ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಾ, ರಾಜೀಂದರ್, ಪದ್ಮಾಕರ್‌ಗೆ ಗೌರವ

ಮೂವರು ಕ್ರಿಕೆಟಿಗರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ
Last Updated 27 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ದೇಶಿ ಕ್ರಿಕೆಟ್‌ನ ಮಾಜಿ ಆಟಗಾರರಾದ ರಾಜೀಂದರ್ ಗೋಯೆಲ್‌, ಪದ್ಮಾಕರ್‌ ಶಿವಾಲ್ಕರ್‌ ಮತ್ತು ಭಾರತ ಮಹಿಳಾ ತಂಡದ ನಾಯಕಿಯಾಗಿದ್ದ ಕರ್ನಾಟಕದ ಶಾಂತಾ ರಂಗಸ್ವಾಮಿ ಅವರು  ಬಿಸಿಸಿಐ  ನೀಡುವ ‘ಸಿ.ಕೆ. ನಾಯ್ಡು’ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ಶಾಂತಾ ಅವರು ಈ ಗೌರವ ಪಡೆದ ಭಾರತದ ಮೊದಲ ಆಟಗಾರ್ತಿ ಎನ್ನುವ ಗೌರವ ತಮ್ಮದಾಗಿಸಿಕೊಂಡಿದ್ದಾರೆ.
‘ಎನ್‌. ರಾಮ್‌, ಇತಿಹಾಸಕಾರ ರಾಮಚಂದ್ರ ಗುಹಾ, ಭಾರತ ತಂಡದ ಮಾಜಿ ಆಟಗಾರ್ತಿ ಡಿಯಾನಾ ಎಡುಲ್ಜಿ ಅವರನ್ನು ಒಳಗೊಂಡ ಸಮಿತಿಯು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮಾರ್ಚ್‌ 8ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’ ಎಂದು ಬಿಸಿಸಿಐ ತಿಳಿಸಿದೆ.

ಹರಿಯಾಣದ ರಾಜೀಂದರ್ 1958ರಿಂದ 1985ರ ಅವಧಿಯಲ್ಲಿ 157 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಸ್ಪಿನ್ನರ್‌ ಆಗಿದ್ದ ಅವರು ಒಟ್ಟು 750 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 18.58ರ ಸರಾಸರಿಯಲ್ಲಿ  ಈ ಸಾಧನೆ ಮಾಡಿದ್ದಾರೆ. ಇನಿಂಗ್ಸ್‌ನಲ್ಲಿ 55 ರನ್ ನೀಡಿ ಎಂಟು ವಿಕೆಟ್‌ ಪಡೆದಿದ್ದು ಶ್ರೇಷ್ಠ ಬೌಲಿಂಗ್ ಎನಿಸಿದೆ.

ದೇಶಿ ಟೂರ್ನಿಗಳಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಪದ್ಮಾಕರ್ 124  ಪ್ರಥಮ ದರ್ಜೆ ಪಂದ್ಯಗಳಿಂದ 589 ವಿಕೆಟ್‌ಗಳನ್ನು ಪಡೆದಿದ್ದಾರೆ. 1961ರಿಂದ 1988ರ ಅವಧಿಯಲ್ಲಿ ದೇಶಿ ಟೂರ್ನಿಗಳಲ್ಲಿ ಆಡಿದ್ದರು.

ವಿಶೇಷ ಪ್ರಶಸ್ತಿ: ಎರಡು ಟೆಸ್ಟ್‌ ಮತ್ತು 129 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ತಮಿಳುನಾಡಿನ ವಾಮನ್‌ ಕುಮಾರ್ ಮತ್ತು ದಿವಂಗತ ರಮಾಕಾಂತ್ ದೇಸಾಯಿ ಅವರನ್ನು ಬಿಸಿಸಿಐ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮಹಾರಾಷ್ಟ್ರದ ದೇಸಾಯಿ ಅವರು 28 ಟೆಸ್ಟ್‌, 150 ಪ್ರಥಮ ದರ್ಜೆ ಮತ್ತು ಒಂದು ಲೀಸ್ಟ್‌್ ‘ಎ’ ಪಂದ್ಯ ಆಡಿದ್ದಾರೆ.

8ರಂದೇ ಉಪನ್ಯಾಸ: ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮೊದಲು ಮನ್ಸೂರ್‌ಅಲಿಖಾನ್ ಪಟೌಡಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಮಾಜಿ ಕ್ರಿಕೆಟಿಗ ಫಾರೂಕ್‌ ಎಂಜಿನಿಯರ್ ಅವರು ಉಪನ್ಯಾಸ ನೀಡಲಿದ್ದಾರೆ.

ಮಹಿಳಾ ಕ್ರಿಕೆಟ್‌ಗೆ ಸಿಕ್ಕ ಗೌರವ: ಶಾಂತಾ
ಬೆಂಗಳೂರು : ನೌ‘ನನಗೆ ಪ್ರಶಸ್ತಿ ಸಿಕ್ಕಿದೆ ಎನ್ನುವುದಕ್ಕಿಂತ ಮಹಿಳಾ ಕ್ರಿಕೆಟ್‌ಗೆ ಲಭಿಸಿದ ದೊಡ್ಡ ಗೌರವ ಇದು ಎಂದರೆ ಸರಿಯಾಗುತ್ತದೆ. ವಿಷಯ ತಿಳಿದು ತುಂಬಾ ಸಂತೋಷವಾಯಿತು’ ಎಂದು ಶಾಂತಾ ರಂಗಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು  ‘ಮಹಿಳಾ ಕ್ರಿಕೆಟ್ ಬಿಸಿಸಿಐ ಸುಪರ್ದಿಗೆ ಬಂದು ಈಗ ಹತ್ತು ವರ್ಷಗಳು ಉರುಳಿವೆ. ಆದರೂ ಈ ಪ್ರಶಸ್ತಿಗೆ ಆಟಗಾರ್ತಿಯೊಬ್ಬರನ್ನು ಗುರುತಿಸಿದ್ದು ಇದೇ ಮೊದಲು. ಅದು ನನ್ನಿಂದಲೇ ಪ್ರಾರಂಭವಾಗಿದ್ದು ಖುಷಿಯಾಗಿದೆ. ಇನ್ನು ಮುಂದೆ ಪ್ರತಿ ವರ್ಷವೂ ಮಹಿಳಾ ಸಾಧಕರಿಗೆ ಗೌರವ ಲಭಿಸಲಿ.   ಮಹಿಳೆಯರಿಗೆ ಹೆಚ್ಚು ಪ್ರಶಸ್ತಿಗಳು ಸಿಗಲಿ’ ಎಂದು ಅವರು ಆಶಿಸಿದರು.

‘22 ವರ್ಷ ಕ್ರಿಕೆಟ್ ಆಡಿದ್ದೇನೆ. 16 ವರ್ಷ ಭಾರತ ತಂಡದಲ್ಲಿ ಆಡಿದ್ದೇವೆ. ಹತ್ತು ವರ್ಷ ನಾಯಕಿ ಸ್ಥಾನದ ಜವಾಬ್ದಾರಿ ನಿಭಾಯಿಸಿದ್ದೇನೆ.  ಇದು ಮಹಿಳಾ ಕ್ರಿಕೆಟ್‌ಗೆ ಸಿಕ್ಕ ದೊಡ್ಡ ಗೌರವ’ ಎಂದು ಅವರು ಬಣ್ಣಿಸಿದರು. ‘ಮಹಿಳಾ ಕ್ರಿಕೆಟ್‌ಗೆ ಇನ್ನೂ ಉತ್ತಮ ಸ್ಥಾನ ಸಿಗಬೇಕಿದೆ. ಇತ್ತೀಚೆಗೆ ಏಕರೂಪ ಪಿಂಚಣಿ ವ್ಯವಸ್ಥೆ ಜಾರಿಗೆ  ತರಬೇಕೆಂದು ಆಗ್ರಹಿಸಿದ್ದೇನೆ. ಇದು ಇನ್ನೂ ಚರ್ಚೆಗೆ ಬಂದಿಲ್ಲ. ಆದರೆ ಪಿಂಚಣಿ ವ್ಯವಸ್ಥೆ ಬರುವ ಅಗತ್ಯವಿದೆ’ ಎಂದು ಅವರು ಹೇಳಿದರು.

ಶಾಂತಾ ಅವರು 16 ಟೆಸ್ಟ್ ಹಾಗೂ 19 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಆಟಗಾರ್ತಿ ಎನ್ನುವ ಹೆಗ್ಗಳಿಕೆಯೂ ಅವರ ಹೆಸರಿನಲ್ಲಿದೆ. ಹಿಂದೆ ಅವರಿಗೆ ಅರ್ಜುನ ಪ್ರಶಸ್ತಿಯೂ ಲಭಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT