ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಟ್ರಸ್ಟ್‌ನ ದೂರದೃಷ್ಟಿ

Last Updated 28 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ದೇಶದಾದ್ಯಂತ ಗಮನ ಸೆಳೆದಿರುವ ಟಾಟಾ ಟ್ರಸ್ಟ್‌ನ ಕಾರ್ಯವೈಖರಿಯ ಬಗ್ಗೆ  ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಆರ್‌.ವೆಂಕಟರಮಣನ್‌ ಅವರು ಇಲ್ಲಿ ಮಾಹಿತಿ  ನೀಡಿದ್ದಾರೆ.
 
* ಟಾಟಾ ಟ್ರಸ್ಟ್‌ಗಳನ್ನು ಸ್ಥಾಪಿಸಿದ್ದರ ಹಿಂದಿನ ಉದ್ದೇಶವೇನು? ದೇಶದಲ್ಲಿ ಅವುಗಳು ನಡೆಸುತ್ತಿರುವ ಕಾರ್ಯಾಚರಣೆಯ ವಿವರ ನೀಡಿ.
ದೇಶದ  ಅತ್ಯಂತ ಹಳೆಯ, ಜಾತಿ ಪಂಥ ಮಿಗಿಲಾದ ಮಾನವ ಪ್ರೀತಿಯ ಸಂಘಟನೆಯೇ ಟಾಟಾ ಟ್ರಸ್ಟ್‌. ಸಮುದಾಯದ ಅಭಿವೃದ್ಧಿಗಾಗಿ ಹಲವು ಕ್ಷೇತ್ರಗಳಲ್ಲಿ ಅದು ಕೆಲಸ ಮಾಡುತ್ತಿದೆ. ಜೆಮ್‌ಶೇಡ್‌ಜಿ ಟಾಟಾ ಅವರ   ಮಾನವ ಪ್ರೇಮದ ದೂರದೃಷ್ಟಿಯ ಮಾರ್ಗದರ್ಶಿಯೊಂದಿಗೆ ಕೆಲಸ ಮಾಡುತ್ತಿರುವ ಈ ಟ್ರಸ್ಟ್‌, ದೇಶದ ಸಮಕಾಲೀನ ಅಗತ್ಯಗಳಿಗೆ ಸ್ಪಂದಿಸುತ್ತ  ಸಾಮಾಜಿಕ ಅಭಿವೃದ್ಧಿ ಸಾಧಿಸುವ ಉದ್ದೇಶ ಹೊಂದಿದೆ.
 
ನೇರವಾಗಿ ಜಾರಿಗೊಳಿಸುವ ಕ್ರಮಗಳು ಮತ್ತು ಪಾಲುದಾರಿಕೆಯ ಕಾರ್ಯತಂತ್ರದ ಜತೆ ಶಿಕ್ಷಣ, ಆರೋಗ್ಯ, ಪೌಷ್ಟಿಕತೆ, ಗ್ರಾಮೀಣ ಜೀವನ ಮಟ್ಟ ಸುಧಾರಣೆ, ನಾಗರಿಕ ಸಮಾಜದ ಪುನಶ್ಚೇತನ, ಆಡಳಿತ, ಮಾಧ್ಯಮ, ಕಲೆ, ಕೌಶಲ, ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕ್ಷೇತ್ರಗಳಲ್ಲಿ ಹೊಸತನ    ತಂದಿದೆ.    ವ್ಯಕ್ತಿಗಳು, ಸರ್ಕಾರಿ ಅಂಗ ಸಂಸ್ಥೆಗಳು, ಅಂತರರಾಷ್ಟ್ರೀಯ ಏಜೆನ್ಸಿಗಳು ಮತ್ತು ಸಮಾನ ಮನಸ್ಕರೊಂದಿಗೆ ಸಹಯೋಗ ಸಾಧಿಸುತ್ತ  ಕೆಲಸ ಮಾಡುತ್ತಿದೆ. ಕಾರ್ಯಕ್ರಮಗಳ ಪರಿಣಾಮ ವೃದ್ಧಿಸುವ ಸಲುವಾಗಿ  ಅಭಿವೃದ್ಧಿಯ ಸಮಗ್ರ ಮಾದರಿಗಳು, ಸಂಶೋಧನೆಗಳು, ವ್ಯವಸ್ಥೆಯ ಬಲವರ್ಧನೆ, ಅನುದಾನ ಹಂಚಿಕೆ, ಅಂಕಿ ಅಂಶ ಆಧಾರಿತ ಅಭಿವೃದ್ಧಿಗೆ ಅಧಿಕ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದೇವೆ.
 
ದೇಶದ ಅತ್ಯಂತ ದೊಡ್ಡ ವಾಣಿಜ್ಯ ಸಮೂಹ ಸಂಸ್ಥೆಯಾದ ಟಾಟಾ ಸನ್ಸ್‌ ಕಂಪೆನಿಯಲ್ಲಿ ಗರಿಷ್ಠ ಪ್ರಮಾಣದ ಅಂದರೆ ಶೇ 66ರಷ್ಟು ಷೇರುಗಳನ್ನು   ಟಾಟಾ ಟ್ರಸ್ಟ್‌ ಹೊಂದಿದೆ.
 
* ತಾನು ಗಮನ ಹರಿಸಬೇಕಾದ ವಿಷಯಗಳು/ ಯೋಜನೆಗಳನ್ನು   ಟ್ರಸ್ಟ್‌  ಹೇಗೆ ಆಯ್ಕೆ ಮಾಡುತ್ತದೆ?
ಅರ್ಥ ವ್ಯವಸ್ಥೆ ಸುಧಾರಿಸುವ  ಯೋಜನೆಗಳನ್ನು ರೂಪಿಸುವಂತಹ ಸಾಮಾನ್ಯ ಹಾದಿಯಿಂದ ಭಿನ್ನವಾಗಿ ನಡೆಯುವುದೇ ನಮ್ಮ ಧ್ಯೇಯ. ಜೆ.ಆರ್‌.ಡಿ.ಟಾಟಾ ಅವರ ಕಾಲದಿಂದಲೂ ಇದೇ ಪದ್ಧತಿ ರೂಢಿಯಲ್ಲಿದೆ. ಸಮಸ್ಯೆಗಳನ್ನು ಬಗೆಹರಿಸಬಲ್ಲಂತಹ ಮತ್ತು ಫಲಾನುಭವಿಗಳ ಅಗತ್ಯಗಳಿಗೆ ತಕ್ಕಂತಹ ಕ್ಷೇತ್ರಗಳಲ್ಲಿನ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
 
* ವಿವಿಧ ಸಮುದಾಯಗಳ ನಡುವೆ ಅಪೇಕ್ಷಿತ ಫಲಿತಾಂಶ ನೀಡಿದ  ಪರಿಣಾಮಕಾರಿ ಕಾರ್ಯಕ್ರಮಗಳೇನು?
ಪ್ರಮುಖ ಅಭಿವೃದ್ಧಿ ಸವಾಲುಗಳನ್ನು ತಂತ್ರಜ್ಞಾನ ಮತ್ತು ಮುಕ್ತ ಮಾಹಿತಿ ವೇದಿಕೆ ಬಳಸಿಕೊಂಡು ಕೈಗೆತ್ತಿಕೊಳ್ಳುವುದು ನಮ್ಮ ಜಾಯಮಾನ. ತಂತ್ರಜ್ಞಾನವು ಉತ್ತಮ ಕೆಲಸಗಳಿಗಾಗಿ ಇರುವ ಬಹುದೊಡ್ಡ ಶಕ್ತಿಯಾಗಿದೆ ಎಂಬ ನಂಬಿಕೆಯ ತಳಹದಿಯ ಮೇಲೆಯೇ ಇಡೀ ಟ್ರಸ್ಟ್‌ನ ಕೆಲಸಗಳು ನಿಂತಿವೆ.
 
ನಾವು ಕೈಗೆತ್ತಿಕೊಂಡ ಹಲವಾರು ಯೋಜನೆಗಳು ನಿರೀಕ್ಷಿತ ಫಲಿತಾಂಶ ನೀಡಿವೆ. ಕೆಲವೊಂದು ಕೆಲಸಗಳಂತೂ ಭಾರಿ ಪರಿಣಾಮವನ್ನೂ  ಬೀರಿವೆ. ಎಲ್ಲದರ ಹಿಂದೆ ತಂತ್ರಜ್ಞಾನದ ಕೊಡುಗೆ ಇದ್ದೇ ಇದೆ. ಈಚಿನ ವರ್ಷಗಳಲ್ಲಿ ನಮ್ಮ ಬಹಳ ಯಶಸ್ವಿ ಯೋಜನೆಗಳಲ್ಲಿ  ವಿಜಯವಾಡದಲ್ಲಿ ಆರಂಭಿಸಿರುವ ಸಂಸದ ಆದರ್ಶ ಗ್ರಾಮ ಯೋಜನೆಯಲ್ಲಿ ಆರಂಭಿಸಲಾದ ಮಾಹಿತಿ ಆಧರಿತ ಆಡಳಿತ ವ್ಯವಸ್ಥೆ. ಅಲ್ಲಿ ನಾವು ಸ್ಥಳೀಯ ಸಂಸದರ ಜತೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಅವರ ಕ್ಷೇತ್ರದ 264 ಹಳ್ಳಿಗಳ ನಕಾಶೆ ಗುರುತಿಸುವುದಕ್ಕೆ ನಾವು ನೆರವಾಗಿದ್ದೇವೆ. ಈ ಹಳ್ಳಿಗಳಲ್ಲಿ ನಾವು 10 ಲಕ್ಷ ಜನರ ವಿವರಗಳನ್ನು ಒದಗಿಸಿಕೊಟ್ಟಿದ್ದೇವೆ. ಅವರ ಆರೋಗ್ಯ ಮತ್ತು ಕಲ್ಯಾಣ ಅವಶ್ಯಕತೆಗಳ ಮಾಹಿತಿಯನ್ನು ನಾವು ಸಂಗ್ರಹಿಸಿದ್ದೇವೆ. ಕೃಷ್ಣ ಜಿಲ್ಲೆಯಲ್ಲಿ 800 ಹಳ್ಳಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಶೌಚಾಲಯಕ್ಕೆ ನೀಡುವ ಅನುದಾನಕ್ಕಿಂತ ಹೆಚ್ಚು ಹಣ ತೊಡಗಿಸಿ ಶೌಚಾಲಯ ನಿರ್ಮಾಣ ನಡೆಯುತ್ತಿದೆ. ಅಗತ್ಯವಿರುದ ಹೆಚ್ಚುವರಿ ಹಣವನ್ನು ಟ್ರಸ್ಟ್‌ನ ಸ್ವಂತ ನಿಧಿಯಿಂದ ಬಳಸಲಾಗುತ್ತಿದೆ. ಗೂಗಲ್‌ ಜತೆಗೆ ಮಾಡಿಕೊಂಡಿರುವ ‘ಇಂಟರ್‌ನೆಟ್‌ ಸಾಥಿ’ ಯೋಜನೆಯಂತಹ ಪಾಲುದಾರಿಕೆ ಯೋಜನೆಗಳಲ್ಲೂ ನಾವು ಬಂಡವಾಳ ತೊಡಗಿಸುತ್ತಿದ್ದೇವೆ. ಇಂತಹ ಯೋಜನೆಗಳಿಂದ ಮುಂದೆ 10 ಲಕ್ಷ ಜನರು ಆನ್‌ಲೈನ್‌ ಸೌಲಭ್ಯ ಪಡೆಯುವುದು ಸಾಧ್ಯವಾಗುತ್ತದೆ. ಪಾರದರ್ಶಕತೆ ಮತ್ತು ಜನರನ್ನು ಸಬಲೀಕರಣಗೊಳಿಸುವುದೇ ಇಂತಹ ಕಾರ್ಯಕ್ರಮಗಳ ಉದ್ದೇಶ.
 
ಪೌಷ್ಟಿಕಾಂಶ ಟ್ರಸ್ಟ್‌ನ ಪ್ರಮುಖ ಕಾರ್ಯಕ್ಷೇತ್ರಗಳಲ್ಲಿ ಒಂದು. ಟ್ರಸ್ಟ್‌ನ ಅಧ್ಯಕ್ಷ ರತನ್‌ ಎನ್‌.ಟಾಟಾ ಅವರಿಗೂ ಈ ವಿಚಾರದಲ್ಲಿ ಬಹಳ ಆಸಕ್ತಿ. ಪೊಟ್ಟಣಗಳಲ್ಲಿ ಸಂಗ್ರಹಿಸಿಟ್ಟ ಆಹಾರಗಳಲ್ಲಿ ಅಗತ್ಯದ ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ಉಪ್ಪಿನಲ್ಲಿ ಅಯೋಡಿನ್‌ ಮಾತ್ರವಲ್ಲದೆ, ಕಬ್ಬಿಣದ ಅಂಶ  ಸೇರಿಸುವ ನಿಟ್ಟಿನಲ್ಲಿ ನಾವು ಟೊರಾಂಟೊ ವಿಶ್ವವಿದ್ಯಾಲಯದ ಜತೆಗೆ ಉನ್ನತ ಮಟ್ಟದ ಕೆಲಸದಲ್ಲಿ ತೊಡಗಿದ್ದೇವೆ. ಇದರಿಂದ ಗುಣಮಟ್ಟದ, ಆರೋಗ್ಯದಾಯಕ ಉಪ್ಪನ್ನು ಪೂರೈಸುವ ಸರ್ಕಾರದ ಯೋಜನೆ ಕಾರ್ಯರೂಪಕ್ಕೆ ಬರುವುದು ಸುಲಭವಾಗಿದೆ. ಈಚೆಗೆ ಉತ್ತರ ಪ್ರದೇಶ ಸರ್ಕಾರ ಡಬಲ್‌ ಫೋರ್ಟಿಫೈಡ್‌ ಸಾಲ್ಟ್‌ ಅನ್ನು ಬಿಡುಗಡೆ ಮಾಡಿದೆ. ಕೈಗೆಟುಕುವ ಬೆಲೆಯಲ್ಲೇ ಈ ಉಪ್ಪು ಜನರಿಗೆ ದೊರೆಯುತ್ತದೆ. ಮಹಾರಾಷ್ಟ್ರದಲ್ಲಿ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸುವ ಅಕ್ಕಿ ಮತ್ತು ಗೋಧಿಯ ಜತೆಗೆ ಕಬ್ಬಿಣಾಂಶವನ್ನು ಸೇರಿಸುವ ಕೆಲಸದಲ್ಲಿ ನಾವು ಕೈಜೋಡಿಸಿದ್ದೇವೆ.
 
* ಸಮಾಜದ ಒಳಿತಿಗಾಗಿ  ಟ್ರಸ್ಟ್‌ ವರ್ಷಕ್ಕೆ  ಎಷ್ಟು ಹಣ ವ್ಯಯಿಸುತ್ತಿದೆ? ಯೋಜನೆಗಳಿಗೆ ಅಂತಿಮ ಒಪ್ಪಿಗೆ ಸೂಚಿಸುವವರಾರು?
ಇಂತಹ ಕಾರ್ಯಕ್ರಮಗಳಿಗೆ   ಟ್ರಸ್ಟ್‌ ವಾರ್ಷಿಕ ₹ 750 ಕೋಟಿ ವೆಚ್ಚ ಮಾಡುತ್ತಿದೆ. ಟಾಟಾ ಸನ್ಸ್‌ನಲ್ಲಿ ಹೊಂದಿರುವ ಶೇ 66ರಷ್ಟು ಷೇರು ಬಂಡವಾಳವೇ  ಟ್ರಸ್ಟ್‌ಮ ಪ್ರಮುಖ ಆಸ್ತಿ. ಟಾಟಾ ಸನ್ಸ್‌, ಟ್ರಸ್ಟ್‌ಗೆ ನೀಡುವ ಲಾಭಾಂಶವೇ ಪ್ರಮುಖ ವರಮಾನ. ವಿವಿಧ ಟಾಟಾ ಕಂಪೆನಿಗಳಿಂದ ಬರುವ ಲಾಭಾಂಶವೇ ಟಾಟಾ ಸನ್ಸ್‌ನ ಗಳಿಕೆ. ದೇಣಿಗೆ ಆಯುಕ್ತರೇ ಟ್ರಸ್ಟ್‌ನ ಎಲ್ಲ ವ್ಯವಹಾರಗಳನ್ನು ನಿಯಂತ್ರಿಸುತ್ತಾರೆ. ₹ 5 ಸಾವಿರಕ್ಕಿಂತ ಅಧಿಕ ಮೊತ್ತದ ಎಲ್ಲ ವ್ಯವಹಾರಗಳನ್ನೂ ವರದಿ ಮಾಡಬೇಕು. ವಿವಿಧ ಮಾನದಂಡಗಳ ಆಧಾರದಲ್ಲಿ ಪ್ರತಿಯೊಂದು ಪ್ರಸ್ತಾವವನ್ನೂ ಟ್ರಸ್ಟ್‌ನ ವಿಶ್ವಸ್ಥ ಮಂಡಳಿ ಪರಿಶೀಲಿಸುತ್ತಿದೆ. ಟ್ರಸ್ಟ್‌ನ ಅಧ್ಯಕ್ಷರು ಪ್ರಸ್ತಾಪಿಸಿದ ಯೋಜನೆಗಳನ್ನು ಸಹ ವಿಶ್ವಸ್ಥ ಮಂಡಳಿ ಪರಿಶೀಲಿಸುತ್ತದೆ. ಕೆಲವೊಮ್ಮೆ ಅಧ್ಯಕ್ಷರ ಯೋಚನೆಗಳನ್ನೂ ತಿರಸ್ಕರಿಸುವುದುಂಟು.
 
* ಟಾಟಾ ಟ್ರಸ್ಟ್‌ ವಿಶ್ವಸ್ಥ ಮಂಡಳಿಯಲ್ಲಿ ಇರುವ ಸದಸ್ಯರು ಯಾರು?
ಒಟ್ಟು 8 ಟಾಟಾ ಟ್ರಸ್ಟ್‌ಗಳಿದ್ದು, ಎಲ್ಲದರಲ್ಲೂ ಬಹಳ ಅನುಭವ ಇರುವ ಜನರೇ ಸದಸ್ಯರಾಗಿದ್ದಾರೆ. ಕೆಲವರು ಟಾಟಾ ಗುಂಪಿನೊಂದಿಗೆ ಸುದೀರ್ಘ ಅವಧಿಯಿಂದ ಸಹವರ್ತಿಯಾಗಿದ್ದವರು. ಇನ್ನು ಕೆಲವರು ಟಾಟಾದ ಜತೆಗೆ ಸಂಬಂಧವೇ ಇಲ್ಲದ, ಅವರವರ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದಂತಹ ವ್ಯಕ್ತಿಗಳೂ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT