ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4ರಿಂದ ಜಿಲ್ಲೆಯಲ್ಲಿ ಜನವೇದನಾ ಸಭೆ

ಬಿಜೆಪಿ ನಾಯಕರು ಕೂಡ ಸ್ವಚ್ಛ ಅಲ್ಲ: ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಟಿ.ಪಿ. ರಮೇಶ್‌ ಆರೋಪ
Last Updated 28 ಫೆಬ್ರುವರಿ 2017, 10:09 IST
ಅಕ್ಷರ ಗಾತ್ರ

ಮಡಿಕೇರಿ:  ‘ಕೊಡಗು ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ವಿರುದ್ಧ ಮಾರ್ಚ್‌ 4ರಿಂದ 7ರವರೆಗೆ ಜನವೇದನಾ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ. ರಮೇಶ್‌ ಮಾಹಿತಿ ನೀಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಇದೇ 25ರಂದು ಪಕ್ಷದ ಜಿಲ್ಲಾ ಉಸ್ತುವಾರಿ ಹುಸೇನ್‌ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜನವೇದನಾ ಸಭೆ ನಡೆಸಲು ತೀರ್ಮಾನಿಸಲಾಗಿತ್ತು’ ಎಂದರು.

‘ಮಾರ್ಚ್‌ 4ರಂದು ಸಂಜೆ 4ಕ್ಕೆ ಕುಶಾಲನಗರ, 5ರಂದು ಬೆಳಿಗ್ಗೆ 11ಕ್ಕೆ ಸುಂಟಿಕೊಪ್ಪ, 6ರಂದು ಬೆಳಿಗ್ಗೆ 11ಕ್ಕೆ ಭಾಗಮಂಡಲ, ಅದೇ ದಿವಸ ಸಂಜೆ 4ಕ್ಕೆ ಪೊನ್ನಂಪೇಟೆ, 7ರಂದು ಬೆಳಿಗ್ಗೆ 11ಕ್ಕೆ ವಿರಾಜಪೇಟೆಯಲ್ಲಿ ಜನವೇದನಾ ಸಭೆ ನಡೆಯಲಿದೆ’ ಎಂದು ವಿವರಿಸಿದರು.

ನೋಟು ಅಮಾನ್ಯೀಕರದಿಂದ ಆಗಿರುವ ಸಮಸ್ಯೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವುದು ಈ ಸಭೆಗಳ ಉದ್ದೇಶ. ಸಭೆಯಲ್ಲಿ ಪಕ್ಷದ ಮುಖಂಡರ ಭಾಷಣ ಇರುವುದಿಲ್ಲ. ಜನಸಾಮಾನ್ಯರೇ ತಮ್ಮಗಾದ ಸಮಸ್ಯೆಗಳನ್ನು ವಿವರಿಸಲಿದ್ದಾರೆ ಎಂದರು.

ಕುರ್ಚಿಯೊಂದರ ಮೇಲೆ ಮೋದಿ ಹೆಸರಿನ ನಾಮಫಲಕ ಇಟ್ಟು, ಅದರ ಎದುರು ಸಾರ್ವಜನಿಕರು ಸಮಸ್ಯೆ ಹೇಳಿಕೊಳ್ಳಲಿದ್ದಾರೆ ಎಂದು ವಿವರಿಸಿದರು.

ಸಭೆಗಳಲ್ಲಿ ಉಸ್ತುವಾರಿ ಸಚಿವ ಎಂ.ಆರ್‌.ಸೀತಾರಾಂ, ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳು, ನಾಮಕರಣಗೊಂಡ ಸದಸ್ಯರು, ಎಐಸಿಸಿ ಹಾಗೂ ಕೆಪಿಸಿಸಿ ಸದಸ್ಯರು, ವಿಧಾನ ಪರಿಷತ್‌ ಸದಸ್ಯರು, ಬ್ಲಾಕ್‌ ಕಾಂಗ್ರೆಸ್‌ನ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರೇನು ಆರ್ಥಿಕ ತಜ್ಞರಲ್ಲ; ತಜ್ಞರ ಸಲಹೆಯನ್ನೂ ಪಡೆಯದೇ ಏಕಾಏಕಿ ನೋಟು ಅಮಾನ್ಯ ಮಾಡಿ ರಾಷ್ಟ್ರಕ್ಕೆ ದೊಡ್ಡ ಹೊಡೆತ ನೀಡಿದ್ದಾರೆ. ಬಡ ಜನರ ಪರದಾಟ ತಪ್ಪಿಲ್ಲ; ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗವೇ ಸಿಗುತ್ತಿಲ್ಲ ಎಂದು ದೂರಿದರು.

‘ಸಣ್ಣಸಣ್ಣ ಕೈಗಾರಿಕೆಗಳು ಉತ್ಪಾದನೆ ಸ್ಥಗಿತಗೊಳಿಸಿವೆ. ಬ್ಯಾಂಕ್‌ನಲ್ಲಿ ನಮ್ಮ ಹಣ ಪಡೆಯಲೂ ಸಾಕಷ್ಟು ಕಷ್ಟಪಡುವ ಪರಿಸ್ಥಿತಿ ಇದೆ. ಠೇವಣಿಗೆ ಕಡಿಮೆ ಬಡ್ಡಿ ನೀಡುವ ಬ್ಯಾಂಕ್‌ಗಳು ಸಾಲ ಪಡೆದರೆ ಹೆಚ್ಚಿನ ಬಡ್ಡಿ ವಿತರಿಸುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರದಲ್ಲಿ ಶೇ 60ಕ್ಕೂ ಹೆಚ್ಚು ಜನರು ಇಂದಿಗೂ ಅವಿದ್ಯಾವಂತರಿದ್ದಾರೆ. ಮೋದಿ ಅವರ ಡಿಜಿಟಲೀಕರಣ, ನಗದು ರಹಿತ ವ್ಯವಹಾರ ಭಾರತದಲ್ಲಿ ಸದ್ಯಕ್ಕೆ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರ ನಾನಾ ತೆರಿಗೆ ವಿಧಿಸುವ ಮೂಲಕ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡಿದೆ. ಜನರಿಗೆ ಇದನ್ನು ತಿಳಿಸಲು ಜನವೇದನಾ ಸಭೆ ನಡೆಯಲಿದೆ ಎಂದು ಹೇಳಿದರು.

‘ವಿರೋಧ ಪಕ್ಷಗಳು ಸುಮ್ಮನೇ ಟೀಕೆ ಮಾಡುತ್ತಿವೆ. ನಾಲ್ಕು ವರ್ಷದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ನೀಡಿದೆ. ಅವುಗಳೆಲ್ಲವೂ ಜನರ ಮನೆಬಾಗಿಲಿಗೆ ತಲುಪಿವೆ. ಕಾಂಗ್ರೆಸ್‌ ಸರ್ಕಾರ ಏನು ಮಾಡಿದೆ ಎಂದು ಟೀಕೆ ಮಾಡುವವರಿಗೆ ಜನರ ಕಲ್ಯಾಣ ಕಾರ್ಯಕ್ರಮಗಳೇ ಉತ್ತರಿಸಲಿವೆ’ ಎಂದು ಹೇಳಿದರು.

ಅತಿವೃಷ್ಟಿಯ ಸಮೀಕ್ಷಾ ವರದಿ ಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ₹ 20 ಕೋಟಿ ಪರಿಹಾರ ಇದುವರೆಗೂ ಜಿಲ್ಲೆಗೆ ಬಂದಿಲ್ಲ. ಕೊಡಗು ಜಿಲ್ಲೆಯಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದೆ ಎಂಬುದು ಘೋಷಣೆಗೆ ಸೀಮಿತವಾಗಿದೆ ಎಂದರು.

ಸಂಸದ ಪ್ರತಾಪ್‌ ಸಿಂಹ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿಲ್ಲ. ಕಾಂಗ್ರೆಸ್‌ ಮಾತ್ರ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು. ಬಿಜೆಪಿ ನಾಯಕರು ಸ್ವಚ್ಛ ಅಲ್ಲ ಎಂದು ರಮೇಶ್‌ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ಕೆ.ಎಂ.ಬಿ. ಗಣೇಶ್‌, ವಿ.ಪಿ. ಸುರೇಶ್‌, ರಮಾನಾಥ್‌, ಉಮೇಶ್‌, ಮಂಜುಳಾ ಹಾಜರಿದ್ದರು.

‘ಕೊಡಗು ಜಿಲ್ಲೆಗೆ ಕೋಟಿ, ಕೋಟಿ ಅನುದಾನ’
ಕಾಂಗ್ರೆಸ್‌ ಸರ್ಕಾರವು ಜಿಲ್ಲೆಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹ 50 ಅನುದಾನ ನೀಡಿದ್ದು ಟೆಂಡರ್‌ ಹಂತದಲ್ಲಿದೆ. ಲೋಕೋಪಯೋಗಿ ಇಲಾಖೆಗೆ ವಾರದ ಹಿಂದೆ ₹ 38 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.

ಕುಶಾಲನಗರದ ಪಟ್ಟಣ ಅಭಿವೃದ್ಧಿಗೆ ₹ 5 ಕೋಟಿ ಬಿಡುಗಡೆ ಮಾಡಲಾಗಿದೆ. ಆರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕೂಡಿಗೆಯಿಂದ ಸೋಮವಾರಪೇಟೆ ತನಕ ರಸ್ತೆ ವಿಸ್ತರಣೆಗೆ ₹ 16 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಮುಖಂಡರು ಇದನ್ನು ಅರ್ಥ ಮಾಡಿಕೊಳ್ಳಲಿ ಎಂದರು.

ಹಾರಂಗಿ ಉದ್ಯಾನ ಮೇಲ್ದರ್ಜೆಗೆ ಏರಿಸಲಾಗಿದೆ. ಕೊಡಗರಹಳ್ಳಿ– ಕಂಬಿಬಾಣೆ ರಸ್ತೆಯನ್ನು ₹ 2 ಕೋಟಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ₹ 6 ಕೋಟಿ ವೆಚ್ಚದಲ್ಲಿ ಖಾಸಗಿ ಬಸ್‌ ನಿಲ್ದಾಣದ ಕಾಮಗಾರಿ ಆರಂಭಗೊಂಡಿದೆ. ಖಾಸಗಿ ಬಸ್‌ ನಿಲ್ದಾಣ ಜಾಗವನ್ನು ಬಿಜೆಪಿ ಅವಧಿಯಲ್ಲೇ ಮಂಜೂರಾಗಿದ್ದರೂ ಅವರೆ ವಿರೋಧ ವ್ಯಕ್ತಪಡಿಸಿದ್ದರು. ನಗರಸಭೆಗೆ ನಗರೋತ್ಥಾನ ಮೂರನೇ ಹಂತದಲ್ಲಿ ₹ 35 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು. ಕೊಡಗು ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಆದರೆ, ಬಿಜೆಪಿ ಶಾಸಕರಿಂದ ಅಭಿವೃದ್ಧಿಗೆ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿಲ್ಲ ಎಂದು ದೂರಿದರು.

ಅಮಾನತು ಇಲ್ಲ:  ಕೆ.ಎಂ.ಲೋಕೇಶ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆಗೆ ಸೋಮವಾರಪೇಟೆ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿಲ್ಲ ಎಂದು ಟಿ.ಪಿ.ರಮೇಶ್‌ ಹೇಳಿದರು.

* ಬಿಜೆಪಿ ನಾಯಕರು  ದಾಖಲೆರಹಿತವಾಗಿ ಆರೋಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಯಲ್ಲಿ ಕೆಲವು ಮಂತ್ರಿಗಳ ಭ್ರಷ್ಟಾಚಾರ  ಸಾಬೀತಾಗಿ  ಯಡಿಯೂರಪ್ಪ ಅವರೇ ಜೈಲಿಗೆ ಹೋಗಿದ್ದರು

-ಟಿ.ಪಿ.ರಮೇಶ್‌
ಅಧ್ಯಕ್ಷ , ಜಿಲ್ಲಾ ಕಾಂಗ್ರೆಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT