ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತಗುಡ್ಡ ಸಂರಕ್ಷಿತ ಅರಣ್ಯ ಮುಖ್ಯಮಂತ್ರಿ ತೀರ್ಮಾನಕ್ಕೆ

ರಾಜ್ಯ ವನ್ಯಜೀವಿ ಮಂಡಳಿಯ ಸಭೆ ವಿಫಲ
Last Updated 21 ಫೆಬ್ರುವರಿ 2017, 4:11 IST
ಅಕ್ಷರ ಗಾತ್ರ

ಬೆಂಗಳೂರು: ಕಪ್ಪತಗುಡ್ಡ ಅರಣ್ಯ ಪ್ರದೇಶಕ್ಕೆ ಮತ್ತೆ ಸಂರಕ್ಷಿತ ಅರಣ್ಯದ ಸ್ಥಾನಮಾನ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಸೋಮವಾರ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆ ವಿಫಲವಾಯಿತು.

ಈ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಮಂಡಳಿ ಮುಖ್ಯಮಂತ್ರಿಗೆ ಅವರಿಗೆ ನೀಡಿದೆ. ಈ ಕುರಿತಂತೆ ಎಲ್ಲ  ಕಡತಗಳನ್ನು ಪರಿಶೀಲಿಸಿ ಶೀಘ್ರವೇ ಮುಖ್ಯಮಂತ್ರಿ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು  ಅರಣ್ಯ ಸಚಿವ ರಮಾನಾಥ ರೈ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಈ ಪ್ರದೇಶವನ್ನು ವನ್ಯಜೀವಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಹಿಂದೆಯೇ ಉದ್ದೇಶಿಸಲಾಗಿತ್ತು. ಸಚಿವ ಸಂಪುಟ ಉಪಸಮಿತಿ ಕಪ್ಪತಗುಡ್ಡಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಅಭಿಪ್ರಾಯ ಸಂಗ್ರಹಿಸಿತ್ತು. ವನ್ಯಜೀವಿ ಧಾಮ ಎಂದು ಘೋಷಿಸಲು ತೀವ್ರ ವಿರೋಧ ವ್ಯಕ್ತವಾದ ಕಾರಣ ಆ ಪ್ರಸ್ತಾವವನ್ನು ಕೈ ಬಿಡಲಾಯಿತು ಎಂದು  ಹೇಳಿದರು.

‘ಈಗ ಕಪ್ಪತಗುಡ್ಡದಲ್ಲಿ ಯಾವುದೇ ಗಣಿಗಾರಿಕೆ ನಡೆದಿಲ್ಲ. ನಮ್ಮ ಸರ್ಕಾರ ಅದಕ್ಕೆ ಅನುಮತಿಯನ್ನೂ ಕೊಟ್ಟಿಲ್ಲ’ ಎಂದು ರೈ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಕೋಪ
‘ಕಪ್ಪತಗುಡ್ಡವನ್ನು ಅನಗತ್ಯವಿವಾದ ಮಾಡಿ, ನಮ್ಮ ಸರ್ಕಾರದ ವಿರುದ್ಧ ಪ್ರಯೋಗಿಸಲಾಗುತ್ತಿದೆ’ ಎಂದು ಸಿದ್ದರಾಮಯ್ಯ ಅತೃಪ್ತಿ ವ್ಯಕ್ತಪಡಿಸಿದರು  ಎಂದು ಮೂಲಗಳು ತಿಳಿಸಿವೆ.

‘ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ 2008ರಲ್ಲಿ ಅನುಮತಿ ನೀಡಲಾಗಿದೆ. ಕಪ್ಪತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆಗೆ ಯಾವ ಆಧಾರದಲ್ಲಿ ಪರವಾನಗಿ ನೀಡಲಾಯಿತು? ಇದರ ಹಿಂದಿರುವ ಅಧಿಕಾರಿಗಳು ಯಾರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ‘ಕಪ್ಪತಗುಡ್ಡ ಪ್ರದೇಶದಲ್ಲಿ  ಗಣಿಗಾರಿಕೆ ನಡೆಸಬಹುದು ಎಂದು ಶಿಫಾರಸು ಮಾಡಿದವರು ಯಾರು ಎನ್ನುವ ಮಾಹಿತಿಯನ್ನು ಈಗಲೇ ನೀಡಬೇಕು’ ಎಂದು ತಾಕೀತು ಮಾಡಿದರು ಎನ್ನಲಾಗಿದೆ.

ಆದರೆ, ‘ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ಕಡತಗಳನ್ನು ತಂದಿಲ್ಲ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಉತ್ತರಿಸಿದರು. ‘ಮಾಹಿತಿ ಇಲ್ಲದೇ ಸಭೆಗೆ ಏಕೆ ಬರುತ್ತೀರಿ? ಸುಮ್ಮನೆ ಕಥೆ ಹೇಳುವುದಕ್ಕೆ ಬರುತ್ತೀರಾ?’ ಎಂಬುದಾಗಿ ಅವರು ಗುಡುಗಿದರು ಎಂದು ಗೊತ್ತಾಗಿದೆ.

‘ಯಾವುದೇ ಅಧಿಕಾರಿ ತಪ್ಪು ಮಾಡಿದ್ದರೂ ಅವರ ವಿರುದ್ಧ  ಕ್ರಮ ತೆಗೆದುಕೊಳ್ಳಬೇಕು. ಅಧಿಕಾರಿಗಳು ನಿವೃತ್ತರಾಗಿದ್ದರೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು’ ಎಂದೂ ಸೂಚಿಸಿದ್ದಾರೆ.

ರಾಜ್ಯದಲ್ಲಿ 2008ರಲ್ಲಿ ರಾಷ್ಟ್ರಪತಿ ಆಳ್ವಿಕೆ ಇತ್ತು. ರಾಮೇಶ್ವರ ಠಾಕೂರ್‌ ರಾಜ್ಯಪಾಲರಾಗಿದ್ದರು. ಅದೇ ಸಮಯದಲ್ಲಿ ಗಣಿಗಾರಿಕೆಗೆ ಪರವಾನಗಿ ನೀಡಲಾಗಿತ್ತು. ಇಲ್ಲಿ  ಚಿನ್ನದ ನಿಕ್ಷೇಪ ಇದೆ ಎಂದು ಸಮೀಕ್ಷಾ  ವರದಿ ಹೇಳಿದ್ದರಿಂದ ಕೆಲವು ಗಣಿ ಕಂಪೆನಿಗಳು  ಅರ್ಜಿ ಸಲ್ಲಿಸಿದ್ದವು. ಅದೇ  ಕಾರಣಕ್ಕೆ ಕೆಲವು ಕಂಪೆನಿಗಳು ಪ್ರಯತ್ನ ಮುಂದುವರಿಸಿವೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ  ಹೇಳಿದರು.

ಮುಖ್ಯಾಂಶಗಳು
* ರಾಜ್ಯಪಾಲ ರಾಮೇಶ್ವರ ಠಾಕೂರ್‌ ಅವಧಿಯಲ್ಲಿ ಗಣಿಗಾರಿಕೆಗೆ ಪರವಾನಗಿ 
* ಉಪಗ್ರಹ ಮಾಹಿತಿ ಆಧರಿಸಿ ಚಿನ್ನದ ಗಣಿಗಾರಿಕೆಗೆ ಕಂಪೆನಿ ಅರ್ಜಿ
* ದಾಖಲೆಗಳ ಹಾಜರಿಗೆ ಅಧಿಕಾರಿಗಳಿಗೆ ಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT