ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯೋನ್ಯತೆ ಮಾಯವಾಗದಿರಲಿ

Last Updated 21 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಮೂವತ್ತೈದು ವರ್ಷದ ಹರಿಣಿ  ಮತ್ತು ಮೂವತ್ತೆಂಟು ವರ್ಷದ ಹರೀಶ್‌ರ ದಾಂಪತ್ಯಕ್ಕೆ ಈಗ ಹತ್ತು ವರ್ಷದ ವಾರ್ಷಿಕೋತ್ಸವದ ಸಂಭ್ರಮ. ಆದರೆ ಹರಿಣಿಯ ಮನಸ್ಸಿಗೆ ಮಾತ್ರ ಬೇಸರ. ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಮದುವೆಯಾದವರು ಹರಿಣಿ-ಹರೀಶ್.
 
ಮೂರನೆಯ ತರಗತಿಯಲ್ಲಿ ಓದುತ್ತಿರುವ ಮುದ್ದಾದ ಒಂದು ಹೆಣ್ಣು ಮಗು ಕೂಡ ಇದೆ. ಈ ಹತ್ತು ವರ್ಷಗಳಲ್ಲಿ ಸ್ವಂತ ಮನೆ ಮಾಡಿಕೊಂಡಿದ್ದಾರೆ. ಸಾಕಷ್ಟು ಉಳಿತಾಯ ಕೂಡ ಇದೆ.  ಇಬ್ಬರೂ ದುಡಿಯುತ್ತಿರುವುದರಿಂದ ಹಣಕ್ಕೇನೂ ಕಷ್ಟವಿಲ್ಲ. ಆದರೆ ಹರಿಣಿಗೆ ಅನ್ನಿಸುವ ಹಾಗೆ, ಜೀವನ ಯಾಂತ್ರಿಕವಾಗಿದೆ.
 
ಗಂಡ-ಹೆಂಡತಿ ಮಧ್ಯೆ ಮುಂಚೆ ಇದ್ದ ಅನ್ಯೋನ್ಯತೆ ಇಲ್ಲ. ಬೆಳಿಗ್ಗೆ ಎದ್ದು ತಿಂಡಿ ಮಾಡುವುದು, ಇಬ್ಬರೂ ತಿಂಡಿ ತಿಂದು, ಮಗಳಿಗೆ ತಿನ್ನಿಸಿ ಶಾಲೆಗೆ ಬಿಟ್ಟು ತಮ್ಮ ಕೆಲಸಕ್ಕೆ ಹೋಗುತ್ತಾರೆ. ಸಂಜೆ ಬಂದ ನಂತರ ಮಗಳಿಗೆ ಪಾಠ, ಅಡುಗೆಯ ಕೆಲಸ. ಹರಿಣಿ ರಾತ್ರಿ ಮಗಳಿಗೆ ಮಲಗಿಸುವಷ್ಟರಲ್ಲಿ ಹರೀಶನಿಗೆ ಗಾಢ ನಿದ್ರೆ. ಇಬ್ಬರಿಗೂ ನಾಲ್ಕಾರು ಪ್ರೀತಿಯ ಮಾತನಾಡಲೂ ಪುರುಸೊತ್ತಿಲ್ಲ. ಪುರುಸೊತ್ತಿಲ್ಲ ಎನ್ನುವುದಕ್ಕಿಂತ ಮಾತನಾಡುತ್ತಿಲ್ಲ ಎಂದರೆ ಸರಿಯೇನೋ.
 
ನೇಹಾ-ನರೇಶ್‌ರ ಮದುವೆ ತಂದೆ-ತಾಯಿಯೇ ಮಾಡಿದ್ದು. ಈಗ ಹನ್ನೆರಡು ವರ್ಷಗಳ ಹರೆಯ ಈ ದಾಂಪತ್ಯಕ್ಕೆ. ನೇಹಾ ಗೃಹಿಣಿ. ನರೇಶ್ ಸಾಫ್ಟ್‌ವೇರ್ ಕಂಪನಿಯಲ್ಲಿ ಎಂಜಿನಿಯರ್. ನೇಹಾ ತನ್ನ ಎರಡು ಗಂಡುಮಕ್ಕಳ ವಿದ್ಯಾಭ್ಯಾಸ. ಸೇವೆ, ಕೆಲಸ–ಕಾರ್ಯಗಳಲ್ಲೇ ಇಡೀ ದಿನ ಮಗ್ನಳಾಗಿರುತ್ತಾಳೆ.
 
ನರೇಶ್‌ನಿಗೂ ಏನೂ ಹೇಳಲು ತೋಚುತ್ತಿಲ್ಲ. ಬೆಳಿಗ್ಗೆ ತಿಂಡಿ ಮಾಡುವುದು, ನಂತರ ಮಕ್ಕಳಿಗೆ ಶಾಲಾ ಬಸ್‌ಗೆ ಕರೆದೊಯ್ಯುವುದು, ಅಷ್ಟರಲ್ಲಿ ನರೇಶ್ ಆಫೀಸ್‌ಗೆ ಹೋಗಿರುತ್ತಾನೆ. ನರೇಶ್ ವಾಪಾಸ್ ಮನೆಗೆ ಬರುವಷ್ಟರಲ್ಲಿ ಸಂಜೆ ಏಳು ಗಂಟೆ. ಆಗ ಕೂಡ ನೇಹ, ಮಕ್ಕಳಿಗೆ ಪಾಠ ಹೇಳಿಕೊಟ್ಟು ಊಟ ಬಡಿಸುತ್ತಾಳೆ. ನಂತರ ಮಕ್ಕಳಿಗೆ ಮಲಗಿಸುವುದರಲ್ಲಿ ಇಬ್ಬರದೂ ಸಮನಾದ ಭಾಗ. 
 
ಮೊದಲನೆಯ ಮಗನನ್ನು ನರೇಶ ಮಲಗಿಸಿದರೆ, ಕಿರಿಯನನ್ನು ನೇಹ ಮಲಗಿಸುತ್ತಾಳೆ. ಅಷ್ಟರಲ್ಲಿ ಇಬ್ಬರಿಗೂ ನಿದ್ರೆ. ಕಳೆದ ನಾಲ್ಕಾರು ವರ್ಷಗಳಿಂದ ದಂಪತಿಗಳಲ್ಲಿ ಸೌಹಾರ್ದ ಸಂಬಂಧನೇ ಇಲ್ಲ. ಪ್ರೀತಿಯಿಂದ ಮಾತನಾಡುವುದು, ಎಲ್ಲಿಗಾದರೂ ಇಬ್ಬರೇ ಹೋಗಿಬರುವುದೂ ಇಲ್ಲದಂತಾಗಿದೆ.
 
‘ಮದುವೆ’ ಎನ್ನುವುದು ಪವಿತ್ರವಾದ ಬಂಧ. ಸಾಮಾಜಿಕವಾಗಿ ಒಂದು ಗಂಡು ಮತ್ತು ಒಂದು ಹೆಣ್ಣಿಗೆ ಒಟ್ಟಿಗೆ ಜೀವಿಸಲು, ಲೈಂಗಿಕ ಸಂಬಂಧ ಇಟ್ಟುಕೊಳ್ಳಲು, ಒಬ್ಬರಿಗೆ ಒಬ್ಬರು ಎಂಥದೇ ಕಷ್ಟ ಸನ್ನಿವೇಶದಲ್ಲಿ ನೆರವಾಗಲು, ಮುಂದೆ ಮಕ್ಕಳನ್ನು ಮಾಡಿಕೊಂಡು ಬೆಳೆಸಲು ‘ವಿವಾಹ’ ಒಂದು ಲೈಸೆನ್ಸ್ ಎಂದರೆ ತಪ್ಪಲ್ಲ. ವಿವಾಹ ನಿಶ್ಚಯವಾದ ಹೊಸತರಲ್ಲಿ ಹುಡುಗ ಮತ್ತು ಹುಡುಗಿ, ಲವ್‌ಬರ್ಡ್‌ಗಳ ತರಹ ಇರುತ್ತಾರೆ.
 
ಬೆಳಿಗ್ಗೆ ಎದ್ದ ತಕ್ಷಣ ಹುಡುಗನಿಂದ ‘ಗುಡ್ ಮಾರ್ನಿಂಗ್ ಕಾಲ್’ನಿಂದ ಪ್ರಾರಂಭವಾಗಿ ರಾತ್ರಿ ಫೋನಿನಲ್ಲಿ ‘ಗುಡ್ ನೈಟ್’ ಎಂದ ಮೇಲೇ ಇಬ್ಬರೂ ನಿದ್ರಿಸುವುದು. ‘ನನ್ನ ನಲ್ಲೆ, ಚಿನ್ನ, ರನ್ನ’ ಎಂದು ಹುಡುಗ ಹುಡುಗಿಯನ್ನು ಓಲೈಸಿದರೆ, ಹುಡುಗಿ ನಾಚಿ ನೀರಾಗುತ್ತಾಳೆ. ‘ನನ್ನ ರಾಜ, ಪ್ರಿಯತಮ’ ಎಂದು ಹುಡುಗನನ್ನು ಪ್ರೀತಿಯಿಂದ ಕರೆಯುತ್ತಾಳೆ. ಹುಡುಗಿಯ ಮೊದಲ ಹುಟ್ಟಿದ ಹಬ್ಬಕ್ಕಂತೂ, ಇಬ್ಬರಿಗೂ ಸಡಗರ. ಹುಡುಗ ತುಂಬಾ ಯೋಚಿಸಿ, ತನ್ನ ಪ್ರಿಯತಮೆಗೆ ಬೇಕಾಗುವ ಗಿಫ್ಟ್ ತರುತ್ತಾನೆ. ಅವಳನ್ನು ಖುಷಿಪಡಿಸಲು ಪಾರ್ಟಿ ಏರ್ಪಡಿಸುತ್ತಾನೆ.
 
ಹುಡುಗಿಯೂ ತಾನು ಕಡಿಮೆ ಇಲ್ಲ ಎಂದು ನಾನಾ ವಿಧದ ಆಚರಣೆ ನಡೆಸುತ್ತಾಳೆ. ಹೀಗೆ ಕೆಲವು ತಿಂಗಳು ಕಳೆದು ಮದುವೆಯಾಗುತ್ತದೆ. ಮದುವೆಯಾದ ಮೊದಲ ಒಂದೆರಡು ವರ್ಷಗಳೂ ಇದೇ ಉತ್ಸಾಹ ಮುಂದುವರೆಯುತ್ತದೆ. ಆದರೆ ಕಾಲಕಳೆದಂತೆ, ಬದುಕಿನ ಒತ್ತಡ ದಂಪತಿಗಳ ಜೀವನದಲ್ಲಿ ಆಟವಾಡತೊಡಗುತ್ತದೆ.
 
ಮಕ್ಕಳ ಪಾಲನೆ ಪೋಷಣೆ, ಉದ್ಯೋಗ, ಮನೆಯ ಕೆಲಸ ಕಾರ್ಯಗಳು, ದುಡ್ಡು ಕೂಡಿಸಿಡುವ  ಭರದಲ್ಲಿ, ಸಂಗಾತಿಗಳ ಮಧ್ಯದ ಅನ್ಯೋನ್ಯತೆ ಮಾಯವಾಗುತ್ತದೆ. ಜೀವನ ಯಾಂತ್ರಿಕವಾಗುತ್ತದೆ. ಭಾವನಾತ್ಮಕವಾದ ಸಂಬಂಧ ಹದಗೆಡುತ್ತದೆ. ಈ ಸಮಯದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ವರ್ಷಗಳಲ್ಲಿ ವಿರಸ ಮೂಡುವುದು ಖಂಡಿತ. ಮಕ್ಕಳು ಬೆಳೆದು ದೊಡ್ಡವರಾಗಿ, ತಮ್ಮ ಗೂಡು ಕಟ್ಟಿಕೊಂಡು ಹಾರಿ ಹೋಗುತ್ತಾರೆ.
 
ಮನೆಯಲ್ಲಿ ಉಳಿಯುವುದು ಗಂಡ-ಹೆಂಡತಿ ತಾನೇ. ಐವತ್ತೈದು-ಅರವತ್ತು ವರ್ಷಗಳಾದ ನಂತರ ಎಲ್ಲ ಜವಾಬ್ದಾರಿ ಕಳೆದ ನಂತರ ಮನಸ್ಸಿಗೆ ಹೊಳೆದು, ನಾವೂ ಸಂತಸದಿಂದ ಜಗತ್ತನ್ನು  ಆನಂದಿಸೋಣ ಎಂದು ಯೋಚಿಸಿದರೆ, ಆರೋಗ್ಯ ಕೇಳುತ್ತದೆಯೇ? ವಯಸ್ಸು ಕೇಳುತ್ತದೆಯೇ? ಆಗ ‘ಅಯ್ಯೋ!  ನಮ್ಮ ಚಿಕ್ಕವಯಸ್ಸಿನಲ್ಲಿ ಸುಖ ಪಡಬೇಕಾದ್ದನ್ನು ಕಳೆದುಕೊಂಡೆವಲ್ಲ’ ಎಂದು ಪಶ್ಚಾತ್ತಾಪ ಪಟ್ಟರೆ ಆದೀತೇ?
 
ನಮ್ಮ ವರ್ತನೆಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ತಂದುಕೊಂಡರೆ, ದಂಪತಿಗಳಲ್ಲಿ ಸರಸವೇ ವಿರಸಕ್ಕಿಂತ ಹೆಚ್ಚಾಗುವುದು ಸಾಧ್ಯ.
ಬೆಳಿಗ್ಗೆ ಎದ್ದಾಕ್ಷಣ ಶುಭೋದಯ ಎಂದು ನಗುತ್ತಾ ಹೇಳುವ ಅಭ್ಯಾಸ ಇಟ್ಟುಕೊಳ್ಳಿ. ನೀವು ಒಬ್ಬರಿಗೊಬ್ಬರು ಹೇಳಿಕೊಳ್ಳುವುದರಿಂದ ಮಕ್ಕಳಿಗೂ ಒಳ್ಳೆಯ ಅಭ್ಯಾಸವಾಗುತ್ತದೆ. ಅವರೂ ಅದನ್ನು ಕಲಿಯುತ್ತಾರೆ.
 
ದಿನದಲ್ಲಿ ಒಂದು ಇಲ್ಲ ಎರಡು ಬಾರಿಯಾದರೂ, ಒಟ್ಟಿಗೆ ಕುಳಿತು ಊಟ / ತಿಂಡಿ ತಿನ್ನುವ ಅಭ್ಯಾಸ ಇರಲಿ. ಈ ಸಮಯದಲ್ಲಿ ಟೀವಿ/ ಮೊಬೈಲ್ ಫೋನ್ /ಕಂಪ್ಯೂಟರ್ ನಿಮ್ಮ ಮಧ್ಯೆ ಬಾರದಿರಲಿ. ಆಫೀಸಿನಿಂದ ಬಂದಾಕ್ಷಣ ಒಂದು ಬಾರಿಯಾದರೂ ನಿಮ್ಮ ಸಂಗಾತಿಗೆ ‘ಬೆಳಿಗ್ಗೆಯಿಂದ ಏನು ಮಾಡಿದೆ? ಮಧ್ಯಾಹ್ನ ಊಟ ಮಾಡಿದಿಯಾ?’ ಎಂದು ವಿಚಾರಿಸಿಕೊಳ್ಳಿ.
 
ಮಕ್ಕಳ ಪಾಲನೆ-ಪೋಷಣೆಗೆ ಸಮಯ ಕೊಡಬೇಕು ನಿಜ. ಅದೇ ಜೀವನವಾಗಬಾರದು. ನಿಮ್ಮದೇ ಆದ ‘ಗುಣಮಟ್ಟದ ಸಮಯ’ – ‘Quality time’ ಇರಬೇಕು. ಒಂದು ಅರ್ಧ ಗಂಟೆ ರಾತ್ರಿ ಊಟವಾದ ಬಳಿಕ  ವಾಕಿಂಗ್ ಹೋದರೆ, ವ್ಯಾಯಾಮವೂ ಆಗುತ್ತದೆ. ಇಬ್ಬರಿಗೂ ಮಾತನಾಡಲೂ ಸಮಯ ಸಿಗುತ್ತದೆ.
 
ಮದುವೆಗೆ ಮುಂಚೆ ಇದ್ದ ಉತ್ಸಾಹ, ಈಗಿನ ಹುಟ್ಟಿದ ಹಬ್ಬ, ಮದುವೆಯ ವಾರ್ಷಿಕೋತ್ಸವ ಆಚರಿಸುವುದರಲ್ಲೂ ಇರಲಿ. ತುಂಬಾ ದುಬಾರಿಯಾದ ಗಿಫ್ಟ್ ಅಗತ್ಯವಿಲ್ಲ, ಒಂದು ಗುಲಾಬಿ ಅಥವಾ ಒಂದು ಹೂಗುಚ್ಛ ಅಥವಾ ಊಟಕ್ಕೆ ಹೊರಹೋಗುವುದು – ಇಂಥವು ಸಂಗಾತಿಯ ಮನಸ್ಸಿಗೆ ಸಾಕಷ್ಟು ಸಂತಸ ತರುತ್ತದೆ. ವರ್ಷದಲ್ಲಿ ಒಂದು ಬಾರಿಯಾದರೂ ಸಂಸಾರದ ಜಂಜಡಗಳನ್ನು ಬಿಟ್ಟು ಒಂದು ಪ್ರವಾಸಕ್ಕೆ ಹೋಗುವ ಪರಿಪಾಠವಿರಲಿ. 
ಡಾ. ಕೆ.ಎಸ್. ಶುಭ್ರತಾ, (ಲೇಖಕಿ ಮನೋವೈದ್ಯೆ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT