ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

371 ಜೆ ಸೌಲಭ್ಯಕ್ಕಾಗಿ ಸಾರ್ವಜನಿಕರ ಆಗ್ರಹ

ಬಳ್ಳಾರಿಯಿಂದ ಬೇರ್ಪಟ್ಟ ತಪ್ಪಿಗೆ ಹರಪನಹಳ್ಳಿ ತಾಲ್ಲೂಕಿಗೆೆ ₹ 50 ಕೋಟಿ ಅನುದಾನ ಖೋತಾ
Last Updated 23 ಫೆಬ್ರುವರಿ 2017, 5:22 IST
ಅಕ್ಷರ ಗಾತ್ರ

ಹರಪನಹಳ್ಳಿ: ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟು ದಾವಣಗೆರೆ ಜಿಲ್ಲೆಗೆ ವಿಲೀನವಾದ ತಪ್ಪಿಗೆ ಹರಪನಹಳ್ಳಿ ತಾಲ್ಲೂಕು ವಾರ್ಷಿಕ ₹ 50 ಕೋಟಿ  ಅನುದಾನ ಪಡೆಯುವಲ್ಲಿ ವಂಚಿತವಾಗಿದೆ ಎಂದು ಶಾಸಕ ಎಂ.ಪಿ.ರವೀಂದ್ರ ಅವರು ಹೇಳಿದರು.

ಹರಪನಹಳ್ಳಿ ತಾಲ್ಲೂಕನ್ನು ಹೈದರಾಬಾದ್‌ ಕರ್ನಾಟಕ ವ್ಯಾಪ್ತಿಗೆ (371 ಜೆ ಕಲಂ) ಸೇರಿಸಬೇಕು ಮತ್ತು ಜಿಲ್ಲಾ ಕೇಂದ್ರ ಮಾಡಬೇಕು ಎನ್ನುವ ಕೂಗಿಗೆ ಸಾಮರ್ಥ್ಯ ಸೌಧದಲ್ಲಿ ಬುಧವಾರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರ ಒತ್ತಾಸೆಗೆ ಮಣಿದು ಮಾಜಿ ಸಚಿವರಾದ ಎಂ.ಪಿ.ಪ್ರಕಾಶ್‌ ಮತ್ತು ಡಿ. ನಾರಾಯಣದಾಸ್‌ ತಾಲ್ಲೂಕನ್ನು ದಾವಣಗೆರೆ ಜಿಲ್ಲೆಯಲ್ಲಿ ವಿಲೀನಗೊಳಿಸಲು  ಒಪ್ಪಿಗೆ ಸೂಚಿಸಿದ್ದರು. ಇದರ ಪರಿಣಾಮದಿಂದ 371 ಜೆ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಹರಪನಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಯಲ್ಲಿ ಉಳಿದುಕೊಂಡಿದ್ದರೆ, ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ವಾರ್ಷಿಕ ₹ 40–50 ಕೋಟಿ ಅನುದಾನ ಬರುತ್ತಿತ್ತು ಎಂದರು. 

ಡಾ. ನಂಜುಂಡಪ್ಪ  ಆಯೋಗದ ವರದಿ ಪ್ರಕಾರ ಅಭಿವೃದ್ಧಿಯಲ್ಲಿ  ತಾಲ್ಲೂಕು 174ನೇ  ಸ್ಥಾನದಲ್ಲಿದ್ದು, ಅತ್ಯಂತ ಹಿಂದುಳಿದಿದೆ. ಸತತ ಬರಗಾಲ, ನೀರಾವರಿ ಸೌಲಭ್ಯವಿಲ್ಲದೆ ಯುವಕರು  ಶಿಕ್ಷಣ, ಉದ್ಯೋಗದಿಂದ ವಂಚಿತರಾಗಿ ಬೆಂಗಳೂರು, ಗೋವಾ, ಮಹಾರಾಷ್ಟ್ರ, ಕಾಫಿ ಸೀಮೆಗೆ ಕೂಲಿ ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದಾರೆ ಎಂದು ಹೇಳಿದರು.

ತಾಲ್ಲೂಕಿಗೆ 60 ಕೆರೆಗಳಿಗೆ ನೀರುಣಿಸುವ ಯೋಜನೆಗೆ ₹ 350 ಕೋಟಿ ಮತ್ತು ಗರ್ಭಗುಡಿ ಬ್ರಿಜ್ಜ್‌್‌ ಕಂ ಬ್ಯಾರೇಜ್‌ ಯೋಜನೆಗಳ ನಿರ್ಮಾಣಕ್ಕೆ ಮರು ಅಂದಾಜು ಯೋಜನೆ ತಯಾರಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಒಳಪಡಲಿದೆ ಎಂದರು.

‘ವಿಧಾನಸಭೆ ಚುನಾವಣೆ ಹತ್ತಿರ ಇರುವಾಗ 371 ಜೆ ಸೌಲಭ್ಯ ಪ್ರಸ್ತಾಪಿಸಲಾಗಿದೆ ಎಂದು ಅನ್ಯಥಾ ಭಾವಿಸಬೇಡಿ. ಅಧಿಕಾರ ಶಾಶ್ವತವಲ್ಲ’ ಎಂದ ಅವರು,  ‘371  ಜೆ ಸೌಲಭ್ಯಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ರಾಜ್ಯ ಸರ್ಕಾರದಿಂದ  ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಈ ಪ್ರಸ್ತಾವಕ್ಕೆ ಬಳ್ಳಾರಿ ಮತ್ತು ದಾವಣಗೆರೆ ಸಂಸದರ ಪ್ರಯತ್ನ ಅತಿ ಮುಖ್ಯವಾಗಿದೆ. ಜಿಲ್ಲಾಧಿಕಾರಿ ಕೂಡ ಇದಕ್ಕೆ ಶಿಫಾರಸು ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಮಾತನಾಡಿ, ಕಳೆದ ಹಲವು  ವರ್ಷಗಳಿಂದ 371 ಜೆ ಕಲಂ ಮತ್ತು ಜಿಲ್ಲಾ ಕೇಂದ್ರವನ್ನು ಮಾಡುವ ಪ್ರಸ್ತಾವ ಇದ್ದು, ಅದಕ್ಕೆ ಸಂಬಂಧಿಸಿದ ಕಡತ ಹಲವು ದಿನಗಳಿಂದ ನನೆಗುದಿಗೆ ಬಿದ್ದಿತ್ತು.  ಅದಕ್ಕೆ ಚಾಲನೆ ಕೊಡುವ ಮುನ್ನ ತಾಲ್ಲೂಕಿನ ಸಾರ್ವಜನಿಕರ ಅಭಿಪ್ರಾಯ ಪಡೆಯುವ ಉದ್ದೇಶದಿಂದ ಈ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯಿಂದ ನಿರ್ಧಾರ  ಏನೆಂಬುದು ಸ್ಪಷ್ಟವಾಗಿದೆ ಎಂದರು.

‘ಹರಪನಹಳ್ಳಿ ತಾಲ್ಲೂಕು ಯಾವ ಜಿಲ್ಲೆಯಲ್ಲೇ ಇರಲಿ ಅಥವಾ ಅದನ್ನು ಜಿಲ್ಲಾ ಕೇಂದ್ರವನ್ನಾಗಿಸಿ; ನಮಗೆ ಬೇಕಾಗಿರುವುದು 371 ಜೆ ಸೌಲಭ್ಯ ಮಾತ್ರ’ ಎಂದು ವಿವಿಧ ಸಂಘಟನೆಗಳು, ಸಾರ್ವಜನಿಕರು, ರೈತ ಸಂಘಟನೆಗಳು, ಸಂಘ ಸಂಸ್ಥೆಗಳ ಮುಖಂಡರು ಪಕ್ಷಭೇದ ಮರೆತು, ಒಟ್ಟಾರೆ ಅಭಿಪ್ರಾಯ ಸೂಚಿಸಿದರು.

ನೀಲಗುಂದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ವಿವಿಧ ಪಕ್ಷದ ಮುಖಂಡರಾದ ಜಿ.ನಂಜನಗೌಡ, ಮಹಾಬಲೇಶ್ವರ ಗೌಡ, ಅರುಂಡಿ ನಾಗರಾಜ್‌, ಬಿ.ಎಚ್‌.ಪರುಶುರಾಮಪ್ಪ, ವಕೀಲರ ಸಂಘದ ಅಧ್ಯಕ್ಷ ಅಜ್ಜಪ್ಪ, ರೆಹಮಾನ್‌ ಸಾಬ್‌, ಕೋಡಿಹಳ್ಳಿ ಭೀಮಪ್ಪ ಸಂಘ ಸಂಸ್ಥೆ ಮುಖಂಡರಾದ ಬೆಟ್ಟನಗೌಡ, ಇದ್ಲಿರಾಮಪ್ಪ, ಹೊಸಹಳ್ಳಿ ಮಲ್ಲೇಶ್‌, ಕೆ.ಎಂ.ಮಹೇಶ್ವರಸ್ವಾಮಿ, ಸಿದ್ದಪ್ಪ, ವೆಂಕಟೇಶ್‌ ರೆಡ್ಡಿ, ರಾಜಪ್ಪ, ಸರ್‌ಕಾವಸ್‌, ಶಿವಕುಮಾರ್ ಮುಂತಾದವರು ಮಾತನಾಡಿದರು. ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್‌, ತಹಶೀಲ್ದಾರ್ ಕೆ.ಗುರುಬಸವರಾಜ್‌, ಸಿ,ರಾಮಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT