ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ವಿಜ್ಞಾನ ಸಮ್ಮೇಳನ ಇಂದಿನಿಂದ

ಜಿಕೆವಿಕೆ ಆವರಣದಲ್ಲಿ ‘ಹವಾಮಾನ ಚತುರ ಕೃಷಿ’ ಕಾರ್ಯತಂತ್ರಗಳ ಕುರಿತು ಸಮಾಲೋಚನೆ
Last Updated 20 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ  ಮಂಗಳವಾರದಿಂದ (ಫೆ. 21) 24ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ 13ನೇ ಕೃಷಿ ವಿಜ್ಞಾನ ಸಮ್ಮೇಳನ ಆಯೋಜಿಸಲಾಗಿದೆ.

ಸಮ್ಮೇಳನದಲ್ಲಿ ವಿವಿಧ ದೇಶಗಳ ಕೃಷಿ ತಜ್ಞರು ಹವಾಮಾನ ವೈಪರಿತ್ಯದ ಸವಾಲನ್ನು ಎದುರಿಸಲು ‘ಹವಾಮಾನ ಚತುರ ಕೃಷಿ’ ಕಾರ್ಯತಂತ್ರಗಳ ಕುರಿತು  ವಿಚಾರ ಮಂಡಿಸಲಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್‌.ಶಿವಣ್ಣ, ‘ನವದೆಹಲಿಯ ರಾಷ್ಟ್ರೀಯ ಕೃಷಿ ವಿಜ್ಞಾನಗಳ ಅಕಾಡೆಮಿ (ಎನ್ಎಎಎಸ್‌) ಹಾಗೂ ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್‌) ಸಹಯೋಗದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಆರು ಪ್ರಮುಖ ವಿಚಾರಗಳ ಬಗ್ಗೆ ಸಮ್ಮೇಳನದಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ’ ಎಂದರು.

‘ದೇಶದ ಅನೇಕ ರಾಜ್ಯಗಳು ನಾಲ್ಕೈದು ವರ್ಷಗಳಿಂದ ಭೀಕರ ಬರಗಾಲ ಎದುರಿಸುತ್ತಿವೆ. ಹವಾಮಾನ ವೈಪರೀತ್ಯದಿಂದ ಆಹಾರ, ಪೋಷಕಾಂಶಗಳ ಭದ್ರತೆ, ಬೇಸಾಯ ಪದ್ಧತಿ ಮೇಲಿನ ಪರಿಣಾಮಗಳು, ಅದಕ್ಕೆ ಒಗ್ಗಿಕೊಳ್ಳುವುದು, ಮಾನವ ಸಂಪನ್ಮೂಲದ ಸಾಮರ್ಥ್ಯ ವೃದ್ಧಿ,    ಯೋಜನೆ ಮತ್ತು ನೀತಿ ರೂಪಿಸುವ ಬಗ್ಗೆ ಚರ್ಚಿಸಲಾಗುತ್ತದೆ’ ಎಂದು   ತಿಳಿಸಿದರು.

ರೈತರ ಸಂಶೋಧನೆ:  ಬರಗಾಲದ ಹಾನಿ ತಗ್ಗಿಸಲು  ರೈತರು ಕಂಡುಕೊಂಡ ನೂತನ ವಿಧಾನಗಳ ಬಗ್ಗೆಯೂ ಗೋಷ್ಠಿ ಇರಲಿದೆ. 100ಕ್ಕೂ ಹೆಚ್ಚು ರೈತರು ಅನುಭವ ಹಂಚಿಕೊಳ್ಳುವರು.

‘ಹವಾಮಾನ ಬದಲಾವಣೆ ಹಾಗೂ ಜೀವ ವೈವಿಧ್ಯದ ಬಗ್ಗೆ ಪ್ಯಾರಿಸ್ ಶೃಂಗಸಭೆಯಲ್ಲಿ  ಕೈಗೊಂಡ ನಿರ್ಣಯಗಳನ್ನು  ಸ್ಥಳೀಯ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ.   ಪರ್ಯಾಯ ಬೆಳೆ ಯೋಜನೆ, ಬೆಳೆ ವಿಮೆ ಮತ್ತು ಆರ್ಥಿಕ ವಿಷಯಗಳ ಬಗ್ಗೆಯೂ ವಿಚಾರ ವಿಮರ್ಶೆ ಇರಲಿದೆ’ ಎಂದು  ಎನ್ಎಎಎಸ್‌ ಅಧ್ಯಕ್ಷ ಡಾ.ಪಂಜಾಬ್‌ ಸಿಂಗ್‌ ತಿಳಿಸಿದರು.

ವಸ್ತು ಪ್ರದರ್ಶನ: ‘ಹವಾಮಾನ ಚತುರ ಕೃಷಿಯ ಬಗ್ಗೆ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ರಾಷ್ಟ್ರ ಮತ್ತು ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳು, ಐಸಿಎಆರ್‌ನ ಅಂಗ ಸಂಸ್ಥೆಗಳು, ರಾಜ್ಯ ಸರ್ಕಾರದ ಅಭಿವೃದ್ಧಿ ಇಲಾಖೆಗಳು, ಹಣಕಾಸು ಸಂಸ್ಥೆಗಳು, ಕೃಷಿ ಪರಿಕರ ಸಂಸ್ಥೆಗಳು ಭಾಗವಹಿಸಲಿವೆ’ ಎಂದು ಶಿವಣ್ಣ ಮಾಹಿತಿ ನೀಡಿದರು.

ರಾಜ್ಯಪಾಲ ವಜುಭಾಯಿ ವಾಲಾ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸಮ್ಮೇಳನವನ್ನು ಉದ್ಘಾಟಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವರು. ಇದೇ 24ರಂದು ಮಧ್ಯಾಹ್ನ 2 ಗಂಟೆಗೆ  ಸಮಾರೋಪ ನಡೆಯಲಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದ   ಗೌಡ ಭಾಗವಹಿಸಲಿದ್ದಾರೆ.

ವಿವಿಧ ಕ್ಷೇತ್ರಗಳ ತಜ್ಞರ ಸಮಾಗಮ
ಸಮ್ಮೇಳನದಲ್ಲಿ ಕೃಷಿಯ ಜೊತೆ ಇತರ ಕ್ಷೇತ್ರಗಳ 70ಕ್ಕೂ ಹೆಚ್ಚು ಪ್ರಮುಖರು ವಿಚಾರ ಮಂಡಿಸಲಿದ್ದಾರೆ.
ಜರ್ಮನಿಯ ಕಾಸ್ಸೆಲ್ ವಿಶ್ವವಿದ್ಯಾಲಯದ ಡಾ. ಆಂಡ್ರಸ್, ಅಣುವಿಜ್ಞಾನಿ ಡಾ.ಅನಿಲ್ ಕಾಕೋಡ್ಕರ್‌,  ಅಮೆರಿಕದ ಮಸಾಚ್ಯುಸೆಟ್ಸ್‌ ವಿಶ್ವವಿದ್ಯಾನಿಲಯದ ಜೀವಶಾಸ್ತ್ರ ಪ್ರಾಧ್ಯಾಪಕ ಡಾ. ಕಮಲ್‍ಜಿತ್ .ಎಸ್. ಬಾವ, ಪೌಷ್ಠಿಕಾಂಶ ವಿಜ್ಞಾನಗಳ ಅಂತರರಾಷ್ಟ್ರೀಯ ಸಂಘಟನೆ ಉಪಾಧ್ಯಕ್ಷ   ಡಾ.ವಿ.ಪ್ರಕಾಶ್,   ಹಿರಿಯ ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್, ವಿಶ್ವಬ್ಯಾಂಕ್ ಮಾಜಿ ಸಲಹೆಗಾರ್ತಿ ಉಮಾ ಲೀಲಿ,    ಐ.ಸಿ.ಆರ್.ಐ.ಎಸ್.ಎ.ಟಿ ಮಹಾ ನಿರ್ದೇಶಕ  ಡಾ.ಡೆವಿಡ್ ಬರ್ಗ್ವಿನ್‌ಸನ್,   ಕೃಷಿ ಸಚಿವ ಕೃಷ್ಣ ಬೈರೇಗೌಡ,  ಮೈಕ್ರೋಸಾಫ್ಟ್‌ ಕ್ಲೌಡ್‌ನ ಪ್ರಧಾನ ನಿರ್ದೇಶಕ ಡಾ. ಪ್ರಶಾಂತ್ ಗುಪ್ತ    ಇವರಲ್ಲಿ ಪ್ರಮುಖರು.

ಟೆಕಿಗಳಲ್ಲಿ ಹೆಚ್ಚುತ್ತಿದೆ ಕೃಷಿ ಒಲವು
‘ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಉದ್ಯೋಗವನ್ನು ತೊರೆದು ಕೃಷಿ ಮಾಡಲು ಮುಂದಾಗುತ್ತಿದ್ದಾರೆ. ವಾರದಲ್ಲಿ ಮೂರರಿಂದ ನಾಲ್ಕು ಮಂದಿ ಟೆಕಿಗಳು ಕೃಷಿಯ ಬಗ್ಗೆ ನಮ್ಮಲ್ಲಿ ಸಲಹೆ ಕೇಳುತ್ತಿದ್ದಾರೆ’ ಎಂದು ಐಸಿಎಆರ್‌ನ ನಿವೃತ್ತ ಮಹಾ ನಿರ್ದೇಶಕ ಡಾ.ಎಸ್‌. ಅಯ್ಯಪ್ಪನ್‌ ತಿಳಿಸಿದರು.

ಸಮ್ಮೇಳನದಲ್ಲಿ ಮೊಳಗಲಿದೆ ಘೋಷಣೆ: ‘ಅನೇಕ ರಾಜ್ಯಗಳು ಬರಗಾಲದಿಂದ ತತ್ತರಿಸಿವೆ. ಸಂಕಷ್ಟ ಪರಿಸ್ಥಿತಿಯಲ್ಲಿರುವ ಕೃಷಿಗೆ ಚೈತನ್ಯ ತುಂಬುವ ಕುರಿತ   ಶಿಫಾರಸುಗಳನ್ನು ಒಳಗೊಂಡ ಘೋಷಣೆಗಳನ್ನು ಸಮ್ಮೇಳನದ ಸಮಾರೋಪದಲ್ಲಿ ಪ್ರಕಟಿಸುತ್ತೇವೆ’ ಎಂದು ಎಚ್‌.ಶಿವಣ್ಣ ತಿಳಿಸಿದರು.

ಅಂಕಿಅಂಶ
* 4ಸಮ್ಮೇಳನ ನಡೆಯಲಿರುವ ದಿನಗಳು
* 2ಸಾವಿರ ಕೃಷಿ ವಿಜ್ಞಾನಿಗಳು, ರೈತ ಸಂಶೋಧಕರು ಭಾಗವಹಿಸುವ ನಿರೀಕ್ಷೆ
* 150 ವಸ್ತು ಪ್ರದರ್ಶನ ಮಳಿಗೆಗಳು
* 70 ವಿಷಯತಜ್ಞರಿಂದ ವಿಚಾರ ಮಂಡನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT