ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ ಮೀಸಲಾತಿ: ದುರುದ್ದೇಶವಿಲ್ಲ

Last Updated 23 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಉದ್ಯೋಗದಲ್ಲಿ ಬಡ್ತಿ ಮೀಸಲಾತಿಯ ಬಗ್ಗೆ ಹೇಳಹೊರಟು ಒಟ್ಟಾರೆ ಮೀಸಲಾತಿಯ ಔಚಿತ್ಯದ ಬಗೆಗೇ ಹೆಚ್ಚು ಚರ್ಚಿಸಿರುವ ಮಹೇಶ ಸಿ.ಎಚ್‌. ಅವರು (ಸಂಗತ, ಫೆ. 17) ಮೀಸಲಾತಿಯ ಪರಿಕಲ್ಪನೆಯನ್ನು ಅರ್ಥ ಮಾಡಿಕೊಂಡಿಲ್ಲವೇನೋ ಎನಿಸುತ್ತದೆ.

ಮೀಸಲಾತಿಯ ಪ್ರಯೋಜನ ಪಡೆಯುತ್ತಿರುವವರು ಕೇವಲ ಪರಿಶಿಷ್ಟರು ಎಂಬಂತೆ ಬಿಂಬಿಸಿ, ಅವರೆಲ್ಲರೂ ಭಾರತದ ಕೋಟ್ಯಧೀಶ್ವರರ ಸಾಲಿನಲ್ಲಿ ಇದ್ದಾರೆ ಎನ್ನುವ ಹಾಗೆ ಹೇಳಿರುವುದು ಉತ್ಪ್ರೇಕ್ಷೆಯೇ ಸರಿ.

ದಲಿತರು ಸಂಪತ್ತು, ಅಧಿಕಾರ ಅನುಭವಿಸಿದರೆ ಕಣ್ಣು ಕುಕ್ಕುತ್ತದೆ. ಅದೇ ಸಾವಿರಾರು ಕೋಟಿ ರೂಪಾಯಿ ವಂಚಿಸಿ ದೇಶದಿಂದ ಪಲಾಯನ ಆದವರು, ತೆರಿಗೆ ವಂಚಕರು, ದೇಶದ ಸಂಪತ್ತಿನ ಹೆಚ್ಚಿನ ಪಾಲನ್ನು ಅನುಭವಿಸುತ್ತಿರುವವರು ಯಾವ ವರ್ಗಕ್ಕೆ ಸೇರಿದವರೆಂಬ ಅರಿವಿಲ್ಲವೇ?
ದಲಿತರಿಗೆ ಮಾತ್ರ ಹಾಸ್ಟೆಲ್‌ಗಳು ಇಲ್ಲ. ಹಿಂದುಳಿದ ವರ್ಗದವರಿಗೂ ಪ್ರತ್ಯೇಕ ಹಾಸ್ಟೆಲ್‌ಗಳಿವೆ.

ಅಲ್ಲಿ ಅವರಿಗೂ ದಲಿತರಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನೆಲ್ಲ ನೀಡಲಾಗುತ್ತಿದೆ. ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶದವರಿಗೆ ಪ್ರತ್ಯೇಕ ಮೀಸಲಾತಿ ನೀಡಲಾಗಿದೆ. ರೈತರಿಗೆ ಹಲವು ರೀತಿಯ ಸಬ್ಸಿಡಿ ಯೋಜನೆಗಳು ಜಾರಿಯಲ್ಲಿವೆ. ಸಂಕಷ್ಟದ ಸಂದರ್ಭದಲ್ಲಿ ಸಾಲ ಮನ್ನಾ ಮಾಡಲಾಗಿದೆ. ಮಠಗಳಿಗೆ, ದೇಗುಲಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ನೀಡಲಾಗಿದೆ.

ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ವರ್ಗದವರ ಅಭಿವೃದ್ಧಿಗಾಗಿ, ಜಾತಿಯ ಗತ್ಯಂತರವಿಲ್ಲದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹತ್ತು ಹಲವು ಸಹಾಯಾನುದಾನ ಯೋಜನೆಗಳನ್ನು ಜಾರಿಗೆ ತರಲಾಗಿದೆ. ವಿಧವೆಯರಿಗೆ, ಕಲಾವಿದರಿಗೆ, ಲೈಂಗಿಕ ಅಲ್ಪಸಂಖ್ಯಾತರಿಗೆ, ವಿಚ್ಛೇದಿತರಿಗೆ, ಪರಿತ್ಯಕ್ತ ಮಹಿಳೆಯರಿಗೆ... ಹೀಗೆ ಹಲವು ವರ್ಗಗಳಿಗೆ ಮಾಸಾಶನ ನೀಡಲಾಗುತ್ತಿದೆ.

ಸಣ್ಣ ಕೈಗಾರಿಕೆ, ಬೃಹತ್ ಕೈಗಾರಿಕೆ, ಸಿನಿಮಾ, ವ್ಯಾಪಾರ, ಸಾರಿಗೆ ಸಂಪರ್ಕ, ಮೀನುಗಾರಿಕೆ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನದಂತಹ ವಿವಿಧ ಕ್ಷೇತ್ರಗಳವರೂ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರದ ಯೋಜನೆಗಳ ಫಲಾನುಭವಿಗಳೇ  ಆಗಿದ್ದರೂ ದಲಿತರು ಮಾತ್ರ ಸಕಲ ‘ಭಾಗ್ಯ’ಗಳ ಒಡೆಯರು ಎಂಬಂತೆ ಬಿಂಬಿಸಿರುವುದು ದುರದೃಷ್ಟಕರ.

ಅನುಭವ, ದಕ್ಷತೆಯನ್ನೇ ಆಧರಿಸಿ ಹೇಳುವುದಾದರೆ, ಬಹುಶಃ ದಲಿತ ನಾಯಕರು ಎಂದೋ ಈ ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿ ಆಗಬಹುದಿತ್ತು. ಆರ್ಥಿಕವಾಗಿ ಹಿಂದುಳಿದವರ ಬಗ್ಗೆ ಇರುವ ಕನಿಕರ ದಲಿತರ ವಿಷಯದಲ್ಲಿ ಕಾಣುವುದಿಲ್ಲ. ಇಂದಿಗೂ ದಲಿತರಿಗೆ ಹಳ್ಳಿಗಳಲ್ಲಿ ಕ್ಷೌರ ನಿರಾಕರಣೆ, ದೇಗುಲ ಪ್ರವೇಶ ನಿರಾಕರಿಸುವುದು, ಹೂಳಲು ಸ್ಮಶಾನವಿಲ್ಲದಿರುವುದು, ನಗರ ಪ್ರದೇಶಗಳಲ್ಲಿ ಒಂದು ಬಾಡಿಗೆ ಮನೆ ಗಿಟ್ಟಿಸಲು ಅವರು ಅನುಭವಿಸಬೇಕಾದ ಯಾತನೆಗಳ ಅರಿವಿದ್ದೂ ಕೆಲವರು ಜಾಣ ಕುರುಡರಂತೆ ವರ್ತಿಸುತ್ತಿರುವುದು ವಿಷಾದನೀಯ.

ಬಡವರಾದರೂ ಮೇಲ್ವರ್ಗದವರು ದೇವಸ್ಥಾನವನ್ನು ಪ್ರವೇಶಿಸಬಹುದು. ಆದರೆ, ಮಹತ್ವದ ಸ್ಥಾನವನ್ನು ಅಲಂಕರಿಸಿದ್ದರೂ ದಲಿತರೆಂಬ ಒಂದೇ ಕಾರಣಕ್ಕೆ ದೇಗುಲದ ಹೊರಗೆ ನಿಲ್ಲಬೇಕಾದ ಪರಿಸ್ಥಿತಿ ಇನ್ನೂ ಕೆಲವೆಡೆ ಇದೆ.

ಇನ್ನು ಬಡ್ತಿ ಮೀಸಲಾತಿಯ ಬಗ್ಗೆ ಹೇಳುವುದಾದರೆ, ಕರ್ತವ್ಯ ನಿರತರಾಗಿದ್ದ ಒಟ್ಟು ನೌಕರ ವೃಂದದಲ್ಲಿ ದಲಿತರ ಪ್ರಾತಿನಿಧ್ಯದ ಕೊರತೆಯನ್ನು ಸರಿದೂಗಿಸುವ ಸಲುವಾಗಿ ಅದನ್ನು ಜಾರಿಗೆ ತರಲಾಯಿತೇ ಹೊರತು ಯಾವುದೇ ದುರುದ್ದೇಶದಿಂದಲ್ಲ. ನಿಜವಾಗಿ ಹೇಳಬೇಕೆಂದರೆ, ದಲಿತರಿಗೆ ನ್ಯಾಯಯುತವಾಗಿ ಸಿಗಬೇಕಾದ ಪ್ರಾತಿನಿಧ್ಯ ದೊರಕದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಾವಿರಾರು ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಉಳಿದಿವೆ.

ಇವುಗಳನ್ನು ಕಾಲಮಿತಿಯಲ್ಲಿ ಭರ್ತಿ ಮಾಡಿದ್ದರೆ ಬಡ್ತಿ ಮೀಸಲು ಸಮಸ್ಯೆ ಉದ್ಭವಿಸುತ್ತಲೇ ಇರಲಿಲ್ಲ. ನ್ಯಾಯಾಲಯಗಳಲ್ಲಿ ಈ ಸಂಬಂಧದ ಅರ್ಜಿಗಳು ಇತ್ಯರ್ಥವಾಗದೆ ಉಳಿದಿವೆ. ಮೀಸಲಾತಿಯನ್ನು ಪಡೆಯುತ್ತಿರುವ ಮೇಲ್ವರ್ಗದವರು ಅದನ್ನು ತಿರಸ್ಕರಿಸಿ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಸ್ಥಾಪಿಸಲು ಮುಂದಾದರೆ ದಲಿತರಿಗೂ ಮೀಸಲಾತಿ ಬೇಕಿಲ್ಲ. ಇದು ಸಾಧ್ಯವೇ?
–ಸಿ.ಎಚ್. ಮಧುಕುಮಾರ

*
ಮೀಸಲಾತಿಯೊಂದೇ ಅಸ್ತ್ರವಲ್ಲ
ದೇಶದಲ್ಲಿ ಕ್ರಿ.ಶ. 1949ರವರೆಗೆ ಇದ್ದ ಪರಿಸ್ಥಿತಿಯೇ ಬೇರೆ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ 21ನೇ ಶತಮಾನದಲ್ಲಿ ಈಗ ನಾವಿರುವ ಪರಿಸ್ಥಿತಿಯೇ ಬೇರೆ. ಮುಂದುವರಿದಿರುವ ಹಾಗೂ ಸರ್ಕಾರದ ಸವಲತ್ತು ಪಡೆದುಕೊಂಡಿರುವವರಿಗೆ ಈಗ ಮೀಸಲಾತಿಯ ತವಕ. ದಲಿತೇತರ ಸಮುದಾಯಗಳ ಬಡವರ ಅಭಿವೃದ್ಧಿಯ ವಿಷಯದಲ್ಲಿ ಇರಬೇಕಾದ  ನೈತಿಕ ಬದ್ಧತೆ ಇವರಿಗೆ ಇಲ್ಲ.

ಕೆಳ ಜಾತಿಗಳಿಗೆ ಮಿಸಲಾತಿ ಬೇಡ ಎಂದು ಹೇಳಲಾಗದು. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಆಧಾರವಾಗಿ ಇಟ್ಟುಕೊಂಡು, ಅವರಲ್ಲೇ ಅವರ ಜಾತಿಯವರನ್ನು ತುಳಿಯುವ ಹುನ್ನಾರ ಎಷ್ಟು ಸಮಂಜಸ? ಅಪ್ಪ ‘ಎ’ ಶ್ರೇಣಿ ಸರ್ಕಾರಿ ಹುದ್ದೆಯಲ್ಲಿದ್ದರೂ ಅವರ ಮಕ್ಕಳಿಗೆ ಎಲ್ಲಾ ಶೈಕ್ಷಣಿಕ ಹಂತದಲ್ಲೂ ಸ್ಕಾಲರ್‌ಶಿಪ್‌, ಮತ್ತೆ ಅವರಿಗೆ ಜಾತಿ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಿಕೆ.

ಅದೇ ರೀತಿ ಅವರ ಮೊಮ್ಮಕ್ಕಳಿಗೂ ಇಂತಹ ಸವಲತ್ತುಗಳು ದೊರೆಯುವುದು ವಂಶಪಾರಂಪರ್ಯವೇ  ಆಗಿಬಿಟ್ಟಿದೆ, ಅದೂ ಯಾವುದೇ ನಿರ್ಬಂಧವಿಲ್ಲದೆ. ಹೀಗಾದರೆ ಅದೇ ಜಾತಿಯಲ್ಲಿರುವ ಕೆಳ ಮಟ್ಟದವರ ಗತಿ ಏನು? ಇದರಿಂದಾಗಿ ಅಸ್ಪೃಶ್ಯರು ಅಸ್ಪೃಶ್ಯರಾಗಿಯೇ ಇರುವಂತಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಕ್ಷೇತ್ರವನ್ನು ತಮ್ಮದೇ ಸಮುದಾಯದ ಬೇರೆಯವರಿಗೆ ಬಿಟ್ಟು ಕೊಡುವರೇ?

ಮೀಸಲಾತಿ ಜಾರಿಯಾಗಿ ದಶಕಗಳು ಸಂದಿವೆ. ಈ ಅವಧಿಯಲ್ಲಿ ಪರಿಶಿಷ್ಟರ ಸ್ಥಿತಿಗತಿ ಎಂದೋ ಬದಲಾಗಬೇಕಿತ್ತು. ಆದರೆ ಅದೇ ಜಾತಿಯಲ್ಲಿರುವವರ ಅಸೂಯೆ ಮತ್ತು ಸಣ್ಣತನವೇ ಅವರ ಸ್ಥಿತಿ ಬದಲಾಗದಿರುವುದಕ್ಕೆ ಕಾರಣ.

ಭವ್ಯ ಭಾರತದ ಏಳಿಗೆಗೆ ಮತ್ತು ಅಸ್ಪೃಶ್ಯತೆ ನಿವಾರಣೆಗೆ ಮೀಸಲಾತಿಯೊಂದೇ ಅಸ್ತ್ರವಲ್ಲ. ಮೀಸಲಾತಿ ಅಸ್ತ್ರವನ್ನು ಬಳಸಿಕೊಂಡು ಬಂದ ಪಕ್ಷಗಳು ಇಂದು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸರ್ಕಾರದಲ್ಲಿ ಎಷ್ಟು ಮಂದಿ ಪರಿಶಿಷ್ಟ ನೌಕರರಿದ್ದಾರೆ ಎಂಬುದು ಅಭಿವೃದ್ಧಿಯ ಸಂಕೇತವಲ್ಲ.

125 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಎಲ್ಲರಿಗೂ ಸರ್ಕಾರಿ ಕೆಲಸ ಕೊಡುವುದು ಅಸಾಧ್ಯವಾದ ಮಾತು. ಎಲ್ಲ ಸಮುದಾಯದವರಲ್ಲೂ  ಉದ್ಯಮಶೀಲತೆ ಹಾಗೂ ಕೌಶಲವನ್ನು ಬೆಳೆಸಿದರೆ ಮಾತ್ರ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧ್ಯ.
–ಬಸವರಾಜ ಬಂಡಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT