ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ಗಳಲ್ಲಿ ಪ್ರಾದೇಶಿಕ ಭಾಷೆ ಬಳಕೆಗೆ ಇಚ್ಛಾಶಕ್ತಿ ಬೇಕು

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿರುವ ಭಾಷೆಗಳನ್ನು ಹೈಕೋರ್ಟ್‌ಗಳಲ್ಲಿ ಬಳಸುವುದಕ್ಕೆ ಅವಕಾಶ ನೀಡಬಹುದು ಎಂದು ಕಾನೂನು ಮತ್ತು ಸಿಬ್ಬಂದಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.

ಹೈಕೋರ್ಟ್‌ಗಳಲ್ಲಿ ಬಳಸಬಹುದಾದ ಭಾಷೆಗಳ ಸುತ್ತ ಇರುವ ಚರ್ಚೆಯ ಅರಿವು ಇಲ್ಲದೇ ಇರುವವರಿಗೆ ಸಂಸದೀಯ ಸ್ಥಾಯಿ ಸಮಿತಿಯ ಅಭಿಪ್ರಾಯ ಸಹಜವೂ ಭಾರತದ ಒಟ್ಟು ಸ್ವರೂಪಕ್ಕೆ ಒಪ್ಪುವಂಥದ್ದೂ ಆಗಿರುವಂತೆ ಕಾಣಿಸುತ್ತದೆ. ಆದರೆ ಈ ವಿಚಾರ ಇಷ್ಟೊಂದು ಸರಳವಾಗಿಲ್ಲ.

1961ರಲ್ಲಿ ‘ರಾಜಭಾಷಾ ಆಯೋಗ’ ಸ್ಥಾಪನೆಯಾಯಿತು. ಇದರ ಮೂಲಕ ಕಾನೂನಿಗೆ ಸಂಬಂಧಿಸಿದ ಪಾರಿಭಾಷಿಕಗಳನ್ನು ಮೊದಲಿಗೆ ಹಿಂದಿಯಲ್ಲಿಯೂ ಮುಂದಿನ ದಿನಗಳಲ್ಲಿ ಕನ್ನಡವೂ ಸೇರಿದಂತೆ ಎಂಟನೇ ಪರಿಚ್ಛೇದದಲ್ಲಿ ಇರುವ ಎಲ್ಲಾ ಭಾಷೆಗಳಲ್ಲಿ ರಚಿಸಲಾಯಿತು. ಆದರೂ ಹೈಕೋರ್ಟ್‌ಗಳ ಮಟ್ಟದಲ್ಲಿ ಆಯಾ ರಾಜ್ಯದ ಭಾಷೆ ನ್ಯಾಯಾಂಗ ಭಾಷೆಯಾಗಲೇ ಇಲ್ಲ.

ಭಾರತದ ಒಕ್ಕೂಟ ಸ್ವರೂಪವನ್ನು ಕಾಪಾಡಿಕೊಳ್ಳಲು ಮಾಡಿಕೊಂಡ ವ್ಯವಸ್ಥೆಗೆ ಅನುಗುಣವಾಗಿ ನಿರ್ದಿಷ್ಟ ರಾಜ್ಯದ ಹೈಕೋರ್ಟ್‌ನಲ್ಲಿ ಇರುವ ನ್ಯಾಯಮೂರ್ತಿಗಳು ಆ ರಾಜ್ಯದ ಆಡಳಿತ ಭಾಷೆಯನ್ನು ಅರಿತವರಾಗಿರಬೇಕಾಗಿಲ್ಲ. ಹೀಗಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳ ಭಾಷೆ ಇಂಗ್ಲಿಷ್ ಆಗಿಯೇ ಉಳಿಯಿತು.

1965ರಲ್ಲಿ ಮಾಡಿಕೊಂಡ ವ್ಯವಸ್ಥೆಯೊಂದರಂತೆ ಹೈಕೋರ್ಟ್‌ಗಳಲ್ಲಿ ಬಳಸಬಹುದಾದ ಭಾಷೆಗಳನ್ನು ಹೆಚ್ಚಿಸುವುದಕ್ಕೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜೊತೆ ಸಮಾಲೋಚನೆ ನಡೆಸಬೇಕಾಗುತ್ತದೆ. ಈ ಸಮಾಲೋಚನೆಯ ಮೂಲಕ ರಾಜ್ಯಗಳ ಆಡಳಿತ ಭಾಷೆಗಳನ್ನು ಹೈಕೋರ್ಟ್‌ನ ಭಾಷೆಯಾಗಿಸುವ ಪ್ರಯತ್ನಗಳು ಈ ತನಕ ಸಫಲವಾಗಿಲ್ಲ.

1997, 1999 ಮತ್ತು 2012ರಲ್ಲಿ ಈ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಅಂಶವನ್ನು ಪರಿಗಣಿಸಿರುವ ಸಂಸದೀಯ ಸ್ಥಾಯಿ ಸಮಿತಿಯು ಹೈಕೋರ್ಟ್‌ಗಳಲ್ಲಿ ಆಯಾ ರಾಜ್ಯದ ಭಾಷೆಯನ್ನು ಬಳಸುವ ಪರಿಪಾಠ ಆರಂಭಿಸುವುದಕ್ಕೆ ನ್ಯಾಯಾಂಗದ ಜೊತೆ ಸಮಾಲೋಚಿಸಬೇಕಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಶಾಸಕಾಂಗ ತನ್ನ ಶಕ್ತಿಯನ್ನು ಬಳಸಿ ಹೈಕೋರ್ಟ್‌ನ ಭಾಷೆಯನ್ನು ನಿರ್ಧರಿಸಬಹುದಾದರೂ ಅದು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರಬೇಕಾದರೆ ನ್ಯಾಯಾಂಗದ ಸದಸ್ಯರ ಪೂರ್ಣ ಸಹಕಾರದ ಅಗತ್ಯವಿರುತ್ತದೆ. ಇಷ್ಟಕ್ಕೂ ಈಗಾಗಲೇ ಬಳಕೆಯಲ್ಲಿರುವ ಇಂಗ್ಲಿಷ್ ಭಾಷೆಯ ಜೊತೆಗೆ ಪ್ರಾದೇಶಿಕ ಭಾಷೆಯನ್ನು ಬಳಸಬೇಕಾಗುತ್ತದೆ.

‘ಸಂಸದೀಯ ಸ್ಥಾಯಿ ಸಮಿತಿಯ ಅಭಿಪ್ರಾಯ ಆದರ್ಶವಾಗಿ ಸರಿ. ಪ್ರಾಯೋಗಿಕವಾಗಿ ಸರಿಯಲ್ಲ’ ಎಂಬ ಅಭಿಪ್ರಾಯವನ್ನು ಹಲವು ವಕೀಲರು ಮತ್ತು ನ್ಯಾಯಾಂಗದ ಸದಸ್ಯರು ವ್ಯಕ್ತಪಡಿಸುತ್ತಿದ್ದಾರೆ. ಕೆಲಮಟ್ಟಿಗೆ ಇದನ್ನು ಒಪ್ಪಲೇಬೇಕಾಗುತ್ತದೆ. ಆದರೆ ಕಾನೂನು ಮತ್ತು ಆಡಳಿತ ಪಾರಿಭಾಷಿಕಗಳ ಸೃಷ್ಟಿಗೆ ಕನಿಷ್ಠ ಆರು ದಶಕಗಳ ಇತಿಹಾಸವಿದೆ. 1967ರಲ್ಲಿಯೇ ಅಂದಿನ ಮೈಸೂರು ಸರ್ಕಾರ ಕನ್ನಡದಲ್ಲೊಂದು ಆಡಳಿತ ಪದಕೋಶವೊಂದನ್ನು ಹೊರತಂದಿತ್ತು.

1975ರಲ್ಲಿ ಕರ್ನಾಟಕ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಸಮಗ್ರ ಎಂದು ಕರೆಯಬಹುದಾದಷ್ಟು ದೊಡ್ಡದೊಂದು ಕಾನೂನು ಪದಕೋಶವನ್ನೂ ಪ್ರಕಟಿಸಿದೆ. ಅಂದರೆ ಕಾನೂನು ಪಾರಿಭಾಷಿಕಗಳನ್ನು ಈಗ ಸೃಷ್ಟಿಸುವ ಅಗತ್ಯವೇನೂ ಇಲ್ಲ. ಆಡಳಿತಾತ್ಮಕ ವಿಚಾರಗಳ ಅಭಿವ್ಯಕ್ತಿಗೆ ಅಗತ್ಯವಿರುವ ಪದಕೋಶವೊಂದು ಕನ್ನಡದಲ್ಲಿ ರೂಪುಗೊಂಡಿದೆ ಎಂಬುದಕ್ಕೆ ನಮ್ಮ ಇಲಾಖೆಗಳು ಈಗಾಗಲೇ ವ್ಯವಹರಿಸುತ್ತಿರುವ ಮಾದರಿಯನ್ನೇ ಉದಾಹರಣೆಯಾಗಿ ಕೊಡಬಹುದು.

ನ್ಯಾಯಾಂಗದಲ್ಲಿ ಬಹುಭಾಷೆ ಎಂಬ ಪರಿಕಲ್ಪನೆಯೇ ಇಡೀ ವಿಶ್ವದ ಮಟ್ಟಿಗೆ ಹೊಸತು. ಯುರೋಪ್ ಒಕ್ಕೂಟದ ನ್ಯಾಯಾಲಯಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುತ್ತಿದೆಯಾದರೂ 24 ಭಾಷೆಗಳಿಗೆ ಪ್ರತಿಯೊಂದು ದಾಖಲೆಯನ್ನೂ ಅನುವಾದಿಸುವುದೇ ದೊಡ್ಡ ಕೆಲಸವಾಗಿ ಒಂದು ಭಾಷೆಯಲ್ಲಿ ಪೂರ್ಣ ವ್ಯವಹಾರ, ಉಳಿದ ಭಾಷೆಗಳಲ್ಲಿ ಸಾರಾಂಶದಂಥ ಅನುವಾದ ಎಂಬ ಸ್ಥಿತಿಗೆ ಬಂದಿದೆ.

ಕೆನಡಾದಲ್ಲಿ ಇಂಗ್ಲಿಷ್ ಮತ್ತು ಫ್ರೆಂಚ್‌ಗಳೆರಡೂ ಆಡಳಿತ ಭಾಷೆಗಳಾಗಿರುವುದರಿಂದ ಅಲ್ಲಿ ಇದು ಬಹುಮಟ್ಟಿಗೆ ಯಶಸ್ವಿಯಾಗಿದೆ. ಭಾರತದ ಹೈಕೋರ್ಟ್‌ಗಳಲ್ಲಿ ಈ ಮಾದರಿಯನ್ನು ಬಳಸುವುದಕ್ಕೆ ಸಾಧ್ಯವಿದೆ. ಇದು ಸಾಧ್ಯವಾಗುವುದಕ್ಕೆ ಭಾಷಿಕ ಸಂಪನ್ಮೂಲಗಳಿಗಿಂತ ಹೆಚ್ಚಾಗಿ ಇಚ್ಛಾಶಕ್ತಿಯ ಅಗತ್ಯವಿದೆ.

ನ್ಯಾಯದಾನಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿಯೇ ವಿಫಲವಾಗಿರುವ ಆಡಳಿತ ವ್ಯವಸ್ಥೆಯಿಂದಾಗಿ ಭಾರಿ ಪ್ರಮಾಣದ ಮೊಕದ್ದಮೆಗಳು ಇತ್ಯರ್ಥವಾಗದೇ ಉಳಿದಿವೆ. ಈ ಅಂಶವನ್ನೂ ಗಮನದಲ್ಲಿಟ್ಟುಕೊಂಡೇ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ. ಹೈಕೋರ್ಟ್‌ಗಳಲ್ಲಿ ಇನ್ನೊಂದು ಭಾಷೆ ಹೆಚ್ಚುವರಿಯಾಗಿ ಬಳಕೆಯಾಗುತ್ತದೆ ಎಂಬುದು ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲವನ್ನೂ ಬಯಸುತ್ತದೆ ಎಂಬುದು ಸರ್ಕಾರಕ್ಕೆ ನೆನಪಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT