ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ನೇ ಕ್ಲಾಸ್‌ ಓದಿ ಆರಂಕಿ ಸಂಪಾದನೆ!

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
17ವರ್ಷಗಳ ಹಿಂದಿನ ಮಾತು. ಚಿಕ್ಕಬಳ್ಳಾಪುರ ತಾಲ್ಲೂಕಿನ ಪಟ್ರೇನಹಳ್ಳಿಯ ಆ ಅವಿಭಕ್ತ ಕುಟುಂಬ ವಿಘಟನೆಯಾದಾಗ ಇಬ್ಬರು ಮಕ್ಕಳಲ್ಲಿ ಆ ಮನೆಯ ಹಿರಿಮಗ ರಾಜಗೋಪಾಲ್‌ ಅವರಿಗೆ ಪಿತ್ರಾರ್ಜಿತವಾಗಿ ಬಂದ ಜಮೀನಿನ ಪೈಕಿ 17 ಗುಂಟೆ ಜಾಗ, ಕೆಲ ಮುದಿ ಹಸುಗಳು, ಒಂದು ಜೋಡಿ ಎತ್ತು ಜತೆಗೆ ಸುಮಾರು ₹70 ಸಾವಿರ ಸಾಲದ ಪಾಲು ದೊರೆತಿತ್ತು. ಕೇವಲ 6ನೇ ತರಗತಿವರೆಗೆ ಓದಿದ ಅರೆವಿದ್ಯಾವಂತ ಆ ಯುವಕನಲ್ಲಿ ಮುಂದೇನು ಮಾಡುವುದು? ಒಂಟಿಯಾಗಿ ಬದುಕು ಮುನ್ನಡೆಸುವುದು ಹೇಗೆ? ಎಂಬ ದಿಗಿಲು ಮನೆಮಾಡಿತ್ತು. 
 
ವಿದ್ಯೆಯ ಹಂಗಿಲ್ಲದೆ ಬದುಕಿನ ಬಂಡಿ ನಡೆಸುವ ಪರ್ಯಾಯ ದಾರಿಗಳ ಹುಡುಕಾಟದಲ್ಲಿ ಇದ್ದವರಿಗೆ ಕಣ್ಣಿಗೆ ಮೊದಲು ಗೋಚರಿಸಿದ್ದು ತಮ್ಮ ಪಾಲಿಗೆ ಬಳುವಳಿಯಾಗಿ ಬಂದ ಎತ್ತುಗಳು. ಮುದಿ ಎತ್ತುಗಳನ್ನೇ ಬಂಡವಾಳ ಮಾಡಿಕೊಂಡು ಬಂಡಿ ಹೂಡಿದವರು ನೇರವಾಗಿ ಹೋಗಿ ನಿಂತಿದ್ದು ಸಮೀಪದ ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯ ಪ್ರಾಂಗಣದಲ್ಲಿ. 
 
ಎಪಿಎಂಸಿಯಲ್ಲಿರುವ ವರ್ತಕರ ಮಳಿಗೆಗಳಿಂದ ನಗರದಲ್ಲಿರುವ ಚಿಲ್ಲರೆ ಅಂಗಡಿಗಳಿಗೆ ಗೊಬ್ಬರ, ಬೂಸಾ, ಉಪ್ಪಿನ ಮೂಟೆಯಂತಹ ಸರಕುಗಳನ್ನು ಎತ್ತಿನ ಗಾಡಿಯಲ್ಲಿ ಸಾಗಿಸಿ, ಬರುವ ಬಾಡಿಗೆಯ ಕಾಸಿನಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿದ್ದವರಿಗೆ ಹಗಲಿರುಳಿನ ಪರಿವೇ ಇಲ್ಲದಾಗಿತ್ತು. ಇಬ್ಬರು ಮಕ್ಕಳೊಂದಿಗರಾದ ಇವರಿಗೆ ತನ್ನೊಬ್ಬನ ದುಡಿಮೆಯಿಂದ ಮನೆ ಮಂದಿಯ ತುತ್ತಿನ ಚೀಲಗಳು ತುಂಬುವುದು ಕಷ್ಟವೆನಿಸಿದಾಗ ನಾಲ್ಕು ಕಾಸುಗಳನ್ನು ಉಳಿಸಿ ಪತ್ನಿಗೆ ಎರಡು ಹಸುಗಳನ್ನು ತಂದುಕೊಟ್ಟು ಹೆಂಡತಿಯನ್ನೂ ಸಂಪಾದನೆಯಲ್ಲಿ ಸಹಭಾಗಿಯನ್ನಾಗಿ ಮಾಡಿಕೊಂಡಿದ್ದರು.
 
2000 ದಿಂದ 2010ರವರೆಗೆ ಸುಮಾರು 10 ವರ್ಷಗಳು ಎತ್ತಿನ ಬಂಡಿಯ ಬಾಡಿಗೆಯನ್ನೇ ಕಾಯಕ ಮಾಡಿಕೊಂಡವರಿಗೆ ಬದಲಾದ ಸನ್ನಿವೇಶದಲ್ಲಿ ತರಹೆವಾರಿ ಬಾಡಿಗೆ ವಾಹನಗಳ ಓಡಾಟ ಕಂಡಾಗ ಇನ್ನು ತಮ್ಮದು ಸಲ್ಲದ ಕೆಲಸವೆಂದು ಬಗೆದು ಬಾಡಿಗೆ ಬಂಡಿಗೆ ವಿರಾಮ ನೀಡಿದ್ದರು. ಬಳಿಕ ಪರ್ಯಾಯಕ್ಕಾಗಿ ಎದುರು ನೋಡುತ್ತಿದ್ದವರಿಗೆ ಹೊಳೆದದ್ದು ಹೈನುಗಾರಿಕೆ.
 
ಪಿತ್ರಾರ್ಜಿತ ಪಾಲಾಗಿ ಬಂದ 17 ಗುಂಟೆ ಜಮೀನಿನಲ್ಲಿ 2011ರಲ್ಲಿ ದಶಕದ ದುಡಿಮೆಯಲ್ಲಿ ಕೂಡಿಟ್ಟ ಹಣದಲ್ಲಿ 30/12  ಅಡಿ ಅಳತೆಯ ಶೆಡ್‌ ನಿರ್ಮಿಸಿಕೊಂಡು 5 ಆಕಳುಗಳನ್ನು ಕಟ್ಟಿಕೊಂಡು, ಆರಂಭದಲ್ಲಿ ನಿತ್ಯ 110 ಲೀಟರ್‌ ಹಾಲು ಉತ್ಪಾದನೆಯೊಂದಿಗೆ ಹೈನುಗಾರಿಕೆಗೆ ಅಡಿಯಿಟ್ಟಿದ್ದರು. ಹಿರಿಯ ಮಗ ವರುಣ್‌ಕುಮಾರ್ ಓದಿನಲ್ಲಿ ಆಸಕ್ತಿ ತೋರಿದರೆ, ಕಿರಿಯ ಮಗ ಕಿರಣ್‌ ಕುಮಾರ್ ಅಮ್ಮ ರಾಧಮ್ಮ ಅವರೊಂದಿಗೆ ಅಪ್ಪನ ಹೈನೋದ್ಯಮಕ್ಕೆ ಬೆನ್ನೆಲುಬಾಗಿ ನಿಂತ. 
 
ಒಂದು ವರ್ಷದ ಹೊತ್ತಿಗೆ ಹಸುಗಳ ಸಂಖ್ಯೆ 10ಕ್ಕೆ ಏರಿತ್ತು. 2013ರಲ್ಲಿ ಪಟ್ರೇನಹಳ್ಳಿ ದೇನಾ ಬ್ಯಾಂಕ್‌ನಲ್ಲಿ ₹5 ಲಕ್ಷ ಸಾಲ ಪಡೆದ ರಾಜಗೋಪಾಲ್‌ ಅದರಲ್ಲಿ 12 ಹಸುಗಳನ್ನು ಖರೀದಿಸಿದ್ದರು. 2015ರ ಒಳಗೆ ಸಾಲ ತೀರಿಸಿದವರಿಗೆ ಪುನಃ ಅಷ್ಟೇ ಸಾಲ ದೊರೆತಿತ್ತು. ಅದರಲ್ಲಿ ಮತ್ತಷ್ಟು ಹಸುಗಳನ್ನು ತಂದಾಗ ಅವರ ಕೊಟ್ಟಿಗೆಯಲ್ಲಿ 36 ಹಸುಗಳಿದ್ದವು. ಸದ್ಯ ಅವುಗಳ ಸಂಖ್ಯೆ 40ರ ಗಡಿ ದಾಟಿದೆ. ಅದಕ್ಕಾಗಿ ಅವರು ಚಿಕ್ಕ ಶೆಡ್‌ ತೆಗೆದುಹಾಕಿ 80/30  ಅಡಿ ಅಳತೆಯ ಹೊಸ ಶೆಡ್‌ ನಿರ್ಮಿಸಿದ್ದಾರೆ.
 
2011ರಲ್ಲಿ ತಿಂಗಳಿಗೆ 3 ಸಾವಿರ ಲೀಟರ್‌ ಹಾಲು ಉತ್ಪಾದಿಸುತ್ತಿದ್ದ ರಾಜಗೋಪಾಲ್‌ ಅವರು ವರ್ಷದಿಂದ ವರ್ಷಕ್ಕೆ ಅದರ ಪ್ರಮಾಣವನ್ನು ವೃದ್ಧಿಸುತ್ತ 2016ರ ಅಂತ್ಯದ ಹೊತ್ತಿಗೆ 99 ಸಾವಿರ ಲೀಟರ್‌ಗೆ ತಲುಪಿಸಿದ್ದಾರೆ. ಪ್ರಸ್ತುತ ಅವರು ನಿತ್ಯ ಸುಮಾರು 350 ಲೀಟರ್‌ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. 
 
ಕಸದಿಂದ ರಸ 
ಚಿಕ್ಕಬಳ್ಳಾಪುರದಲ್ಲಿರುವ ಹಣ್ಣುಗಳ ಮಳಿಗೆಗಳು, ಕಬ್ಬಿನಹಾಲಿನ ಅಂಗಡಿಗಳು, ಹೋಟೆಲ್‌ಗಳು, ಮಾರುಕಟ್ಟೆಯಲ್ಲಿರುವ ತರಕಾರಿ ತ್ಯಾಜ್ಯವನ್ನು ಸಂಗ್ರಹಿಸಿ ತರುವ ರಾಜಗೋಪಾಲ್‌, ನಾಲ್ಕೈದು ದಿನಕ್ಕೊಮ್ಮೆ ಹೊಳೆನರಸೀಪುರದಿಂದ ಕಬ್ಬಿನ ತೊಂಡೆ ತರಿಸಿ ಹಸುಗಳಿಗೆ ನೀಡುತ್ತಾರೆ. ಹೀಗಾಗಿ ಅವರಿಗೆ ಪಶು ಆಹಾರದ ಖರ್ಚಿನಲ್ಲಿ ಸ್ವಲ್ಪ ಉಳಿತಾಯವಾಗುತ್ತಿದೆ. 
 
ನೀರಿಗಾಗಿ ಕೊಳವೆಬಾವಿಯೊಂದನ್ನು ಕೊರೆಯಿಸಿ, ಶೆಡ್‌ ನಿರ್ಮಿಸಿರುವ ಉಳಿದಿರುವ 10 ಗುಂಟೆ ಜಾಗದಲ್ಲಿ ಹಸಿರು ಮೇವು ಬೆಳೆಯುತ್ತಾರೆ. ಜತೆಗೆ ವರ್ಷಕ್ಕೆ ಆಗುವಷ್ಟು ಒಣ ರಾಗಿ ಹುಲ್ಲು, ಜೋಳದ ಕಡ್ಡಿಯನ್ನು ರೈತರಿಂದ ಖರೀದಿಸುತ್ತಾರೆ. ಆಂಧ್ರಪ್ರದೇಶದ ವಿಜಯವಾಡದಿಂದ ರಸ ತೆಗೆದ ಬಾರ್ಲಿ ತ್ಯಾಜ್ಯವನ್ನು ಟನ್‌ಗಳ ಲೆಕ್ಕದಲ್ಲಿ ಖರೀದಿಸುತ್ತಾರೆ.  ಪಟ್ರೇನಹಳ್ಳಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ರಾಜಗೋಪಾಲ್‌ ಹಾಲು ಪೂರೈಸುತ್ತಾರೆ. ಸರ್ಕಾರದ ಪ್ರೋತ್ಸಾಹಧನವೂ ಸೇರಿದಂತೆ ಇವತ್ತು ಪ್ರತಿ ಲೀಟರ್‌ ಹಾಲಿಗೆ ₹28 ದರ ದೊರೆಯುತ್ತಿದೆ.
 
ಅಪ್ಪಿಕೊಂಡ ಕೆಲಸವನ್ನು ಬಹುಶ್ರದ್ಧೆ, ಕಾಯಕ ನಿಷ್ಠೆಯಿಂದ ಮಗ ಮತ್ತು ಪತ್ನಿಯ ಸಹಾಯದಿಂದ ಒಂದೇ ಒಂದು ಆಳಿನ ನೆರವಿಲ್ಲದೆ ನಡೆಸಿಕೊಂಡು ಹೋಗುತ್ತಿದ್ದಾರೆ. ಹಸುಗಳು ಹಾಕುವ ಹೆಣ್ಣು ಕರುಗಳನ್ನು ಸಾಕುತ್ತ, ಗಂಡು ಕರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸೆಗಣಿ ಮಾರಾಟದಿಂದಲೇ ವರ್ಷಕ್ಕೆ ₹1.50 ರಿಂದ ₹2 ಲಕ್ಷ ಆದಾಯ ಗಳಿಸುತ್ತಾರೆ. ವಿವಿಧ ಕಡೆಗಳಲ್ಲಿ ಆಯೋಜಿಸುವ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿರುವ ರಾಜಗೋಪಾಲ್‌ ಅವರಿಗೆ ಕೆಎಂಎಫ್‌ ವತಿಯಿಂದ ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ಸನ್ಮಾನಗಳು ಸಂದಿವೆ.
 
ಸ್ವಯಂ ವೈದ್ಯ!
ಹೈನುಗಾರಿಕೆ ಆರಂಭಿಸಿದ ಹೊತ್ತಿನಲ್ಲಿ ನಿಯಮಿತವಾಗಿ ಪಶುವೈದ್ಯರನ್ನು ಕರೆಯಿಸಿ ಪಶುಗಳ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದ ರಾಜಗೋಪಾಲ್‌, ದಿನ ಕಳೆದಂತೆ ಯಾವ ಕಾಯಿಲೆ ಮತ್ತು ಸೋಂಕಿಗೆ ಯಾವ ಇಂಜೆಕ್ಷನ್‌, ಮಾತ್ರೆಗಳನ್ನು ನೀಡಬೇಕು ಎನ್ನುವುದನ್ನು ಆಸಕ್ತಿಯಿಂದಲೇ ಕಲಿತುಕೊಂಡವರು. ಹಸುಗಳನ್ನು ಬಾಧಿಸುವ ಎಲ್ಲ ಕಾಯಿಲೆಗಳ ಲಕ್ಷಣಗಳನ್ನು ಬಲ್ಲ ಅವರು ನಗರದಲ್ಲಿರುವ ಮಳಿಗೆಯಿಂದ ಔಷಧಿ, ಮಾತ್ರೆ ಖರೀದಿಸಿ ತಂದು ತಾವೇ ಹಸುಗಳಿಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯರ ಅವಲಂಬನೆ ತಪ್ಪಿಸಿಕೊಂಡಿದ್ದಾರೆ. 
 
ಕೇವಲ 6ನೇ ತರಗತಿ ಮುಗಿಸಿದರೂ ಐಎಎಸ್ ಅಧಿಕಾರಿ, ಐಟಿ ಕ್ಷೇತ್ರದ ಉದ್ಯೋಗಿಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿ ಲಕ್ಷಗಟ್ಟಲೆ ಸಂಪಾದನೆ ಮಾಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡ ರಾಜಗೋಪಾಲ್‌ ಅವರು ಸಲ್ಲದ ನೆಪ ಹೇಳಿ ನಿರುದ್ಯೋಗಿಗಳಾಗಿ ಅಲೆದಾಡುವ ಯುವಜನರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಸಂಪರ್ಕಕ್ಕೆ: 98456 22370. 
 
ಶ್ವಾನಗಳಿಂದಲೂ ಆದಾಯ!
ಡೈರಿ ಫಾರ್ಮ್‌ ರಕ್ಷಣೆಯ ದೃಷ್ಟಿಯಿಂದ ಆರಂಭದಲ್ಲಿ ನಾಲ್ಕು ಬೀದಿನಾಯಿಗಳನ್ನು ಸಾಕಿಕೊಂಡಿದ್ದ ರಾಜಗೋಪಾಲ್‌ ಅವರ ಬಳಿ ಇವತ್ತು ಗ್ರೇಡೆನ್, ರಾಟ್‌ವೀಲರ್, ಜರ್ಮನ್‌ ಶೆಫರ್ಡ್‌, ಲ್ಯಾಬ್, ಡಾಬರ್‌ಮೆನ್ ತಳಿಗಳಿಗೆ ಸೇರಿದ 15 ಶ್ವಾನಗಳಿವೆ.

ಆ ಪೈಕಿ ಇತ್ತೀಚೆಗಷ್ಟೇ ಅವರು ರಾಟ್‌ವೀಲರ್ ತಳಿಯ ಎರಡು ಶ್ವಾನಗಳನ್ನು ತಲಾ ₹35 ಸಾವಿರಕ್ಕೆ ಒಂದರಂತೆ ಮಾರಾಟ ಮಾಡಿದ್ದಾರೆ. ಉತ್ತಮ ತಳಿಯ ಸಂತಾನ ಬಯಸಿ ಇವರ ಗಂಡು ಶ್ವಾನಗಳ ಬಳಿ ಹೆಣ್ಣು ಶ್ವಾನಗಳನ್ನು ಕರೆತರುವವರಿಂದಲೇ ಪ್ರತಿವರ್ಷ ₹50 ಸಾವಿರಕ್ಕಿಂತಲೂ ಅಧಿಕ ಶುಲ್ಕ ಸಂಗ್ರಹಿಸುತ್ತಾರೆ. ಶ್ವಾನ ಪೋಷಣೆಯ ಲಾಭ ಮನಗಂಡಿರುವ ರಾಜಗೋಪಾಲ್‌ ಅವುಗಳಿಗಾಗಿಯೇ ಪ್ರತ್ಯೇಕವಾದ ಫಾರ್ಮ್‌ವೊಂದನ್ನು ನಿರ್ಮಿಸುವ ಉದ್ದೇಶವಿಟ್ಟುಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT