ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ಬರೆ; ಕುಡಿಯುವ ನೀರಿನದೇ ವೇದನೆ

ಗದಗ; ಹೊಸ ಜಿಲ್ಲೆಯಾದರೂ ಮುಂದುವರಿದ ಹಳೆಯ ಸಮಸ್ಯೆಗಳು
Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಗದಗ: ಎರಡು ದಶಕಗಳ ಹಿಂದೆ ಧಾರವಾಡ ಜಿಲ್ಲೆಯ ಭಾಗವಾಗಿದ್ದಾಗ ಗದಗ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿತ್ತೋ, ಈಗಲೂ ಆ ಎಲ್ಲ ಸಮಸ್ಯೆಗಳನ್ನು ಎದುರಿಸುತ್ತಿದೆ.

ಬರಗಾಲವನ್ನೇ ಹಾಸಿ ಹೊದ್ದುಕೊಂಡಿರುವ ಜಿಲ್ಲೆಯಲ್ಲಿ ಕುಡಿಯುವ ನೀರಿನದ್ದೇ ಬಹುದೊಡ್ಡ ಸಮಸ್ಯೆ. ವರ್ಷ 20 ಕಳೆದರೂ ಕುಡಿಯುವ ನೀರಿನ ಬವಣೆ ತಪ್ಪಿಸಲು ಶಾಶ್ವತ ಪರಿಹಾರವೊಂದನ್ನು ಕಂಡುಕೊಳ್ಳಲು ಇದುವರೆಗೆ ಸಾಧ್ಯವಾಗಿಲ್ಲ. ಜಿಲ್ಲೆಯ ಒಂದು ಬದಿ ತುಂಗಭದ್ರಾ ಮತ್ತೊಂದು ಬದಿ ಮಲಪ್ರಭಾ ನದಿ ಹರಿಯುತ್ತಿದ್ದರೂ ಜಿಲ್ಲೆ ಸಂಪೂರ್ಣ ಒಣ ಬೇಸಾಯ ಪದ್ಧತಿಯನ್ನೇ ಆಧರಿಸಿದೆ. ಪ್ರಮುಖ ನೀರಾವರಿ ಯೋಜನೆಗಳಾದ ಕಳಸಾ ಬಂಡೂರಿ, ಮಹದಾಯಿ ಯೋಜನೆಗಳು ದಶಕಗಳಿಂದ ನೆನೆಗುದಿಗೆ ಬಿದ್ದಿವೆ. ಮೂಲಸೌಕರ್ಯ ಅಭಿವೃದ್ಧಿಯೂ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.

5 ತಾಲ್ಲೂಕಿನ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಇಂದಿಗೂ ಬಸ್ ಸೌಕರ್ಯವೇ ಇಲ್ಲ. ಎರಡು ತಿಂಗಳ ಹಿಂದಷ್ಟೇ ಜಿಲ್ಲೆಯ 1.59 ಲಕ್ಷ ಎಕರೆಗೆ ನೀರುಣಿಸುವ ತುಂಗಭದ್ರಾ ನದಿಯ ಸಿಂಗಟಾಲೂರ ಏತನೀರಾವರಿ ಎಡಭಾಗದ ಮುಖ್ಯ ಕಾಲುವೆಯನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಈ ಕಾಲುವೆ ಮೂಲಕ ಗದುಗಿನ ಭೀಷ್ಮ, ಡಂಬಳದ ವಿಕ್ಟೋರಿಯಾ ರಾಣಿ ಸೇರಿದಂತೆ ಹಲವು ಕೆರೆಗಳಿಗೆ ನೀರು ತುಂಬಿಸಲಾಗಿದೆ.

ನರಗುಂದ ಗದಗ ಜಿಲ್ಲೆಗೆ ಸೇರ್ಪಡೆಗೊಂಡ ನಂತರ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಾಣಲಿಲ್ಲ. ರೈತ ಬಂಡಾಯದ ನಗರಿಯಾದ ನರಗುಂದದ ರೈತರ ಬೇಡಿಕೆಗಳೂ ಈಡೇರಿಲ್ಲ. ರಾಜ್ಯ ಸರ್ಕಾರ ಉರುಳಿಸಿದ್ದ ಹೆಸರಿರುವ ನರಗುಂದಕ್ಕೆ  ಶಾಶ್ವತ ನೀರಾವರಿ ಸೌಲಭ್ಯ ಲಭಿಸಿಲ್ಲ. ಕಾಲುವೆಗಳು  ಮೊದಲು ಹೇಗೆ ಇದ್ದವೋ ಹಾಗೇ ಇವೆ. ‘ಹೆಸರೀಗೆ ನರಗುಂದ ಮೊಸರೀಗೆ ನೀರಿಲ್ಲ’  ಎಂದು ಜನಪದರು ಹಾಡಿದ್ದು ಸತ್ಯವಾಗಿದೆ.

ಹೊಸ ಜಿಲ್ಲೆ ಮಾಡಿದ್ದು ರಾಜಕೀಯ ಸ್ವಾರ್ಥ ಹಾಗೂ ಅಧಿಕಾರ ಪಡೆಯಲು ಮಾತ್ರ. ಎರಡು ದಶಕಗಳಿಂದ ನರಗುಂದದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ಕಳಸಾ ಬಂಡೂರಿ ನೀರೂ ಹರಿಯಲಿಲ್ಲ.  ಹೋರಾಟದ ಕಾವು ಮಾತ್ರ ತಪ್ಪಿಲ್ಲ. ರೈತರನ್ನು ಒಡೆದು ಆಳುವ ಕುತಂತ್ರ ಮಾತ್ರ ನಿರಂತರವಾಗಿ ನಡೆದಿದೆ.  ಜಿಲ್ಲೆ ಇದ್ದೂ ಇಲ್ಲದಂತಾಗಿದೆ ಎನ್ನುತ್ತಾರೆ  ಕಳಸಾ–ಬಂಡೂರಿ ಹೋರಾಟ ಸಮನ್ವಯ ಕೇಂದ್ರ ಸಮಿತಿ ಅಧ್ಯಕ್ಷ  ವಿಜಯ ಕುಲಕರ್ಣಿ.

ಸೈಕಲ್ ಪಥ, ಉಚಿತ ವೈ–ಫೈ ಸೌಲಭ್ಯ ಹೊಂದಿದ ರಾಜ್ಯದ ಮೊದಲ ನಗರ, ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ, ₨2ಕ್ಕೆ 20 ಲೀಟರ್‌ ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ಹಲವು ಜನಪ್ರಿಯ ಘೋಷಣೆಗಳ ಮೂಲಕ ಗದಗ ಜಿಲ್ಲೆ ಗುರುತಿಸಿಕೊಂಡಿದ್ದರೂ, ಜನಸಾಮಾನ್ಯರನ್ನು ಕೇಂದ್ರೀಕರಿಸಿದ ಸುಸ್ಥಿರ ಅಭಿವೃದ್ಧಿ ಜಿಲ್ಲೆಯಲ್ಲಿ ಆಗಿಲ್ಲ. ಸತತ ಬರದಿಂದಾಗಿ ರೈತರು ದುಡಿಯಲು ಗೋವಾ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಗುಳೆ ಹೋಗುವುದು ತಪ್ಪಿಲ್ಲ. ಜಿಲ್ಲಾ ಕೇಂದ್ರ ಗದಗ ನಗರ ವ್ಯಾಪ್ತಿಯಲ್ಲೇ ಇನ್ನೂ 10 ಸಾವಿರಕ್ಕೂ ಹೆಚ್ಚು ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಬೇಕಿವೆ.

ರೈತರ ಆರ್ಥಿಕ ಸ್ಥಿತಿಗತಿ, ಶೈಕ್ಷಣಿಕ ಪ್ರಗತಿ, ಆರೋಗ್ಯ ಭಾಗ್ಯ, ಕೃಷಿ ಕ್ಷೇತ್ರದ ಪ್ರಗತಿ, ಕೈಗಾರಿಕಾ ಅಭಿವೃದ್ಧಿ ಮುಂತಾದ ಅಂಶಗಳನ್ನು ಪರಿಶೀಲಿಸಿದರೆ ನಿರಾಸೆ ಕಾಡುತ್ತದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯು ಕೊನೆಯ ಮೂರು ಸ್ಥಾನಗಳಲ್ಲಿದೆ.  ಜಿಲ್ಲೆ ಚಿಕ್ಕದಾಗಿರುವುದರಿಂದ ಕಾನೂನು ಸುವ್ಯವಸ್ಥೆ ಮತ್ತು ಆಡಳಿತ ಸುಲಭವಾಗಿದೆ. ಜಿಲ್ಲೆಯ 5 ತಾಲ್ಲೂಕು ಕೇಂದ್ರಗಳಿಗೆ, ಜಿಲ್ಲಾ ಕೇಂದ್ರದಿಂದ 1 ಗಂಟೆಯೊಳಗೆ ತಲುಪಬಹುದು. ಹೊಸ ಜಿಲ್ಲೆ ಸಂದರ್ಭದಲ್ಲಿ ಜನತೆ ಇರಿಸಿದ್ದ ಬೇಡಿಕೆಗಳಲ್ಲಿ ಜಿಲ್ಲಾ ಆಸ್ಪತ್ರೆ, ಮೆಡಿಕಲ್‌ ಕಾಲೇಜು ಹೊರತುಪಡಿಸಿ ಉಳಿದೆಲ್ಲವೂ ನಿರೀಕ್ಷೆಗಳಾಗಿಯೇ ಉಳಿದಿವೆ.

ಕೈಗಾರಿಕಾ ಪ್ರಗತಿಗೂ ನೀರಿನ ಅಡ್ಡಿ
ಜಿಲ್ಲೆಯ ಕಣಗಿನಹಾಳದಲ್ಲಿ 1905ರಲ್ಲಿ ಏಷ್ಯಾ ಖಂಡದಲ್ಲಿ ಮೊದಲ ಬಾರಿಗೆ ಸ್ಥಾಪನೆಯಾದ ಸಹಕಾರ ಸಂಘವಿದೆ.  ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಗದುಗಿನಲ್ಲಿದೆ. ಗದಗ ಪ್ರಮುಖ ರೈಲ್ವೆ ಜಂಕ್ಷನ್‌, ಆದರೆ, ಕೈಗಾರಿಕಾ ಪ್ರಗತಿಯಲ್ಲಿ ಹಿಂದುಳಿದಿದೆ.  ಸದ್ಯ ರಾಜ್ಯದಲ್ಲೇ ಕೈಗಾರಿಕೆಯಲ್ಲಿ ತೀವ್ರ ಹಿಂದುಳಿದಿರುವ ಜಿಲ್ಲೆ ಗದಗ.

ಇತ್ತೀಚೆಗೆ ಒಂದಿಷ್ಟು ಅಭಿವೃದ್ಧಿ

ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಗೆ ಒಂದಿಷ್ಟು ವೇಗ ಬಂದಿದೆ. ಆದರೆ, ಹೆಚ್ಚಿನ ಅಭಿವೃದ್ಧಿ ಯೋಜನೆಗಳು ಜಿಲ್ಲಾ ಕೇಂದ್ರಕ್ಕೇ ಸೀಮಿತಗೊಂಡಿವೆ ಎಂಬ ಆರೋಪಗಳಿವೆ. ಗದಗ–ಬೆಟಗೇರಿ ಅವಳಿ ನಗರದ ಜನತೆಗೆ ಪ್ರತಿ ದಿನ ಕುಡಿಯುವ ನೀರು ಪೂರೈಸಲು ₹107 ಕೋಟಿ ವೆಚ್ಚದಲ್ಲಿ ನಗರಸಭೆಯು 24X7 ಕುಡಿಯುವ ನೀರು ಪೂರೈಕೆ ಯೋಜನೆ ಕೈಗೆತ್ತಿಕೊಂಡಿದೆ. 302 ಕಿ.ಮೀ. ಪೈಪ್‌ಲೈನ್‌ ಅಳವಡಿಸುವ ಯೋಜನೆ ಇದಾಗಿದೆ. ಈವರೆಗೆ 238 ಕಿ.ಮೀ ಪೂರ್ಣಗೊಂಡಿದೆ. ಕಳೆದ 2 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು, ಈ ಮಾರ್ಚ್‌ನಲ್ಲಿ ಪ್ರಾಯೋಗಿಕವಾಗಿ 2 ವಾರ್ಡ್‌ಗಳಲ್ಲಿ ನೀರು ಪೂರೈಕೆ ಪ್ರಾರಂಭವಾಗಲಿದೆ.

ಗದಗ ಸಮೀಪ ನಾಗಾವಿ ಗುಡ್ಡದಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ವಿಶ್ವವಿದ್ಯಾಲಯಕ್ಕೆ ರಿಜಿಸ್ಟ್ರಾರ್‌, ಹಣಕಾಸು ಅಧಿಕಾರಿಗಳ ನೇಮಕ ಮಾಡಲಾಗಿದೆ.

ಬೆಟಗೇರಿಯ ಸೆಟ್ಲಮೆಂಟ್‌ ಗಾಂಧಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಹಾಕಿ ಕ್ರೀಡಾಂಗಣ ನಿರ್ಮಾಣದ ಕೆಲಸ ಆರಂಭವಾಗಿದೆ. ನರಸಾಪೂರ ಸಮೀಪ  ₹5 ಕೋಟಿ ವೆಚ್ಚದಲ್ಲಿ  ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ  ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲಾಗುತ್ತಿದೆ.  ನಗರದಲ್ಲಿ ₹.5.75 ಕೋಟಿ ವೆಚ್ಚದ ತಾರಾಲಯ ಹಾಗೂ ₹4 ಕೋಟಿ ವೆಚ್ಚದಲ್ಲಿ ಉಪಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ತ್ರೀಕೂಟೇಶ್ವರ ದೇವಸ್ಥಾನಕ್ಕೆ ವಿಶೇಷ ರಸ್ತೆ ಮಾಡಲು ₹200 ಲಕ್ಷ ಒದಗಿಸಲಾಗಿದೆ. ನಗರದ ಇಂಡಸ್ಟ್ರೀಯಲ್ ಎಸ್ಟೇಟಿನಲ್ಲಿ ವಿನೂತನವಾದ ವಸ್ತು ಪ್ರದರ್ಶನ ಕೇಂದ್ರ ಸ್ಥಾಪನೆಗೆ ₹11 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ₹6 ಕೋಟಿ ವೆಚ್ಚದಲ್ಲಿ ಕನ್ನಡ ಸಾಹಿತ್ಯ ಭವನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು ಆರ್ಥಿಕ ವರ್ಷಾಂತ್ಯದಲ್ಲಿ ಲೋಕಾರ್ಪಣೆಯಾಗಲಿದೆ. ಗದುಗಿನ ಹೊಂಬಳ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಪಶು ವೈದ್ಯಕೀಯ ಕಾಲೇಜು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿದೆ. ನರಗುಂದದಲ್ಲಿ ₹56 ಕೋಟಿ ವೆಚ್ಚದಲ್ಲಿ  ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಲಕ್ಷ್ಮೇಶ್ವರ ಹಾಗೂ ಮುಂಡರಗಿಯ ಸರ್ಕಾರಿ ಕಾಲೇಜು ಕಟ್ಟಡಗಳಿಗೆ ತಲಾ ₹86.70 ಲಕ್ಷ ಮಂಜೂರಾಗಿದ್ದು ಕಾಮಗಾರಿಯು ಪೂರ್ಣಗೊಂಡಿದೆ. ಲಕ್ಷ್ಮೇಶ್ವರದಲ್ಲಿ ₹230 ಲಕ್ಷ ಅನುದಾನದಲ್ಲಿ ಸಿನಿಯರ್ ಜಡ್ಜ್‌ ಕೋರ್ಟ ಕಟ್ಟಡದ ಕೆಲಸ ಪ್ರಗತಿಯಲ್ಲಿದೆ. ಹಾಗೂ ₹90 ಲಕ್ಷ ಅನುದಾನದಲ್ಲಿ ಎಪಿಪಿ ಕಟ್ಟಡ ಕೆಲಸ ಪೂರ್ಣಗೊಂಡಿದೆ. ರೋಣ ತಾಲ್ಲೂಕಿನಲ್ಲಿ ₹90 ಲಕ್ಷಗಳ ಅನುದಾನದಲ್ಲಿ ಎಪಿಪಿ ಕಟ್ಟಡ ಹಾಗೂ ₹371ಲಕ್ಷ ಅನುದಾನದಲ್ಲಿ 1ನೇ ನ್ಯಾಯಾಧೀಶರ ಕೋರ್ಟಹಾಲ್ ಕಟ್ಟಡ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ.

* ಕೈಗಾರಿಕಾ ಪ್ರಗತಿಗಾಗಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಆದ್ಯತೆ  ಮೇರೆಗೆ    ಇತ್ಯರ್ಥಪಡಿಸಬೇಕು.
-ಎಸ್‌.ಪಿ ಸಂಶಿಮಠ, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ

* ಹೊಸ ಕೈಗಾರಿಕೆಗಳು ಬರುತ್ತವೆ, ಉದ್ಯೋಗ ಸೃಷ್ಟಿ ಮತ್ತು ಶೈಕ್ಷಣಿಕ ಪ್ರಗತಿಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ಇದು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.
-ಗಣೇಶಸಿಂಗ್‌ ಬ್ಯಾಳಿ, ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ.

ಗದಗ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಸಾಕಷ್ಟು ಅಭಿವೃದ್ಧಿಯಾಗಿದೆ. ಮೆಡಿಕಲ್‌ ಕಾಲೇಜು ಸ್ಥಾಪನೆಯಾಗಿದೆ.  ಸಿಂಗಟಾಲೂರು ಏತ ನೀರಾವರಿ ಪ್ರಾರಂಭವಾಗಿದೆ.
ಡಿ.ಆರ್‌ ಪಾಟೀಲ, ಮಾಜಿ ಶಾಸಕ

ಜಿಲ್ಲೆಗೆ ಬೇಕಾದದ್ದು

*ಶಾಶ್ವತ ಕುಡಿಯುವ ನೀರಿನ ಯೋಜನೆ
*ಸಂಪೂರ್ಣ ಬಯಲು ಶೌಚ ಮುಕ್ತ ಜಿಲ್ಲೆ
*ಮಹಾದಾಯಿ ವಿವಾದ ಇತ್ಯರ್ಥ
*ಕೃಷ್ಣಾ ಏತ ನೀರಾವರಿ ಯೋಜನೆ ಜಾರಿ
*ಶೈಕ್ಷಣಿಕ ಗುಣಮಟ್ಟ ಸುಧಾರಣೆ
*ಮೂಲಸೌಕರ್ಯ ಅಭಿವೃದ್ಧಿ ಕೈಗಾರಿಕಾ ಪ್ರಗತಿ
*ರೈಲು ಜಂಕ್ಷನ್‌ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ
*ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕೆಲಸ
*ಕೃಷಿ ಉತ್ಪನ್ನಗಳ ರಫ್ತು ಕೇಂದ್ರ ಸ್ಥಾಪನೆ
*ಗದುಗಿನಲ್ಲಿ ಮುದ್ರಣ ಪಾರ್ಕ್‌ ಸ್ಥಾಪನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT