ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಡೆಮಿಗಳಿಗೆ ಹೊಸಬರ ನೇಮಕ ?

Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರ  ಮೂರು ವರ್ಷದ ಅವಧಿ ಇದೇ 26ಕ್ಕೆ ಮುಗಿಯಲಿದ್ದು, ಮತ್ತೆ ಅವರ ಅಧಿಕಾರ ವಿಸ್ತರಿಸಲು ಸರ್ಕಾರ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ.

ರಾಜ್ಯ ಸರ್ಕಾರದ ಇಂಗಿತ ಅರ್ಥ ಮಾಡಿಕೊಂಡಿರುವ ಕೆಲವರು ಅರ್ಜಿಗಳನ್ನು ಹಿಡಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕನ್ನಡ– ಸಂಸ್ಕೃತಿ ಸಚಿವೆ ಉಮಾಶ್ರೀ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಯಕ್ಷಗಾನ ಅಕಾಡೆಮಿ, ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ತುಳು ಅಕಾಡೆಮಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಲಲಿತ ಕಲಾ ಅಕಾಡೆಮಿ ಹೊರತುಪಡಿಸಿ ಉಳಿದ ಅಕಾಡೆಮಿಗಳ ಅವಧಿ ಮುಕ್ತಾಯಗೊಳ್ಳಲಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕುವೆಂಪು ಭಾಷಾ ಭಾರತಿ ಅಧ್ಯಕ್ಷರ ಅವಧಿಯೂ ಅಂದೇ ಕೊನೆಗೊಳ್ಳಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಲ್ಲರಿಗೂ  ಈಗಾಗಲೇ ಪತ್ರ ಬರೆದಿದ್ದು, 27ರಂದು ಬೀಳ್ಕೊಡುಗೆ ಸಮಾರಂಭಕ್ಕೆ ಬರುವಂತೆ ಹೇಳಿದೆ. ಆದರೆ, ಮುಖ್ಯಮಂತ್ರಿಗೆ ಆಪ್ತರಾಗಿರುವ ಕೆಲವರು ಅವಧಿ ಮುಂದುವರಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ತಾವು ಕೈಗೆತ್ತಿಕೊಂಡಿರುವ ಯೋಜನೆಗಳು ಅಪೂರ್ಣಗೊಂಡಿರುವುದರಿಂದ ಮತ್ತೊಂದು ವರ್ಷ ಅವಕಾಶ ನೀಡುವಂತೆ ಕೋರಿದ್ದಾರೆ. ಒಂದುವೇಳೆ, ಹೊಸಬರನ್ನು ನೇಮಕ ಮಾಡುವುದಾದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ತಕ್ಷಣ ತೀರ್ಮಾನ ಕೈಗೊಳ್ಳಿ. ಅಲ್ಲಿವರೆಗೂ ನಮ್ಮನ್ನು ಮುಂದುವರಿಸಿ ಎಂದು ಹೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಸೇರಿದಂತೆ ಕೆಲವರು ಸರ್ಕಾರ ಅವಧಿ ವಿಸ್ತರಿಸಿದರೂ ಮುಂದುವರಿಯದಿರಲು  ನಿರ್ಧರಿಸಿದ್ದಾರೆ.

‘ಅವಧಿ ಪೂರ್ಣಗೊಂಡ ನಂತರ ಅಧಿಕಾರ ಬಿಟ್ಟು ಕೊಡುವುದು ಗೌರವ. ಬೇರೆಯವರಿಗೂ ಅವಕಾಶ ಸಿಗಬೇಕು. ಕಾರ್ಯವೈಖರಿಯಲ್ಲಿ ವಿಭಿನ್ನತೆ ಇರಬೇಕಾದರೆ ಅಧ್ಯಕ್ಷರು ಬದಲಾಗಬೇಕು. ಅಕಸ್ಮಾತ್‌ ಸರ್ಕಾರ  ಮುಂದುವರಿಸಿದರೂ ಕೆಲಸ ಮಾಡಲು ನಾನು ತಯಾರಿಲ್ಲ’ ಎಂದು ಮಾಲತಿ ಪಟ್ಟಣಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT