ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಗತ್ಯ ಸಿಸೇರಿಯನ್‌ ಹೆರಿಗೆಗೆ ಅಂಕುಶ ಬೀಳಲಿ

Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಯಾವುದೇ ವೈದ್ಯಕೀಯ ಕಾರಣವಿಲ್ಲದೆ ಶಸ್ತ್ರಕ್ರಿಯೆ ಮೂಲಕ ಮಾಡುವ ಹೆರಿಗೆಗಳ (ಸಿಸೇರಿಯನ್‌) ಪ್ರಮಾಣ ಕಳೆದ ದಶಕದಲ್ಲಿ ಭಾರಿ ಏರಿಕೆ ಕಂಡಿದೆ. ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಈ ಪ್ರವೃತ್ತಿ ಕಂಡು ಬರುತ್ತಿದೆ. ಈ ಬಗ್ಗೆ ಜನರು ತಮ್ಮಲ್ಲೇ ಮಾತನಾಡಿಕೊಳ್ಳುವುದು ನಡೆದೇ ಇತ್ತು. ಇಂತಹ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಸುಭರ್ನಾ ಘೋಷ್‌ ಎಂಬುವರು ಆನ್‌ಲೈನ್‌ ಅಭಿಯಾನವನ್ನು ಆರಂಭಿಸಿದ್ದರು.
 
ಈ ಅಭಿಯಾನಕ್ಕೆ ಇದುವರೆಗೆ 1.3 ಲಕ್ಷ ಮಂದಿ ಸಹಿ ಹಾಕಿದ್ದಾರೆ. ಸಾಂಸ್ಥಿಕ ಹೆರಿಗೆಗಳಲ್ಲಿ ಉತ್ತರದಾಯಿತ್ವ ಹಾಗೂ ಪಾರದರ್ಶಕತೆ ತರುವುದಕ್ಕಾಗಿ ಸರ್ಕಾರ ಮಧ್ಯಪ್ರವೇಶಿಸಬೇಕು ಎಂಬ ಆಗ್ರಹ ಇಲ್ಲಿ ಜನರಿಂದ ವ್ಯಕ್ತವಾಗಿದೆ. ಇದಕ್ಕೆ ಸ್ಪಂದಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು ನೀಡಿರುವ ಸಲಹೆ ಮುಖ್ಯವಾದದ್ದು. ‘ವೈದ್ಯಕೀಯ ಕಾರಣವಿಲ್ಲದೆ ಸಿಸೇರಿಯನ್ ಹೆರಿಗೆ ಮಾಡಿಸುವ ವೈದ್ಯರ ಹೆಸರನ್ನು ಬಹಿರಂಗ ಪಡಿಸಬೇಕು. ಈ ಮೂಲಕ ಅವರಿಗೆ ಅವಮಾನ ಮಾಡಬೇಕು’ ಎಂದು ಸಚಿವೆ ಸೂಚಿಸಿದ್ದಾರೆ.
 
ಜೊತೆಗೆ ಒಂದು ತಿಂಗಳಲ್ಲಿ ಎಷ್ಟು ಹೆರಿಗೆಗಳನ್ನು ಶಸ್ತ್ರಕ್ರಿಯೆಯ ಮೂಲಕ ಮಾಡಲಾಗಿದೆ ಮತ್ತು ಎಷ್ಟು ಸಹಜ ಹೆರಿಗೆ ಆಗಿವೆ ಎಂಬ ವಿವರಗಳನ್ನು ಆಸ್ಪತ್ರೆಗಳು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಬೇಕು ಎಂಬಂತಹ ಅವರ ಸಲಹೆ ದೂರಗಾಮಿ ಪರಿಣಾಮ ಬೀರುವಂತಹದ್ದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಮೇನಕಾ ಪತ್ರವನ್ನೂ ಬರೆದಿದ್ದಾರೆ.
 
ಸಿಸೇರಿಯನ್ ಹೆರಿಗೆಗಳ ಸಂಖ್ಯೆಯನ್ನು ಆಸ್ಪತ್ರೆಗಳು ಸಾರ್ವಜನಿಕವಾಗಿ ಪ್ರಕಟಿಸಿದರೆ, ಹೆರಿಗೆಗಾಗಿ ಯಾವ ಆಸ್ಪತ್ರೆ ಆಯ್ಕೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಕೈಗೊಳ್ಳಲು ಮಹಿಳೆಯರಿಗೆ ಸುಲಭವಾಗಲಿದೆ ಎಂಬುದು ಒಂದು ಅಭಿಪ್ರಾಯ. ಮಾಹಿತಿಪೂರ್ಣವಾದ ಆಯ್ಕೆ ಮಾಡಿಕೊಳ್ಳುವ ಅವಕಾಶ ಜನರಿಗೆ ಲಭ್ಯವಾಗುವುದರಿಂದ ಇದು ಸಕಾರಾತ್ಮಕ ಪ್ರಯೋಗ ಎಂದು ಪರಿಗಣಿಸಲು ಅಡ್ಡಿ ಇಲ್ಲ.
 
ರಾಷ್ಟ್ರದಲ್ಲಿ ನಡೆಯುವ ಒಟ್ಟು ಹೆರಿಗೆಗಳಲ್ಲಿ  ಶೇ 10–15ರಷ್ಟು ಹೆರಿಗೆಗಳನ್ನು ಮಾತ್ರ ಶಸ್ತ್ರಕ್ರಿಯೆ ಮೂಲಕ ಮಾಡಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ನಿಯಮಗಳು ಹೇಳುತ್ತವೆ. ಆದರೆ 2015–16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ, ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಿದೆ. ತೆಲಂಗಾಣದಲ್ಲಿ ಈ ಪ್ರಮಾಣ ಶೇ 58ರಷ್ಟಿದ್ದರೆ, ತಮಿಳುನಾಡಿನಲ್ಲಿ ಶೇ 34.1ರಷ್ಟಿದೆ.
 
ಅದರಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಇನ್ನೂ ಜಾಸ್ತಿ ಇದೆ. ಕೆಲವು ರಾಜ್ಯಗಳಲ್ಲಿ ಈ ಪ್ರಮಾಣ ಶೇ 87ರಷ್ಟಿದೆ ಎಂದರೆ ಸಮಸ್ಯೆ ತೀವ್ರವಾಗಿದೆ ಎಂದೇ ಪರಿಗಣಿಸಬೇಕು. ಇದಕ್ಕೆ ಕಾರಣ ತಿಳಿದಿರುವಂತಹದ್ದೇ. ನೈಸರ್ಗಿಕ ಹೆರಿಗೆಗಿಂತ ಸಿಸೇರಿಯನ್ ಹೆರಿಗೆಗಳು ದುಬಾರಿ. 40,000 ರೂಪಾಯಿಯಿಂದ  ವೆಚ್ಚ ಆರಂಭವಾಗುತ್ತದೆ. ಆದರೆ ಸಿಸೇರಿಯನ್ ಹೆರಿಗೆ ನಂತರ ಚೇತರಿಕೆ ನಿಧಾನ ಹಾಗೂ ಅನೇಕ ಆರೋಗ್ಯ ಅಪಾಯಗಳ ಸಾಧ್ಯತೆಗಳೂ ಇರುತ್ತವೆ ಎಂಬುದರ ಬಗ್ಗೆ  ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ.
 
ಅಮ್ಮಂದಿರಷ್ಟೇ ಅಲ್ಲ ನವಜಾತ ಶಿಶು ಕೂಡ ಅಪಾಯಗಳಿಗೆ ಸಿಲುಕಬಹುದಾದ ಸಾಧ್ಯತೆ ಇರುತ್ತದೆ. ಅನೇಕ ಬಾರಿ ಸಿಸೇರಿಯನ್ ಹೆರಿಗೆಗಳು ತಾಯಿ– ಮಗುವಿನ ಜೀವ ಉಳಿಸಿವೆ ಎಂಬುದೂ ನಿಜ. ಆದರೆ ಅನಿವಾರ್ಯ ಇಲ್ಲದಿದ್ದರೂ ವಾಣಿಜ್ಯ ದೃಷ್ಟಿಕೋನವೇ ಪ್ರಧಾನವಾಗಿ ಸಿಸೇರಿಯನ್ ಹೆರಿಗೆ ಮಾಡಿಸುವುದು ಅನೈತಿಕ.     
 
ಬರೀ ವೈದ್ಯರನ್ನೇ ದೂರಿದರೂ ಸಾಲದು. ಜೀವನ ಶೈಲಿಯ ಬದಲಾವಣೆ ಹಾಗೂ ದುಡ್ಡಿದ್ದವರ ಹೊಸ ಬಗೆಯ ಮೂಢನಂಬಿಕೆಗಳ ಕೊಡುಗೆಯೂ ಸಿಸೇರಿಯನ್ ಹೆರಿಗೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಮಹಿಳೆಯ ಮೇಲೆ ಅನಗತ್ಯವಾಗಿ ಹೇರಲಾಗುವ ಈ ಶಸ್ತ್ರಕ್ರಿಯೆ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ಸ್ವತಃ ಮಹಿಳೆ ಹಾಗೂ ಆಕೆಯ ಕುಟುಂಬದವರೂ ಪಾಲ್ಗೊಳ್ಳುತ್ತಿರುವುದು ಆತಂಕದ ಸಂಗತಿ.
 
ಇಂತಹದೇ ದಿನ, ನಕ್ಷತ್ರದ ಶುಭ ಮುಹೂರ್ತದಲ್ಲಿ ಶಿಶು ಜನಿಸಬೇಕೆಂಬ ಕಾರಣಕ್ಕಾಗಿ ಸಿಸೇರಿಯನ್ ಹೆರಿಗೆಯನ್ನೇ ಮಾಡಬೇಕೆಂದು ವೈದ್ಯರ ಮೇಲೆ ಒತ್ತಡ ಹೇರುವವರೂ ಇದ್ದಾರೆ.  ಇಂತಹ ಮೂಢನಂಬಿಕೆಯ ಪ್ರವೃತ್ತಿಗೆ ವೈದ್ಯಕೀಯ ಲೋಕ ಮಣೆ ಹಾಕಬಾರದು.  ಇನ್ನು ಕೆಲವರು ಸಹಜ ಹೆರಿಗೆಯ ನೋವುಣ್ಣಲು ಸಿದ್ಧರಿಲ್ಲದೆ ಸಿಸೇರಿಯನ್ ಹೆರಿಗೆ ಮೊರೆಹೋಗುವುದೂ ಉಂಟು. ಹೀಗಾಗಿ, ಸಹಜ ಹೆರಿಗೆಯ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸುವುದು ಆದ್ಯತೆಯ ಸಂಗತಿಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT