ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರಿದ ಬಸ್; ಮಹಿಳೆ ಸಜೀವದಹನ

Last Updated 21 ಫೆಬ್ರುವರಿ 2017, 20:13 IST
ಅಕ್ಷರ ಗಾತ್ರ

ಬೆಂಗಳೂರು: ನೆಲಮಂಗಲ ಸಮೀಪದ ಅರಿಶಿಣಕುಂಟೆ ಬಳಿ ಸೋಮವಾರ ರಾತ್ರಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಭಾಗ್ಯಮ್ಮ (56) ಎಂಬುವರು ಸಜೀವದಹನವಾಗಿದ್ದಾರೆ. ಘಟನೆಯಲ್ಲಿ ಐದು ವರ್ಷದ ಬಾಲಕ ಸೇರಿ ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಹಾಸನದ ವೀರಪುರ ಗ್ರಾಮದ ಮಮತಾ ಪಾಲಾಕ್ಷಪ್ಪ (35), ಅವರ ಮಗ ಯಶವಂತ್ (5), ಗಂಡಸಿಯ ದಿನೇಶ್‌ (45) ಹಾಗೂ ಶೃಂಗೇರಿಯ ಪದ್ಮನಾಭಶಾಸ್ತ್ರಿ (37) ಎಂಬುವರು ಗಾಯಗೊಂಡಿದ್ದಾರೆ. ಮಮತಾ ದೇಹ ಶೇ 75ರಷ್ಟು ಸುಟ್ಟು ಹೋಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಪೀಣ್ಯದ ಮಹದೇಶ್ವರ ದೇವಸ್ಥಾನ ರಸ್ತೆ ನಿವಾಸಿಯಾದ ಭಾಗ್ಯಮ್ಮ, ಬೆಳ್ಳೂರು ಕ್ರಾಸ್‌ನಲ್ಲಿ ಬಸ್ ಹತ್ತಿ ನಗರಕ್ಕೆ ಬರುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಚಿಕ್ಕಮಗಳೂರು ಡಿಪೊಗೆ ಸೇರಿದ ಬಸ್, ಶೃಂಗೇರಿಯಿಂದ ಬೆಂಗಳೂರಿಗೆ ಬರುತ್ತಿತ್ತು. ರಾತ್ರಿ 12.10ಕ್ಕೆ ಅರಿಶಿಣಕುಂಟೆ ಬಳಿ ಸಾಗುತ್ತಿದ್ದಾಗ ಬಸ್‌ನ ಮಧ್ಯಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ನಿದ್ರೆಯಲ್ಲಿದ್ದ ಪ್ರಯಾಣಿಕರು, ಬೆಂಕಿ ಧಗೆಗೆ ಎಚ್ಚರಗೊಂಡು ಚೀರಿಕೊಂಡಿದ್ದಾರೆ. ಕೂಡಲೇ ಚಾಲಕ ಉಮೇಶ್ ಗೌಡ ಬಸ್ ನಿಲ್ಲಿಸಿ ರಕ್ಷಣೆಗೆ ಧಾವಿಸಿದ್ದಾರೆ.

‘ಬ್ಯಾಟರಿಯಲ್ಲಾಗಲೀ, ವೈರಿಂಗ್‌ನಲ್ಲಾಗಲೀ ಎಂಜಿನ್ ಭಾಗದಲ್ಲಾಗಲೀ ಯಾವುದೇ ಲೋಪಗಳಾಗಿಲ್ಲ. ಆ ಕಾರಣಗಳಿಂದಲೇ ಬೆಂಕಿ ಹೊತ್ತಿಕೊಂಡಿದ್ದರೆ, ಬಸ್ಸಿನ ಹೆಡ್‌ಲೈಟ್‌ಗಳು ತಕ್ಷಣಕ್ಕೆ ಆಫ್ ಆಗುತ್ತಿದ್ದವು. ಆದರೆ, ನಾವು ಕಾರ್ಯಾಚರಣೆಗೆ ತೆರಳಿದಾಗಲೂ ಅವು ಉರಿಯುತ್ತಿದ್ದವು. ಇಂಧನದ ಟ್ಯಾಂಕ್‌ಗೂ ಹಾನಿಯಾಗಿಲ್ಲ. ಹೀಗಾಗಿ ಪ್ರಯಾಣಿಕರು ಸಾಗಿಸುತ್ತಿದ್ದ ವಸ್ತುಗಳಿಂದಲೇ ಅವಘಡ ನಡೆದಿರುವ ಸಾಧ್ಯತೆ ಇದೆ’ ಎಂದು ಅನುಮಾನ ವ್ಯಕ್ತಪಡಿಸಿದರು.

ಎಲ್ಲ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಲು ಬಸ್ಸಿನ ಬಾಗಿಲಿನತ್ತ ಓಡಲಾರಂಭಿಸಿದ್ದರಿಂದ ನೂಕು ನುಗ್ಗಲು ಉಂಟಾಗಿ ಕೆಲವರು ಕೆಳಗೆ ಬಿದ್ದಿದ್ದಾರೆ. ಈ ಹಂತದಲ್ಲಿ ಭಾಗ್ಯಮ್ಮ ಹಾಗೂ ಮಮತಾ ಅವರ ಸೀರೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಎಲ್ಲ ಪ್ರಯಾಣಿಕರು ಕೆಳಗಿಳಿದರೂ, ಇವರಿಬ್ಬರಿಗೆ ಬಸ್‌ನಿಂದ ಹೊರ ಹೋಗಲು ಸಾಧ್ಯವಾಗಿಲ್ಲ.

ಆಗ ಪುನಃ ಬಸ್ ಹತ್ತಿದ ದಿನೇಶ್, ಮಮತಾ ಅವರನ್ನು ಹೊರಗೆ ತಳ್ಳಿದ್ದಾರೆ. ಆದರೆ, ಭಾಗ್ಯಮ್ಮ ಅವರಿದ್ದ ಸ್ಥಳದಲ್ಲಿ ಬೆಂಕಿ ಹೆಚ್ಚಿದ್ದರಿಂದ ಹತ್ತಿರ ಹೋಗಲು ಸಾಧ್ಯವಾಗಿಲ್ಲ. ಅಗ್ನಿಯ ಕೆನ್ನಾಲಗೆ ತಮ್ಮತ್ತ ವ್ಯಾಪಿಸುತ್ತಿದ್ದಂತೆಯೇ ಮತ್ತೆ ಅವರು ಹೊರಜಿಗಿದಿದ್ದಾರೆ.

ತಾಂತ್ರಿಕ ದೋಷವಿಲ್ಲ: ‘ರಾತ್ರಿ 12.20ಕ್ಕೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಬಂತು. ದೂರು ಬಂದ ಐದೇ ನಿಮಿಷದಲ್ಲಿ ಒಂದು ವಾಹನದಲ್ಲಿ ಸ್ಥಳಕ್ಕೆ ತೆರಳಿದೆವು. ಭಾಗ್ಯಮ್ಮ ಅವರ ದೇಹ ಇನ್ನೂ ಉರಿಯುತ್ತಲೇ ಇತ್ತು. ನೀರು ಹಾಯಿಸಿ ಮೊದಲು ಅವರನ್ನು ಹೊರತಂದೆವು. 25 ನಿಮಿಷ ಕಾರ್ಯಾಚರಣೆ ನಡೆಸಿ ಸಂಪೂರ್ಣವಾಗಿ ಬೆಂಕಿ ನಂದಿಸಿದೆವು’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸಿದ್ದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬ್ಯಾಟರಿಯಲ್ಲಾಗಲೀ,  ವೈರಿಂಗ್‌ನಲ್ಲಾಗಲೀ ಎಂಜಿನ್ ಭಾಗದಲ್ಲಾಗಲೀ ಯಾವುದೇ ಲೋಪಗಳಾಗಿಲ್ಲ. ಆ ಕಾರಣಗಳಿಂದಲೇ ಬೆಂಕಿ ಹೊತ್ತಿಕೊಂಡಿದ್ದರೆ, ಬಸ್ಸಿನ ಹೆಡ್‌ಲೈಟ್‌ಗಳು ತಕ್ಷಣಕ್ಕೆ ಆಫ್ ಆಗುತ್ತಿದ್ದವು. ಆದರೆ, ನಾವು ಕಾರ್ಯಾಚರಣೆಗೆ ತೆರಳಿದಾಗಲೂ ಅವು ಉರಿಯುತ್ತಿದ್ದವು. ಇಂಧನದ ಟ್ಯಾಂಕ್‌ಗೂ ಹಾನಿಯಾಗಿಲ್ಲ. ಟೈರ್‌ಗಳೂ ಸ್ಫೋಟಗೊಂಡಿಲ್ಲ. ಇದನ್ನು ಗಮನಿಸಿದರೆ, ಪ್ರಯಾಣಿಕರು ಸಾಗಿಸುತ್ತಿದ್ದ ವಸ್ತುಗಳಿಂದಲೇ ಅವಘಡ ಸಂಭವಿಸಿರುವ ಸಾಧ್ಯತೆ ಇದೆ’ ಎಂದು ಅನುಮಾನ ವ್ಯಕ್ತಪಡಿಸಿದರು.

‘ಕಾರ್ಯಾಚರಣೆಯ ವಿವರ ಹಾಗೂ ದುರಂತಕ್ಕೆ ಕಾರಣ ಏನಿರಬಹುದು ಎಂಬ ಬಗ್ಗೆ ನಾವು ಪೊಲೀಸರಿಗೆ ವರದಿ ಕೊಡುತ್ತೇವೆ. ಅದನ್ನು ಆಧರಿಸಿ ಅವರು ತನಿಖೆ ಮುಂದುವರಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಟಾರಿಯಾ, ಭದ್ರತೆ ಹಾಗೂ ವಿಚಕ್ಷಣ ದಳದ ನಿರ್ದೇಶಕ ಬಿಎನ್‌ಎಸ್ ರೆಡ್ಡಿ ಸೇರಿದಂತೆ ಸಂಸ್ಥೆಯ ಹಿರಿಯ ಅಧಿಕಾರಿ ಗಳು ಸ್ಥಳ ಪರಿಶೀಲನೆ ನಡೆಸಿದರು.

ಸಾವಿನ ಮನೆಗೆ ಹೋಗಿದ್ದರು: ಚಾಮರಾಜನಗರದಲ್ಲಿ ಸೋಮವಾರ ತಮ್ಮ ಸಂಬಂಧಿಯೊಬ್ಬರು ಮೃತಪಟ್ಟಿದ್ದರಿಂದ ಭಾಗ್ಯಮ್ಮ ಅಲ್ಲಿಗೆ ಹೋಗಿದ್ದರು. ಅಂತ್ಯಕ್ರಿಯೆ ಮುಗಿಸಿ ಚಾಮರಾಜನಗರದಿಂದ ಪರಿಚಿತರ ಕಾರಿನಲ್ಲಿ  ಬೆಳ್ಳೂರು ಕ್ರಾಸ್‌ವರೆಗೆ ಬಂದ ಅವರು, ಅಲ್ಲಿಂದ ರಾತ್ರಿ 10.15ಕ್ಕೆ ಈ ಬಸ್ ಹತ್ತಿ ನಗರಕ್ಕೆ ಮರಳುತ್ತಿದ್ದರು.

ಇತ್ತ ತಾಯಿ 12.30ಕ್ಕೆ ಪೀಣ್ಯ 8ನೇ ಮೈಲಿ ಬಳಿ ಬಸ್ ಇಳಿಯಬಹುದೆಂದು ಭಾಗ್ಯಮ್ಮ ಅವರ ಮಗ ಕಾಯುತ್ತ ನಿಂತಿದ್ದ. 1 ಗಂಟೆಯಾದರೂ  ಬಾರದಿದ್ದಾಗ ಅನುಮಾನಗೊಂಡ ಆತ,  ಅವರ ಮೊಬೈಲ್‌ಗೆ ಫೋನ್ ಮಾಡಿದ್ದ. ಅದೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಕೊನೆಗೆ ಅದೇ ಬಸ್‌ನಲ್ಲಿದ್ದ ಸಂಬಂಧಿ ಚಂದ್ರಮ್ಮ ಎಂಬುವರು ಆತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.  ಕೂಡಲೇ ಬೈಕ್‌ ತೆಗೆದುಕೊಂಡು ಸ್ಥಳಕ್ಕೆ ತೆರಳಿದ್ದ. ಅಷ್ಟರಲ್ಲಾಗಲೇ ತಾಯಿಯ ದೇಹ ಬೆಂದು ಹೋಗಿತ್ತು ಎಂದು ಅಧಿಕಾರಿಗಳು ವಿವರಿಸಿದರು.

ತವರಿನಿಂದ ಬರುತ್ತಿದ್ದರು: ಪತಿ–ಮಗನ ಜತೆ ಕೆಂಗೇರಿಯಲ್ಲಿ ನೆಲೆಸಿರುವ ಮಮತಾ, ಎರಡು ದಿನಗಳ ಹಿಂದೆ ಮಗನ ಜತೆ ಹಾಸನದ ತಾಯಿ ಮನೆಗೆ ಹೋಗಿದ್ದರು. ಸದ್ಯ ತಾಯಿ–ಮಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಫ್‌ಎಸ್‌ಎಲ್‌ ವಶಕ್ಕೆ ಪೂಜಾ ಸಾಮಗ್ರಿ! ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾಗಿಸುತ್ತಿದ್ದ ತೆಂಗಿನ ಕಾಯಿಯ ಚೀಲ, ಉಂಡೆಗಳು, ಪೂಜಾ ಸಾಮಾಗ್ರಿಗಳು, ಬೇಳೆ ಕಾಳುಗಳ ಚೀಲಗಳು ಸುಟ್ಟು ಕರಕಲಾಗಿವೆ. ಆ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್ಎಲ್) ತಜ್ಞರು ಸಂಗ್ರಹಿಸಿ ಕೊಂಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಬಿಎನ್‌ಎಸ್ ರೆಡ್ಡಿ, ‘2012ರ ಡಿಸೆಂಬರ್‌ನಲ್ಲಿ ಈ ಬಸ್ ಖರೀದಿಸಲಾಗಿತ್ತು. ಈವರೆಗೆ ಏಳು ಲಕ್ಷ ಕಿ.ಮೀ ಸಂಚಾರ ನಡೆಸಿದೆ. ಬಸ್‌ನ ಸಾಮರ್ಥ್ಯದ ಬಗ್ಗೆ ಕಾಲ ಕಾಲಕ್ಕೆ ತಪಾಸಣೆ ಮಾಡಿಸಲಾಗಿದೆ. ಹೀಗಾಗಿ, ಬಸ್‌ನಲ್ಲಿ ಯಾವುದೇ ದೋಷವಿರಲಿಲ್ಲ. ಎಫ್‌ಎಸ್‌ಎಲ್ ತಜ್ಞರು ಕೊಡುವ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

ಸತ್ತ ವಿಷಯ ಆ ಮೇಲೆ ತಿಳಿಯಿತು
‘ನಾನು ಶಿವಮೊಗ್ಗದಿಂದ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದೆ. ಮುಂದೆ ಸಾಗುತ್ತಿದ್ದ ಬಸ್‌ನಿಂದ ದಟ್ಟ ಹೊಗೆ ಹೊರಬರುತ್ತಿತ್ತು. ನೋಡ ನೋಡುತ್ತಲೆ ಬೆಂಕಿ ಹೊತ್ತಿಕೊಂಡಿತು. ಚಾಲಕ ಬಸ್ ನಿಲ್ಲಿಸುತ್ತಿದ್ದಂತೆಯೇ, ನಾನು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ (101) ಕರೆ ಮಾಡಿ ಬಳಿಕ ಪ್ರಯಾಣಿಕರ ರಕ್ಷಣೆಗೆ ಧಾವಿಸಿದೆ. ಎಲ್ಲರೂ ಸುರಕ್ಷಿತವಾಗಿ ಹೊರ ಬಂದರೆಂದು, ತುರ್ತು ಕೆಲಸವಿದ್ದ ಕಾರಣ ಅಲ್ಲಿಂದ ಹೊರಟು ಹೋದೆ. ಆದರೆ, ಒಬ್ಬ ಮಹಿಳೆ ಮೃತಪಟ್ಟ ಸಂಗತಿ ಆಮೇಲೆ ತಿಳಿಯಿತು’ ಎಂದು ಟ್ಯಾಕ್ಸಿ ಚಾಲಕರಾಗಿರುವ ಮಂಜುನಾಥ್ ಗೌಡ ಬೇಸರ ವ್ಯಕ್ತಪಡಿಸಿದರು.

₹ 5 ಲಕ್ಷ ಪರಿಹಾರ
‘ಮೃತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ ಸರ್ಕಾರದ ವತಿಯಿಂದಲೇ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಬಸ್‌ನಲ್ಲಿ ನಿಷೇಧಿತ ವಸ್ತುಗಳನ್ನು ಸಾಗಿಸುತ್ತಿದ್ದುದು ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು  ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT