ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿಪರರಿಗೆ ನಿರ್ಬಂಧ ಬೇಡ:ಮೋದಿ

Last Updated 21 ಫೆಬ್ರುವರಿ 2017, 19:50 IST
ಅಕ್ಷರ ಗಾತ್ರ

ನವದೆಹಲಿ: ‘ಆರ್ಥಿಕ ವಿಚಾರಗಳಲ್ಲಿ ರಕ್ಷಣಾತ್ಮಕ ನೀತಿಗಳನ್ನು ಕೈಬಿಡಬೇಕು, ಭಾರತದ ವೃತ್ತಿಪರರು ಅಮೆರಿಕ ಪ್ರವೇಶಿಸಲು ನಿರ್ಬಂಧ ವಿಧಿಸಬಾರದು’ ಎಂಬ ಸ್ಪಷ್ಟ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ರವಾನಿಸಿದ್ದಾರೆ.

‘ಭಾರತದ ವೃತ್ತಿಪರರು ಅಮೆರಿಕದ ಅರ್ಥ ವ್ಯವಸ್ಥೆ ಹಾಗೂ ಸಮಾಜವನ್ನು ಶ್ರೀಮಂತಗೊಳಿಸಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವೃತ್ತಿಪರರಿಗೆ ಪ್ರವೇಶ ನೀಡುವ ವಿಚಾರದಲ್ಲಿ ಅಮೆರಿಕವು ಸಮತೋಲನದ, ದೂರದೃಷ್ಟಿಯ ನಿಲುವನ್ನು ಬೆಳೆಸಿಕೊಳ್ಳಬೇಕು’ ಎಂದು ಭಾರತಕ್ಕೆ ಭೇಟಿ ನೀಡಿರುವ ಅಮೆರಿಕದ ಕಾಂಗ್ರೆಸ್ಸಿನ (ಸಂಸತ್‌) ನಿಯೋಗಕ್ಕೆ ಪ್ರಧಾನಿ ಹೇಳಿದ್ದಾರೆ.

ಎಚ್1–ಬಿ ವೀಸಾ ನೀಡುವುದಕ್ಕೆ ನಿರ್ಬಂಧ ವಿಧಿಸಲು ಟ್ರಂಪ್‌ ಆಡಳಿತ ಮುಂದಾಗಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ಈ ಹೇಳಿಕೆ ನೀಡಿದ್ದಾರೆ. ಟ್ರಂಪ್‌ ಆಡಳಿತವು ಎಚ್‌–1ಬಿ ವೀಸಾ ನೀಡುವುದರ ಮೇಲೆ ನಿರ್ಬಂಧ ವಿಧಿಸಿದರೆ, ಭಾರತದ ಐ.ಟಿ. ವೃತ್ತಿಪರರಿಗೆ ತೊಂದರೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಉದ್ಯೋಗಿಗಳಿಗೆ ಸಂಬಂಧಿಸಿದ ವೀಸಾಗಳ ನಿಯಮ ಬದಲಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಅಮೆರಿಕದ ಜನಪ್ರತಿನಿಧಿಗಳ ಸಭೆಯಲ್ಲಿ ಮಂಡಿಸಿದ ನಂತರ ಭಾರತದ ಐ.ಟಿ. ಕಂಪೆನಿಗಳ ಷೇರು ಮೌಲ್ಯದಲ್ಲಿ ಭಾರಿ ಕುಸಿತ ಉಂಟಾಗಿತ್ತು. ಅಮೆರಿಕ ಹಾಗೂ ಭಾರತದ ನಡುವೆ ಜನಸಂಪರ್ಕ ಹೆಚ್ಚಿಸಲು ಎರಡೂ ದೇಶಗಳು ಇನ್ನಷ್ಟು ಕೆಲಸ ಮಾಡಬೇಕು. ಇದರಿಂದ ಎರಡೂ ದೇಶಗಳಿಗೆ ಲಾಭವಿದೆ ಎಂದು ಪ್ರಧಾನಿ ನಿಯೋಗಕ್ಕೆ ತಿಳಿಸಿದ್ದಾರೆ.

ಅಮೆರಿಕದ ನೂತನ ಸರ್ಕಾರ ಹಾಗೂ ಭಾರತದ ನಡುವೆ ಉತ್ತಮ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿವೆ ಎಂಬ ಶುಭಶಕುನವನ್ನು ನಿಯೋಗ ತಂದಿದೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷ ಟ್ರಂಪ್‌ ಜೊತೆ ತಾವು ನಡೆಸಿದ ದೂರವಾಣಿ ಸಂಭಾಷಣೆಯು ಉತ್ತಮವಾಗಿತ್ತು ಎಂದು ಮೋದಿ ಅವರು ನೆನಪಿಸಿಕೊಂಡರು. ಅಲ್ಲದೆ, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಗಟ್ಟಿಗೊಂಡಿರುವ ಭಾರತ–ಅಮೆರಿಕ ನಡುವಣ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಬದ್ಧವಿರುವುದಾಗಿ ಅವರು ಹೇಳಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಎಚ್–1ಬಿ, ಎಲ್‌–1 ವೀಸಾ ಎಂದರೆ...
ಆರಂಭದಲ್ಲಿ ಮೂರು ವರ್ಷಗಳ ಅವಧಿಗೆ ಎಚ್‌–1ಬಿ ವೀಸಾ ನೀಡಲಾಗುತ್ತದೆ. ನಂತರ ಆರು ವರ್ಷಗಳ ಅವಧಿಗೆ ಇದನ್ನು ವಿಸ್ತರಿಸಲೂ ಅವಕಾಶ ಇದೆ. ಎಚ್‌–1ಬಿ ವೀಸಾ ಹೊಂದಿರುವ ವಿದೇಶಿ ವೃತ್ತಿಪರರನ್ನು ವಿಶೇಷ ಕೌಶಲ ಬೇಡುವ ಉದ್ಯೋಗಗಳಿಗೆ ಅಮೆರಿಕದ ಕಂಪೆನಿಗಳು ತಾತ್ಕಾಲಿಕ ಅವಧಿಗೆ ನೇಮಕ ಮಾಡಿಕೊಳ್ಳಬಹುದು. ಪದವೀಧರ ಅಲ್ಲದಿದ್ದರೆ ಈ ವೀಸಾ ಪಡೆಯಲು ಸಾಧ್ಯವಿಲ್ಲ.

ಎಲ್‌–1: ಅಂತರರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ನೀಡುವ ವೀಸಾ ಇದು.

ಕಂಪೆನಿಯ ಬೇರೊಂದು ದೇಶದ ಕಚೇರಿಯಲ್ಲಿ ಕನಿಷ್ಠ ಒಂದು ವರ್ಷ ಕೆಲಸ ಮಾಡಿದವರಿಗೆ, ಅದೇ ಕಂಪೆನಿಯ ಅಮೆರಿಕದ ಕಚೇರಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ಇದು ಕಲ್ಪಿಸುತ್ತದೆ. ಭಾರತೀಯರು ಈ ವೀಸಾವನ್ನು ಐದು ವರ್ಷಗಳ ಅವಧಿಗೆ ಪಡೆಯಬಹುದು. ಅವಶ್ಯವೆನಿಸಿದರೆ, ಇನ್ನೆರಡು ವರ್ಷಕ್ಕೆ ವಿಸ್ತರಿಸಿಕೊಳ್ಳಬಹುದು.

65 ಸಾವಿರ: ಅಮೆರಿಕ ಪ್ರತಿ ವರ್ಷ ನೀಡುತ್ತಿರುವ ಎಚ್‌–1ಬಿ ವೀಸಾ ಸಂಖ್ಯೆ

ಮುಖ್ಯಾಂಶಗಳು
* ಅಮೆರಿಕದ ಅಭಿವೃದ್ಧಿಗೆ ಭಾರತದ ಕೊಡುಗೆ ಬಗ್ಗೆ ಮೋದಿ ವಿವರಣೆ
* ಜನಸಂಪರ್ಕ ಹೆಚ್ಚಳದಿಂದ ಭಾರತ–ಅಮೆರಿಕಕ್ಕೆ ಲಾಭ: ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT