ಈ ವಾರ ಆ್ಯಪ್ ಮಾರುಕಟ್ಟೆಯಲ್ಲಿ ರೈತರಿಗಾಗಿ ವಿಶೇಷವಾಗಿ ವಿನ್ಯಾಸ ಮಾಡಿರುವ ಮೈಅಗ್ರಿಗುರು ಆ್ಯಪ್ ಬಿಡುಗಡೆಯಾಗಿದೆ. ಹಾಗೆಯೇ ರೈಲು ಅಪಘಾತಗಳನ್ನು ತಪ್ಪಿಸುವ ಮತ್ತು ಗುಣಮಟ್ಟದ ರೈಲು ಸಂಚಾರಕ್ಕಾಗಿ ರೈಲ್ವೆ ಕ್ವಾಲಿಟಿ ಆ್ಯಪ್ ಬಿಡುಗಡೆ ಆಗಿದೆ.
ರೈತರಿಗಾಗಿ ಮೈಅಗ್ರಿಗುರು ಆ್ಯಪ್
ಮಹೀಂದ್ರ ಅಗ್ರಿ ಸಲ್ಯೂಷನ್ ಲಿಮಿಟೆಡ್ ಕಂಪೆನಿಯು ರೈತರಿಗೆ ಸಲಹೆ ಮತ್ತು ಮಾರುಕಟ್ಟೆ ವಿಷಯಗಳನ್ನು ತಿಳಿಸುವ ಮೈ ಅಗ್ರಿಗುರು ಎಂಬ ನೂತನ ಆ್ಯಪ್ ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ ಮಾದರಿಯಲ್ಲಿ ಲಭ್ಯವಿರುವ ಈ ಆ್ಯಪ್ ಅನ್ನು ರೈತರು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿದೆ. 2025ರ ಒಳಗೆ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಈ ಆ್ಯಪ್ ಸೌಲಭ್ಯ ವಿಸ್ತರಣೆ ಆಗಲಿದೆ.
ಈ ಆ್ಯಪ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಈ ಆ್ಯಪ್ ಬಳಕೆದಾರ ರೈತರು ಹೊಸದಾಗಿ ವೇದಿಕೆಯನ್ನು ಸೃಷ್ಟಿಮಾಡಿಕೊಂಡು ಕೃಷಿಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚೆ ಮಾಡಬಹುದು. ಪ್ರಮುಖವಾಗಿ ಮಾರುಕಟ್ಟೆ ದರಗಳು, ಹವಾಮಾನ, ನೂತನ ಕೃಷಿ ತಂತ್ರಜ್ಞಾನ, ಬೆಳೆಗಳು, ವ್ಯವಸಾಯ ಕ್ರಮ, ರಸಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಎಲ್ಲ ಸಮಗ್ರ ಮಾಹಿತಿಯನ್ನು ಈ ಆ್ಯಪ್ ನೀಡುತ್ತದೆ.
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾದ ಒಂದು ಭಾಗವಾಗಿ ಈ ಆ್ಯಪ್ ರೂಪಿಸಲಾಗಿದೆ. ಮುಂದಿನ ಹತ್ತು ವರ್ಷಗಳಲ್ಲಿ 7 ಕೋಟಿ ರೈತರನ್ನು ತಲುಪುವ ಗುರಿ ಹೊಂದಲಾಗಿದೆ.
ಗೂಗಲ್ ಪ್ಲೇಸ್ಟೋರ್: MyAgriGuru
**
ಐನೊ ಆ್ಯಪ್...
ಗ್ರಾಹಕರು ಮತ್ತು ಬ್ರ್ಯಾಂಡೆಡ್ ಉತ್ಪನ್ನಗಳ ತಯಾರಕ ಕಂಪೆನಿಗಳ ನಡುವೆ ಸಂಪರ್ಕ ಬೆಸೆಯುವ ‘ಐನೊ’ ಆ್ಯಪ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಗ್ರಾಹಕ ಸ್ನೇಹಿಯಾಗಿರುವ ಈ ಆ್ಯಪ್ 200ಕ್ಕೂ ಹೆಚ್ಚು ಬ್ರ್ಯಾಂಡೆಡ್ ಕಂಪೆನಿಗಳ ಉತ್ಪನ್ನಗಳ ಮಾಹಿತಿಯನ್ನು ನೀಡುತ್ತದೆ. ಉದಾಹರಣೆಗೆ ಗ್ರಾಹಕರೊಬ್ಬರು ಸೋನಿ ಟೀವಿಯನ್ನು ಖರೀದಿಸುತ್ತಾರೆ. ಕೆಲವು ದಿನಗಳ ನಂತರ ಟೀವಿಯಲ್ಲಿ ಸಮಸ್ಯೆ ಕಂಡು ಬಂದರೆ ಗ್ರಾಹಕರು ಸೋನಿ ಕಂಪೆನಿಯ ಗ್ರಾಹಕ ಕೇಂದ್ರಕ್ಕೆ ಕರೆ ಮಾಡಬೇಕಾಗುತ್ತದೆ. ಆದರೆ ಈ ಆ್ಯಪ್ ಬಳಕೆ ಮಾಡಿದರೆ ಗ್ರಾಹಕರು ಸೋನಿ ಕಂಪೆನಿಯ ಗ್ರಾಹಕ ಕೇಂದ್ರವನ್ನು ಸಂಪರ್ಕಿಸ ಬೇಕಾಗಿಲ್ಲ!