ₹15 ಕೋಟಿ ನಗರೋತ್ಥಾನ ಯೋಜನೆಯಡಿ ನೀಡಲು ಮುಂದಾಗಿದ್ದರು. ಚುನಾವಣೆ ಘೋಷಣೆಯಾದ ಕಾರಣ ಮಂಜೂರಾತಿ ದೊರೆಯುವುದು ವಿಳಂಬವಾಯಿತು. ಈಗಿನ ಶಾಸಕರು ಈ ಎಲ್ಲವನ್ನು ತಮ್ಮ ಕಾಲದಲ್ಲಿಯೇ ಆಗಿದ್ದು ಎನ್ನುವಂತೆ ಸುಳ್ಳು ಹೇಳುವ ಮೂಲಕ ಸಾವಿರಾರು ಕೋಟಿಗಳ ಕಾಮಗಾರಿಗಳನ್ನು ಲೆಕ್ಕ ನೀಡುತ್ತ ಸುಳ್ಳಿನ ಸರದಾರರಾಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT