ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ಜನ, ಮಾದರಿ ರಸ್ತೆಗೆ ಪ್ರಶಸ್ತಿ ಗರಿ!

ಬಾಗಲಕೋಟೆ ನಗರಸಭೆ: ಪೌರಾಡಳಿತ ಇಲಾಖೆಯಿಂದ ₨1 ಲಕ್ಷ ನಗದು ಬಹುಮಾನ
Last Updated 1 ಮಾರ್ಚ್ 2017, 6:28 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ವಿದ್ಯಾಗಿರಿಯಲ್ಲಿ ‘ಆದರ್ಶ ಜನ, ಮಾದರಿ ರಸ್ತೆ’ ಯೋಜನೆ ಅನುಷ್ಠಾನದ ಮೂಲಕ ರಾಜ್ಯದ ಗಮನ ಸೆಳೆದಿರುವ  ನಗರಸಭೆ ಆಡಳಿತ, ಇದೀಗ ಪೌರಾಡಳಿತ ಇಲಾಖೆಯ ಉತ್ತಮ ಸ್ಥಳೀಯ ಸಂಸ್ಥೆ ಶ್ರೇಯಕ್ಕೆ ಪಾತ್ರವಾಗಿದೆ. ಜೊತೆಗೆ ₨1 ಲಕ್ಷ ನಗದು ಬಹುಮಾನ ಪಡೆದಿದೆ.

ಯೋಜನೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಗುರುತಿಸಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ರಾಜ್ಯದ 273 ಸ್ಥಳೀಯ ಸಂಸ್ಥೆಗಳನ್ನು ಹಿಂದಿಕ್ಕಿದ ಬಾಗಲಕೋಟೆ ನಗರಸಭೆ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಏನಿದು ಮಾದರಿ ರಸ್ತೆ, ಜನ: ವರ್ಷದ ಹಿಂದೆ ಯೋಜನೆಗೆ ಶ್ರೀಕಾರ ಹಾಕಲಾಗಿದ್ದು, ಜನರ ಸಹಭಾಗಿತ್ವದೊಂದಿಗೆ ಸುಸಜ್ಜಿತ ರಸ್ತೆ, ಕುಡಿಯುವ ನೀರು, ಚರಂಡಿ, ಬೀದಿ ದೀಪ, ಸ್ವಚ್ಛತೆಯ ಸವಲತ್ತುಗಳನ್ನು ಕಲ್ಪಿಸಲಾಯಿತು. ಮೊದಲಿಗೆ ವಿದ್ಯಾಗಿರಿಯ 9ನೇ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಯಶಸ್ಸು ಪಡೆದ ಈ ಯೋಜನೆ ಮುಂದೆ ಏಳನೇ ರಸ್ತೆ, 22 ನೇ ಕ್ರಾಸ್, ರೂಪಲ್ಯಾಂಡ್, ಲಕ್ಷ್ಮೀ ನಗರಗಳಿಗೂ ವಿಸ್ತರಣೆಗೊಂಡಿತು.

ಒಂದೇ ರೀತಿಯ ಬಣ್ಣ: ರಸ್ತೆಗಳಿಗೆ ಏಕರೂಪತೆ ತಂದು ನಿವಾಸಿಗಳಲ್ಲೂ ಒಮ್ಮತ ಮೂಡಿಸಲು ಎಲ್ಲಾ ಮನೆಗಳ ಕಾಂಪೌಂಡ್‌ಗೆ ಒಂದೇ ರೀತಿಯ ಬಣ್ಣ ಹಚ್ಚಲಾಗಿದೆ. ಸರ್ಕಾರಿ ಜಾಗ ಗುರುತಿಸಿ ಅದನ್ನು ಅಭಿವೃದ್ಧಿಪಡಿಸಿ ನಿವಾಸಿಗಳು ಯೋಗಭ್ಯಾಸ ಮಾಡಲು ಹುಲ್ಲು ಹಾಸು ಅಳವಡಿಸುವ ಜೊತೆಗೆ ವಿಶ್ರಾಂತಿಗೆ ಕಲ್ಲಿನ ಆಸನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಬಯಲು ಗ್ರಂಥಾಲಯ ಆರಂಭಿಸಲಾಗಿದೆ.

‘ಬಡಾವಣೆ ನಮ್ಮದು, ರಸ್ತೆ ನಮ್ಮದು’ ಎಂಬ ಭಾವನೆ ಬರಲು ತಿಂಗಳಿಗೊಮ್ಮೆ ಎಲ್ಲರೂ ಒಂದೆಡೆ ಸೇರಿ ಸಭೆಗಳನ್ನು ನಡೆಸಿ ಸ್ವಚ್ಛತೆ ಕಾಪಾಡಿಕೊಳ್ಳಲು ನಿರ್ಧರಿಸಲಾಯಿತು. ರಸ್ತೆ, ಖಾಲಿ ನಿವೇಶನ, ಚರಂಡಿಗಳಿಗೆ ಕಸ ಹಾಕುವ ಕೆಲಸಕ್ಕೆ ನಿವಾಸಿಗಳು ಸ್ವಯಂ ನಿರ್ಬಂಧ ಹಾಕಿಕೊಂಡರು. ಇದರಿಂದ ಯೋಜನೆಗೆ ಒಳಪಟ್ಟ ರಸ್ತೆಗಳು ಮಾದರಿ ಎನಿಸಿದವು. ನಗರಸಭೆ ಆಡಳಿತದೊಂದಿಗೆ ಬಾಗಲಕೋಟೆ ಸಾಮಾಜಿಕ ಕಾರ್ಯಕರ್ತರ ಪಡೆ (ಬಿಎಸ್‌ಡಬ್ಲ್ಯು) ಕೈ ಜೋಡಿಸಿದ್ದು, ಯೋಜನೆಯ ಯಶಸ್ಸಿಗೆ ನೆರವಾಯಿತು.

ಎಲ್ಲಾ ರಸ್ತೆಗಳು ಹೀಗೆ ಆಗಲಿ: ಏಳನೇ ರಸ್ತೆಯನ್ನು ಅಭಿವೃದ್ಧಿಪಡಿಸಿದ ನಂತರ ಸೊಳ್ಳೆಗಳ ಕಾಟ ಕಡಿಮೆಯಾಗಿದೆ. ಪರಿಸರ ಸ್ವಚ್ಛವಾಗಿದೆ ಎಂದು ಅಲ್ಲಿನ ನಿವಾಸಿ ಶಿಕ್ಷಕ ಚಂದ್ರಶೇಖರ ಬಾವಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಮೊದಲು ರಸ್ತೆ ಅಲ್ಲಲ್ಲಿ ಒಡೆದಿತ್ತು, ಬೀದಿ ದೀಪ ಇರಲಿಲ್ಲ. ಮೊದಲೆಲ್ಲಾ ನಗರಸಭೆಯವರೇ ಬಂದು ಗಟಾರು ಬಳಿಯುವ ತನಕ ಕಸ ಸ್ವಚ್ಛಗೊಳ್ಳುತ್ತಿರಲಿಲ್ಲ. ಈಗ ಓಣಿಯಲ್ಲಿ ನಾವೇ ಜಾಗೃತಿ ವಹಿಸಿ ಕಸ ಬೀಳದಂತೆ ನೋಡಿಕೊಳ್ಳುತ್ತಿದ್ದೇವೆ. ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ರಸ್ತೆಯ ಎಲ್ಲಾ ನಿವಾಸಿಗಳು ಒಂದೆಡೆ ಸೇರಿ ಚರ್ಚೆ ಆರಂಭಿಸಿದ ನಂತರ ಪರಸ್ಪರರ ಪರಿಚಯ ಆಗಿದೆ. ಈಗ ಸಂಬಂಧ ಸುಧಾರಿಸಿದೆ ಎಂದರು.

‘ಈಗ ಹಬ್ಬ–ಹರಿದಿನಗಳಲ್ಲಿ ಒಟ್ಟಾಗುತ್ತೇವೆ. ರಸ್ತೆಯ ನಿವಾಸಿಗಳಲ್ಲಿ ಯಾರಾದರೂ ವಿಶೇಷ ಸಾಧನೆ ಮಾಡಿದರೆ ಅವರನ್ನು ಎಲ್ಲರೂ ಒಂದಾಗಿ ಸನ್ಮಾನಿಸುತ್ತೇವೆ. ಸತ್ತಾಗ–ಕೆಟ್ಟಾಗ ನೆರವಿಗೆ ಧಾವಿಸುತ್ತೇವೆ’ ಎಂದು ಬಾವಿ ತಿಳಿಸಿದರು.

ಸಕಾರಾತ್ಮಕ ಬೆಳವಣಿಗೆ: ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳನ್ನು ಹಿಂದಿಕ್ಕಿ ಬಾಗಲಕೋಟೆ ನಗರಸಭೆ ಪ್ರಶಸ್ತಿ ಪಡೆದಿರುವುದು ಸಕಾರಾತ್ಮಕ ಬೆಳವಣಿಗೆ. ಯೋಜನೆಯ ಮುಂದಿನ ಹಂತದಲ್ಲಿ ಹೆಚ್ಚು ಹೆಚ್ಚು ಜನರನ್ನು ಪಾಲುದಾರರನ್ನಾಗಿಸಿಕೊಳ್ಳಲು ಇದು ನೆರವಾಗಲಿದೆ ಎಂದು ಬಿಎಸ್‌ಡಬ್ಲ್ಯು ಸಂಘಟನೆಯಲ್ಲಿ ಸಕ್ರಿಯರಾಗಿರುವ ವಕೀಲ ಶ್ರೀಧರ ದಾಸ್ ಹೇಳುತ್ತಾರೆ.

ಬಹುಮಾನ ವಿತರಣೆ
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರು ಬಾಗಲಕೋಟೆ ನಗರಸಭೆಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ವಿತರಿಸಿದರು. ನಗರಸಭೆ ಪರವಾಗಿ ಆಯುಕ್ತ ಎಸ್.ಎನ್.ರುದ್ರೇಶ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್ ಹಾಗೂ ಬಾಗಲಕೋಟೆ ಸಾಮಾಜಿಕ ಕಾರ್ಯಕರ್ತರ ಪಡೆಯ ಸದಸ್ಯರು ಕೂಡ ಹಾಜರಿದ್ದರು.

*
ನಾಗರಿಕರ ಸಹಭಾಗಿತ್ವದಿಂದ ಹೀಗೊಂದು ಉತ್ತಮ ಮಾದರಿ ಸಾಧ್ಯವಾಗಿದೆ. ಹಂತ ಹಂತವಾಗಿ ನಗರದ ಎಲ್ಲಾ ರಸ್ತೆಗೂ ವಿಸ್ತರಣೆಯಾಗಲಿ. ಜಿಲ್ಲಾಡಳಿತ ಸಹಕಾರ ನೀಡುವುದು.
-ಪಿ.ಎ.ಮೇಘಣ್ಣವರ,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT