ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವರ್ಗ ‘1ಎ’ಗೆ ಕುಂಬಾರರು:ಸರ್ಕಾರಕ್ಕೆ ಪತ್ರ

ಜಿಲ್ಲಾಡಳಿತದಿಂದ ಸರ್ವಜ್ಞ ಜಯಂತಿ: ಕೆ.ಎಚ್. ಸಂಸದ ಮುನಿಯಪ್ಪ ಉದ್ಘಾಟನೆ
Last Updated 21 ಫೆಬ್ರುವರಿ 2017, 6:23 IST
ಅಕ್ಷರ ಗಾತ್ರ
ಕೋಲಾರ: ‘ಕುಂಬಾರ ಸಮುದಾಯವು ಸಂಘಟಿತವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತವು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಆಯಾ ಸಮುದಾಯಗಳ ಮಹನೀಯರ ಜಯಂತಿ ಆಚರಿಸಲಾಗುತ್ತಿದೆ’  ಎಂದು ಹೇಳಿದರು.
 
‘ಈಗ ಎಲ್ಲಾ ಸಮುದಾಯಗಳಲ್ಲೂ ವಿದ್ಯಾವಂತರಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಸಮುದಾಯಗಳ ಮುಖಂಡರು ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಕಾರಣಕ್ಕಾಗಿ ಸರ್ಕಾರ ಜಯಂತಿಗಳನ್ನು ಆಚರಿಸುವುದರ ಜತೆಗೆ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತಿದೆ’ ಎಂದು ತಿಳಿಸಿದರು.
 
‘ಕುಂಬಾರ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯ ನಿರ್ಮಿಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿದೆ. ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಸರ್ಕಾರಿ ಜಾಗ ಗುರುತಿಸುವ ಪ್ರಯತ್ನ ಮಾಡುತ್ತಿದೆ. ಜಾಗ ಸಿಕ್ಕ ಕೂಡಲೇ ಕಾಮಗಾರಿ ಆರಂಭಿಸಲಾಗುತ್ತದೆ. ಕುಂಬಾರ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ₹ 50 ಲಕ್ಷ ಅನುದಾನ ಮಂಜೂರು ಮಾಡಿಸಲು ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.
 
‘ಕುಂಬಾರ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಿರುವುದರಿಂದ ಶೈಕ್ಷಣಿಕ ಸೌಕರ್ಯಗಳು ಮಾತ್ರ ಸಿಗುತ್ತಿವೆ. ಸಮುದಾಯವನ್ನು ಪ್ರವರ್ಗ 1ಎಗೆ ಸೇರಿಸಿದರೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೂ ಸೌಕರ್ಯ ಪಡೆಯಬಹುದು. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಪೋಷಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತವಾಗಬಾರದು. ಮಕ್ಕಳು ಸುಶಿಕ್ಷಿತರಾದರೆ ಮೂಲೆಗುಂಪಾಗಿರುವ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ ಎಂದರು.
 
ಇಂದಿಗೂ ಜನಪ್ರಿಯ: ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಮಾತನಾಡಿ, ‘ಕವಿ ಸರ್ವಜ್ಞ ಎಲ್ಲವನ್ನು ತಿಳಿದವರು. ಕನ್ನಡದ ತ್ರಿಪದಿ ಸಾಹಿತ್ಯದ ಪ್ರಮುಖ ಕವಿಗಳಲ್ಲಿ ಒಬ್ಬರು. ಪೋಷಕರಿಂದ ದೂರವಾಗಿ ಪುಣ್ಯ ಕ್ಷೇತ್ರ, ಗುರು ಮಠಗಳಿಗೆ ಭೇಟಿ ನೀಡಿ ಜ್ಞಾನಾರ್ಜನೆ ಮಾಡಿದ ಸರ್ವಜ್ಞರು ಎಲ್ಲಾ ಶಾಸ್ತ್ರಗಳ ಜ್ಞಾನ ಸಂಪಾದಿಸಿದರು. ಅವರ ರಚನೆಯ ವಚನ, ತ್ರಿಪದಿಗಳು ಇಂದಿಗೂ ಜನಪ್ರಿಯ’ ಎಂದು ಅಭಿಪ್ರಾಯಪಟ್ಟರು.
 
‘ಎಲ್ಲಾ ಸಮುದಾಯಗಳ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ಆಯಾ ಸಮುದಾಯಗಳ ಮಹನೀಯರ ಜಯಂತಿ ಆಚರಿಸುತ್ತಿರುವುದು ಸ್ವಾಗತಾರ್ಹ. ಕುಂಬಾರ ಸಮುದಾಯದ ಜನ ಕುಲ ಕಸುಬನ್ನು ನಂಬಿ ಕೂತರೆ ಜೀವನ ನಡೆಸಲು ಆಗುವುದಿಲ್ಲ. ಬದಲಿಗೆ ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು. ಶಿಕ್ಷಣದಿಂದ ಸಮುದಾಯದ ಅಭಿವೃದ್ಧಿಯಾಗುತ್ತದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಕಿವಿಮಾತು ಹೇಳಿದರು.
 
ಪಲ್ಲಕ್ಕಿ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಕವಿ ಸರ್ವಜ್ಞರ ಭಾವಚಿತ್ರಗಳ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಸರ್ವಜ್ಞ ಉದ್ಯಾನದಿಂದ ಆರಂಭವಾದ ಮೆರವಣಿಗೆಯು ಚನ್ನಯ್ಯ ರಂಗಮಂದಿರದ ಬಳಿ ಅಂತ್ಯಗೊಂಡಿತು. ಮೆರವಣಿಗೆಯ ಜತೆಗೆ ಗಾರುಡಿ ಗೊಂಬೆ, ಡೊಳ್ಳು ಕುಣಿತ, ಕೀಲು ಕುದುರೆ ಕಲಾವಿದರು ಪ್ರದರ್ಶನ ನೀಡಿದರು.
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ, ಡಿವೈಎಸ್ಪಿ ಅಬ್ದುಲ್ ಸತ್ತಾರ್, ಉಪ ತಹಶೀಲ್ದಾರ್ ನಾಗವೇಣಿ, ಕುಂಬಾರ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಸೀನಪ್ಪ, ಸದಸ್ಯರಾದ ಆನಂದರೆಡ್ಡಿ, ನಾಗರಾಜ್, ನಾರಾಯಣಸ್ವಾಮಿ, ವೆಂಕಟೇಶ್‌ ಪಾಲ್ಗೊಂಡಿದ್ದರು.
 
**
ತ್ರಿಪದಿಗಳು ಅಮೃತ ನುಡಿಗಳು
ಶ್ರೀನಿವಾಸಪುರ:
‘ಸರ್ವಜ್ಞ ಕವಿಯ ತ್ರಿಪದಿಗಳು ಅನುಭವದ ಅಮೃತ ನುಡಿಗಳು. ತ್ರಿಪದಿಗಳ ಸೌಂದರ್ಯವನ್ನು ಸವಿಯಲು ಅವುಗಳನ್ನು ಓದಬೇಕು’ ಎಂದು ತಹಶೀಲ್ದಾರ್ ವೈ.ರವಿ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸೋಮವಾರ ಹಮ್ಮಿಕೊಂಡಿದ್ದ ಕವಿ ಸರ್ವಜ್ಞನ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಸರಳತೆಯ ಸಾಕಾರ ಮುರ್ತಿಯಂತಿದ್ದ ಸರ್ವಜ್ಞ ಜಗದ ಜ್ಞಾನವನ್ನು ಸರಳ ಪದಗಳಲ್ಲಿ ತಿಳಿಸಿದ ಮಹಾನ್‌ ಕವಿ. ಅವರ ಸಾಮಾಜಿಕ ಕಳಕಳಿ ಅನನ್ಯವಾದುದು’ ಎಂದು ಹೇಳಿದರು.

‘ಸರ್ವಜ್ಞ ಯಾವುದೇ ಒಂದು ಜಾತಿಗೆ ಸೀಮಿತವಾದವರಲ್ಲ. ಅವರು ತಮ್ಮ  ತ್ರಿಪದಿಗಳ ಮೂಲಕ ಸಮಾಜದ ಎಲ್ಲ ವರ್ಗದ ಜನರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಜನರು ಮುಂದೆ ಬರಬೇಕು’ ಎಂದು ಹೇಳಿದರು.

ತಾಲ್ಲೂಕು ಕುಂಬಾರರ ಸಂಘದ ಅಧ್ಯಕ್ಷ ಕೆ.ಎಂ.ನಾರಾಯಣಸ್ವಾಮಿ, ಕಾರ್ಯದರ್ಶಿ ಕೆ.ಕೃಷ್ಣಪ್ಪ, ಉಪಾಧ್ಯಕ್ಷ ವೇಣುಗೋಪಾಲ್‌, ವಿರಭದ್ರಪ್ಪ ಇತರರು ಸಮಾರಂಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT