ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲಗೆ ಒತ್ತಡಕ್ಕೆ ಇದೆ ಪರಿಹಾರ

Last Updated 24 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಸುಂದರವಾಗಿ ಕಾಣಲು ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ? ಸುಂದರವಾಗಿ ಕಾಣಲು ಅಂದವಾದ ದಂತಪಂಕ್ತಿಗಳೂ ಪ್ರಧಾನ ಕಾರಣವಾಗಿರುತ್ತವೆ. ಹಾಗಾಗಿಯೇ ಇಂದಿನ ಬಹುತೇಕ  ಹದಿಹರೆಯದ ಮಕ್ಕಳು ಸಮರ್ಪಕವಾದ ದಂತಪಂಕ್ತಿಗಳಿಗಾಗಿ ಹಲ್ಲುಗಳ ಮೇಲೆ ಲೋಹದ ತಂತಿಗಳನ್ನು ಹಾಕಿಸಿಕೊಂಡಿರುವುದನ್ನು ಕಾಣುತ್ತೇವೆ.

ಮಕ್ಕಳು ದೊಡ್ಡವರಾಗುತ್ತ ಯಾವ ಹಂತದಲ್ಲಿ ಈ ಬಗೆಯ ದೋಷಪೂರಿತ ದಂತಪಂಕ್ತಿಗಳಿಗೆ ಗುರಿಯಾಗುತ್ತಾರೆ ಎಂಬುದು ಹೆಚ್ಚಿನ ಪೋಷಕರಿಗೆ ತಿಳಿಯುವುದಿಲ್ಲ. ಸಮಸ್ಯೆ ಗೊತ್ತಾಗುವ ಹೊತ್ತಿಗೆ ಅದು ತೀವ್ರ ಸ್ವರೂಪದ್ದಾಗಿರುತ್ತದೆ. ಸಮಸ್ಯೆ ತೀವ್ರ ಸ್ವರೂಪದ್ದಾದಾಗ ಅದನ್ನು ಸರಿಪಡಿಸಲು ದೀರ್ಘಾವಧಿಯ ಚಿಕಿತ್ಸೆಯೇ ಬೇಕಾಗುತ್ತದೆ. ಕೆಲವೊಮ್ಮೆ ಮುಂದಕ್ಕೆ ಉಬ್ಬಿರುವ ದವಡೆಯನ್ನು ಸರಿಪಡಿಸಲು ದವಡೆಯ ಶಸ್ತ್ರಚಿಕಿತ್ಸೆಯನ್ನೇ ಮಾಡಬೇಕಾಗುತ್ತದೆ. ಆದರೆ, ದೋಷವನ್ನು ಮೊದಲೇ ಗುರುತಿಸಿದರೆ ಚಿಕಿತ್ಸೆಯು ಸರಳ ಹಾಗೂ ಅಲ್ಪಾವಧಿಯದಾಗಿರುತ್ತದೆ.

ಹುಟ್ಟಿದ ಮಕ್ಕಳು ತಾಯಿಯ ಹಾಲನ್ನು ನುಂಗುವಾಗ ಸ್ವಲ್ಪ ಮಟ್ಟಿಗೆ ನಾಲಗೆಯನ್ನು ಮುಂಚಾಚಿ, ಮೇಲ್ದವಡೆಯ ಮೇಲೆ ಒತ್ತಡವನ್ನು ಹಾಕುವುದು ಸಾಮಾನ್ಯ. ಆರು ತಿಂಗಳು ತುಂಬುವ ಹೊತ್ತಿಗೆ ಶೇ. 30–40ರಷ್ಟು ಮಕ್ಕಳಲ್ಲಿ ಈ ಅಭ್ಯಾಸವು ಕ್ರಮೇಣ ಕಡಿಮೆಯಾಗುತ್ತಹೋಗುತ್ತದೆ. ಆದರೆ, ಕೆಲವು ಮಕ್ಕಳಲ್ಲಿ ಈ ಅಭ್ಯಾಸವು ಇನ್ನೂ ಹಲವಾರು ವರ್ಷಗಳವರೆಗೆ ಮುಂದುವರೆಯಬಹುದು. ಕೆಲವು ಮಕ್ಕಳು ನುಂಗುವಾಗ ಮಾತ್ರ ನಾಲಗೆಯನ್ನು ಮುಂಚಾಚಿದರೆ, ಇನ್ನು ಕೆಲವು ಮಕ್ಕಳು ಮಾತನಾಡುವಾಗ ಹಾಗೂ ಸುಮ್ಮನೆ ಇದ್ದಾಗಲೂ ನಾಲಗೆಯಿಂದ ಮೇಲ್ದವಡೆಯ ಮೇಲೆ ಒತ್ತಡವನ್ನು ಹಾಕುವ ಅಭ್ಯಾಸವನ್ನು  ಮಾಡಿಕೊಂಡಿರುತ್ತಾರೆ.

ಮಗು ಈ ರೀತಿಯ ಅಭ್ಯಾಸವನ್ನು ರೂಢಿಸಿಕೊಳ್ಳಲು ಕಾರಣಗಳೇನು?
* ಮಗುವಿಗೆ ಎರಡು ವರ್ಷ ತುಂಬಿದ ಬಳಿಕವೂ ಎದೆ ಹಾಲುಣ್ಣಿಸಿದಾಗ.
* ಮಕ್ಕಳಿಗೆ ಸದಾ ಹೆಬ್ಬೆರಳು ಚೀಪುವ ಅಭ್ಯಾಸವಿದ್ದಾಗ.
* ಮಗುವಿನ ನಾಲಗೆಯು ಗಾತ್ರದಲ್ಲಿ ಸಾಮಾನ್ಯಕ್ಕಿಂತಲೂ ದೊಡ್ಡದಿದ್ದಾಗ.
* ಮಗುವಿನ ಗಂಟಲಿನ ಒಳಭಾಗಲ್ಲಿರುವ  ಟಾನ್ಸಿಲ್ ಅಥವಾ ಅಡೆನಾಯ್ಡ್ ಗ್ರಂಥಿಗಳು ಗಾತ್ರದಲ್ಲಿ ದೊಡ್ಡದಾಗಿದ್ದಾಗ.
* ಮಗುವಿನ ಬಾಯಿ ಹಾಗೂ ಮುಖದ ಮಾಂಸಖಂಡಗಳ ನಡುವೆ ಅಸಮತೋಲನವಿದ್ದು, ಬಾಯಿಯನ್ನು ಪೂರ್ತಿಯಾಗಿ ಮುಚ್ಚುವುದರಲ್ಲಿ ದೋಷವಿದ್ದಾಗ.
* ಮಗುವಿಗೆ ಬಾಯಿಯಲ್ಲಿ ಉಸಿರಾಡುವ ಅಭ್ಯಾಸವಿದ್ದಾಗ.

* ಅಲರ್ಜಿ, ಮತ್ತಿತರ ಕಾರಣಗಳಿಂದಾಗಿ ಮಗುವಿನ ಮೂಗಿನ ಒಳಭಾಗದಲ್ಲಿ ಉರಿಯೂತವಿದ್ದಾಗ.
ಆದರೆ ಮಗುವಿಗೆ ನಾಲ್ಕು ವರ್ಷ ತುಂಬಿದ ಮೇಲೆಯೂ ಮುಂದುವರೆಯುವ ಈ ಅಭ್ಯಾಸವು  ಮುಂದೆ ಹಲವಾರು ಬಗೆಯ ದಂತದೋಷಗಳಿಗೆ ಕಾರಣವಾಗಬಹುದು. ಏಕೆಂದರೆ, ಜೀವಿಯು ಪ್ರತಿ ದಿನಕ್ಕೆ ಸುಮಾರು 1200ರಿಂದ 2000 ಬಾರಿ ನುಂಗುವ ಪ್ರಕ್ರಿಯೆಯಲ್ಲಿ ತೊಡಗುತ್ತದೆ. ಪ್ರತಿ ಬಾರಿ ನುಂಗುವಾಗ ನಾಲಗೆಯನ್ನು ಕೊಂಚ ಮುಂದೆ ಚಾಚುವುದರಿಂದ ಅದು ಹಲ್ಲು ಹಾಗೂ ದವಡೆಗಳ ಮೇಲೆ ಪ್ರಬಲವಾದ ಒತ್ತಡವನ್ನು ಬೀರುತ್ತದೆ. ಹೀಗಾದಾಗ ಹಲ್ಲುಗಳು ಮುಂದೂಡಲ್ಪಡುತ್ತವೆ. ಅಷ್ಟೇ ಅಲ್ಲ, ಹುಟ್ಟುವ ಶಾಶ್ವತ ಹಲ್ಲುಗಳ ಗಾತ್ರ ಹಾಗೂ ಜೋಡಣೆಯಲ್ಲೂ ವ್ಯತ್ಯಾಸವಾಗುತ್ತದೆ.
ಪ್ರಾಥಮಿಕ ಹಂತಗಳಲ್ಲಿಯೇ, ಅಂದರೆ ಮಗು ಆರೇಳು ವರ್ಷದ್ದಿರಬೇಕಾದರೆ – ಶಾಶ್ವತ ಹಲ್ಲುಗಳು ಹುಟ್ಟುವ ಮೊದಲೇ – ಈ ಅಭ್ಯಾಸವನ್ನು ಗುರುತಿಸಿ, ನಿಯಂತ್ರಿಸದೇ ಇದ್ದಲ್ಲಿ ಮುಂದೆ ಮಗುವಿನಲ್ಲಿ ವಿವಿಧ ಬಗೆಯ ದಂತದೋಷಗಳು ಕಾಣಿಸಿಕೊಳ್ಳಬಹುದು.

ಕಾಣಿಸಿಕೊಳ್ಳಬಹುದಾದ ದಂತದೋಷಗಳು ಯಾವುವು ?
* ಮಧ್ಯದ ಬಾಚಿ ಹಲ್ಲುಗಳು ಸಾಮಾನ್ಯಕ್ಕಿಂತಲೂ ಹೆಚ್ಚು ಅಗಲವಾಗಿ ಹುಟ್ಟಬಹುದು. 
* ಮೇಲ್ದವಡೆ ಹಾಗೂ ಕೆಳದವಡೆಯ ಮಧ್ಯ ಅಂತರ ಉಂಟಾಗಿ, ಬಾಯಿಯನ್ನು ಪೂರ್ಣವಾಗಿ ಮುಚ್ಚಲು ಸಾಧ್ಯವಾಗದೆ ಇರಬಹುದು.
* ಹಲ್ಲುಗಳು ಮುಂದಕ್ಕೆ ಬಂದಂತಾಗಬಹುದು.
* ಪರಸ್ಪರ ಹಲ್ಲುಗಳ ನಡುವೆ ಅಂತರ ಹೆಚ್ಚಾಗಬಹುದು.
* ಅಸಮರ್ಪಕವಾದ ಹಲ್ಲುಗಳ ಜೋಡಣೆ.
* ಸಣ್ಣದಾದ ಹಾಗೂ ಜೋತು ಬಿದ್ದಿರುವ ಮೇಲ್ದುಟಿ.
* ಮಾತನಾಡಲು ತೊದಲಬಹುದು. ಕೆಲವು ಅಕ್ಷರಗಳನ್ನು ಉಚ್ಚರಿಸಲು ಮಗು ಕಷ್ಟ ಪಡಬಹುದು.
ಈ ರೀತಿಯ ತೊಂದರೆಯನ್ನು ಸರಿಪಡಿಸಲು ದಂತಮೂಳೆ ತಜ್ಞರು ಸಹಾಯ ಮಾಡುತ್ತಾರೆ.  ಆದರೆ, ಈ ರೀತಿಯ ಚಿಕಿತ್ಸೆಯು ಸಾಮಾನ್ಯವಾಗಿ ದೀರ್ಘಾವಧಿಯದ್ದಾಗಿರುತ್ತದೆ. 

ಆದರೆ ಮಕ್ಕಳ ನಾಲಗೆ ಒತ್ತಡದ ಅಭ್ಯಾಸವನ್ನು ಮೊದಲ ಹಂತಗಳಲ್ಲಿಯೇ ಗುರುತಿಸಿದರೆ ಮುಂದಾಗುವ ದಂತದೋಷಗಳನ್ನು ತಡೆಯಬಹುದು. ಹಾಗಾಗಿಯೆ, ನಿಮ್ಮ ಮಕ್ಕಳಿಗೆ ಐದರಿಂದ ಆರು ವರ್ಷ ತುಂಬುವಾಗ ಅವರನ್ನು ಸೂಕ್ಷ್ಮವಾಗಿ ಗಮನಿಸಿ. ಮಕ್ಕಳು ನುಂಗುವಾಗ ಅಥವಾ ಮಾತನಾಡುವಾಗ ಅಥವಾ ಸಾಮಾನ್ಯ ಸ್ಥಿತಿಯಲ್ಲಿಯೂ ನಾಲಗೆಯನ್ನು ಮುಂಚಾಚಿ, ದವಡೆಯ ಮೇಲೆ ಒತ್ತಡ ಹಾಕುತ್ತಿದ್ದರೆ, ಕೂಡಲೇ ಹತ್ತಿರದ ದಂತವೈದ್ಯರಲ್ಲಿ ಸಲಹೆ ಪಡೆಯಿರಿ. ಮಕ್ಕಳ ದಂತವೈದ್ಯರು ಹಲವು ತಪಾಸಣೆಗಳ ಮೂಲಕ ಮಗುವಿನ ಸಮಸ್ಯೆಯ ಬಗೆ, ತೀವ್ರತೆ ಹಾಗೂ ಜೊತೆಯಲ್ಲಿಯೇ ಇರಬಹುದಾದ ಇತರ ದೋಷಗಳನ್ನು ಕಂಡು ಹಿಡಿದು ಧೃಡಪಡಿಸಿಕೊಳ್ಳುತ್ತಾರೆ ಹಾಗೂ ಸೂಕ್ತ ಚಿಕಿತ್ಸೆಯನ್ನು ಸೂಚಿಸುತ್ತಾರೆ.

ಸೂಚಿಸಬಹುದಾದ ಚಿಕಿತ್ಸೆಗಳು ಯಾವುವು?
ಮಕ್ಕಳಿಗೆ ಸರಿಯಾದ ನುಂಗುವ ಕ್ರಮವನ್ನು ತಿಳಿ ಹೇಳಿ ಅದನ್ನು ರೂಢಿ ಮಾಡಿಸುವುದು.
ಕೆಳದವಡೆಯ ಮಾಂಸಖಂಡಗಳು ಬಲಗೊಳ್ಳಲು ಕೆಲವು ಸರಳ ವ್ಯಾಯಾಮಗಳನ್ನು ಹೇಳಿ ಮಾಡಿಸುವುದು. 
ನಾಲಗೆಯ ಸಮರ್ಪಕ ಚಲನೆಗಾಗಿ ಕೆಲವು ಸರಳ ವ್ಯಾಯಾಮಗಳನ್ನು ರೂಢಿಸುವುದು.
ಬಾಯಿಯ ಒಳಗೆ ಇರಿಸಬಹುದಾದ ಸರಳ ಸಾಧನಗಳ ಬಳಕೆ: ಈ ಸಾಧನಗಳು ನುಂಗುವ ಸಂದರ್ಭದಲ್ಲಿ ನಾಲಗೆಯು ಮುಂದೆ ಚಾಚದಂತೆ ತಡೆಯುತ್ತವೆ. ಇವುಗಳಲ್ಲಿ ಕೆಲವು ಸಾಧನಗಳನ್ನು ಕೇವಲ ರಾತ್ರಿ ವೇಳೆಯೂ, ಇನ್ನು ಕೆಲವನ್ನು ದಂತವೈದ್ಯರ ಸಲಹೆಯ ಮೇರೆಗೆ ಸಮಸ್ಯೆ ಸರಿ ಹೋಗುವವರೆಗೆ ಶಾಶ್ವತವಾಗಿ ಬಾಯಿಯಲ್ಲಿಯೇ ಇರಿಸಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT