ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂಬೆಗಳನ್ನು ಮಾತನಾಡಿಸಿ...

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
‘ಹಂಪಿಯ ಪ್ರವಾಸಿ ಬಸ್ ವಾರಕ್ಕೆರಡು ಬಾರಿ ನಮ್ಮೂರಿಗೆ ಬರುತ್ತಿತ್ತು. ಪ್ಯಾಕೇಜ್ ಪ್ರವಾಸದ ಪಟ್ಟಿಯಲ್ಲಿ ನಮ್ಮೂರಿನ ಹೆಸರೂ ಇತ್ತು. ವಿದೇಶಿಯರು ಒಂದೆರಡು ದಿನ ಉಳಿದುಕೊಂಡು ನಮ್ಮ ಕಲಾ ಪ್ರಕಾರಗಳನ್ನು ನೋಡಿ ಮಾಹಿತಿ ಪಡೆಯುತ್ತಿದ್ದರು. ಈಗ ಅದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಪ್ರವಾಸಿ ಬಸ್‌ಗಳ ಜಾಗದಲ್ಲಿ ಹಿರೇಹಳ್ಳದ ಒಡಲು ಬಗೆದು ಮರಳು ತುಂಬಿಕೊಂಡ ದೈತ್ಯ ಟಿಪ್ಪರ್‌ಗಳು ಓಡಾಡುತ್ತಿವೆ...’ –ಕಿನ್ನಾಳದ ಚಿತ್ರಗಾರರ ಕಾಲೊನಿಯಲ್ಲಿ ಹಿರಿಯರೊಬ್ಬರು 1990ರ ದಶಕದ ನೆನಪುಗಳನ್ನು ತೆರೆದಿಟ್ಟಿದ್ದು ಹೀಗೆ.
 
ಚಿತ್ರಗಾರರ ಸಮುದಾಯದ ಕುಂಚಗಳ ಎಳೆಗಳು ಈಗ ದುರ್ಬಲವಾಗಿವೆ, ಬದುಕೂ ಬದಲಾಗಿದೆ. ಈ ತಲೆಮಾರಿಗೆ ಕಿನ್ನಾಳ ಕಲೆ ಕೊನೆಗೊಳ್ಳುವ ಆತಂಕವೂ ಕಾಣಿಸಿದೆ. ರಥವನ್ನೇರಿ ವೈಭವದಿಂದ ಮೆರೆಯುತ್ತಿದ್ದ, ದಸರಾ ಹಬ್ಬದಲ್ಲಿ ಅಲಂಕೃತಗೊಳ್ಳುತ್ತಿದ್ದ ಗೊಂಬೆಗಳು ನಿಧಾನಕ್ಕೆ ಮೌನಕ್ಕೆ ಸರಿಯುತ್ತಿವೆ. ಕರಕುಶಲಕರ್ಮಿಗಳಿಗೆಂದೇ ತೆರೆಯಲಾದ ಕೌಶಲ ತರಬೇತಿ ಕೇಂದ್ರ ಹಾಗೂ ಕಾವೇರಿ ಎಂಪೋರಿಯಂನ ಖರೀದಿ ಕೇಂದ್ರಗಳನ್ನು ಕೇಳುವವರಿಲ್ಲದಾಗಿದೆ.
 
ಬದಲಾದ ಬದುಕು...
ಕಿನ್ನಾಳ, ಕೊಪ್ಪಳದಿಂದ 8 ಕಿ.ಮೀ. ದೂರವಿರುವ ಗ್ರಾಮ. ಅಂದಾಜು 10 ಸಾವಿರ ಜನಸಂಖ್ಯೆಯಿದೆ. ಚಿತ್ರಗಾರರು, ನೇಕಾರರು, ಕಲಾವಿದರಿರುವ ಗ್ರಾಮವಿದು. ಗುಜರಾತಿ, ಮಾರವಾಡಿ ಸಮುದಾಯದವರು ಮದುವೆಗೆ ಬಳಸುವ ಅಷ್ಟಕೋನ ಪೀಠವನ್ನು ಇಲ್ಲಿ ತಯಾರಿಸಲಾಗುತ್ತಿತ್ತು. ಇಲ್ಲಿನ ಮಾರವಾಡಿ ವ್ಯಾಪಾರಿ ಹೇಮರಾಜ ದಾನಮಲ್ ಸೇಠ್ ಎಂಬುವವರು ಈ ಮಣೆ ಸಿದ್ಧಪಡಿಸಿ ಗುಜರಾತಿಗೆ ಕಳುಹಿಸುತ್ತಿದ್ದರು. ಈ ರೀತಿಯ ಮಣೆ ತಯಾರಿಕೆಯಿಂದ ಅಂದು ಹಲವರು ಬದುಕು ಕಟ್ಟಿಕೊಂಡಿದ್ದರು. ಬಳ್ಳಾರಿಯಲ್ಲಿ ಎಂ.ವೈ. ಘೋರ್ಪಡೆ ಅವರು ಕಿನ್ನಾಳ ಕಲಾ ಕೇಂದ್ರ ಸ್ಥಾಪಿಸಿ ಅದರ ಮೂಲಕ ತರಬೇತಿ ಕೇಂದ್ರ ಆರಂಭಿಸಿದ್ದರು. ಅವರ ನೇತೃತ್ವದಲ್ಲಿ ಹಲವಾರು ಕಲಾವಿದರು ಬೇರೆ ಬೇರೆ ಕಡೆ ಕಲಾಕೃತಿ ಪ್ರದರ್ಶನ, ಮಾರಾಟ ಮಾಡುತ್ತಿದ್ದರು. 
 
1992–93ರ ಅವಧಿ ಚಿತ್ರಗಾರರ ಪಾಲಿಗೆ ಅತ್ಯುತ್ತಮವಾಗಿತ್ತು. ಇಲ್ಲಿ ಸರ್ಕಾರ ಕಾವೇರಿ ಎಂಪೋರಿಯಂ ಮೂಲಕ ಕಲಾಕೃತಿಗಳ ಖರೀದಿ ಕೇಂದ್ರವನ್ನೂ ತೆರೆಯಿತು. ಚಿತ್ರಗಾರರಿಗಾಗಿ ಕಾಲೊನಿ ತೆರೆದು ಮನೆಗಳನ್ನು ಕಟ್ಟಿಕೊಡಲಾಯಿತು. ಇಲ್ಲೊಂದು ತರಬೇತಿ ಕೇಂದ್ರವನ್ನೂ ತೆರೆಯಲಾಯಿತು.  ಆದರೆ, ಈಗ...? ಇವೆಲ್ಲವೂ ಇತಿಹಾಸವಾಗಿದೆ. ಇಲ್ಲಿರುವ ದೇವರ ಪಲ್ಲಕ್ಕಿ, ಛತ್ರಿ, ಮೂರ್ತಿಗಳು, 
ಮಂಟಪಗಳು, ತೊಟ್ಟಿಲು ಎಲ್ಲವೂ ಚಿತ್ರಗಾರರ ಸೃಷ್ಟಿಗಳೇ. ಆದರೆ, ಈಗ ಕಲಾಕೃತಿಗಳಷ್ಟೇ ಕಾಣುತ್ತಿವೆಯಷ್ಟೇ... ಕಲಾವಿದರು ಮರೆಯಲ್ಲಿದ್ದಾರೆ. ಬಹುತೇಕ ಚಿತ್ರಗಾರರೂ ಚದುರಿದ್ದಾರೆ. ಖರೀದಿ ಕೇಂದ್ರ, ತರಬೇತಿ ಶಾಲೆ ಎಲ್ಲವೂ ಮುಚ್ಚಿವೆ. ಚಿತ್ರಕಲೆಯಿಂದ ನಿಧಾನಕ್ಕೆ ವಿಮುಖರಾಗಿರುವ ಈ ತಲೆಮಾರಿನ ಯುವಕರು ನಗರಮುಖಿಗಳಾಗಿದ್ದಾರೆ. ಕೊಪ್ಪಳದಲ್ಲಿ ಕೆಲವು ಚಿತ್ರಗಾರ ಕುಟುಂಬದವರು ಬಂಗಾರ, ಬೆಳ್ಳಿ ಆಭರಣ ವ್ಯಾಪಾರಿಗಳಾಗಿದ್ದಾರೆ. ಕೆಲವರು ರಿಯಲ್‌ ಎಸ್ಟೇಟ್, ಬಟ್ಟೆ ವ್ಯಾಪಾರದಲ್ಲಿ ತೊಡಗಿದ್ದಾರೆ.
 
ಸಮೀಪದಲ್ಲೇ ಇರುವ ಹಿರೇಹಳ್ಳ ಅಣೆಕಟ್ಟೆ ತುಂಬಿದರೂ ಪೂರ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿಲ್ಲ. ಭತ್ತ ಬೆಳೆಯಲೇನೂ ಅಡ್ಡಿ ಇಲ್ಲದಿದ್ದರೂ ಅದು ಬದುಕಿಗೆ ಸಾಲುತ್ತಿಲ್ಲ. ಇನ್ನೊಂದೆಡೆ, ಹಿರೇಹಳ್ಳದ ಹರಿವನ್ನೇ ಮರಳುಗಾರಿಕೆ ನುಂಗಿಹಾಕಿದೆ. ಸರ್ಕಾರದ ನೆರವಿನಿಂದ ಮನೆ ಕಟ್ಟಿಕೊಂಡಿರುವ ಕೆಲವು ಕಲಾವಿದರು, ಈಗ ಕಲಾಕೃತಿಗಳ ಬೇಡಿಕೆ ಕುಸಿತದಿಂದಾಗಿ ಬಡ್ಡಿಕಟ್ಟಲೂ ಪರದಾಡಬೇಕಾಗಿದೆ. ಬಡ್ಡಿ ಮನ್ನಾ ಮಾಡಿ ಎಂದು ಸರ್ಕಾರದ ಮೊರೆ ಹೋದರೂ ಪ್ರಯೋಜನ ಆಗದೇ ನೊಂದಿದ್ದಾರೆ.
 
‘ಏನೋ ಬದುಕು ಇಷ್ಟು ದಿನ ನಡೆದಿದೆ. ಮುಂದೆ ನಡೆಯುವ ಖಾತ್ರಿ ಇಲ್ಲ. ಹಾಗಾಗಿ ನಮ್ಮ ಮುಂದಿನ ಪೀಳಿಗೆ ಇದರಲ್ಲೇ ಮುಂದುವರಿಯಬೇಕು ಎಂದು ಒತ್ತಾಯಿಸುವುದೂ ಸರಿಯೆನಿಸುವುದಿಲ್ಲ’ ಎನ್ನುತ್ತಾರೆ ಕಲಾವಿದ ಏಕಪ್ಪ ಚಿತ್ರಗಾರ. ‘ವಿಜಯನಗರ ಅರಸರ ಕಾಲದಲ್ಲಿ ಚಿತ್ರಗಾರ, ಕಲಾವಿದರಾಗಿ ಬದುಕಿದ್ದ ನಮ್ಮ ಹಿರಿಯರು ಆ ಸಾಮ್ರಾಜ್ಯ ಪತನಾನಂತರ ಚದುರಿ ಹೋದರು. ಕೆಲವರು ಇಲ್ಲಿ ಬಂದರು. ಆದರೆ, ಚಿತ್ರಕಲೆಯನ್ನೇ ನಂಬಿ ಬದುಕುವುದು ಕಷ್ಟ. ಹಾಗಾಗಿ ನಮ್ಮವರು ಸರ್ಕಾರಿ ನೌಕರಿ ಹುಡುಕಿಕೊಂಡು ಹೋಗಿದ್ದಾರೆ’ ಎಂಬುದು ಅವರ ಹತಾಶೆಯ ನುಡಿ.
 
ಅದಕ್ಕೆ ದನಿಗೂಡಿಸುವ ಇನ್ನೊಬ್ಬ ಕಲಾವಿದ ಧರ್ಮಣ್ಣ ಅಂಬಣ್ಣ ಚಿತ್ರಗಾರ, ‘ಮೊದಲಿನ ಹಾಗೆ ಈಗ ಚಿತ್ರಗಾರರ ಸಂಘಟನೆ ಇಲ್ಲ. ಕೆಲವರು ತಾವೂ ಚಿತ್ರಗಾರರು ಎಂದು ಹೇಳಿಕೊಂಡು ಕಲಾಕೃತಿಗಳಿಗೆ ಬೇಡಿಕೆ ಪಡೆಯುತ್ತಾರೆ. ಯಾರು ಚಿತ್ರಗಾರರಲ್ಲವೋ ಅವರು ಮಿಂಚುತ್ತಿದ್ದಾರೆ. ನಮ್ಮಿಂದ ಕೆಲಸ ಮಾಡಿಸಿಕೊಂಡು ಯಾರೋ ದುಡ್ಡು ಮಾಡುತ್ತಿದ್ದಾರೆ. ಸರ್ಕಾರ ಪುಣ್ಯಕ್ಕೆ ಪುಕ್ಕಟೆ ಅಕ್ಕಿ ಕೊಡುತ್ತಿದೆ. ಹಾಗೂ ಹೀಗೂ ಬದುಕಿಕೊಂಡಿದ್ದೇವೆ’ ಎನ್ನುತ್ತಾರೆ.
 
‘ಇಷ್ಟು ಕಾಲ ಕಷ್ಟಪಟ್ಟು ನಮ್ಮ ಪರಂಪರೆ ಉಳಿಸಿಕೊಂಡು ಬಂದಿದ್ದೇವೆ. ಆದರೆ ಪರಂಪರೆ ಉಳಿಸಿ ಹೊಟ್ಟೆಗೇನು ಸಿಕ್ಕಿದೆ ಎಂದು ನಮ್ಮ ಮಕ್ಕಳು ಈಗ ಪ್ರಶ್ನೆ ಹಾಕುತ್ತಿದ್ದಾರೆ. ಉತ್ತರಿಸಲಾಗದೆ ಅಸಹಾಯಕರಾಗಿದ್ದೇವೆ’ ಎನ್ನುತ್ತಾರೆ ದೇವಪ್ಪ, ಲಚ್ಚಪ್ಪ ಮತ್ತು ಭರಮಪ್ಪ ಜುಟ್ಲದ್‌. 
 
ನಾವು ಸೋತಿದ್ದೆಲ್ಲಿ...?
 
‘ಕ್ರಾಫ್ಟ್ ಕೌನ್ಸಿಲ್ ಆಫ್ ಇಂಡಿಯಾ’ ಅಸ್ತಿತ್ವಕ್ಕೆ ಬಂದಾಗ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಅಧ್ಯಕ್ಷರಾಗಿದ್ದರು. ಇಂಥ ದೇಸಿ ಕಲೆಗಳನ್ನು ಉಳಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರು. ಕರಕುಶಲ ಅಭಿವೃದ್ಧಿ ನಿಗಮ ಬಂದ ಮೇಲೂ ಸಾಕಷ್ಟು ಕೆಲಸಗಳಾದವು. 
 
ಇದರ ಹೊರತಾಗಿಯೂ ಕಿನ್ನಾಳ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ನಾವು ಸೋತಿರುವುದಕ್ಕೆ ಹಲವು ಕಾರಣಗಳಿವೆ. ಪ್ರಮುಖ ಕಾರಣ ಎಂದರೆ ಮಾರುಕಟ್ಟೆ ವ್ಯವಸ್ಥೆ. ಕಲಾಕೃತಿಗಳ ಮಾರಾಟಕ್ಕೆ ಒಡಿಶಾ ನಮಗೆ ಮಾದರಿಯಾಗಬೇಕಿದೆ.
 
ಅಲ್ಲಿಯಂತೆಯೇ ಮಾರುಕಟ್ಟೆ ಆದ ಉತ್ಪನ್ನಗಳಿಂದ ಬಂದ ಲಾಭ ಕಲಾವಿದರಿಗೂ ಸರಿಯಾಗಿ ಹಂಚಿಕೆ ಆಗಬೇಕಿದೆ. ಆದರೆ ಇಲ್ಲಿ ಹಾಗೆ ಆಗಲಿಲ್ಲ. ಅದರ ಜೊತೆಗೆ, ಕೆಲ ಕಲಾವಿದರು ತಾವೊಬ್ಬನೇ ಬೆಳೆಯಬೇಕು ಎಂಬ ಸ್ವಾರ್ಥದ  ಮನೋಭಾವ, ನನಗಷ್ಟೇ ಬೇಡಿಕೆ ಬರಬೇಕೆಂಬ ಅತಿಯಾಸೆ. ಇದರ ಜೊತೆಗೆ,ಕಲಾಕೃತಿಗಳ ಮಾರಾಟಕ್ಕೆ ಮಧ್ಯವರ್ತಿಗಳಾಗಿ ಬಂದವರು ಈ ಕಲಾವಿದರನ್ನು ಶೋಷಿಸಿದ್ದೂ ಇದೆ. ಕಲಾವಿದರ ವೈಯಕ್ತಿಕ ದುರಭ್ಯಾಸಗಳು, ಕಲೆಯ ಗುಣಮಟ್ಟ ಕಾಪಾಡುವಲ್ಲಿ ಎಡವಿದ್ದೂ ಸೇರಿಕೊಂಡಿವೆ. ಆದ್ದರಿಂದ ಸರ್ಕಾರ, ಸರ್ಕಾರೇತರ ಸಂಘಟನೆಗಳು ಸಾಕಷ್ಟು ನೆರವು ನೀಡಿದರೂ ಕಲೆ ಮುನ್ನೆಲೆಗೆ ಬರಲು ಹೆಣಗಾಡುತ್ತಿದೆ. 
 
‘ಯಾವುದೇ ಕಲೆಗೆ ಅಳಿವು ಇಲ್ಲ ಎನ್ನುವ ಹಾಗೆ ಕಲಾವಿದರು ಒಗ್ಗಟ್ಟಾಗಿದ್ದರೆ ಖಂಡಿತವಾಗಿಯೂ ಈ ಕಲೆಯನ್ನು ಮತ್ತೆ ಉನ್ನತಿಗೆ ತರಲು ಸಾಧ್ಯವಿದೆ’ ಎನ್ನುತ್ತಾರೆ ಕಿನ್ನಾಳ ಕಲೆ ಬಗ್ಗೆ ದೀರ್ಘ ಸಂಶೋಧನೆ ಮಾಡಿದ ಚಿತ್ರಕಲಾ ಪರಿಷತ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ಆರ್.ಎಚ್.ಕುಲಕರ್ಣಿ.   ‘ಕಲಾವಿದರಿಗೆ ಆಪ್ತ ಸಮಾಲೋಚನೆ ಬೇಕು. ಸ್ವಸಹಾಯ ಸಂಘಗಳ ರೂಪದಲ್ಲಿ ನೆರವು ಸಿಗಬೇಕು.
 
ಸರ್ಕಾರ, ಸರ್ಕಾರೇತರ ಸಂಘಟನೆಗಳು ಇನ್ನಷ್ಟು ಕೈಜೋಡಿಸಬೇಕು. ವೃತ್ತಿ ದೌರ್ಬಲ್ಯ ತಿದ್ದುವ ಪ್ರಯತ್ನ ಬೇಕು. ಸಾಮಾನ್ಯ ಶಿಕ್ಷಣ ಮತ್ತು ಕಲಾ ಶಿಕ್ಷಣ ಬೇಕು. ಹೊಸ ವಿನ್ಯಾಸಕ್ಕೆ ಬೇಕಾದ ವೇದಿಕೆ ಕಲ್ಪಿಸಬೇಕು. (ಚಿತ್ರಕಲಾ ಪರಿಷತ್‌ ಈಗಾಗಲೇ ಅಂಥ ಸಾಕಷ್ಟು ಕಾರ್ಯಾಗಾರಗಳನ್ನು ನಡೆಸಿದೆ. ಕೆಲವು ಕಲಾವಿದರನ್ನು ಇಲ್ಲಿಯೇ ಕರೆಸಿ ಆಸರೆ ನೀಡಿದ್ದಿದೆ) ತಮ್ಮ ಕಲಾಕೃತಿಗಳ ಮೂಲಕವೇ ಅವರು ಹಣ ಸಂಪಾದಿಸುವ ವ್ಯವಸ್ಥೆ ಬರಬೇಕು. ಕಿನ್ನಾಳ ಕಲೆಯ ಬಗ್ಗೆ ಆಳವಾದ ಅಧ್ಯಯನ, ದಾಖಲೀಕರಣ ಆಗಬೇಕು’ ಎನ್ನುತ್ತಾರೆ ಅವರು.
 
‘ಕಲೆಗೆ ಸಾಕಷ್ಟು ಬೇಡಿಕೆ ಇದೆ. ಆದರೆ, ತಯಾರಿಕೆಯೇ ಸರಿಯಾಗಿ ಆಗುತ್ತಿಲ್ಲ. ನಮ್ಮ ಕೆಲಸ ಪ್ರಕೃತಿ ಮೇಲೆ ಅವಲಂಬಿತ. ವರ್ಷಕ್ಕೆ ಕನಿಷ್ಠ ಒಂದೆರಡು ಬಂಡಿ ಕಟ್ಟಿಗೆ ಬೇಕು. ಆಗ ವರ್ಷಪೂರ್ತಿ ಕಾಷ್ಠಶಿಲ್ಪ ತಯಾರಿಸಬಹುದು. ಸಾಧಾರಣ ಗಾತ್ರದ ಗೊಂಬೆಗೆ ಗರಿಷ್ಠ ₹5 ಸಾವಿರದವರೆಗೆ ಬೆಲೆ ಇದೆ. ವಿಶೇಷವಾಗಿ ದಸರಾ ಗೊಂಬೆಗಳಿಗೆ ಸಾಕಷ್ಟು ಬೆಲೆ ಇದೆ. ಬೆಂಗಳೂರು ಮತ್ತು ಬೆಳಗಾವಿ ಕಡೆಗಳಿಂದ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ. ವರ್ಷಕ್ಕೆ ಎರಡು ಡಜನ್ ದೊಡ್ಡಗಾತ್ರದ ಗೊಂಬೆಗಳಿಗೆ ಬೇಡಿಕೆ ಬರುತ್ತದೆ’ ಎಂಬ ವಿವರಣೆ ಅವರದ್ದು.
 
ಚಿತ್ರಕಲಾ ಶಿಕ್ಷಕರಾಗಿದ್ದು, ನಿವೃತ್ತರಾಗಿ ಈಗಲೂ ಈ ಕಲೆಯನ್ನು ಮುಂದುವರಿಸಿದ್ದಾರೆ ಸೋಮಣ್ಣ ಚಿತ್ರಗಾರ. ‘ನನ್ನ ತಾತ ಕೃಷ್ಣಪ್ಪ ವೆಂಕಪ್ಪ ಚಿತ್ರಗಾರ ಅವರಿಗೆ 1969ರಲ್ಲಿ ಕರಕುಶಲ ಅಭಿವೃದ್ಧಿ ನಿಗಮದಿಂದ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. 1965ರಲ್ಲಿ ಇಂಡಿಯನ್‌ ಕ್ರಾಫ್ಟ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷೆ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಒಂದು ಲಾರಿಯಷ್ಟು ಕಿನ್ನಾಳದ ಕಲಾಕೃತಿಗಳನ್ನು ನಮ್ಮ ಮೂಲಕ ತಯಾರಿಸಿ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಪ್ರದರ್ಶಿಸಿದರು. ಕಲಾವಿಮರ್ಶಕ ವಿ.ಬಿ.ಹ್ಯಾವೆಲ್ ಅವರು ಈ ಕಲೆಯನ್ನು ನೋಡಿ, ವಿದೇಶಗಳಲ್ಲಿ ಶಾಸ್ತ್ರೀಯವಾಗಿ ಈ ಕಲಾ ಪ್ರಕಾರಗಳನ್ನು ಅಧ್ಯಯನ ಮಾಡಿದವರಿಗಿಂತ ಈ ಹಳ್ಳಿಯ ಕಲಾವಿದರು ಯಾವುದರಲ್ಲೂ ಕಡಿಮೆ ಇಲ್ಲ ಎಂದು ಉದ್ಗಾರ ತೆಗೆದಿದ್ದರು’ ಎಂದು ಅವರು ಸ್ಮರಿಸಿಕೊಳ್ಳುತ್ತಾರೆ.
 
ಕಾಲ ಬದಲಾಗಿದೆ ನಿಜ. ಆದರೆ, ದುಡ್ಡಿನ ಹಿಂದೆ ಬಿದ್ದ ಬದುಕು ಜನರನ್ನು ಸಾಂಸ್ಕೃತಿಕ ಅಧಃಪತನದತ್ತ ಒಯ್ದಿರುವುದೂ ಇಲ್ಲಿ ಢಾಳಾಗಿ ಕಾಣಸಿಗುತ್ತಿದೆ. ಭೌಗೋಳಿಕ ಗುರುತು (ಸಂಖ್ಯೆ 213) ಹೊಂದಿದ ಈ ಗ್ರಾಮಕ್ಕೆ ಪುನಶ್ಚೇತನ ಕೊಡಬೇಕಿದೆ. ಗೊಂಬೆಗಳನ್ನು ಮಾತನಾಡಿಸಬೇಕಿದೆ.
ಚಿತ್ರಗಳು: ಭರತ್‌ ಕಂದಕೂರ
 
ಹಿನ್ನಡೆಗೆ ಕಾರಣವಿದು

ಕಿನ್ನಾಳ ಕಲೆ ಬಗ್ಗೆ ದೀರ್ಘ ಅಧ್ಯಯನ ಮಾಡಿರುವ ಡಾ.ಆರ್.ಎಚ್. ಕುಲಕರ್ಣಿ ಅವರು ಕಲೆಯ ಹಿನ್ನಡೆ ಬಗ್ಗೆ ವಿಶ್ಲೇಷಿಸುವುದು ಹೀಗೆ. ‘ಕಿನ್ನಾಳ ಕಲೆ 1960–70ರವರೆಗೆ  ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಕಲಾವಿದರು ಮೂಲ ಶೈಲಿ ಉಳಿಸಿಕೊಂಡು ಚಿತ್ರ ರಚನೆ ಮಾಡುತ್ತಿದ್ದರು. ಆಗ ಕಲಾವಿದರು ಕೃಷಿ ಜತೆಗೆ ಈ ಕಲೆಗಾರಿಕೆ ಮಾಡುತ್ತಿದ್ದರು. ಕೃಷಿ ಭೂಮಿ ಬೇರೆಯವರ ಪಾಲಾದಾಗ ಚಿತ್ರಕಲೆಯನ್ನಷ್ಟೇ ನಂಬುವ ಪರಿಸ್ಥಿತಿ ಬಂತು. ಆಗ ಹೊಸ ರೀತಿಯ, ಸಮಕಾಲೀನ ಚಿತ್ರಕೃತಿಗಳತ್ತ ಕಲಾವಿದರು ವಾಲಿದರು. ಪರಿಣಾಮವಾಗಿ, ಮೂಲ ಬಣ್ಣದ ಬದಲು ಮಾರುಕಟ್ಟೆಯಲ್ಲಿ ಸಿಗುವ ಆಧುನಿಕ ಬಣ್ಣಗಳನ್ನು ಬಳಸಿದರು. ಎನಾಮಲ್ ಪೇಂಟ್, ವಾರ್ನಿಷ್ ಇತ್ಯಾದಿ ಶುರುವಿಟ್ಟುಕೊಂಡರು. ಇದರಿಂದ ಕಿನ್ನಾಳ ಕಲೆಯ ಮೂಲಸ್ವರೂಪ ಕುಸಿಯುತ್ತಾ ಬಂತು’ ಎನ್ನುತ್ತಾರೆ.
 
* ಗ್ರಾಮೀಣ ಪ್ರದೇಶದ ದೇವರುಗಳು ಅರಳಬೇಕಾದದ್ದು ನಮ್ಮ ಕೈಯಲ್ಲೇ. ಮಾನವಗಾತ್ರದ ಕಾಷ್ಠ ಶಿಲ್ಪಗಳನ್ನು ನಾವೇ ತಯಾರಿಸಬೇಕು. ಹೀಗಾಗಿ ಬೇಡಿಕೆ ನಿರಂತರವಾಗಿದೆ. ಕಿನ್ನಾಳ ಕಲೆಗೆ ಅವನತಿ ಇಲ್ಲ. ಅದಕ್ಕೆ ಪುನಶ್ಚೇತನ ನೀಡುವ ಕೆಲಸ ಆಗಬೇಕಿದೆ ಅಷ್ಟೇ.
––ಸೋಮಣ್ಣ, ಚಿತ್ರಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT