ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಾಹಿತಿಯ ಕಣಜ ಈ ಎಂಜಿನಿಯರ್‌

Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಹೊರತುಪಡಿಸಿ ಬೇರೆ ಕೃಷಿ ಮಾಡುವವರನ್ನು ಹೀಯಾಳಿಸುವವರೇ ಹೆಚ್ಚು. ಆ ಪರಿಯಲ್ಲಿ ಇಲ್ಲಿ ಕಬ್ಬು ಬೆಳೆ ಆವರಿಸಿಕೊಂಡಿದೆ. ಆದ್ದರಿಂದಲೇ ಇಲ್ಲಿನ ರೈತಪರ ಹೋರಾಟಗಳೆಲ್ಲ ಕಬ್ಬು ಬೆಳೆಗಾರರಿಗೇ ಸೀಮಿತ. ಇಂಥವರ ಮಧ್ಯೆ ಇಲ್ಲೊಬ್ಬ ಯುವಕ ಬೇರೆ ಬೇರೆ ಬೆಳೆಗಳನ್ನು ಬೆಳೆಸಿರುವುದು ಮಾತ್ರವಲ್ಲದೇ ತಮ್ಮ ಮನೆಯನ್ನೇ ಕೃಷಿ ಮಾಹಿತಿ ಕೇಂದ್ರವನ್ನಾಗಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಜೊತೆಗೆ, ಯಾವ ವಿಶ್ವವಿದ್ಯಾಲಯದವರು ಹಾಗೂ ಕೃಷಿ ನಿರ್ದೇಶನಾಲಯಗಳು ಮಾಡಲಾಗದಂಥ ಕೆಲಸವನ್ನು ಇವರು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. 
 
ಈ ಯುವಕನ ಹೆಸರು ಬಸನಗೌಡ ವೆಂಕನಗೌಡ ಪೊಲೀಸ್‌ಪಾಟೀಲ. ಬಿ.ಇ ಮೆಕ್ಯಾನಿಕಲ್‌ನಲ್ಲಿ ರ್‍ಯಾಂಕ್‌ ವಿಜೇತ. ಒಳ್ಳೊಳ್ಳೆ ಕಂಪೆನಿಯಲ್ಲಿ ನೌಕರಿ ಪಡೆದುಕೊಳ್ಳುವ ಅವಕಾಶವೂ ಒದಗಿಬಂದಿತ್ತು. ಆದರೆ ‘ಅಂಥ ನೌಕರಿಗಳು ಗುಲಾಮಗಿರಿ ಇದ್ದಂತೆ’ ಎನ್ನುತ್ತಲೇ ಕೃಷಿಯಲ್ಲಿ ಖುಷಿ ಕಂಡುಕೊಂಡಿದ್ದಾರೆ.
ಒಳ್ಳೊಳ್ಳೆ ಉದ್ಯೋಗ ತೊರೆದು ಕೃಷಿ ಮಾಡುವವರ ಸಂಖ್ಯೆ ಇಂದು ಹೆಚ್ಚುತ್ತಲೇ ಇದೆ. ಅವರ ಪೈಕಿ ಬಸನಗೌಡ ಅವರೂ ಒಬ್ಬರು ನಿಜ. ಆದರೆ ಇವರ ಕೆಲಸ ಅಷ್ಟಕ್ಕೇ ನಿಂತಿಲ್ಲ. ಕೃಷಿ ಕ್ಷೇತ್ರದ ಮಹತ್ವದ ವಿಷಯಗಳು ಇವರ ಬಳಿ ಲಭ್ಯ ಇವೆ. ಸುಮಾರು 180 ಕೃಷಿ ಪಂಡಿತರ ಅಲ್ಬಮ್ ಇವರ ಬಳಿ ಇದೆ. ರಾಜ್ಯದಲ್ಲಿರುವ ಮತ್ತು ಪಕ್ಕದ ರಾಜ್ಯಗಳಲ್ಲಿರುವ ಯಶಸ್ವಿ ಕೃಷಿಕರ ಸಂಪೂರ್ಣ ಮಾಹಿತಿ, ಅವರು ಯಾವ ಬೆಳೆಗಳಲ್ಲಿ ಪರಿಣತರು, ಪ್ರತಿ ಎಕರೆಗೆ ಎಷ್ಟು ಫಸಲು ತೆಗೆಯುತ್ತಾರೆ, ಯಾವ ಸಮಯದಲ್ಲಿ ಬಿತ್ತನೆ ಮಾಡುತ್ತಾರೆ, ಯಾವ ಗೊಬ್ಬರ ಬಳಸುತ್ತಾರೆ ಎಂಬಿತ್ಯಾದಿ ಸಮಗ್ರ ಮಾಹಿತಿಯನ್ನು ಕಲೆ ಹಾಕಿರುವ ಇವರು, ಯಶಸ್ವಿ ಕೃಷಿಕರ ಸಂಪೂರ್ಣ ವಿಳಾಸದ ಜೊತೆ ಅಂಥ ಕೃಷಿಕರ ಸಾಧನೆಗಳನ್ನೂ ಸಂಗ್ರಹಿಸಿದ್ದಾರೆ.  ಬೇರೆ ಬೇರೆ ಕೃಷಿ ಆಧಾರಿತ ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ಇವರ ಬಳಿ ಇದೆ. ಕೃಷಿಯಲ್ಲಿ ಹೊಸ ತಂತ್ರಜ್ಞಾನ, ನಾಟಿಪದ್ಧತಿಗಳು, ನೀರು ಪೋಲಾಗದಂತೆ ಬೆಳೆ ಬೆಳೆಯುವ ವಿಧಾನಗಳು, ಸರ್ಕಾರದಿಂದ ಕೃಷಿಗೆ ಲಭಿಸುವ ಸೌಲಭ್ಯಗಳ ಮಾಹಿತಿಗಳೂ ಇವರಲ್ಲಿ ಲಭ್ಯ. ‘ಕೃಷಿ ಕ್ಷೇತ್ರದ ಸಂಪೂರ್ಣ ವಿವರಣೆ ಒಂದೆಡೆ ಇರಬೇಕೆನ್ನುವ ಉದ್ದೇಶ ನನ್ನದು’ ಎನ್ನುತ್ತಾರೆ ಬಸನಗೌಡ.
 
 
 
ಯಾವುದಾದರೂ ಬೆಳೆಗಳ ಬಗ್ಗೆ ವಿವರಣೆ ಕೇಳಿದರೆ ಆ ಬೆಳೆಯನ್ನು ಯಾರು ಬೆಳೆಯುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡುತ್ತಾರೆ. ಜೊತೆಗೆ ದೂರವಾಣಿ ಮೂಲಕ ಅಂಥ ಬೆಳೆಗಾರರ ಸಂಪರ್ಕವನ್ನೂ ನೀಡುತ್ತಾರೆ. ಬೆಳೆಗಳ ಕುರಿತು ಮಾತ್ರವಲ್ಲದೇ ಮೀನುಗಾರಿಕೆ, ರೇಷ್ಮೆ ಕೃಷಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಹಂದಿ ಸಾಕಾಣಿಕೆ, ಜೇನು ಕೃಷಿಕರ ಬಗ್ಗೂ ಇವರಲ್ಲಿ ಮಾಹಿತಿಗಳಿವೆ.
 
ಪ್ರತಿ ಬೆಳೆಗೂ ಡೈರಿ 
ಪ್ರತಿಯೊಂದು ಬೆಳೆಗೂ ಒಂದು ಪ್ರತ್ಯೇಕ ಡೈರಿಯನ್ನು ಮಾಡಿದ್ದಾರೆ. ಅದರಲ್ಲಿ ಬೆಳೆಯ ಬಗ್ಗೆ ಮತ್ತು ಬೆಳೆಗಾರನ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆಹಾಕುತ್ತಾರೆ. ಟೀವಿಯಲ್ಲಿ ಬರುವ ಕೃಷಿ ಮಾಹಿತಿಗಳನ್ನು, ಯಶಸ್ವಿ ಕೃಷಿಕರ ಸಂದರ್ಶನಗಳನ್ನು, ಕೃಷಿರಂಗ ಕಾರ್ಯಕ್ರಮಗಳನ್ನು ತಪ್ಪದೇ ವೀಕ್ಷಿಸುವ ಇವರು ಅದರಲ್ಲಿನ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಈ ಕಾರ್ಯಕ್ಕೆ ಹೆಂಡತಿಯೂ ಸಾಥ್‌ ನೀಡುತ್ತಾರೆ. ಒಂದು ವೇಳೆ  ಟೀವಿಯಲ್ಲಿ ಬರುವ ಕೃಷಿ ಕಾರ್ಯಕ್ರಮಗಳನ್ನು ನೋಡಲು ಆಗದಿದ್ದರೆ ಆ ಚಾನೆಲ್‌ನವರಿಗೆ ಫೋನ್ ಮಾಡಿ ಆ ಕಾರ್ಯಕ್ರಮದ ವಿಡಿಯೊ ಕ್ಲಿಪ್ ತರಿಸಿಕೊಳ್ಳುವಷ್ಟರ ಮಟ್ಟಿಗೆ ಇವರ ಕೃಷಿ ಕಾರ್ಯ ಮುಂದುವರಿದಿದೆ! 
 
ಇದರ ಜೊತೆಗೆ, ಎಲ್ಲ ದಿನ ಪತ್ರಿಕೆಗಳು, ಕೃಷಿ ಪತ್ರಿಕೆಗಳು ಇವರ ಮನೆಗೆ ಬರುತ್ತವೆ. ಅದರಲ್ಲಿನ ಕೃಷಿಪುರವಣಿಗಳಲ್ಲಿನ ವಿಶಿಷ್ಟ ಲೇಖನಗಳನ್ನು ಆಯಾ ಪತ್ರಿಕೆಯ ಹೆಸರಿನಲ್ಲಿಯೇ ಪ್ರತ್ಯೇಕ ಡೈರಿ ಮಾಡಿ ಅಂಟಿಸಿಟ್ಟುಕೊಂಡಿದ್ದಾರೆ. ಇವರ ಬಳಿ ವಿವಿಧ ಬೆಳೆಗಳ 160ಕ್ಕೂ ಹೆಚ್ಚು ಸಿ.ಡಿಗಳಿವೆ. ಅದರಲ್ಲಿ ಆ ಬೆಳೆಯ ಲಕ್ಷಣಗಳು, ರೋಗನಿಯಂತ್ರಣ, ಗೊಬ್ಬರ ಹಾಕುವ ವಿಧಾನ, ನೀರುಣಿಸುವ ವಿಧಾನ, ನೀರು ಪೋಲಾಗದಂತೆ ಯಾವ ರೀತಿ ಕೃಷಿ ಮಾಡಬೇಕು ಎಂಬ ಮಹತ್ವದ ಅಂಶಗಳು ಇವೆ. ಒಟ್ಟಿನಲ್ಲಿ, ಇವರ ಮನೆಯೇ  ಕೃಷಿ ಮಾಹಿತಿ ಕೇಂದ್ರ ಮತ್ತು ವಾಚನಾಲಯದಂತಿದೆ. 
 
‘ಕೃಷಿ ವಿಷಯಗಳನ್ನು ಮತ್ತು ಕೃಷಿಯಲ್ಲಿ ಸಾಧನೆ ಮಾಡಿದವರ ಬಗ್ಗೆ ಮಾಹಿತಿಗಳನ್ನು ಓದಿ ಅಷ್ಟಕ್ಕೆ ಬಿಟ್ಟರೆ ಅದು ಕೆಲದಿನಗಳಾದ ನಂತರ ಮರೆತುಹೋಗುತ್ತದೆ. ಈ ರೀತಿ ಸಂಗ್ರಹಿಸಿಟ್ಟುಕೊಂಡರೆ ತಮಗೂ ಮತ್ತು ಬೇರೆಯವರಿಗೂ ಉಪಯೋಗವಾಗುತ್ತದೆ’ ಎನ್ನುವ ಬಸನಗೌಡರು, ಇಷ್ಟೆಲ್ಲ ಸಂಗ್ರಹಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ.  ಮಹತ್ವದ ಪುಸ್ತಕಗಳು, ಸಿ.ಡಿಗಳು, ಕೃಷಿ ಬಗ್ಗೆ ಯಾವುದೇ ಲೇಖನಗಳು ಸಿಗುತ್ತವೆಂದರೆ ಎಷ್ಟೇ ಖರ್ಚಾದರೂ ಅದಕ್ಕೆ ಲೆಕ್ಕಿಸದೆ ಅದನ್ನು ಪಡೆದುಕೊಳ್ಳುತ್ತಾರೆ. 
 
ತಮ್ಮ ಗ್ರಾಮದ ಕೃಷಿಕರಿಗೆ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿಸಿದ ಬಸನಗೌಡರು, ಸುಮಾರು 20 ಕೃಷಿಕರ ಹೊಲಗಳಲ್ಲಿ ಶೇಡ್ ಹೌಸ್‌ಗಳನ್ನು ನಿರ್ಮಿಸಿ ವಿನೂತನ ಕೃಷಿ ಮಾಡಲು ತೊಡಗಿಸಿದ್ದಾರೆ. ಮಲ್ಚಿಂಗ್‌ಪೇಪರ್ ಬಳಸಿ ಕಡಿಮೆ ನೀರು ಬಳಸಿ ಮಾಡುವ ಕೃಷಿ ಹೀಗೆ ಹತ್ತು ಹಲವು ಪ್ರಯೋಗಗಳನ್ನು ಮೊದಲು ತಾವು ಮಾಡಿ ನಂತರ ತಮ್ಮ ಗ್ರಾಮದ ಯುವಕರನ್ನೂ ಪ್ರೋತ್ಸಾಹಿಸುತ್ತಾರೆ. 
 
‘ನನಗೆ ಇಷ್ಟೊಂದು ಮಾಹಿತಿಗಳನ್ನು ಮತ್ತು ಪುಸ್ತಕಗಳನ್ನು ಸಂಗ್ರಹಿಸಲು ಮತ್ತು ಕೃಷಿಯಲ್ಲಿ ಆಸಕ್ತಿ ಹುಟ್ಟುವಂತೆ ಮಾಡಲು ಕೃಷಿ ವಿಶ್ವವಿದ್ಯಾಲಯದ ಅನೇಕ ವಿಜ್ಞಾನಿಗಳು ಕಾರಣ’ ಎನ್ನುವುದು ಬಸನಗೌಡ ಅವರ ಮಾತು. ಧಾರವಾಡದ ಕೃಷಿ ವಿಶ್ವ ವಿದ್ಯಾಲಯದವರು ಕೂಡ ಕೆಲವು ಯಶಸ್ವಿ ಕೃಷಿಕರ ಬಗ್ಗೆ ಮಾಹಿತಿಗಳನ್ನು ಇವರ ಬಳಿ ಪಡೆಯುತ್ತಾರೆ. ಬಹುತೇಕ ಕೃಷಿ ವಿಜ್ಞಾನಿಗಳು ಇವರೊಂದಿಗೆ ಸಂಪರ್ಕದಲ್ಲಿದ್ದು, ಯಾವುದೇ ರೈತರು ತಮ್ಮ ಬಳಿ ಮಾಹಿತಿಗಾಗಿ ಬಂದರೆ ಬಸನಗೌಡರ ಬಳಿ ಕಳಿಸುತ್ತಾರೆ. 
 
ಇವರ ಜಮೀನಿನಲ್ಲಿ...
ಬಸನಗೌಡರ  ಬಳಿ 29 ಎಕರೆ ಜಮೀನು ಇದ್ದು, ಅದರಲ್ಲಿ ಮೆಣಸಿನಕಾಯಿ, ಬೆಂಡೆ, ಕಲ್ಲಂಗಡಿ, ಕಡಲೆ, ಕಬ್ಬು, ಗೋವಿನಜೋಳ ಹೀಗೆ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹೂಕೋಸು ಮತ್ತು ಎಲೆಕೋಸು ಬೆಳೆಯಲು ಮುಂದಾಗಿದ್ದಾರೆ. ತಮ್ಮ ಎಲ್ಲ ಜಮೀನಿಗೂ ತಂತ್ರಜ್ಞಾನ ಅಳವಡಿಸಿದ್ದಾರೆ. ಅನವಶ್ಯಕವಾಗಿ ನೀರು ಪೋಲಾಗಬಾರದೆಂಬುದೇ ಇವರ ಉದ್ದೇಶ ಎನ್ನುತ್ತಾರೆ. 
 
‘ಫೆಬ್ರುವರಿಯಿಂದ ಜೂನ್‌ ತಿಂಗಳವರೆಗೆ ಯಾವುದೇ ಬೆಳೆಗಳನ್ನು ಬೆಳೆದರೂ ಒಳ್ಳೆಯ ಲಾಭ ಸಿಗುತ್ತದೆ ಮತ್ತು ಒಳ್ಳೆಯ ಫಸಲು ಬರುತ್ತದೆ’ ಎನ್ನುವುದು ಅವರ ಅನುಭವದ ನುಡಿ. 
 
ಯಶಸ್ವೀ ಕೃಷಿಕರ ಮತ್ತು ತಜ್ಞರು ಇರುವ ಒಂದು ವಾಟ್ಸಾಪ್ ಗ್ರೂಪ್ ಒಂದನ್ನು ಇವರೇ ನಿಯಂತ್ರಿಸುತ್ತಿದ್ದು, ಕೃಷಿ ಲೇಖನಗಳನ್ನು ಮಹತ್ವದ ಸಂಗತಿಗಳನ್ನು ಎಲ್ಲರಿಗೂ ತಿಳಿಸುತ್ತಿರುತ್ತಾರೆ ಮತ್ತು ಆಸಕ್ತರು ಇವರ ಬಳಿ ಕೇಳಿ ಪಡೆಯುತ್ತಾರೆ. ಸಂಪರ್ಕ ಸಂಖ್ಯೆ 7619442348.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT