ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತೆ ಹೇಳುವ ಬಾಟಲಿಗಳು...

Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನೋಡುಗರ ಕಣ್ಣಿಗೆ ಅದೊಂದು ಖಾಲಿ ಬಾಟಲಿ. ಆದರೆ ಕಲಾವಿದೆ ಮಾಲಿನಿ ಶೆಟ್ಟಿ ಅವರ ಕಣ್ಣಿಗೆ ಮಾತ್ರ ಅದೊಂದು ಚಂದದ ಕ್ಯಾನ್ವಾಸ್. ಎಲ್ಲೋ ಖಾಲಿ ಸೈಟಿನಲ್ಲಿ ಬಿದ್ದಿರಬೇಕಾದ ಆ ಬಾಟಲಿಗೆ ಜೀವ ನೀಡಿ ಸುಂದರ ರೂಪು ನೀಡುವಲ್ಲಿ ಅವರದು ಎತ್ತಿದ ಕೈ.

ಜೆ.ಪಿ.ನಗರದ ಮಾಲಿನಿ ಮೂಲತಃ ಕಾರವಾರದವರು. ಬಿ.ಎಸ್ಸಿ ಪದವೀಧರೆ. ಬಾಲ್ಯದಿಂದಲೂ ಕಲೆಯ ಕುರಿತು ಆಸಕ್ತಿ ಇತ್ತು. ಬಾಲ್ಯದಲ್ಲಿ ಮೊಳೆತ ಈ ಹವ್ಯಾಸ ನಗರಕ್ಕೆ ಮದುವೆಯಾಗಿ ಬಂದ ಮೇಲೆ ಮತ್ತಷ್ಟು ವಿಸ್ತರಿಸಿತು.

‘ಚಿತ್ರಕಲಾ ಪರಿಷತ್‌ನಲ್ಲಿ ಮೂರು ವರ್ಷ ಮೈಸೂರು ಪೇಂಟಿಂಗ್‌ ಕಲಿತೆ. ಇದು ನನ್ನ ಕಲಾಸಕ್ತಿಯನ್ನು ಪೋಷಿಸಿತು’ ಎನ್ನುತ್ತಾರೆ ಮಾಲಿನಿ.

ಕಳೆದ 22 ವರ್ಷಗಳಿಂದ ಚಿತ್ರ ಬಿಡಿಸುವುದನ್ನೇ ಹವ್ಯಾಸ ಮಾಡಿಕೊಂಡಿರುವ ಇವರು ಗ್ಲಾಸ್‌, ಆಯಿಲ್‌, ಆಕ್ರಿಲಿಕ್ ಸೇರಿದಂತೆ ಹಲವು ವಿಧಾನಗಳಲ್ಲಿ ಚಿತ್ರಗಳನ್ನು ಬಿಡಿಸಬಲ್ಲರು. ಕೇರಳ ಶೈಲಿಯ ಚಿತ್ರಕಲೆಯನ್ನೂ ಅಭ್ಯಾಸ ಮಾಡಿದ್ದಾರೆ.

‘ನಾನು ಕಲಿತಿದ್ದು ನನಗಷ್ಟೇ ಅಲ್ಲ; ಇತರರಿಗೂ ಕಲಿಸಬೇಕು’ ಎನ್ನುವ ಮಾಲಿನಿ, ಮನೆಯಲ್ಲೇ ಕಲಾಭ್ಯಾಸದ ತರಗತಿಗಳನ್ನೂ ನಡೆಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಚಿತ್ರಕಲಾ ತರಗತಿಗಳನ್ನು ನಡೆಸುತ್ತಿದ್ದಾರೆ. ತರಗತಿಗಳಿಗೆ ಬರುವವರ ಪೈಕಿ ಗೃಹಿಣಿಯರ ಸಂಖ್ಯೆಯೇ ಹೆಚ್ಚು. ಶಾಲೆ– ಕಾಲೇಜಿಗೆ ರಜೆ ಇದ್ದಾಗ ಮಕ್ಕಳೂ ತರಗತಿಗಳಿಗೆ ಬರುತ್ತಾರಂತೆ. ಆಗಾಗ ಕಾರ್ಯಾಗಾರಗಳನ್ನೂ ನಡೆಸಿಕೊಡುತ್ತಾರೆ.

ಬಾಟಲಿಯ ಗಾತ್ರ ಹಾಗೂ ಆಕಾರಕ್ಕೆ ಅನುಗುಣವಾಗಿ ಚಿತ್ರ ಬಿಡಿಸಿಕೊಳ್ಳುತ್ತೇನೆ. ಬಣ್ಣದ ಬಾಟಲಿ ಇದ್ದರೆ ‘ಒನ್ ಸ್ಟ್ರೋಕ್ ಪೈಟಿಂಗ್‌’ ಮಾಡುತ್ತೇನೆ. ಅಮೆರಿಕದಲ್ಲಿ ಪ್ರವರ್ಧಮಾನಕ್ಕೆ ಬಂದ ಈ ಶೈಲಿಯಲ್ಲಿ ಒಂದೇ ಬಾರಿಗೆ ಬ್ರಶ್‌ನಲ್ಲಿ ಎರಡು ಬಣ್ಣಗಳನ್ನು ಬಳಸಬಹುದು. ಸಾಮಾನ್ಯ ಬಾಟಲಿಗಳಾದರೆ ಬಟ್ಟೆ ಅಥವಾ ಟಿಶ್ಯೂ ಪೇಪರ್ ಉಪಯೋಗಿಸಿ ಕಲಾಕೃತಿ ರಚಿಸುವೆ. ಚಿತ್ರವೊಂದು ಚೆನ್ನಾಗಿ ಬರಬೇಕು ಎಂದು ಆಲೋಚಿಸುತ್ತೇನೆಯೇ ಹೊರತು, ಇದೇ ರೀತಿ ಇರಬೇಕು ಎಂಬ ಮಿತಿ ಹಾಕಿಕೊಳ್ಳುವುದಿಲ್ಲ’ ಎಂದು ತಾವು ಕಲಾಕೃತಿ ರಚಿಸುವ ವಿಧಾನವನ್ನು ಮಾಲಿನಿ ವಿವರಿಸುತ್ತಾರೆ.

‘ಡೆಕೋಪೇಜ್’ ಎಂಬ ಬಣ್ಣದ ಪೇಪರ್ ಅಥವಾ ಟಿಶ್ಯೂ ಸಿಗುತ್ತದೆ. ಅದನ್ನು ಬಾಟಲಿಯ ಮೇಲೆ ಅಂಟಿಸಿದ ಕೂಡಲೇ ಅದು ಬಾಟಲಿಗೆ ಹೊಸ ರೂಪ ನೀಡುತ್ತದೆ. ಅದರ ಮೇಲೆ ಸ್ವಲ್ಪ ವಿಭಿನ್ನ ವಿನ್ಯಾಸ ಮಾಡಬೇಕು. ಅದು ಒಂದು ಸುಂದರ ಕಲಾಕೃತಿಯನ್ನು ಮೂಡಿಸುತ್ತದೆ. ಕೆಲವು ವಿನ್ಯಾಸಗಳನ್ನು ಯುಟ್ಯೂಬ್‌ನಲ್ಲಿ ನೋಡಿ ಕಲಿತೆ. ಸಾಮಾನ್ಯ ಬಾಟಲಿಯಲ್ಲಿ ಬಟ್ಟೆಗಳಿಂದ ವಿನ್ಯಾಸಗಳಿಸಲು ಎರಡು ದಿನ ತೆಗೆದುಕೊಳ್ಳುತ್ತೇನೆ. ಒನ್‌ ಸ್ಟ್ರೋಕ್‌ ಪೇಂಟಿಂಗ್‌ ಆದರೆ ಎರಡು ಗಂಟೆಗಳಲ್ಲಿ ಮುಗಿಸುತ್ತೇನೆ’ ಎನ್ನುತ್ತಾರೆ ಮಾಲಿನಿ.

ಸ್ನೇಹಿತರು, ಕ್ಲಬ್‌ ಹಾಗೂ ಕ್ಲಾಸ್‌ಗೆ ಬರುವವರು ಮಾಲಿನಿ ಅವರಿಗೆ ಬಾಟಲಿಗಳನ್ನು ತಂದುಕೊಡುತ್ತಾರೆ. ಮನೆಯಲ್ಲಿ ಖಾಲಿಯಾದ ಶ್ಯಾಂಪು ಹಾಗೂ ಚಾಕಲೇಟ್ ಡಬ್ಬ ಕೂಡ ಇವರ ಕೈಯಲ್ಲಿ ಸುಂದರ ಕಲಾಕೃತಿಯಾಗಿ ಅರಳುತ್ತದೆ. ಸ್ನೇಹಿತರು ಹಾಗೂ ಬಂಧುಗಳಿಗೆ ಕಲಾಕೃತಿಗಳನ್ನು ಉಡುಗೊರೆ ರೂಪದಲ್ಲಿ  ನೀಡುತ್ತಾರೆ.

ಇಲ್ಲಿಯವರೆಗೆ ಸುಮಾರು 500ಕ್ಕೂ ಅಧಿಕ ಮಂದಿಗೆ ಇವರು ಬಾಟಲಿ ಕಲಾಕೃತಿಯನ್ನು ಕಲಿಸಿದ್ದಾರೆ. ಕಸದಿಂದ ರಸ ಎಂಬಂತೆ ಮನೆಯಲ್ಲಿ ಎಸೆಯುವ ವಸ್ತುಗಳಿಂದಲೇ ಸುಂದರ ಕಲಾಕೃತಿಗಳನ್ನು ನಿರ್ಮಿಸುತ್ತಾರೆ ಮಾಲಿನಿ. ಕೇವಲ ಬಣ್ಣಗಳನ್ನು ಮಾತ್ರ  ಹಣ ಕೊಟ್ಟು ಖರೀದಿಸುತ್ತಾರೆ.
ಬಾಟಲಿಯಲ್ಲೇ ದೀಪದ ಆಕಾರದ ಕಲಾಕೃತಿಯೊಂದನ್ನು ರಚಿಸಬೇಕು ಎಂಬುದು ಇವರ ಭವಿಷ್ಯದ ಕನಸು. 
ಸಂಪರ್ಕಕ್ಕೆ: 9740444448.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT