ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಮುನ್ನವೇ ನೀರಿಗೆ ತತ್ವಾರ

160 ತಾಲ್ಲೂಕುಗಳ ಬರಪೀಡಿತ: ಜನ ಕಂಗಾಲು
Last Updated 20 ಫೆಬ್ರುವರಿ 2017, 19:53 IST
ಅಕ್ಷರ ಗಾತ್ರ

ಬೆಂಗಳೂರು: ಬರಿದಾಗುತ್ತಿರುವ ಜಲಾಶಯ, ಬತ್ತಿಹೋದ ಅಂತರ್ಜಲ, ಕುಡಿಯುವ ನೀರಿಲ್ಲದೆ ಜನ ಕಂಗಾಲು.

ಕಳೆದ 6 ವರ್ಷಗಳಿಂದ ರಾಜ್ಯವನ್ನು ಬರಗಾಲ ಬೆಂಬಿಡದೆ ಕಾಡುತ್ತಿದೆ. 45 ವರ್ಷಗಳಲ್ಲಿ ಕಾಣಿಸದೆ ಇರುವ ಮಳೆ ಕೊರತೆಯಿಂದ ರಾಜ್ಯದ 177 ತಾಲ್ಲೂಕುಗಳ ಪೈಕಿ, 160 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.

ಸುಡು ಬೇಸಿಗೆಗೆ ಮುನ್ನವೇ  ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಸಾಮಾನ್ಯವಾಗಿ ಫೆಬ್ರುವರಿಯಲ್ಲಿ 100ರಿಂದ 170 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್‌ಗಳಲ್ಲಿ ಒದಗಿಸುವ ಪರಿಪಾಠವಿತ್ತು.

ಈ ವರ್ಷ ಫೆಬ್ರುವರಿ 20ರ ಮಾಹಿತಿಯಂತೆ ರಾಜ್ಯದ 20 ಜಿಲ್ಲೆಗಳ 576 ಜನವಸತಿ ಪ್ರದೇಶಗಳಿಗೆ 1,047 ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರು ಪೂರೈಸಲಾಗುತ್ತಿದೆ. 4.22 ಲಕ್ಷ ಜನರು ಕುಡಿಯುವ ನೀರಿಗೆ ಟ್ಯಾಂಕರ್‌ ನಂಬಿಕೊಂಡಿದ್ದಾರೆ.

ಹಾಸನ–140, ಮಂಡ್ಯ–90,  ಚಿತ್ರದುರ್ಗ –67, ಕೋಲಾರ–45, ತುಮಕೂರು–37, ವಿಜಯಪುರ–26, ಚಿಕ್ಕಬಳ್ಳಾಪುರ–22 ಜನವಸತಿ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ಒದಗಿಸಲಾಗುತ್ತಿದೆ.  ಚಿಕ್ಕಮಗಳೂರು ಹಾಗೂ ಮೈಸೂರು ಜಿಲ್ಲೆಯ 22, ಧಾರವಾಡದ 17 ಪ್ರದೇಶಗಳಿಗೆ ಟ್ಯಾಂಕರ್ ನೀರು ಕುಡಿಯಲು ಆಸರೆಯಾಗಿದೆ.

ಕುಡಿಯುವ ನೀರಿಗೆ ಜಲಾಶಯಗಳನ್ನು ಆಶ್ರಯಿಸಿರುವ ನಗರ ಮತ್ತು ಪಟ್ಟಣಗಳಿಗೆ ಫೆಬ್ರುವರಿಯಲ್ಲಿ ತೊಂದರೆಯಾಗಿಲ್ಲ. ಕೆಆರ್‌ಎಸ್‌, ಹೇಮಾವತಿ, ಭದ್ರಾ, ತುಂಗಭದ್ರಾ, ಆಲಮಟ್ಟಿ, ಘಟಪ್ರಭಾ, ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಸಂಗ್ರಹ ದಿನೆದಿನೆ ಇಳಿಮುಖವಾಗುತ್ತಿದೆ.

ಹೀಗಾಗಿ, ಜಲಾಶಯದ ನೀರನ್ನು ಆಶ್ರಯಿಸಿರುವ ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಹಾಸನ, ತುಮಕೂರು, ದಾವಣಗೆರೆ, ಶಿವಮೊಗ್ಗ, ಧಾರವಾಡ, ವಿಜಯಪುರ, ಬಾಗಲಕೋಟೆ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಸ್ಥಳೀಯ ಪೌರಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಲಿದೆ ಎಂದು ಪೌರಾಡಳಿತ ಇಲಾಖೆ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 57 ನಗರಸಭೆ, 114 ಪುರಸಭೆಗಳಿವೆ. ಬಹುತೇಕ ನಗರ, ಪಟ್ಟಣಗಳು ಕುಡಿಯುವ ನೀರಿಗೆ ಮೇಲ್ಪದರ ನೀರನ್ನೇ ನೆಚ್ಚಿಕೊಂಡಿವೆ. ಜಲಾಶಯ ಬರಿದಾಗಿ, ನಾಲೆಗಳಲ್ಲಿ ನೀರಿನ ಹರಿವು ನಿಲ್ಲಿಸಿದರೆ ಪಟ್ಟಣ ಪ್ರದೇಶಗಳಲ್ಲಿ ನೀರಿಗೆ ಗಂಭೀರ ಸಮಸ್ಯೆ ಎದುರಾಗಲಿದೆ ಎಂದು ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ.

ಕುಡಿಯುವ ನೀರಿಗೆ ₹2,164 ಕೋಟಿ ಅಗತ್ಯ
ಮುಂದಿನ ನಾಲ್ಕು ತಿಂಗಳಿನಲ್ಲಿ ಕುಡಿಯುವ ನೀರು ಪೂರೈಸಲು ಹಾಗೂ   ಚಾಲನೆಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಒಟ್ಟು ₹2,164 ಕೋಟಿ ಅಗತ್ಯವಿದೆ.

160 ಬರಪೀಡಿತ ತಾಲ್ಲೂಕುಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಗ್ರಾಮೀಣ ಜನವಸತಿಗಳಿಗೆ ₹80.64 ಕೋಟಿ, ನಗರ, ಪಟ್ಟಣ ಪ್ರದೇಶಗಳಿಗೆ  ₹34.56 ಕೋಟಿ ಬೇಕು.

ನೀರು ಪೂರೈಕೆ ಯೋಜನೆಗಳನ್ನು ಪೂರ್ಣಗೊಳಿಸಿ, ನೀರಿನ ಸಮಸ್ಯೆ ನೀಗಿಸಲು ಗ್ರಾಮೀಣ ಪ್ರದೇಶಕ್ಕೆ ₹1772.25 ಕೋಟಿ ಹಾಗೂ ನಗರ ಪ್ರದೇಶಕ್ಕೆ ₹276.75 ಕೋಟಿ ಅವಶ್ಯ ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಬೆಳೆನಷ್ಟದ ಮೌಲ್ಯ
* ₹17,193ಕೋಟಿ ಮುಂಗಾರು
* ₹7,097ಕೋಟಿ ಹಿಂಗಾರು
ಗೋಶಾಲೆ–ವಿವರ
* 2016ರ ಫೆಬ್ರುವರಿಯಿಂದ ಜೂನ್‌ವರೆಗೆ 43 ಗೋಶಾಲೆಗಳಲ್ಲಿ 25,310 ಜಾನುವಾರುಗಳಿಗೆ ಆಶ್ರಯ
* 2017ರ ಫೆಬ್ರುವರಿಯಲ್ಲಿ 48 ಗೋಶಾಲೆ ತೆರೆದಿದ್ದು, 66,682 ಜಾನುವಾರುಗಳಿಗೆ ಆಶ್ರಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT