ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಕರ್ಷಿಸಿದ ಟಗರಿನ ಕಾಳಗ

Last Updated 21 ಫೆಬ್ರುವರಿ 2017, 5:12 IST
ಅಕ್ಷರ ಗಾತ್ರ
ಹಾನಗಲ್: ಸೆಣಸಲೆಂದೆ ಸಜ್ಜುಗೊಂಡ ಬಲಿಷ್ಠ ಟಗರುಗಳ ರಭಸದ ಟಕ್ಕರ್‌ನಿಂದ ಹೊರಡುತ್ತಿದ್ದ ಶಬ್ದ ನೆರೆದ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸುವ ಮೂಲಕ ಕಾಳಗದ ಅಖಾಡ ರಣಕೇಕೆಯ ರಂಗು ಪಡೆದುಕೊಳ್ಳುತ್ತಿತ್ತು.
 
ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ಟಗರಿನ ಕಾಳಗದಲ್ಲಿ ಎದುರಾಗುತ್ತಿದ್ದ ಟಗರುಗಳು ಮಾಲೀಕನ ಗುಟುರಿನಿಂದ ರಣೋತ್ಸಾಹವನ್ನು ಮೈತುಂಬಿಕೊಂಡು ಬಲವಾಗಿ ಗುದ್ದುತ್ತಿದ್ದರೆ, ಮೈದಾನವೆಲ್ಲ ದೂಳು..!
 
ಹಾಲು ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಹಾಗೂ 8 ಹಲ್ಲು ಹೀಗೆ ಟಗರುಗಳನ್ನು ವಿಂಗಡಿಸಿ ನಡೆದ ಈ ಸ್ಪರ್ಧೆಯಲ್ಲಿ 6 ಮತ್ತು 8 ಹಲ್ಲಿನ ಟಗರುಗಳ ಸೆಣಸಾಟ ನೆರೆದಿದ್ದವರಲ್ಲಿ ರೋಮಾಂಚನ ಸೃಷ್ಟಿಸಿತು. 8 ಹಲ್ಲಿನ ಬಹು ಬಲಿಷ್ಠ ಟಗರುಗಳ ಪರಸ್ಪರ ಟಕ್ಕರ್‌ ವಿಚಿತ್ರ ಶಬ್ಧ ಹೊಮ್ಮಿಸುತ್ತಿತ್ತು.
 
ಸ್ಪರ್ಧೆಗೆ ಬಿಡುತ್ತಿದ್ದಂತೆ ಕಾಲು ಕೆರೆದು ವೇಗವಾಗಿ ಓಡಿಬಂದು ಎದುರಿನ ಟಗರುಗಳಿಗೆ ಗುದ್ದಿ, ಮೊದಲ ಟಕ್ಕರ್‌ನಲ್ಲಿಯೇ ಪ್ರತಿಸ್ಪರ್ಧಿಯ ಶಕ್ತಿ ಸಾಮರ್ಥ್ಯ ಅಳೆಯುವಂತೆ ಭಾಸವಾಗುತ್ತಿತ್ತು. ನಂತರದ ಟಕ್ಕರ್‌ಗೆ ಬಲಿಷ್ಠ ಟಗರು ಹೂಂಕರಿಸುತ್ತಿದ್ದರೆ, ಕಡಿಮೆ ಶಕ್ತಿಯ ಟಗರು ಹಿಂಜರಿಯುತ್ತಿತ್ತು. 
 
ಹೀಗೆ ನಾಲ್ಕೈದು ಗುದ್ದಾಟಗಳಲ್ಲಿ ವಿಜಯದ ಟಗರು ಯಾವುದೆಂಬ ಘೋಷಣೆಯಾಗುತ್ತಿತ್ತು. ಕೆಲವಷ್ಟು ಟಗರುಗಳು ಮೊದಲ ಟಕ್ಕರ್‌ ನಂತರ ಮತ್ತೊಂದು ಗುದ್ದಿಗೆ ಹಿಂಜರಿದು ಅಖಾಡದಿಂದ ಕಾಲ್ಕಿಳುತ್ತಿದ್ದವು. 
 
ಕೆಲವಷ್ಟು ಟಗರು ಗುದ್ದಲು ಬಂದ ಟಗರಿನ ಮೇಲೆ ಜಂಪ್‌ ಮಾಡುವ ಮೂಲಕ ಟಕ್ಕರ್ ತಪ್ಪಿಸಿಕೊಳ್ಳುವ ರಣತಂತ್ರವೂ ನಡೆಯುತ್ತಿದ್ದವು.
 
‘ಟ್ವೆಂಟಿ–20’, ‘ಸುಲ್ತಾನ್‌ ಕಿಂಗ್‌ ಆಫ್‌ ಕಿಂಗ್’, ‘ಬುಲೆಟ್‌’, ‘ದ್ಯಾಮವ್ವ’, ‘ರಾಯಲ್‌’, ‘ಇಚ್ಚಂಗೆಮ್ಮದೇವಿ’, ‘ಮುತ್ಯಾ’, ‘ಮೈಲಾರಿ’, ‘ಸಂಗೊಳ್ಳಿ ರಾಯಣ್ಣ’ ಹೀಗೆ ಭಿನ್ನ–ವಿಭಿನ್ನ ಹೆಸರುಗಳ ಟಗರುಗಳಿಗೆ ಇಡಲಾಗಿತ್ತು. 120 ಟಗರುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಖದರ್‌ ಪ್ರದರ್ಶಿಸಿದವು.
 
ಮೊದಲು ಹಾಲು ಹಲ್ಲಿನ ಟಗರುಗಳ ಸ್ಪರ್ಧೆ ನಡೆಯಿತು. ‘ಸ್ಪರ್ಧೆಗಾಗಿ ತಯಾರು ಮಾಡಿದ ಟಗರು ಗೆದ್ದಾಗ ಆಗುವ ಖುಷಿ ಅಷ್ಟಿಷ್ಟಲ್ಲ’ ಎಂದು ಈ ಸ್ಪರ್ಧೆಯಲ್ಲಿ ವಿಜೇತ ಬಾಗಲಕೋಟೆಯ ಅಮ್ಮಿನ ಭಾವಿ ಗ್ರಾಮದ ಮಲ್ಲಪ್ಪ ಹಾಲಣ್ಣನವರ ತಮ್ಮ  ಟಗರು ‘ಮೈಲಾರಿ’ ಬಗ್ಗೆ ಅಭಿಮಾ ನದ ಮಾತುಗಳನ್ನಾಡಿದರು.
 
***
‘ಮಕ್ಕಳಂತೆ ಸಾಕುತ್ತೇವೆ’
‘ಸೆಣಸಾಟಕ್ಕೆ ವಿಶೇಷವಾಗಿ ತರಬೇತಿಯನ್ನೇನೂ ನೀಡು ವುದಿಲ್ಲ. ಕೆಲವು ಟಗರುಗಳಿಗೆ ಈ ಕಲೆ ದೈವದತ್ತವಾಗಿ ಬಂದಿ ರುತ್ತದೆ. ಅಂಥವನ್ನು ಗುರುತಿಸಿ ಹುರುಳಿ, ಮೊಟ್ಟೆ, ಹಾಲು ಮುಂತಾದ ಪೌಷ್ಟಿಕ ಆಹಾರ ನೀಡಿ ಶಕ್ತಿವರ್ಧಿಸಲಾಗುತ್ತದೆ, ಟಗರು ಕಾಳಗದಲ್ಲಿ ಶಕ್ತಿಯೇ ನಿರ್ಣಾಯಕ’ ಎನ್ನುತ್ತಾರೆ 2 ಹಲ್ಲಿನ ‘ಆರ್‌ಎನ್‌ಆರ್ ಸರದಾರ’ ಟಗರಿನ ಮಾಲೀಕ ನಾಗರಾಜ ಕೋಲಕಾರ.
 
‘ನನ್ನಲ್ಲಿ 2 ಹಲ್ಲಿನಿಂದ ಹಿಡಿದು ಎಲ್ಲ ಮಾದರಿಯ ಕಾಳಗದ ಟಗರಿವೆ. ಅವುಗಳಿಗೆ ನಿತ್ಯವೂ ರಭಸದಿಂದ ಓಡುವ ಕಸರತ್ತು ಮಾಡಿಸಲಾಗುತ್ತದೆ, ಮಕ್ಕಳಂತೆ ನೋಡಿಕೊಳ್ಳುತ್ತೇವೆ. ಎಲ್ಲಿಯೇ ಸ್ಪರ್ಧೆ ನಡೆದರೂ ಒಂದಿಲ್ಲೊಂದು ಬಹುಮಾನ ಸಿಗುತ್ತದೆ’ ಎನ್ನುತ್ತಾರೆ ಅವರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT