ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಪ್ರಶ್ನೋತ್ತರ

Last Updated 21 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಯು.ಪಿ.ಪುರಾಣಿಕ್‌, ಬ್ಯಾಂಕಿಂಗ್‌-ಹಣಕಾಸು ತಜ್ಞ, uppuranik@gmail.com
 
ನಾಗರತ್ನ, ಭದ್ರಾವತಿ
ನಾನು 2015 ನವೆಂಬರ್‌ 25 ರಂದು ಅಟಲ್‌ ಪಿಂಚಣಿ ಯೋಜನೆಗೆ ಸೇರಿದೆ. ₹ 495 ತಿಂಗಳಿಗೆ ಕಟ್ಟುತ್ತಾ ಬಂದಿದ್ದೇನೆ. ಇದನ್ನು ನಿಲ್ಲಿಸಬೇಕೆಂದಿದ್ದೇನೆ. ಆದರೆ ಸ್ಟ್ಯಾಂಡಿಂಗ್‌ ಇನ್ಸ್‌ಟ್ರಕ್ಷನ್‌ ಕೊಟ್ಟಿರುವುದರಿಂದ ನಿಲ್ಲಿಸಲು ಬರುವುದಿಲ್ಲ ಎಂಬುದಾಗಿ ಬ್ಯಾಂಕಿನಲ್ಲಿ ಹೇಳುತ್ತಾರೆ. ನಾನು ಈ ಯೋಜನೆಯಿಂದ ಹೊರ ಬರಲು ದಾರಿ ತೋರಿಸಿ.
 
ಉತ್ತರ: ಸ್ಟ್ಯಾಂಡಿಂಗ್‌ ಇನ್‌್ಸಟ್ರಕ್ಷನ್‌ ಹಿಂದೆ ಪಡೆಯುವ ಹಕ್ಕು ಖಾತೆದಾರರಿಗೆ ಇರುತ್ತದೆ. ನೀವು ಬರಹದಲ್ಲಿ ಬ್ಯಾಂಕಿಗೆ ತಿಳಿಸಿ ಅವರಿಂದ ಅಕನಾಲೇಡ್ಜ್‌ಮೆಂಟ್‌ ಪಡೆಯಿರಿ. ಆದರೆ ಇದುವರೆಗೆ ನೀವು ಕಟ್ಟಿದ ಹಣ ನಿಮ್ಮ 60 ವರ್ಷದ ನಂತರವೇ ನಿಮಗೆ ದೊರೆಯುತ್ತದೆ. ಅಟಲ್‌ ಪಿಂಚಣಿ ಯೋಜನೆಯಲ್ಲಿ ಖಾತೆ ಮುಕ್ತಾಯಗೊಳ್ಳಲು 60 ವರ್ಷ ಅಥವಾ ಘನ ಕಾಹಿಲೆಗೆ ತುತ್ತಾದಾಗ, ಡಾಕ್ಟರ್‌ ಸರ್ಟಿಫಿಕೇಟ್‌ ಕೊಟ್ಟು ಕಟ್ಟಿದ ಹಣ ವಾಪಸ್‌್ ಪಡೆಯಬಹುದು. ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿಗಾಗಿ ಉಚಿತ ದೂರವಾಣಿ ಸಂಖ್ಯೆ 1800110069 ಸಂಪರ್ಕಿಸಿ. ಇದೊಂದು ಉತ್ತಮ ಯೋಜನೆಯಾಗಿದ್ದು, ನಿಲ್ಲಿಸದೆ ಮುಂದುವರಿಸಿ.
 
ಹೆಸರು–ಊರು ಬೇಡ
- ನನಗೆ ಪಿತ್ರಾರ್ಜಿತದಿಂದ ಒಂದು ಎಕರೆ ಭೂಮಿ ಬಂದಿದೆ. ಅದನ್ನು ಎನ್‌.ಎ. ಮಾಡಿ ನಿವೇಶನ ಮಾಡಿ ಮಾರಾಟ ಮಾಡಬೇಕೆಂದಿದ್ದೇನೆ. ಒಂದು ನಿವೇಶನದ ಬೆಲೆ ₹ 1.60 ಲಕ್ಷದಿಂದ ₹ 1.80 ಲಕ್ಷ ಬರುತ್ತದೆ. ಹೀಗೆ ಮಾರಾಟ ಮಾಡಿ ಬಂದ ಹಣಕ್ಕೆ ತೆರಿಗೆ ಬರುತ್ತದೆಯೇ? ತೆರಿಗೆ ಉಳಿಸಲು ಮಾರ್ಗದರ್ಶನ ಮಾಡಿ.
 
ಉತ್ತರ: ಭೂ ಪರಿವರ್ತನೆ (ನಾನ್‌ ಅಗ್ರಿಕಲ್ಚರ್‌) ಮಾಡಿ ಮುಂದೆ ನಿವೇಶನ ಮಾಡಿ ಮಾರಾಟ ಮಾಡುವಾಗ, ಬಂಡವಾಳ ಅಭಿವೃದ್ಧಿ ತೆರಿಗೆ ಶೇ 20 ಕೊಡಬೇಕಾಗುತ್ತದೆ. ಇದೇವೇಳೆ ಕೃಷಿ ಭೂಮಿ ಮಾರಾಟ ಮಾಡಿದರೆ ತೆರಿಗೆ ಬರುವುದಿಲ್ಲ (ಸೆಕ್ಷನ್‌ 48) ಭೂ ಪರಿವರ್ತನೆಯಾದಾಗ ಇದು ವಾಣಿಜ್ಯ ಉದ್ದೇಶ ಎಂದು ಪರಿಗಣಿಸಲಾಗುವುದು. ಎನ್‌.ಎ. ಆದನಂತರ ಮಾರಾಟ ಮಾಡಿ ಬರುವ ಹಣದಲ್ಲಿ ಗರಿಷ್ಠ ₹ 50 ಲಕ್ಷಗಳ ತನಕ ಎನ್‌ಎಚ್‌ಐಎ ಅಥವಾ ಆರ್‌ಇಸಿ ಬಾಂಡುಗಳಲ್ಲಿ 3 ವರ್ಷಗಳ ಅವಧಿಗೆ ಠೇವಣಿ ಇರಿಸಿದರೆ, ಈ ಮೊತ್ತಕ್ಕೆ ತೆರಿಗೆ ವಿನಾಯತಿ ಪಡೆಯಬಹುದು. ಈ ಎರಡೂ ಸಂಸ್ಥೆಗಳು ಸರ್ಕಾರಿ ಸೌಮ್ಯತ್ವದಲ್ಲಿದ್ದು ಇಂದಿನ ಠೇವಣಿ ಮೇಲಿನ ಬಡ್ಡಿ ದರ ಶೇ. 5.25 ಇರುತ್ತದೆ.
 
ಟಿ. ವೆಂಕಟೇಶ, ದಾವಣಗೆರೆ
- ನನ್ನ ಸಂಬಳ ₹ 15 ಸಾವಿರ. ಮನೆ ಖರ್ಚು ₹ 5ಸಾವಿರ. 5 ವರ್ಷಗಳ ಅವಧಿಗೆ ಅಂಚೆ ಕಚೇರಿಯಲ್ಲಿ ₹ 10,000 ಆರ್‌.ಡಿ. ಇರಿಸಿದರೆ 
₹ 10 ಲಕ್ಷ ಬರಬಹುದೇ ತಿಳಿಸಿ. ₹ 10 ಲಕ್ಷದಿಂದ ನಿವೇಶನ ಕೊಳ್ಳುವ ಆಸೆ ನನ್ನದು.
 
ಉತ್ತರ: ಅಂಚೆ ಕಚೇರಿಯಲ್ಲಿ ನೀವು  ₹ 10,000ಗಳನ್ನು 5 ವರ್ಷಗಳ ಆರ್‌.ಡಿ. ಮಾಡಿದರೆ, ಅವಧಿ ಮುಗಿದು ₹ 7.27 ಲಕ್ಷ ಪಡೆಯುವಿರಿ. ಹೀಗೆ ಬರುವ ಹಣ ಭದ್ರವಾದ ಸಹಕಾರ ಬ್ಯಾಂಕಿನಲ್ಲಿ ದಾವಣಗೆರೆಯಲ್ಲಿ 5 ವರ್ಷಗಳ ಅವಧಿಗೆ ಇರಿಸಿರಿ. ಇಲ್ಲಿ ಬರುವ ಮೊತ್ತದಿಂದ 10 ವರ್ಷಗಳಲ್ಲಿ ನಿವೇಶನ ಕೊಳ್ಳಿ. ಹಣ ದ್ವಿಗುಣವಾಗುವ ಆಸೆಯಿಂದ ಅಭದ್ರವಾದ ಹೂಡಿಕೆಗೆ ಕೈ ಹಾಕಬೇಡಿ. ಸ್ವಲ್ಪ ಕಾಯಬೇಕಾದರೂ ತೊಂದರೆ ಇಲ್ಲ. ಈ ಮಾರ್ಗದಿಂದ ನಿಮ್ಮ ಆಸೆ ಆಕಾಂಕ್ಷೆಗಳು ಖಂಡಿತಾ ನೆರವೇರುತ್ತದೆ, ನಿಮ್ಮ ಆಸೆ ಈಡೇರಲಿ ಎಂದು ದೇವರನ್ನು ಬೇಡುತ್ತೇನೆ.
 
ಚಾಂದ್‌ ಪಾಶ್‌, ಕೈಕೊಂಡ್ರಹಳ್ಳಿ
- ನನ್ನ ವಯಸ್ಸು 40. ನಾನು ಹಿಂದೆ ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡಿ, ಈಗ ಕೆಲಸ ಬಿಟ್ಟಿದ್ದೇನೆ. 7  ವರ್ಷ ಕೆಲಸ ಮಾಡಿದಕ್ಕೆ ಭವಿಷ್ಯ ನಿಧಿ ₹ 1.45 ಲಕ್ಷ ಬಂದಿದೆ. ಈ ಹಣ ಎಲ್ಲಿ ವಿನಿಯೋಗಿಸಲಿ. ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ (15–ಹಾಗೂ 10 ವರ್ಷ) ಎಫ್‌.ಡಿ., ಆರ್‌.ಡಿ., ಐ.ಆರ್‌.ಡಿ. ಯಾವುದು ಉತ್ತಮ, ತಿಳಿಸಿರಿ.
 
ಉತ್ತರ: ನೀವು ಕೆಲಸಕ್ಕೆ ರಾಜೀನಾಮೆ ಕೊಟ್ಟ ನಂತರ ಏನು ಕೆಲಸ ಮಾಡುತ್ತೀರಿ ಹಾಗೂ ನಿಮಗೆ ಏನು ಆದಾಯವಿದೆ ಎಂಬುದನ್ನು ತಿಳಿಸಿಲ್ಲ. ಈ ಹಿಂದೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ನೀವು, ಸಣ್ಣ ರೀತಿಯಲ್ಲಿ ಬಟ್ಟೆ ಅಂಗಡಿ ಪ್ರಾರಂಭಿಸಿ  ಅಥವಾ ಬಟ್ಟೆ ತರಿಸಿ ಮನೆ ಮನೆಗೆ ಹೋಗಿ ವ್ಯಾಪಾರ ಮಾಡಿರಿ. ಈ ಉದ್ಯೋಗದಲ್ಲಿ ಕನಿಷ್ಠ ಶೇ  25–30 ಲಾಭವಿದೆ. ನಿಮಗೆ ಬಂದಿರುವ ₹ 1.45 ಲಕ್ಷದಲ್ಲಿ ₹ 75,000 ಬಂಡವಾಳ ಹಾಕಿ ತಕ್ಷಣ ಬಟ್ಟೆ ವ್ಯಾಪಾರ ಪ್ರಾರಂಭಿಸಿ. ಇದರಿಂದ ಸ್ವಂತ ಉದ್ಯೋಗ ಮಾಡಿದಂತಾಗುತ್ತದೆ. ಇನ್ನುಳಿದ ಹಣ ನಿಮ್ಮ ಮನೆಗೆ ಸಮೀಪದ ಬ್ಯಾಂಕಿನಲ್ಲಿ ನೀವು ಹಾಗೂ ನಿಮ್ಮ ಹೆಂಡತಿ ಹೆಸರಿನಲ್ಲಿ ಜಂಟಿಯಾಗಿ, ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ 5 ವರ್ಷಗಳ ಅವಧಿಗೆ ಮಾಡಿರಿ. ವ್ಯಾಪಾರದಿಂದ ಬರುವ ಲಾಭದಲ್ಲಿ ತಲಾ ₹ 1000 ಆರ್‌.ಡಿ. 5 ವರ್ಷಗಳ ಅವಧಿಗೆ ಎರಡು ಹೆಣ್ಣುಮಕ್ಕಳ ಹೆಸರಿನಲ್ಲಿ ಇರಿಸಿ. ನಿಮಗೆ ಶುಭ ಹಾರೈಸುತ್ತೇನೆ.
 
ಕೆ.ಎಂ. ಅಡವಿ, ಗದಗ
- ನಾನು ಪ್ರಾಥಮಿಕ ಶಾಲಾ ಶಿಕ್ಷಕ. ಮಗಳು 2ನೇ ಬಿಇ, ಮಗ 1ನೇ ವರ್ಷ ಐ.ಟಿ.ಐ. ಮಕ್ಕಳ ವಿದ್ಯಾಭ್ಯಾಸ ಹಾಗೂ ತೆರಿಗೆ ಉಳಿಸಲು ಸಲಹೆ ಕೇಳುತ್ತಿದ್ದೇನೆ. ಒಟ್ಟು ಸಂಬಳ ₹ 43,945. ಕಡಿತ ₹ 9,506 ಮಗಳ ಶಿಕ್ಷಣಕ್ಕೆ ₹ 5 ಸಾವಿರ ಆರ್‌.ಡಿ. ಮಾಡಿದ್ದೇನೆ. ಮ್ಯೂಚುವಲ್‌ ಫಂಡ್‌ಗೆ ತಿಂಗಳು ₹ 1,000 ತುಂಬುತ್ತೇನೆ. ಇನ್ನು 7 ವರ್ಷ ಸೇವಾವಧಿ ಇದೆ.
 
ಉತ್ತರ: ನಿಮ್ಮ ಸಂಬಳದಲ್ಲಿ ಕಡಿತ, ಆರ್‌.ಡಿ. ಮ್ಯೂಚುವಲ್‌ ಫಂಡ್‌ ಹೂಡಿಕೆ ಕಳೆದರೆ ಉಳಿಯುವ ಹಣ ₹ 28,439, ಕಡಿತದಲ್ಲಿ ಹೆಚ್ಚಿನ ವಿಚಾರ ಸೆಕ್ಷನ್‌ 80ಸಿ ಆಧಾರಿತವಾಗಿರಬೇಕು. ಈ ಸೆಕ್ಷನ್‌ ಅಡಿಯಲ್ಲಿ ಗರಿಷ್ಠ ₹ 1.50 ಲಕ್ಷ ವಾರ್ಷಿಕವಾಗಿ ಉಳಿಸಿ ಒಟ್ಟು ಸಂಬಳದಿಂದ ಕಳೆದು ತೆರಿಗೆ ಉಳಿಸಬಹುದು. ₹ 28,439 ರಲ್ಲಿ, ಮಕ್ಕಳ ವಿದ್ಯಾಭ್ಯಾಸ ಹಾಗೂ ಮನೆ ಖರ್ಚು ಹೋಗಿ ಕನಿಷ್ಠ ₹ 5 ಸಾವಿರ ಉಳಿಸಬಹುದು. ಈ ಉಳಿತಾಯವನ್ನು 5 ವರ್ಷಗಳ ಆರ್‌.ಡಿ.ಯಲ್ಲಿ, ಸಂಬಳ ಪಡೆಯುವ ಬ್ಯಾಂಕಿನಲ್ಲಿ ಮಾಡಿರಿ. ನಿಮಗೂ ನಿಮ್ಮ ಮಕ್ಕಳಿಗೂ ಉತ್ತಮ ಭವಿಷ್ಯ ಹಾರೈಸುತ್ತೇನೆ.
 
ಶ್ರೀ ಗಣೇಶ್‌, ಬೆಂಗಳೂರು
- ನಾನು ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದೇನೆ. ಪ್ರಸ್ತುತ ವಾರ್ಷಿಕ ನಿವೃತ್ತಿ ವೇತನ ₹ 3 ಲಕ್ಷಕ್ಕಿಂತ ₹ 960 ಜಾಸ್ತಿ ಇದೆ. ತೆರಿಗೆ ರಿಟರ್ನ್‌ ಸಲ್ಲಿಸಿರುವುದಿಲ್ಲ. ದಂಡ ಕೊಡದೆ ಈಗ ಸಲ್ಲಿಸುವ ಅವಕಾಶವಿದೆಯೇ? ₹ 2 ಲಕ್ಷ ಮೇ 2016ಕ್ಕೆ ಠೇವಣಿ ಇಟ್ಟಿದ್ದು– ಮೇ 2017ಕ್ಕೆ ಬರುವ ಬಡ್ಡಿಗೆ ತೆರಿಗೆ ಬರುವು ದಾದರೆ, ತೆರಿಗೆ ಉಳಿಸಲು ಯಾವ ಹೂಡಿಕೆ ಉತ್ತಮ. ಕಂಪೆನಿ ಷೇರಿನಿಂದ 10–12 ಸಾವಿರ ಬರುತ್ತಿದ್ದು ಇದರ ಮೇಲೆ ಬ್ಯಾಂಕ್‌ ಬಡ್ಡಿಗೆ ತೆರಿಗೆ ಬರುತ್ತಿದೆಯೇ? ಉಳಿತಾಯ ಖಾತೆ ನನ್ನ ಮತ್ತು ನನ್ನ ಹೆಂಡತಿ ಹೆಸರಿನಲ್ಲಿ ಜಂಟಿಯಾ ಗಿರುವುದರಿಂದ ₹ 20,000 ಬಡ್ಡಿವರೆಗೆ ತೆರಿಗೆ ವಿನಾಯತಿ ಇದೆಯೇ? ನನ್ನ ಹೆಂಡತಿಗೆ ಯಾವುದೇ ಆದಾಯವಿರುವುದಿಲ್ಲ. ₹ 3 ಲಕ್ಷದವರೆಗಿನ ಆದಾಯ ತೆರಿಗೆ ಮಿತಿ ಇದ್ದು, ತೆರಿಗೆ ರಿಟರ್ನ್‌ ಫೈಲ್‌ ಮಾಡುವ ಅವಶ್ಯವಿಲ್ಲ ಎಂದು ತಿಳಿಸಿದ್ದೀರಿ. ಆದರೆ ಎಷ್ಟೇ ಆದಾಯವಿದ್ದರೂ,  ತೆರಿಗೆ ರಿಟರ್ನ್‌ ಫೈಲ್‌ ಮಾಡಬೇಕು ಎಂದು  ಓದಿದ ನೆನಪು. 2016 ಫೆಬ್ರುವರಿಯಲ್ಲಿ ನನಗೆ ಎಂಜಿಯೋಪ್ಲೇಸ್ಟರ್‌ ಮಾಡಿಸಿದ್ದು, ₹ 1.60 ಲಕ್ಷ ಖರ್ಚಾಗಿದೆ. ಇದಕ್ಕೆ ತೆರಿಗೆ ವಿನಾಯತಿ ಇದೆಯೇ? ತೆರಿಗೆ ಉಳಿಸುವ ಬೇರೆ ಯಾವುದಾದರೂ ಸೆಕ್ಷನ್‌ ಇದ್ದರೆ ತಿಳಿಸಿ.
 
ಉತ್ತರ: ಯಾವುದೇ ವ್ಯಕ್ತಿಯ ವಾರ್ಷಿಕ ಒಟ್ಟು ಆದಾಯ, ಬೇರೆ ಬೇರೆ ಸೆಕ್ಷನ್‌ಗಳ ಅಡಿಯಲ್ಲಿ ವಿನಾಯತಿ ಪಡೆಯುವ ಮುನ್ನ ಆದಾಯ ತೆರಿಗೆ ಇಲಾಖೆಯವರು ನಿಗದಿಪಡಿಸುವ ಮಿತಿಯೊಳಗಿರುವಲ್ಲಿ ತೆರಿಗೆ ರಿಟರ್ನ್‌ ಸಲ್ಲಿಸುವ ಅವಶ್ಯವಿಲ್ಲ. ಇದೇ ವೇಳೆ ವಿನಾಯ್ತಿ ಪಡೆದು ತೆರಿಗೆ ಬಾಧ್ಯತೆಯಿಂದ ಹೊರಗುಳಿದಲ್ಲಿ,  ರಿಟರ್ನ್‌ ಸಲ್ಲಿಸುವ ಅವಶ್ಯವಿದೆ. ತೆರಿಗೆ ರಿಟರ್ನ್‌ ಸಲ್ಲಿಸ ಬೇಕಾದವರು, ಸಮಯದಲ್ಲಿ ಸಲ್ಲಿಸದಿದ್ದರೆ, ತೆರಿಗೆ ಹಣ ಅತೀ ಕಡಿಮೆ ಇದ್ದಲ್ಲಿ ಬಡ್ಡಿ ಮಾತ್ರ ಬಂದರೆ ಕೊಡುವ ತೆರಿಗೆ ಹಣಕ್ಕೆ ದಂಡ ವಿಧಿಸಲಾರರು. ಡಿವಿಡೆಂಡ್‌ ಆದಾಯ ತೆರಿಗೆ ವಿನಾಯತಿ ಪಡೆದರೂ, ಡಿವಿಡೆಂಡ್‌ ಹಣ ಠೇವಣಿಯಾಗಿರಿಸಿದರೆ, ಬಡ್ಡಿಗೆ ತೆರಿಗೆ ಬರುತ್ತದೆ. ಉಳಿತಾಯ ಖಾತೆ ವೈಯಕ್ತಿಕ ಅಥವಾ ಜಂಟಿಯಾಗಿದ್ದರೂ 31–3–2017 ರವರೆಗೆ ಕಾನೂನಿನಂತೆ ₹ 10 ಸಾವಿರ ಗರಿಷ್ಠ ಮೊತ್ತಕ್ಕೆ ಮಾತ್ರ ವಿನಾಯತಿ ಇದೆ. ಕ್ಯಾನ್ಸರ್‌, ಏಡ್ಸ್‌, ಮೂತ್ರಜನಕಾಂಗ ವಿಫಲತೆ ವಿಚಾರದಲ್ಲಿ ಮಾತ್ರ, ವೈದ್ಯಕೀಯ ವೆಚ್ಚಕ್ಕೆ ರಿಯಾಯತಿ ಇದೆ. ನೀವು ಇನ್ನೂ ಹೆಚ್ಚಿನ ಮಾಹಿತಿಗೆ ಚಾರ್ಟರ್‍ಡ್‌ ಅಕೌಂಟಂಟ್‌ ಸಂಪರ್ಕಿಸಿ.
 
ಬಿ.ವಿ. ವಸಂತ ಕುಮಾರ್, ಹಾಸನ
- ನನ್ನ ವಯಸ್ಸು 55. ನಾನು ₹ 5 ಲಕ್ಷ ಹಣ ಹೂಡಬೇಕೆಂದಿದ್ದೇನೆ. ನನಗೆ ₹ 5 ಸಾವಿರ ತಿಂಗಳಿಗೆ ಮನೆ ಖರ್ಚಿಗೆ ಬೇಕಾಗುತ್ತದೆ.  
 
ಉತ್ತರ: ₹ 5 ಲಕ್ಷ ಠೇವಣಿ ಇರಿಸಿದರೆ ಶೇ 8 ಬಡ್ಡಿ ದರದಲ್ಲಿ, ನೀವು ಪ್ರತೀ ತಿಂಗಳೂ ₹ 3334 ಪಡೆಯುವಿರಿ. ₹ 5 ಸಾವಿರ ತಿಂಗಳಿಗೆ ಪಡೆಯಲು ಕನಿಷ್ಠ ₹ 7.5 ಲಕ್ಷ ಠೇವಣಿ ಇರಿಸಬೇಕಾಗುತ್ತದೆ. ಮ್ಯೂಚುವಲ್‌ ಫಂಡ್‌ ಹೂಡಿಕೆಯಲ್ಲಿ ನಿರ್ದಿಷ್ಟ ವರಮಾನ ಬರುತ್ತದೆ ಎನ್ನುವುದನ್ನು ಈಗಲೇ ನಿಶ್ಚಯಿಸಲಾಗದು. ಇಲ್ಲಿ ಷೇರು ಮಾರುಕಟ್ಟೆ ಏರಿಳಿತದ ಕಂಟಕ ಇರುತ್ತದೆ. ಬ್ಯಾಂಕಿನಲ್ಲಿ ₹ 7.5 ಲಕ್ಷ ಇರಿಸಿ ₹ 5000 ಬಡ್ಡಿ ಪ್ರತೀ ತಿಂಗಳೂ ಪಡೆಯಿರಿ.
 
ಜಯರಾಮ, ಕಲಬುರ್ಗಿ
- ನನ್ನ ಮಗ ಕೇಂದ್ರ ಸರ್ಕಾರದ ನೌಕರ, ಆತನಿಗೆ ಅಂಗ ವೈಕಲ್ಯತೆ ಇದೆ. ಆತನ ಮಾಸಿಕ ವೇತನ ₹ 83,000 ವರಮಾನ ತೆರಿಗೆ ಆದಷ್ಟು ಕಡಿಮೆ ಮಾಡಲು ದಾರಿಗಳಿದ್ದರೆ ತಿಳಿಸಿ.
 
ಉತ್ತರ: ಆದಾಯ ತೆರಿಗೆ ಸೆಕ್ಷನ್‌ 80ಯು ಆಧಾರದ ಮೇಲೆ ₹ 75000 ದಿಂದ ₹ 1.25 ಲಕ್ಷಗಳ ತನಕ, ಒಟ್ಟು ಆದಾಯದಿಂದ ಕಳೆದು ಅಂಗವಿಕಲರು ತೆರಿಗೆ ಸಲ್ಲಿಸಬಹುದು. ಅಂಗವಿಕಲತೆಗೆ ಅನುಗುಣವಾಗಿ ವಿನಾಯತಿ ಪಡೆಯಬಹುದು. ಈ ವಿಚಾರದಲ್ಲಿ ಡಿಸ್ಟ್ರಿಕ್ಟ್‌ ಸರ್ಜನ್‌ರವರಿಂದ ಸರ್ಟಿಫಿಕೇಟು ಪಡೆಯಬೇಕು. ನಿಮ್ಮ ಮಗನಿಗೆ ಒಳ್ಳೆಯ ಸಂಬಳ ಇರುವುದರಿಂದ, ಗೃಹಸಾಲ ಪಡೆದು ಮನೆ ಕಟ್ಟಲು ತಿಳಿಸಿ. ಇದರಿಂದ ಸಾಲಕ್ಕೆ ತುಂಬುವ ಕಂತು– ಬಡ್ಡಿ ಎರಡರಿಂದಲೂ, ವಿನಾಯ್ತಿ ಪಡೆಯಬಹುದು. ಗೃಹಸಾಲದ ಬಡ್ಡಿ ದರ ಬಹಳ ಕಡಿಮೆ ಆಗಿದ್ದು, ಗೃಹಸಾಲ ಪಡೆಯಲು ಇದು ಪರ್ವಕಾಲ. ಸ್ಥಿರ ಆಸ್ತಿ ಹೂಡಿಕೆಯಲ್ಲಿ ಬಂಡವಾಳ ವೃದ್ಧಿಯಾಗುತ್ತದೆ. ಇದರಿಂದ ಆಸ್ತಿ ಮಾಡಿದಂತಾಗುವುದರ ಜತೆಗೆ ಬೇಡವಾದ ಖರ್ಚಿಗೆ ಕಡಿವಾಣ ಹಾಕಿದಂತಾಗುತ್ತದೆ. ಉಳಿತಾಯದ ಪ್ರಕ್ರಿಯೆ ಪ್ರಾರಂಭದಿಂದಲೇ ಆಗಬೇಕು, ಜೀವನದ ಸಂಜೆಯಲ್ಲಿ ಸುಖವಾಗಿರಲು ಪ್ರತೀ ತಿಂಗಳೂ ಎಷ್ಟಾದರಷ್ಟು ದೀರ್ಘಾವಧಿ ಆರ್‌.ಡಿ. ಮಾಡಲು ಹೇಳಿರಿ. ನಿಮ್ಮ ಹಾಗೂ ನಿಮ್ಮ ಹೆಂಡತಿ ಹೆಸರಿನಲ್ಲಿ ಆರೋಗ್ಯ ವಿಮೆ ಇಳಿಸಲು ಹೇಳಿ. ಇಲ್ಲಿ ತುಂಬುವ ಕಂತುಗಳು ಕೂಡಾ, ನಿಮ್ಮ ಮಗನ ಒಟ್ಟು ಆದಾಯದಿಂದ ಕಳೆದು ಸೆಕ್ಷನ್‌ 80ಡಿ. ಆಧಾರದ ಮೇಲೆ ವಿನಾಯತಿ ಪಡೆದು ತೆರಿಗೆ ಸಲ್ಲಿಸಬಹುದು.
 
ರಘು, ವಿಜಯಪುರ
- ನಾನು ಕೇಂದ್ರ ಸರ್ಕಾರದ ನೌಕರ. ಎಲ್ಲಾ ಖರ್ಚು ಕಳೆದು ₹ 1,500 ಉಳಿಸುತ್ತೇನೆ. ಊರಿನಲ್ಲಿ ನನ್ನ ಅಣ್ಣ ಕಿರಾಣಿ ಅಂಗಡಿ ನಡೆಸುತ್ತಾನೆ. ಅದರಿಂದ ₹15 ಸಾವಿರ ಆದಾಯವಿದೆ. ಇದಲ್ಲದೆ ಊರಿನಲ್ಲಿ ಒಂದು ಕಾಂಪ್ಲೆಕ್ಸ್ ಇದೆ. ಬಾಡಿಗೆ ₹ 18 ಸಾವಿರ ಬರುತ್ತದೆ.   ಕಾಂಪ್ಲೆಕ್ಸ್ ಮೇಲೆ ಅಂಗಡಿ ಕಟ್ಟುವ ಯೋಜನೆ ಇದೆ. ನಮ್ಮ ಆದಾಯ ವೃದ್ಧಿ ಮಾಡಿಕೊಳ್ಳುವ ಯೋಜನೆ ತಿಳಿಸಿ.
 
ಉತ್ತರ: ನೀವು ಇಲ್ಲಿವರೆಗೆ ಕೈಗೊಂಡಿರುವ ಎಲ್ಲಾ ಯೋಜನೆಗಳೂ ತುಂಬಾ ಚೆನ್ನಾಗಿವೆ.  ಸಾಲ ಮಾಡಿಯಾದರೂ ಈಗಿರುವ ಕಾಂಪ್ಲೆಕ್ಸ್ ಮೇಲೆ ಆರು ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿರಿ. ಇದರಿಂದ ನಿಮ್ಮ ಬಂಡವಾಳ ವೃದ್ಧಿಯಾಗುವುದರ ಜೊತೆಗೆ, ನಿರಂತರ ಆದಾಯ ಕೂಡಾ ಬರುತ್ತದೆ. ಈ ಯೋಜನೆ ಕೈಗೂಡಿದ ನಂತರ ಮುಂದೆ ಠೇವಣಿ ವಿಚಾರದಲ್ಲಿ ಗಮನಹರಿಸಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT