ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಧುನಿಕ ಅಸ್ತಿತ್ವದ ಸಂಕಟ ತೆರೆದಿಟ್ಟ ಮೊದಲ ಕವಿ’

Last Updated 26 ಫೆಬ್ರುವರಿ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ಆಧುನಿಕ ಕಾಲದಲ್ಲಿ ಅಸ್ತಿತ್ವದ ಸಂಕಟಗಳನ್ನು ಗೋಪಾಲಕೃಷ್ಣ ಅಡಿಗರಷ್ಟು ಸೂಕ್ಷ್ಮವಾಗಿ ತೆರೆದಿಟ್ಟ ಕವಿ  ಬೇರೊಬ್ಬರಿಲ್ಲ. ಭಾರತದ ಸಂದರ್ಭದಲ್ಲಿ ಇಂತಹ ಪ್ರಯತ್ನ ಮಾಡಿದ ಮೊದಲ ಕವಿ ಇವರು ಎಂಬುದು ಕನ್ನಡಿಗರು ಹೆಮ್ಮೆ ಪಡುವ ವಿಷಯ’ ಎಂದು ಸಾಹಿತಿ ಡಾ.ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.

ಶಿವರಾಮ ಕಾರಂತ ವೇದಿಕೆ ಹಾಗೂ ತರಳಬಾಳು ಕೇಂದ್ರದ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಅಡಿಗರ ಕಾವ್ಯದ ವೈಚಾರಿಕ ರೂಪಕಗಳನ್ನು ಗ್ರಹಿಸುವುದು ಸುಲಭವಲ್ಲ. ಅವರ ಕಾವ್ಯಗಳಲ್ಲಿ ಭಾವನಾತ್ಮಕ ಆಕ್ರೋಶದ ಪ್ರತಿಮೆಗಳೇ ತುಂಬಿವೆ. ಆದಿಮ ಕಾಲದ ಬೆಳಕನ್ನು ವರ್ತಮಾನಕ್ಕೆ ತರುವುದು ಹೇಗೆ ಎಂದು ಅನ್ವೇಷಣೆ ನಡೆಸಿದವರು ಅವರು. ಹುಡುಕಾಟ ಅವರ ಕಾವ್ಯದ ಬಹುಮುಖ್ಯ ವಿನ್ಯಾಸ’ ಎಂದು ಅವರು ವಿಶ್ಲೇಷಿಸಿದರು.

ಅಡಿಗರ ತಾತ್ವಿಕ ಅರಿವನ್ನು ನವ್ಯ ಪರಂಪರೆಯ ಯಾವ ವಿಮರ್ಶಕರೂ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಅವರ ಕಾವ್ಯದ ಸಾಲುಗಳ ಅರ್ಥದ ಲಯ ಹುಡುಕಲು ಸಾಧ್ಯವಾಗದಿದ್ದರೆ ಅಡಿಗರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದರು. ಅಡಿಗರ, ‘ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು’ ಹಾಡಿನ ಕೊನೆಯ ಚರಣದ ಸಾಲುಗಳನ್ನು ಕೀರ್ತಿನಾಥ ಕುರ್ತಕೋಟಿ ಅವರಂತಹ ವಿಮರ್ಶಕರೂ ತಪ್ಪಾಗಿ ಅರ್ಥೈಸಿದ್ದಾರೆ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಸಾಲಿನ ಕೊನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಇದೆ. ಅದನ್ನು ಮರೆತರೆ ಈ ಕವಿತೆಯ ಒಳ ಅರ್ಥ ತಿಳಿಯುವುದೇ ಇಲ್ಲ. ಇದು ರಮ್ಯ ಕಾವ್ಯ ಅಲ್ಲ.  ಆರಂಭದ ಸಾಲಿನಲ್ಲಿ ಬರುವ ‘ಮೋಹ’ ಎಂಬ ಪದ ಆತಂಕದ ಆರಂಭ ಅಷ್ಟೆ ಎಂದರು.

ವಿಮರ್ಶಕ ಎಸ್‌.ಆರ್‌. ವಿಜಯಶಂಕರ್‌ ಮಾತನಾಡಿ, ‘ಅಡಿಗರು ಜಾತಿವಾದಿಯಾಗಿದ್ದರು, ಬ್ರಾಹ್ಮಣವಾದಿಯಾಗಿದ್ದರು ಎಂದು ಕೆಲವರು ಆಕ್ಷೇಪಿಸುತ್ತಾರೆ. ಇದು ಶುದ್ಧ ಸುಳ್ಳು. ಅವರೊಬ್ಬ ಮಹಾ ಪ್ರಜಾಪ್ರಭುತ್ವವಾದಿ. ಆದರೆ, ಬಹುಮತವು ವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಬಾರದು ಎಂದು ಬಲವಾಗಿ ಪ್ರತಿಪಾದಿಸಿದ್ದರು.  ಅಡಿಗರ ಮರು ಓದಿನ ವಿಮರ್ಶೆ ಇಂತಹ ಆಕ್ಷೇಪಗಳಿಗೆ ಉತ್ತರ ಕೊಡುವಂತಿರಬೇಕು’ ಎಂದರು.

‘ಅವರ ಕೃತಿಗಳಲ್ಲಿ ವೈಚಾರಿಕತೆ  ಪ್ರಧಾನವಾಗಿತ್ತು. ಅವರ ಕಾವ್ಯಗಳಲ್ಲಿ ವಿಚಾರ ಪ್ರಚೋದಕ ಶಕ್ತಿ ಇದೆ. ಭಾವನೆಯನ್ನು ಹಿಡಿತದಲ್ಲಿಟ್ಟುಕೊಂಡು ವೈಚಾರಿಕ ನೆಲೆಯಲ್ಲಿ ಅದನ್ನು ಪ್ರಸ್ತುತಪಡಿಸಲು ಅವರು ಹೊಸ ತಂತ್ರಗಾರಿಕೆ ಅನುಸರಿಸಿದರು.   ಕಾವ್ಯದ ಲಯವನ್ನು ಬದಲಿಸಿದರು. ಅರ್ಥಾನುಸಾರಿ ಲಯವನ್ನು ಸ್ಥಾಪಿಸಿದರು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ಮಾತನಾಡಿ, ‘ಅಡಿಗರ ಕಾವ್ಯಗಳಲ್ಲಿ  ಉತ್ಕಟತೆ, ತೀವ್ರತೆ ಇದೆ. ಅವರು ರಮ್ಯ ಕಾಲದಿಂದ ಸಿಡಿದು ಬಂದ ಕವಿ. ಹೊಸ ಹಾದಿ ಹಿಡಿಯುವ ಪ್ರಯತ್ನದಲ್ಲಿ ಅವರು ಅಂತರಂಗದ ಧ್ವನಿಯನ್ನು ಪ್ರಾಮಾಣಿಕವಾಗಿ ಕಾವ್ಯರೂಪಕ್ಕಿಳಿಸುತ್ತಿದ್ದರು. ಅವರ ಪದ್ಯಗಳು ಸ್ವಯಂಪೂರ್ಣ ವಿಗ್ರಹದಂತೆ’ ಎಂದರು. ವಿಮರ್ಶಕ ಬಿ.ವಿ.ಕೆದಿಲಾಯ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT