ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರರ್‌ ಸಿನಿಮಾ ಅಂದ್ರೆ ನನಗಿಷ್ಟ

Last Updated 22 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಸದಾ ಮಂದಹಾಸದೊಂದಿಗೆ ಪಟಪಟನೆ ಮಾತನಾಡುವ ನಟಿ ಶ್ರದ್ಧಾ ಶ್ರೀನಾಥ್ ಮೈಸೂರು ಮೂಲದವರಾದರೂ ಹುಟ್ಟಿ ಬೆಳೆದಿದ್ದೆಲ್ಲವೂ ಉತ್ತರ ಭಾರತದಲ್ಲಿ. ತಂದೆ ಸೈನ್ಯದಲ್ಲಿದ್ದ ಕಾರಣ ಬೇರೆ ಬೇರೆ ಊರುಗಳಲ್ಲಿ ನೆಲೆಸುವುದು ಅನಿವಾರ್ಯವಾಗಿತ್ತು. 
 
ಕನ್ನಡದ ‘ಯು ಟರ್ನ್‌’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿರಿಸಿದ ಈ ಮೂಗುತಿ ಸುಂದರಿ, ‘ಉರ್ವಿ’, ‘ಆಪರೇಶನ್ ಅಲಮೇಲಮ್ಮ’ ಚಿತ್ರಗಳಲ್ಲಿ ನಟಿಸುವ ಮೂಲಕ ಭರವಸೆಯ ನಟಿ ಎನಿಸಿಕೊಂಡಿದ್ದಾರೆ. ಮಲಯಾಳಂನ ‘ಕೊಹಿನೂರ್’ ಚಿತ್ರದ ಮೂಲಕ ನಟನೆ ಆರಂಭಿಸಿದ ಶ್ರದ್ಧಾ, ತಮ್ಮ ಸಿನಿಮಾ ಪಯಣದ ಹಾದಿಯನ್ನು ಹಂಚಿಕೊಂಡಿದ್ದಾರೆ. 
 
-‘ಯು ಟರ್ನ್‌’ ಸಿನಿಮಾದಂತೆ ಪತ್ತೇದಾರಿ ಕೆಲಸಗಳನ್ನು ಮಾಡಿದ್ದೀರಾ?
ಹುಂ... ಇಲ್ಲ. ನಾನು ಆ ತರಹದ ಪತ್ತೇದಾರಿ ಕೆಲಸವನ್ನು ಇನ್ನೂ ಮಾಡಿಲ್ಲ. ಅದು ಸಾಧ್ಯವಾಗಿರುವುದು ಸಿನಿಮಾದಲ್ಲಿ ಮಾತ್ರ. 
 
-‘ತಂದೆ ಸೈನ್ಯದಲ್ಲಿದ್ರೂ ನಿಮಗೆ ಸಿನಿಮಾ ನಂಟು ಬೆಸೆದದ್ದು ಹೇಗೆ?
ನನಗೆ ಹತ್ತು ವರ್ಷವಿದ್ದಾಗಿನಿಂದ ನಟನೆಯ ಮೇಲೆ ಆಸಕ್ತಿ ಇತ್ತು. ಅದಕ್ಕೆ ಪ್ರೇರಣೆಯಾಗಿ ನಾನು ಶಾಲಾದಿನಗಳಿಂದಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ. ಕಾಲೇಜಿನಲ್ಲಿ ಓದುತ್ತಿದ್ದಾಗ ರಂಗಭೂಮಿಯತ್ತ ಮನಸ್ಸು ಸೆಳೆಯಿತು. ಬೆಂಗಳೂರಿನ ಜ್ಯೋತಿ ನಿವಾಸ ಕಾಲೇಜಿನಲ್ಲಿದ್ದಾಗ ‘ಎಂಬ್ರಾಲಿಯೋ’ ಎಂಬ ಇಂಗ್ಲಿಷ್‌ನ ರಂಗತಂಡಕ್ಕೆ ಸೇರಿದೆ. ಹೀಗೆ ಆರಂಭವಾದ ನನ್ನ ನಟನಾ ಪಯಣ ಇಂದು ಸಿನಿಮಾ ಕ್ಷೇತ್ರದವರೆಗೆ ಮುಂದುವರಿದಿದೆ.

-ಇಂದು ರಂಗಭೂಮಿಯಿಂದ ಸಿನಿಮಾ ಕಡೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆಯಲ್ಲವೇ?
ಹೌದು. ರಂಗಭೂಮಿ ಹಿನ್ನೆಲೆಯಿಂದ ಬಂದ ಅನೇಕ ನಟ, ನಟಿಯರು ಇದ್ದಾರೆ. ಸಿನಿಮಾ ಅಂದ್ರೆ ಬರೀ ನಟನೆ ಅಲ್ಲ. ಅನೇಕ ಅಂಶಗಳು ಸೇರಿ ಒಂದು ಚಿತ್ರ ಎನ್ನಿಸಿಕೊಳ್ಳುತ್ತದೆ. ಸಿನಿಮಾ ಮೇಲೆ ಆಸಕ್ತಿ ಹೊಂದಿರುವವರು ಮಾಡೆಲಿಂಗ್‌ ಆಯ್ಕೆ ಮಾಡಿಕೊಳ್ಳುವವರೂ ಇದ್ದಾರೆ. ಆದರೆ ರಂಗಭೂಮಿಯಿಂದ ಬಂದವರಲ್ಲಿ ನಟನೆಯ ಮೇಲೆ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಎಲ್ಲವೂ ಅವರವರ ಆಯ್ಕೆ. ಯು ಟರ್ನ್‌ ಸಿನಿಮಾ ನೋಡಿದ ಅನೇಕರು ಇದು ನಿಮ್ಮ ಮೊದಲ ಸಿನಿಮಾ ಅನ್ನಿಸುವುದಿಲ್ಲ ಎಂದಿದ್ದರು. ಆ ಕೀರ್ತಿ ಏನಿದ್ದರೂ ರಂಗಭೂಮಿಗೇ ಸಲ್ಲಬೇಕು.

-ಸಿನಿಮಾದ ಪಾತ್ರದಂತೆ ಪತ್ರಕರ್ತೆಯಾಗೋ ಆಸೆ ಇತ್ತಾ?
ಹಹ್ಹಹ್ಹ...ನಂಗೆ ಪತ್ರಕರ್ತೆಯಾಗೋ ಆಸೆ ಇರಲಿಲ್ಲ. ಆದರೆ ಲಾ ಕಾಲೇಜು ಸೇರಿದಾಗ ಭಾರತದಲ್ಲಿನ ವ್ಯವಸ್ಥೆಯನ್ನು ಬದಲಾಯಿಸಬೇಕು, ಅದಕ್ಕೆ ನಾನು ಲಾಯರ್ ಆಗಬೇಕು ಎಂದುಕೊಂಡಿದ್ದೆ. ಆದರೆ ಅದು ಸಾಧ್ಯವಿಲ್ಲ ಎಂದು ದಿನಕಳೆದಂತೆ ಅರ್ಥವಾಗಿತ್ತು. ಆಮೇಲೆ ಸಿನಿಮಾದತ್ತ ಮನಸ್ಸು ಹೊರಳಿಸಿದೆ. ಈ ನನ್ನ ಸಂಪೂರ್ಣ ಸಮಯವನ್ನು ಸಿನಿಮಾಗಾಗಿಯೇ ಮೀಸಲಿರಿಸಿದ್ದೇನೆ.

-ಎಷ್ಟು ನಾಟಕಗಳಲ್ಲಿ ನಟಿಸಿದ್ದೀರಿ? ಅದರಲ್ಲಿ ನಿಮಗೆ ಇಷ್ಟವಾದ ಪಾತ್ರ?
ನಾನು 2012ರಿಂದ 2015ರವರೆಗೆ ರಂಗಭೂಮಿಯಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೆ. ಸುಮಾರು 16 ನಾಟಕಗಳಲ್ಲಿ ನಟಿಸಿದ್ದೇನೆ. ರಂಗಭೂಮಿ ಎನ್ನುವುದು ಒಂದೇ ಪಾತ್ರಕ್ಕೆ ಸೀಮಿತವಾಗಿರುವುದಿಲ್ಲ. ಅಲ್ಲಿ ವಯಸ್ಸಿನ ಮಿತಿಯೂ ಇಲ್ಲ. ನಾನು ಕೆಲಸದವಳು, ವೇಶ್ಯೆ  ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿದ್ದೇನೆ. ನಾನು ನಟಿಸಿದ ಎಲ್ಲಾ ಪಾತ್ರಗಳು ನನಗೆ ಇಷ್ಟವಾಗಿದ್ದವು. ಆದರೆ ಅವುಗಳಲ್ಲಿ ತುಂಬಾ ಇಷ್ಟವಾದ ಪಾತ್ರ ಎಂದರೆ ಬ್ರೆಜಿಲ್ ಹುಡುಗಿಯ ಪಾತ್ರ. ಬ್ರೆಜಿಲ್ ಭಾಷೆ (ಉಚ್ಚಾರಣೆ) ಯಲ್ಲಿ ಮಾತನಾಡುವುದು, ಆ ಪಾತ್ರದಲ್ಲಿ ನಟಿಸುವುದು ನನಗೆ ಚಾಲೆಂಜಿಂಗ್ ಆಗಿತ್ತು.  

-ನೀವು ಬ್ಯೂಟಿಪಾರ್ಲರ್ ಕಡೆ ಮುಖ ತೋರ್ಸೋದು ಕಮ್ಮಿ ಅಂತೆ?
ನಾನು ಬ್ಯೂಟಿಪಾರ್ಲರ್‌ಗೆ ಹೋಗೋದೇ ಇಲ್ಲ ಅಂತೇನೂ ಇಲ್ಲ. ನನ್ನ ಚರ್ಮ ಸುಂದರವಾಗಿದೆ. ಅದು ನನಗೆ ಹುಟ್ಟಿನಿಂದ ಬಂದ ಬಳುವಳಿ. ಹಾಗಾಗಿ ಬ್ಯೂಟಿಪಾರ್ಲರ್ ಅಗತ್ಯ ಇಲ್ಲ. 

-ನಿಮ್ಮ ಮುಂದಿನ ಸಿನಿಮಾ ‘ಉರ್ವಿ’ ಬಗ್ಗೆ?
ಉರ್ವಿ ಮಹಿಳಾ ಪ್ರಧಾನ ಚಿತ್ರ. ಅದು ಮೂರು ಹುಡುಗಿಯರ ಕತೆ. ಯಾವುದೋ ಸನ್ನಿವೇಶದಲ್ಲಿ ಅನ್ಯಾಯಕ್ಕೊಳಗಾಗಿ ವ್ಯವಸ್ಥೆಯ ವಿರುದ್ಧ ಹೋರಾಡುವವರ ಕತೆ.  ಚಿತ್ರದಲ್ಲಿ ತುಂಬಾ ಪಾತ್ರಗಳಿವೆ. ಚಿತ್ರ ಎಲ್ಲೂ ಬೋರ್ ಹೊಡೆಸೊಲ್ಲ.

-ನೀವು ಮಹಿಳಾವಾದಿಯೇ, ನಿಮ್ಮ ಪ್ರಕಾರ ಮಹಿಳಾವಾದ ಎಂದರೆ?
ನಾನು ಮಹಿಳಾವಾದಿ ಹೌದು. ಮಹಿಳಾವಾದ ಎಂದರೆ ನನ್ನ ಅರ್ಥದಲ್ಲಿ ಪುರುಷ, ಮಹಿಳೆ ಇಬ್ಬರು ಸಮಾನರು ಎಂದು ಸಾರುವುದು ಹಾಗೂ ಸಮಾನತೆಯನ್ನು ಎತ್ತಿ ಹಿಡಿಯುವುದು.

-2017ರ ನಿಮ್ಮ ರೆಸೊಲ್ಯೂಷನ್‌ ತುಂಬಾ ದೊಡ್ಡದಿದೆಯಂತೆ?
ನಾನು ಈ ವರ್ಷ ತುಂಬಾ ಸುತ್ತಾಡಬೇಕು ಎಂದುಕೊಂಡಿದ್ದೇನೆ. ಹೊಸ ಹೊಸ ಜಾಗಗಳನ್ನು ನೋಡಬೇಕು ಎಂಬುದು ನನ್ನ ಆಸೆ. ಪ್ರವಾಸಕ್ಕೆ ಹೋಗುವುದಕ್ಕೆ ನಾನು ಗಡಿ ಹಾಕಿಕೊಳ್ಳುವುದಿಲ್ಲ. ಸಮಯ ಸಿಕ್ಕರೆ ವಿದೇಶ ಪ್ರವಾಸಕ್ಕೂ ಹೋಗುತ್ತೇನೆ.

-ಟೀಚರ್‌ ಎಂದು ಕರೆಸಿಕೊಳ್ಳೋದು ಹೇಗನ್ನಿಸುತ್ತಿದೆ?
‘ಆಪರೇಶನ್ ಅಲಮೇಲಮ್ಮ’ ಚಿತ್ರದಲ್ಲಿ ನನ್ನದು ಮಧ್ಯಮ ವರ್ಗದ ಟೀಚರ್ ಪಾತ್ರ. ತಂದೆ ಇಲ್ಲದ, ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತ ಅನನ್ಯಾ ಎಂಬ ಹುಡುಗಿಯ ಪಾತ್ರ ಮಾಡಿದ್ದೇನೆ. ತನಗಿರುವ ಎಲ್ಲ ಆಸೆಯನ್ನು ಬಚ್ಚಿಟ್ಟುಕೊಂಡು ಬದುಕುತ್ತಿರುವ ಹುಡುಗಿ, ಪ್ರೇಮಿ ಸಿಕ್ಕ ಮೇಲೆ ಹೇಗೆ ಬದಲಾಗುತ್ತಾಳೆ ಎಂಬ ಕತೆ.

-‘ಯು ಟರ್ನ್‌’ ಸಿನಿಮಾದಲ್ಲಿ ನೀವು ಧರಿಸಿದ್ದ ಮೂಗುತಿ ಮಹಿಳಾ ಮಣಿಯರನ್ನು ಹೆಚ್ಚು ಆಕರ್ಷಿಸಿತ್ತಲ್ಲಾ?
ಹೌದು... ನಂಗೆ ಆ ಬಗ್ಗೆ ತುಂಬಾ ಖುಷಿಯಿದೆ. ಪ್ರತಿಯೊಬ್ಬ ನಟ ಅಥವಾ ನಟಿ ತನಗೊಂದು ಐಡೆಂಟಿಟಿ ಇರಬೇಕು ಅಂತ ಬಯಸ್ತಾರೆ. ನನಗೆ ಆ ಐಡೆಂಟಿಟಿ ಮೂಗುತಿಯಿಂದ ದೊರಕಿದೆ. ಶ್ರದ್ಧಾ ಅಂದಾಗ ಮೂಗುತಿಯನ್ನು ನೆನಪು ಮಾಡ್ಕೋತಾರೆ. ಆದರೆ ನಾನು ಅದೇ ಟ್ರೆಂಡ್‌ನ ಮುಂದುವರಿಸೊಲ್ಲ. ಬೇರೆ ಬೇರೆ ಸ್ಟೈಲ್‌ ಅನುಕರಣೆ ಮಾಡ್ತೀನಿ.

-ಸಿನಿಮಾ ಶೂಟಿಂಗ್‌ನಲ್ಲಿ ಭಯಪಡಿಸಿದ್ದ ಘಟನೆ?
‘ಆಪರೇಶನ್ ಅಲಮೇಲಮ್ಮ’ ಚಿತ್ರದ ಶೂಟಿಂಗ್‌ ಅವಲಬೆಟ್ಟದಲ್ಲಿ ನಡೀತಾ ಇತ್ತು, ಆ ಬೆಟ್ಟದ ಕೊನೆಯಲ್ಲಿ ಒಂದು ಬಂಡೆ ಇತ್ತು. ಬಂಡೆ ಮೇಲೆ ನಾನು ನಡೆಯಬೇಕಿತ್ತು. ಸುತ್ತಲೂ ಜೋರಾಗಿ ಗಾಳಿ ಬೀಸುತ್ತಿತ್ತು. ಕೆಳಗಡೆ ದೊಡ್ಡ ಪ್ರಪಾತ.  ಕ್ಯಾಮೆರಾ ಆನ್‌ ಆಗೋ ಮೊದಲು ರಿಹರ್ಸಲ್‌ ಮಾಡಿದ್ದೆ. ಆದ್ರೆ ಕ್ಯಾಮೆರಾ ಆನ್ ಆದ ಕೂಡ್ಲೆ ನಂಗೆ ತುಂಬಾ ಭಯ ಆಗಿತ್ತು. ಕೊನೆಗೂ ಭಯದಲ್ಲೇ ಶೂಟಿಂಗ್ ಮುಗಿಸಿದ್ದೆ.

-ಸಿನಿಮಾ, ರಂಗಭೂಮಿ ಹೊರತುಪಡಿಸಿ ಶ್ರದ್ಧಾ ಹೇಗೆ?
ಕಾಲೇಜಿನಲ್ಲಿದ್ದಾಗ ರಂಗಭೂಮಿ ಚಟುವಟಿಕೆ ಹೊರತುಪಡಿಸಿದರೆ, ನಾನು ಸ್ನೇಹಿತರೊಂದಿಗೆ ಹೆಚ್ಚು ಹೊರಗಡೆ ಹೋಗುತ್ತಿದ್ದೆ. ಆದರೆ ಈಗ ನನಗೆ ಅಷ್ಟೊಂದು ಸಮಯ ಸಿಗುತ್ತಿಲ್ಲ. ಈಗ ಸಮಯ ಸಿಕ್ಕರೆ ನಾನು ಮನೆಯಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತೇನೆ. ಜೊತೆಗೆ ಸಿನಿಮಾ ನೋಡುವುದು ನನ್ನ ನೆಚ್ಚಿನ ಹವ್ಯಾಸ.  ಸಮಯ ಸಿಕ್ಕಾಗ ಸಾಕಷ್ಟು ಸಿನಿಮಾಗಳನ್ನು ನೋಡುತ್ತೇನೆ.

-ನೀವು ಹೆಚ್ಚಾಗಿ ಪತ್ತೇದಾರಿ ಹಾಗೂ ಹಾರರ್ ಸಿನಿಮಾಗಳಲ್ಲಿ ನಟಿಸುತ್ತೀರಿ. ನೈಜ ವ್ಯಕ್ತಿತ್ವಕ್ಕೂ ಸಿನಿಮಾ ಪಾತ್ರಕ್ಕೂ ಸಾಮ್ಯತೆ ಇದೆಯಾ?
ಇಲ್ಲಪ್ಪಾ...ನಿಜ ಜೀವನದಲ್ಲಿ ನಂಗೆ ಭಯ ಜಾಸ್ತಿ. ಆದರೆ ನಾನು ಹಾರರ್‌ ಚಿತ್ರಗಳನ್ನು ಜಾಸ್ತಿ ನೋಡ್ತೀನಿ. ಸಮಸ್ಯೆ ಅಂದ್ರೆ, ಸಿನಿಮಾ ನೋಡಿ ಮನೆಗೆ ಬಂದ ಮೇಲೆ ರಾತ್ರಿಯೆಲ್ಲಾ ಕೆಟ್ಟ ಕನಸು ಬಿದ್ದು ಬೆಚ್ಚಿಬೀಳ್ತೀನಿ. ರೂಮಲ್ಲಿ ಲೈಟ್ ಆನ್‌ ಇಟ್ಕೊಂಡೇ ಮಲಗ್ತೀನಿ. ಆದರೆ ನಾನು ಮಾನಸಿಕವಾಗಿ ಗಟ್ಟಿತನ ಇರುವ ಹುಡುಗಿ. 

 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT