ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜ ತಿಜೋರಿ ತಯಾರಿ ಹೀಗಿರಲಿ

Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಚಳಿ ಹಿಂದಕ್ಕೆ ಸರಿಯುವ ದಿನಗಳು ಇವು. ಹಾಗೆಯೇ ಸೊಪ್ಪುಗಳು ಹೂ ಬಿಟ್ಟು, ಬೀಜವಾಗುವ ಹೊತ್ತು. ಒಂದು ಹರಿವೆ ಗಿಡವನ್ನು ಗಮನವಿಟ್ಟು ನೋಡಿ. ಒಂದಲ್ಲ, ಎರಡಲ್ಲ, ನೂರಾರು ಸಾವಿರಾರು ಬೀಜಗಳನ್ನು ಹೊತ್ತು ನಿಂತಿರುತ್ತದೆ ಅದು! ಹಾಗೆಯೇ ಎಲ್ಲಾ ತರಕಾರಿಗಳೂ ತನ್ನ ಸಂತತಿಯ ಉಳಿಕೆಗೆಂದು ಧಾರಾಳ ಬೀಜಗಳನ್ನು ಉತ್ಪಾದಿಸುತ್ತವೆ.
 
ತರಕಾರಿ, ಸೊಪ್ಪು ಬೆಳೆಯುವ ಸಂದರ್ಭ ಬಂದಾಗ ಮೊದಲು ಬೇಕಾಗಿರುವುದು ಬೀಜ. ಗುಣಮಟ್ಟದ ಬೀಜದ ಜೊತೆಗೆ ಬೀಜೋಪಚಾರ ಎರಡೂ ಸೇರಿದರೆ ಉತ್ತಮ ಫಸಲು  ಖಂಡಿತ. ಆದರೆ ಅಂಗಡಿಗಳಲ್ಲಿ, ತರಕಾರಿ ಮೇಳಗಳಲ್ಲಿ ತೆಗೆದುಕೊಂಡ ಬೀಜಗಳ ಖಚಿತತೆಯ ಬಗ್ಗೆ ಏನೂ ಹೇಳುವುದು ಸಾಧ್ಯವಿಲ್ಲ.
 
ಹಾಗಾದರೆ ಒಳ್ಳೆಯ ಬೀಜ ದೊರಕುವುದೆಲ್ಲಿ ಎಂಬ ಪ್ರಶ್ನೆ ಕಾಡುತ್ತದೆ. ಈ ಮೊದಲಿನ ಹಾಗೆ ಪರಿಚಯಸ್ಥರಿಂದ, ವಿಶ್ವಾಸೀ ಅಂಗಡಿಗಳಿಂದ ಪಡೆಯಬಹುದು. ಆದರೆ ಅದಕ್ಕೂ ಮಿಗಿಲಾದ ಇನ್ನೂ ಒಂದು ಮಾರ್ಗ ಇದೆ. ಅದೇ ನಮ್ಮ ಬೀಜ ತಿಜೋರಿಯನ್ನು ನಾವೇ ಮಾಡಿಟ್ಟುಕೊಂಡು ಜತನದಿಂದ ಕಾಪಿಟ್ಟುಕೊಳ್ಳುವುದು. 
 
ಹೀರೆ, ಕುಂಬಳ, ಹಾಗಲ, ಸೋರೆ, ಬದನೆ, ಬೆಂಡೆ, ಮೆಣಸು ಮುಂತಾದ ಬಳ್ಳಿ ಮತ್ತಿತರ ತರಕಾರಿಗಳಲ್ಲಿ ಸಾಮಾನ್ಯವಾಗಿ ಮೊದಮೊದಲ ಫಸಲು ದೊಡ್ಡದಾಗಿ, ಆರೋಗ್ಯವಂತವಾಗಿರುತ್ತವೆ. ಅವುಗಳಲ್ಲೊಂದನ್ನು ಬೀಜಕ್ಕೆಂದು ಬಿಟ್ಟುಬಿಡಿ. ಇದು ಸುಲಭವಲ್ಲ, ಏಕೆಂದರೆ ಅನೇಕ ದಿನಗಳಿಂದ ನೀರು, ಗೊಬ್ಬರ ಕೊಟ್ಟು ತರಕಾರಿ ಕೊಯ್ಲಿಗೆ ಬಂದಾಗ ಈಗ ಬೇಡ ಹಾಗೆಯೇ ಬಿಡೋಣ ಎಂದು ನಿರ್ಧರಿಸಲು ಗಟ್ಟಿ ಮನಸ್ಸು ಬೇಕು. ಗಿಡ, ಬಳ್ಳಿಯಲ್ಲೇ ಅದು ಒಣಗಲಿ. ನಂತರ ಅದನ್ನು ಕೊಯ್ದು ಮತ್ತೆರಡು ದಿನ ಒಣಗಿಸಿ ಶೇಖರಿಸಿಟ್ಟುಕೊಳ್ಳಿ. 
 
ಹರಿವೆ, ಪಾಲಾಕ್, ಸಬ್ಬಸಿಗೆ ಮುಂತಾದ ಸೊಪ್ಪುಗಳನ್ನು ದಂಟು ಮುರಿದು ಬಳಸುತ್ತಾ ಇದ್ದರೆ ಅವುಗಳಲ್ಲಿ ಹೊಸ ಹೊಸ ದಂಟು, ಎಲೆಗಳು ಜನಿಸುತ್ತಾ ಇರುತ್ತವೆ. ಆದರೆ ನಿರ್ದಿಷ್ಟ ಜೀವಿತಾವಧಿ ಕಳೆಯುತ್ತಾ ಬಂದಂತೆ ಅವುಗಳಲ್ಲಿ ಹೂ ಕಾಣಿಸಿಕೊಂಡು ಬೀಜ ಕಟ್ಟಲಾರಂಭಿಸುತ್ತದೆ. ಇಲ್ಲೂ ಚೆನ್ನಾಗಿ ಬಲಿತ ಗಿಡವೊಂದನ್ನು ಅದರಷ್ಟಕ್ಕೆ ಹೂವು, ಬೀಜ ಬಿಡಲು ಬಿಡಿ. ಬೀಜ ಒಣಗುತ್ತದೆ ಜೊತೆಗೆ ಗಿಡವೂ ಒಣಗುತ್ತದೆ. ಅದರಿಂದ ಬೀಜಗಳನ್ನು ಬೇರ್ಪಡಿಸಿ ಸಂಗ್ರಹಿಸಿಟ್ಟುಕೊಳ್ಳಿ. ಮೂಲಂಗಿ, ಕ್ಯಾರೆಟ್, ಯಾಮ್‌ನಂತಹ ಗೆಡ್ಡೆಗಳೂ ಹೂ, ಬೀಜಗಳನ್ನು ಬಿಟ್ಟು ಸಂಭ್ರಮಿಸುತ್ತವೆ. ಅವುಗಳಿಂದಲೂ ಬೀಜ ತೆಗೆದಿಟ್ಟುಕೊಳ್ಳಬಹುದು.
 
ಮುಂದೆ ಇರುವ ಪ್ರಶ್ನೆ, ಬೀಜ ತಿಜೋರಿ ಹೇಗಿರಬೇಕು ಎಂಬುದು. ಮೊದಲಾಗಿದ್ದರೆ ಹೊಗೆಗೂಡಿನಲ್ಲಿ ಅಥವಾ ಬಚ್ಚಲೊಲೆಯ ಬದಿಯ ಗೂಡಿನಲ್ಲಿ ಜತನವಾಗಿ ಇಡಲಾಗುತ್ತಿತ್ತು. ಈಗ ಬಿಸಿಲಿಗಂತೂ ನಮಗೆ ಕೊರತೆ ಇಲ್ಲ. ಬೆಂಡೆ, ಸೋರೆ, ಹೀರೆಗಳ ಒಣಗಿದ ಇಡೀ ಕಾಯಿಯನ್ನು ಹಾಗೇ ಇಡುವುದು ಒಳ್ಳೆಯದು. ಬೀಜ ಬಿಡಿಸಿಡುವುದಾದರೆ ಗಾಜಿನ ಬಾಟಲಿ ಅಥವಾ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಹಾಕಿಡಿ. ಸೊಪ್ಪಿನ ಬೀಜಗಳನ್ನೂ ಅಷ್ಟೆ. ಯಾವುದೇ ಕಾರಣಕ್ಕೂ ಡಬ್ಬಿಗಳಲ್ಲಿ ತೇವಾಂಶ ಉಳಿದಿರಬಾರದು. ಇನ್ನೊಂದು ಕಿವಿಮಾತು. ಡಬ್ಬಿಗಳ ಮೇಲೆ ಅಥವಾ ಒಳಗೆ ಚೀಟಿಯಲ್ಲಿ ಯಾವತ್ತಿನ ಬೀಜ ಎಂಬುದನ್ನು ಬರೆದಿಡಿ. ಮುಂದಿನ ಬಿತ್ತನೆಯ ಕಾಲದಲ್ಲಿ ಬೀಜದ ಆಯ್ಕೆ ಸುಲಭವಾಗುತ್ತದೆ.  
 
ನಿಮ್ಮ ಬಳಿ ಬೀಜಗಳು ಸಾಕಷ್ಟಿವೆಯೆಂದರೆ ಸ್ನೇಹಿತರ, ಆಸಕ್ತರ ಜೊತೆ ಇತರ ಬೀಜಗಳಿಗೆಂದು ವಿನಿಮಯ ಮಾಡಿಕೊಳ್ಳಬಹುದು. ವಿಶೇಷ ದಿನಗಳಂದು ರೈತಮಿತ್ರರಿಗೆ ನೀಡಬಹುದು, ಮಕ್ಕಳಿಗೆ ಕೊಟ್ಟು ಅವರಲ್ಲಿ ಗಿಡದ ಬಗ್ಗೆ ಪ್ರೀತಿಯನ್ನು ಮೊಳೆಸಬಹುದು. ಇನ್ನು ತಡವೇಕೆ? ಇಂದೇ ಆರಂಭಿಸಿ ಬೀಜತಿಜೋರಿಯ ತಯಾರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT