ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಬೀಜಗಳ ಕುರಿತು ಎಚ್ಚರವಿರಲಿ

ಮಾರಾಟಗಾರರಿಗೆ ಶಾಸಕ ಮನೋಹರ ತಹಸೀಲ್ದಾರ್ ಸಲಹೆ
Last Updated 28 ಫೆಬ್ರುವರಿ 2017, 9:56 IST
ಅಕ್ಷರ ಗಾತ್ರ

ಹಾನಗಲ್: ‘ಅತೀವೃಷ್ಟಿ, ಅನಾವೃಷ್ಟಿಯ ನಡುವೆ ನಲುಗುವ ಕೃಷಿ ವ್ಯವಸ್ಥೆಯಲ್ಲಿ ಪೇಚಾಡುವ ರೈತರಿಗೆ ನಕಲಿ ಬೀಜ, ಕಳಪೆ ರಸಗೊಬ್ಬರ ಪೂರೈಕೆಯಾಗದಂತೆ ಮಾರಾಟಗಾರರು ಜವಾಬ್ದಾರಿ ವಹಿಸಬೇಕು’ ಎಂದು ಶಾಸಕ ಮನೋಹರ ತಹಸೀಲ್ದಾರ್‌ ಹೇಳಿದರು.

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಹಾನಗಲ್ ತಾಲ್ಲೂಕು ಕೃಷಿ ಪರಿಕರಗಳ ಮಾರಾಟಗಾರರ ಸಂಘವನ್ನು ಸೋಮವಾರ ಇಲ್ಲಿನ ಅಂಬೇಡ್ಕರ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

‘ಕೃಷಿ ಪರಿಕರಗಳ ಮಾರಾಟಗಾರರು ಒಳ್ಳೆಯ ಕಂಪೆನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಗುಣಮಟ್ಟದ ಸಾಮಗ್ರಿಗಳ ವಿತರಣೆಯ ಪ್ರಾಮಾಣಿಕ ಕಾರ್ಯವನ್ನು ಮಾಡಬೇಕು, ಪ್ರಮಾಣಿಕೃತ ಅಲ್ಲದ ನಕಲಿ ಬಿತ್ತನೆ ಬೀಜಗಳು ಮಾರುಕಟ್ಟೆ ಪ್ರವೇಶಿಸುತ್ತಿರುವ ಬಗ್ಗೆ ಎಚ್ಚರಿಕೆ ವಹಿಸಬೇಕು. ರೈತರ ಶ್ರಮಕ್ಕೆ ತಕ್ಕ ಫಲ ಸಿಗುವ ನಿಟ್ಟಿನಲ್ಲಿ ಸೇವಾ ಭಾವನೆಯೊಂದಿಗೆ ವ್ಯವಹರಿಸಬೇಕು’ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಸಂಘದ ಗೌರವಾಧ್ಯಕ್ಷ ಮಲ್ಲನಗೌಡ ಪಾಟೀಲ, ಅನೇಕ ಏಳು ಬೀಳುಗಳನ್ನು ಕಂಡಿರುವ ಕೃಷಿ ಪರಿಕರಗಳ ಮಾರಾಟಗಾರರು ಒಗ್ಗಟ್ಟು ಸಾಧಿಸುವಲ್ಲಿ ಈಗ ಸಂಘ ಅಸ್ತಿತ್ವಕ್ಕೆ ತರಲಾಗಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ಪರಿಕರಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ಎಚ್.ಕೋಟಿ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮೆಣಸಿನ ಕಾಯಿ ಮಾತನಾಡಿದರು.

ಕಾರ್ಯದರ್ಶಿ ಶಿವಬಸಪ್ಪ ಟೊಂಕ ದ, ತಾಲ್ಲೂಕು ಘಟಕದ ಕಾರ್ಯದರ್ಶಿ ಡಿ.ಎಸ್‌.ಬೆಟಗೇರಿ, ಕೋಶಾಧ್ಯಕ್ಷ ಪ್ರಹ್ಲಾದ ಹೆಗಡೆಕಟ್ಟಿ, ಸದಸ್ಯರಾದ ಎಸ್‌.ಎಂ.ಸಿಂಧೂರ, ರಾಘವೇಂದ್ರ ಬೆಟಗೇರಿ, ವಿ.ವಿ.ಕುಲಕರ್ಣಿ ಮತ್ತು ಕೃಷಿ ಅಧಿಕಾರಿ ಸಂಗಮೇಶ ಮತ್ತಿತರರಿದ್ದರು.

ಜಪಾನ್‌ ಪ್ರವಾಸ
‘1978 ರ ಮಾತು. ಆಗ ನಾನಿನ್ನೂ ಎಂಎಲ್‌ಎ ಆಗಿರಲಿಲ್ಲ, ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷನಾಗಿದ್ದೆ. ರೈತ ನೊಬ್ಬ ಖರೀದಿಸಿ ತಂದಿದ್ದ ರಸ ಗೊಬ್ಬರ ಕಲಬೆರಕೆ ಆಗಿತ್ತು. ಹೋರಾಟದ ಮೂಲಕ ಅಧಿಕಾ ರಿಗಳ ಮೇಲೆ ಒತ್ತಡ ತಂದಾಗ ಮಧ್ಯವರ್ತಿಗಳ ಕೈಚಳಕ ಎಂಬು ದು ಪತ್ತೆಯಾಗಿತ್ತು. ಕಲಬೆರಕೆಯ ಗೊಬ್ಬರ ಮಾರಾಟ ಮಾಡಿದ್ದ ಮಳಿಗೆ ಮುಚ್ಚಿಸಿ ಮಾರಾಟಗಾ ರನ ಮೇಲೆ ಕ್ರಮ ಜರುಗಿಸುವಲ್ಲಿ ಹೋರಾಟ ಯಶ ಕಂಡಿತ್ತು’.

‘ಅಂದು ಈ ಘಟನೆ ನನಗೆ ದೊಡ್ಡ ಹೆಸರು ತಂದಿತ್ತು, ಅಲ್ಲದೆ, ಜಪಾನ್‌ ಪ್ರವಾಸದ ಸುಯೋಗ ವೂ ಒದಗಿ ಬಂದಿತ್ತು’ ಎಂದು ಶಾಸಕ ತಹಸೀಲ್ದಾರ್‌ ನೆನಪಿನ ಬುತ್ತಿ ಬಿಚ್ಚಿಟ್ಟರು.

*

ಬೀಜ, ರಸಗೊಬ್ಬರ ಖರೀದಿಯಲ್ಲಿ ರೈತರು ಮಾರಾಟಗಾರರನ್ನು ನಂಬುತ್ತಾರೆ. ಅವರ ನಂಬಿಕೆ ಉಳಿಸುವ ನೈತಿಕತೆ ಮಾರಾಟಗಾರರು ಪ್ರದರ್ಶಿಸಿಬೇಕು
-ಮನೋಹರ ತಹಸೀಲ್ದಾರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT