ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಪ್ಪಲಿ ನಿಕೃಷ್ಟವಲ್ಲ

Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಜಾರಿ ಯಾವಾಗ?
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಏಕರೂಪ ವೇಳಾಪಟ್ಟಿ ಜಾರಿ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಿನ್ನ ಭಿನ್ನ ವೇಳಾಪಟ್ಟಿಗಳು ಜಾರಿಯಲ್ಲಿವೆ. ಏಕರೂಪ ವೇಳಾಪಟ್ಟಿಯ ಕನಸನ್ನು ಕಂಡಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ನಿರಾಸೆಯಾಗಿದೆ. 
 
ಭಿನ್ನ ವೇಳಾಪಟ್ಟಿಯಿಂದ ಪರೀಕ್ಷೆ ಮತ್ತು ಫಲಿತಾಂಶ ಏರುಪೇರಾಗುತ್ತಿದ್ದು, ಕೆಲವು ವಿಶ್ವವಿದ್ಯಾಲಯಗಳಲ್ಲಿ ತಡವಾಗಿ ಪರೀಕ್ಷೆ ನಡೆಸಿ ತಡವಾಗಿ ಫಲಿತಾಂಶವನ್ನು ನೀಡಲಾಗುತ್ತಿದೆ. ತಡವಾಗಿ ಪರೀಕ್ಷೆಯನ್ನು ನಡೆಸುವುದರಿಂದ  ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮೊದಲು ಪರೀಕ್ಷೆ ನಡೆಸಿ ಫಲಿತಾಂಶ ನೀಡಿದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಮುಂದಿನ ಹಂತದ ಉನ್ನತ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಇದರ ಲಾಭ ಪಡೆಯುತ್ತಿದ್ದಾರೆ. ತಡವಾಗಿ ಪರೀಕ್ಷೆ ನಡೆಸಿದ ಕಡೆ, ಪದವಿ ಮುಗಿಸಿದ ಪ್ರತಿಭಾವಂತರಿಗೆ ಅವಕಾಶಗಳು ಕೈತಪ್ಪುತ್ತಿವೆ. ಮುಂದಿನ ಶೈಕ್ಷಣಿಕ ವರ್ಷದಿಂದಲಾದರೂ ರಾಜ್ಯ ಸರ್ಕಾರ ಕಡ್ಡಾಯವಾಗಿ ಏಕರೂಪ ವೇಳಾಪಟ್ಟಿಯನ್ನು ಜಾರಿ ಮಾಡಲಿ. 
ಜಯಪ್ರಕಾಶ್ ಬಿರಾದಾರ್, ದಾವಣಗೆರೆ
 
ಚಪ್ಪಲಿ ನಿಕೃಷ್ಟವಲ್ಲ
‘ಮಂಗಳೂರಿನ ಸೌಹಾರ್ದ ರ್‍ಯಾಲಿಯನ್ನು ವಿರೋಧಿಸುವವರು ಚಪ್ಪಲಿಗಿಂತ ಕೀಳು’ ಎಂದು ಸಚಿವ ಯು.ಟಿ.ಖಾದರ್ ಟೀಕಿಸಿದ್ದಾರೆ (ಪ್ರ.ವಾ., ಫೆ. 25). ಅವರವರ ವಾದ ಪ್ರತಿವಾದಗಳು ಏನೇ ಇರಲಿ, ಈ ವಿವಾದದಲ್ಲಿ ಚಪ್ಪಲಿ ಪ್ರವೇಶವಾಗಿರುವುದು ಸಹ್ಯವಲ್ಲ. ಪಾದಗಳಿಗೆ ರಕ್ಷಣೆ ಕೊಡುವ ಚಪ್ಪಲಿಗಳನ್ನು ಹೀಗೆ ನಿಕೃಷ್ಟವಾಗಿ ಕಾಣುವುದು ತಪ್ಪು. 
 
ವನವಾಸಕ್ಕೆ ಹೋದ ರಾಮನ ಪಾದರಕ್ಷೆಗಳನ್ನು ಸಿಂಹಾಸನದ ಮೇಲಿಟ್ಟು ಪೂಜಿಸಿದ ಭರತ, ಶರಣು ಶರಣಾರ್ಥಿ ಎಂದು ಹೇಳಿದ ಬಸವಣ್ಣನಿಗೆ ತನ್ನ ಚರ್ಮದಿಂದ ಚಪ್ಪಲಿ ತಯಾರಿಸಿ ಕೊಟ್ಟು ಧನ್ಯತಾಭಾವ ತಾಳಿದ ಶರಣ ಮಾಚಯ್ಯ... ಇವರಿಗೆಲ್ಲ ಗೌರವದ ಸಂಕೇತವಾಗಿದ್ದ ಚಪ್ಪಲಿಯನ್ನು ಹೀಗೆ ತುಚ್ಛವಾಗಿ ಕಾಣುವುದು ಸರಿಯೇ? ತನಗಾಗದವರನ್ನು ನಾಯಿ, ಮಂಗಗಳಿಗೆ ಹೋಲಿಸುವ ಕೆಟ್ಟ ಪ್ರವೃತ್ತಿ ನಾಯಕರಲ್ಲಿ ಹುಟ್ಟಿಕೊಂಡಿರುವುದು ಸಹ ಸಭ್ಯತೆಯ ಲಕ್ಷಣವಲ್ಲ.
ಮಲ್ಲಿಕಾರ್ಜುನ ಹುಲಗಬಾಳಿ, ಬನಹಟ್ಟಿ
 
ಏನೆಂದು ಕೇಳಲಿ?
ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮದ ಬಗ್ಗೆ ಆಕಾಶವಾಣಿಯಲ್ಲಿ ಪ್ರಚಾರ ಮಾಡುತ್ತಿರುವುದು ಕೇಳಿದರೆ ‘ಏಳು ಕೋಟಿ ಮೈಲಾರಲಿಂಗೇಶ್ವರ ಜಾತ್ರೆ’ಯಲ್ಲಿ ಕೇಳಿ ಬರುವ ‘ಕಾರಣಿಕ ನುಡಿ’ ಪ್ರಸಾರವಾಗುವುದೇನೋ ಎಂಬಂತೆ ಭಾಸವಾಗುತ್ತಿದೆ. ಮನದಾಳದ ಮಾತು ಎಂದರೆ ಸಂಪೂರ್ಣ ರಾಜಕೀಯೇತರ ವ್ಯಕ್ತಿಯಿಂದಲೋ, ತನ್ನ ಸಾಹಿತ್ಯ ದಿಂದಲೋ, ತಪಸ್ಸಿನಿಂದ ದಿವ್ಯ ಶಕ್ತಿಯನ್ನು ಪಡೆದ ಋಷಿ ಮುನಿಯಿಂದಲೋ ಅಥವಾ ಸಮಾಜ ಸುಧಾರಕನಿಂದಲೋ ಕೇಳಿ ಬರುವ ಮಾತು ಎಂದುಕೊಂಡಿದ್ದೆ.
 
ಆದರೆ ಒಂದು ರಾಜಕೀಯ ಪಕ್ಷದಿಂದ ಆಯ್ಕೆಯಾಗಿ ಪ್ರಧಾನಿ ಕುರ್ಚಿಯಲ್ಲಿ ಕುಳಿತ ಮೇಲೆ ಮನದಾಳದ ಮಾತು ಹೇಳುವುದೆಂದರೆ? ಅದನ್ನು ರಾಷ್ಟ್ರದ ಪ್ರತಿಯೊಬ್ಬರೂ ಕೇಳಲೇಬೇಕೆಂಬಂತೆ ವೈಭವೀಕರಿಸಿ, ಆಕಾಶವಾಣಿಯಿಂದ ಹಿಡಿದು ಟಿ.ವಿ.,  ಇಂಟರ್‌ನೆಟ್‌, ಸುದ್ದಿ ವಾಹಿನಿ, ದಿನಪತ್ರಿಕೆಗಳಲ್ಲೆಲ್ಲಾ ಪ್ರಚಾರ ಮಾಡುತ್ತಿರುವುದು ನೋಡಿದರೆ ಗೊಂದಲವಾಗುತ್ತಿದೆ. 
 
ಕಳೆದ ಬಾರಿಯ ‘ಮನ್ ಕೀ ಬಾತ್’ನಲ್ಲಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವುದರ ಬಗ್ಗೆ ಪ್ರಧಾನಿ ಹೇಳಿದರೇ ಹೊರತು,  ದೇಶದಲ್ಲಿ ಇರುವ ಶಿಕ್ಷಣ ವ್ಯವಸ್ಥೆ, ಜನಸಾಮಾನ್ಯರನ್ನು ದೋಚುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ಈ ಕ್ಷೇತ್ರದಲ್ಲಿ ಇರುವ ತಾರತಮ್ಯದ ಬಗ್ಗೆ ಒಂದೂ ಮಾತನಾಡಲಿಲ್ಲ. ಮಹಾದಾಯಿ ಮತ್ತು ಕಾವೇರಿ ನದಿ ನೀರಿನ ವಿಷಯವಾಗಿ ಇಡೀ ಬೆಂಗಳೂರೇ ಹೊತ್ತಿ ಉರಿದರೂ ಏನೂ ಮಾತನಾಡದವರ ‘ಮನ್ ಕೀ ಬಾತ್’ ಅನ್ನು ಹೇಗೆ ಕೇಳುವುದು?
ಗೋಪಾಲ ನಾಯ್ಕ, ಬೆಂಗಳೂರು 
 
ಬೆದರಿಕೆಯ ನುಡಿಗಟ್ಟು
‘ಗೋಪಾಲಕೃಷ್ಣ ಅಡಿಗರು ಒಂದು ಸುಂದರ ದ್ವೀಪದಂತೆ. ಆದರೆ ಆ ದ್ವೀಪದ ಸುತ್ತ ಸುಡುವ ನೀರು ಆವರಿಸಿದೆ. ಅದನ್ನು ಮುಟ್ಟಲು ಎಂಟೆದೆ ಬೇಕು’ ಎಂದು ಹೇಳಿರುವ ಸಾಹಿತಿ ಡಾ. ಬಸವರಾಜ ಕಲ್ಗುಡಿ ಅವರ ಮಾತುಗಳನ್ನು ಓದುತ್ತಿದ್ದಂತೆಯೇ (ಪ್ರ.ಜಾ., ಫೆ. 27) ಕಳೆದ ಐವತ್ತು ವರ್ಷಗಳ ಹಿಂದಿನ ಕಾವ್ಯದ ಓದು ಮತ್ತು ವಿಮರ್ಶಾ ಲೋಕದ ನೆನಪಾಯಿತು.
 
ಎಪ್ಪತ್ತರ ದಶಕದಲ್ಲಿ ನವ್ಯಕಾವ್ಯದ ಕವಿಗಳು ಮತ್ತು ವಿಮರ್ಶಕರ ಮಾತುಗಳನ್ನು ಕೇಳುತ್ತಿದ್ದಂತೆಯೇ, ಕೇವಲ ಕನ್ನಡ ನುಡಿಯೊಂದನ್ನು ಬಲ್ಲ ಹಾಗೂ ಹಳ್ಳಿಗಾಡಿನ ವಾತಾವರಣದಲ್ಲಿ ಬೆಳೆದು ಬಂದು ಕನ್ನಡ ಅಧ್ಯಾಪಕ ವೃತ್ತಿಯಲ್ಲಿ ತೊಡಗಿದ್ದ ನನ್ನಂಥವರಿಗೆ ‘ಇರುವ ಒಂದು ಎದೆಯೇ ನಡುಗುತ್ತಿತ್ತು’. 
ಏಕೆಂದರೆ ‘ಕುವೆಂಪು ಕವಿಯೇ ಅಲ್ಲ; ಕುವೆಂಪುವಿನ ಕಾವ್ಯದ ಸಾಲುಗಳು ಕೇವಲ ಹೇಳಿಕೆಗಳೇ ಹೊರತು, ಅದರಲ್ಲಿ ಕಾವ್ಯಶಿಲ್ಪವಿಲ್ಲ’ ಎಂದು ತೆಗಳುತ್ತಾ, ಗೋಪಾಲಕೃಷ್ಣ ಅಡಿಗರ ಕೆಲವು ಕವನಗಳ ಕಾವ್ಯಶಿಲ್ಪ ಮತ್ತು ಕಾವ್ಯವಸ್ತುವಿನ ಸಂಕೀರ್ಣತೆಯನ್ನು ಹಾಡಿಹೊಗಳುತ್ತಿದ್ದ ಮಾತುಗಳು ಕನ್ನಡ ಕಾವ್ಯದ ಓದುಗರಲ್ಲಿ ಒಂದು ಬಗೆಯ ಗೊಂದಲವನ್ನುಂಟು ಮಾಡುವುದರ ಜತೆಜತೆಗೆ, ಕೆಲವರಲ್ಲಿ ಕೀಳರಿಮೆಯನ್ನೂ ಉಂಟು ಮಾಡಿದ್ದವು.
 
ಅಂದಿನ ಕೆಲವು ನವ್ಯಕವಿಗಳು ಮತ್ತು ವಿಮರ್ಶಕರು ಬಳಸುತ್ತಿದ್ದ ನುಡಿಗಟ್ಟುಗಳು ಕಾವ್ಯದ ಸಹಜವಾದ ಓದುವಿಕೆ ಮತ್ತು ಗ್ರಹಿಕೆಗೆ ದೊಡ್ಡ ಆತಂಕವನ್ನು ಉಂಟುಮಾಡಿದ್ದವು. ಯಾವುದೇ ಕಾವ್ಯದ ರಚನೆ ಮತ್ತು ಕಾವ್ಯದ ವಿಮರ್ಶೆಯು ಓದುಗನಲ್ಲಿರುವ ಒಂದು ಎದೆಗೆ ತಿಳಿಯುವಂತಿರಬೇಕೇ ಹೊರತು, ಎಂಟೆದೆಯನ್ನು ಬಯಸಬಾರದು.
ಸಿ.ಪಿ.ನಾಗರಾಜ, ಬೆಂಗಳೂರು
 
ಇದೇನಾ ದಿನಚರಿ...?

ಹರಿ ಹರಿ
ದಿನಬೆಳಗಾದರೆ
ಇದೇನಾ ಇವರ ದಿನಚರಿ?
ನೀವು ಕೊಟ್ಟಿದ್ದೀರಿ...
ನೀವೇನು ಕಡಿಮೆಯೇ...?
ನೀವೂ ಕೊಟ್ಟಿದ್ದೀರಿ...!
ಪರಸ್ಪರ ಆರೋಪ
ಪ್ರತ್ಯಾರೋಪಗಳ ಈ ಪರಿ
ಬಲ್ಲವರಾರು ಇವರ ಪಿತೂರಿ
ಬೇಸತ್ತ ಜನ ಆಡಿಕೊಳ್ಳುತ್ತಿದ್ದಾರೆ
ಇದೆಂಥಾ ಡೈರಿ?
ಛೀ ಥೂ ಇದೇನ್ರಿ...!
  ಮ.ಗು.ಬಸವಣ್ಣ, ನಂಜನಗೂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT