ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದನದಿಂದ ಇಲ್ಲಿಗೆ ‘ನಾದಲೀಲೆ’

Last Updated 1 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಈ ಕಾಯಕ್ಕೆ ಉಸಿರಿದ್ದ ಹಾಗೆ ಕೊಳಲು. ಕೊಳಲಿಗೆ ಈ ಉಸಿರನ್ನು ಬೆರೆಸಿದರೆ ಹೊಮ್ಮುವ ನಾದ, ಆನಂದವಿದೆಯಲ್ಲಾ, ಅದು ಅದ್ಭುತ. ದೇಹ, ಉಸಿರು, ಸಂಗೀತ, ನಾದ... ಒಂದಕ್ಕೊಂದು ಬೆಸೆದಿರುವ ಪರಿಯೇ ಸೋಜಿಗ’– ಹೀಗೆ ಕೊಳಲಿನ ಕುರಿತು ಮಾತನಾಡಿದ ಅನಿರುದ್ಧ ಹೆಗಡೆ ಅವರ ಮಾತು ಕೂಡ ಕೊಳಲಿನ ನಾದದಷ್ಟೇ ಹಿತವೆನಿಸಿತ್ತು.

ಬೆಂಗಳೂರಿನ ಅನಿರುದ್ಧ ಹೆಗಡೆ ಅವರಿಗೆ ಕೊಳಲಿನ ನಾದವೆಂದರೆ ವಿಪರೀತ ಮೋಹ. ಎಲ್ಲಿ ಕೊಳಲಿನ ನಾದ ಹೊಮ್ಮಿದರೂ ಮೈಯೆಲ್ಲಾ ಕಿವಿಯಾಗಿಸಿ ಕೇಳುತ್ತಿದ್ದವರು. ಕೊಳಲು ಕಲಿಯಬೇಕೆಂದು ಅತೀವ ಹಂಬಲವೂ ಹುಟ್ಟಿತ್ತು. ಹಿಂದೂಸ್ತಾನಿ ಸಂಗೀತದ ಪ್ರಕಾರದಲ್ಲಿ ಕೊಳಲಿಗೆ ಇರುವ ಪ್ರಾಶಸ್ತ್ಯ, ಅದರ ಮನಮೋಹಕ ನಾದಕ್ಕಿರುವ ಶಕ್ತಿಯೇ ಅವರನ್ನು ಕೊಳಲು ವಾದನ ಕಲಿಕೆಗೆ ಪ್ರೇರೇಪಿಸಿದ್ದು. 

ಪುಟ್ಟ ವಯಸ್ಸಿನಲ್ಲೇ ಕೀಬೋರ್ಡ್‌ ಕಲಿಕೆ ಆರಂಭಿಸಿದ್ದ ಅನಿರುದ್ಧ ಅವರಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಭ್ಯಾಸವೂ ಆಗಲೇ ಶುರುವಾಗಿತ್ತು. ಕಲಿಯುತ್ತಾ ಕಲಿಯುತ್ತಾ ಸಹಜವಾಗಿಯೇ ಕೊಳಲಿನ ಬಗ್ಗೆಯೂ ಆಸಕ್ತಿ ಹುಟ್ಟಿಕೊಂಡಿತು. ಇದೀಗ ಹನ್ನೊಂದನೇ ತರಗತಿಯಲ್ಲಿ ಓದುತ್ತಿರುವ ಅವರು, ಓದಿನೊಂದಿಗೆ ಸಂಗೀತಾಭ್ಯಾಸವನ್ನೂ ಮುಂದುವರೆಸಿದ್ದಾರೆ.

ಅನಿರುದ್ಧ ಅವರು ಕೊಳಲು ಕಲಿಕೆ ಆರಂಭಿಸಿದ್ದು ಪಂಡಿತ್ ಪ್ರಕಾಶ್ ಹೆಗಡೆ ಅವರ ಬಳಿ. ಇದೀಗ ಪ್ರಕಾಶ್ ಹೆಗಡೆ ಕಲ್ಲಾರೆಮನೆ ಅವರ ಬಳಿ ಕೊಳಲು ವಾದನಾಭ್ಯಾಸವನ್ನು ಮುಂದುವರೆಸಿದ್ದಾರೆ. 

‘2011ರಿಂದ ಕೊಳಲು ವಾದನದ ಕಲಿಕೆಯನ್ನು ಆರಂಭಿಸಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯುತ್ತಿದ್ದ ನನ್ನಲ್ಲಿ ಕೊಳಲು ವಾದನವನ್ನೂ ಕಲಿಯಬೇಕು ಎಂದು ತುಂಬಾ ಆಸೆಯಿತ್ತು. ಅಪ್ಪ ಅಮ್ಮ ಆ ಆಸೆಗೆ ನೀರೆರೆದರು’ ಎಂದು ತಮ್ಮ ತಂದೆ ತಾಯಿಯ ಬೆಂಬಲವನ್ನು ನೆನೆಯುತ್ತಾರೆ ಅವರು. ಓದಿನ ಮಧ್ಯೆ ಸಮಯ ಸಿಕ್ಕಾಗಲೆಲ್ಲಾ ಕೊಳಲನ್ನು ಹಿಡಿದು ಕೂರುವುದು ಇವರ ಅಭ್ಯಾಸವೂ ಆಗಿ ಹೋಗಿದೆ. ರಾತ್ರಿ ಸಮಯವೂ ಕೊಳಲಿನ ನಾದವನ್ನು ತಪ್ಪಿಸುವುದಿಲ್ಲ.

ಅನಿರುದ್ಧ ಅವರ ಕುಟುಂಬದಲ್ಲಿ ಸಂಗೀತ ಕಲಿತವರಾರೂ ಇಲ್ಲ. ಆದರೆ ತಂದೆ ಅಶೋಕ ಹೆಗಡೆ ಹಾಗೂ ತಾಯಿ ರೇಖಾ ಅವರಿಗಿದ್ದ ಸಂಗೀತದ ಆಸಕ್ತಿ, ಸಂಗೀತದೆಡೆಗಿನ ಪ್ರೀತಿ ಅನಿರುದ್ಧ ಅವರನ್ನು ಸಂಗೀತ ಲೋಕಕ್ಕೆ ಕರೆತಂದದ್ದು.  ಅನಿರುದ್ಧ ಅವರಿಗೆ ಬೆಂಬಲವಾಗಿ ನಿಂತು, ತಮ್ಮ ಸಂಗೀತದ ಅಭಿರುಚಿಯನ್ನು ಮಗನಲ್ಲಿ ಬಿತ್ತಿ ಬೆಳೆಸಿದರು.

ಜೀವದಲ್ಲಿನ ಜೀವ: ‘ಕೊಳಲಷ್ಟೇ ಅಲ್ಲ, ಯಾವುದೇ ವಾದನವಾದರೂ ಸರಿ, ಅನುಭವಿಸಿ, ಅರ್ಥೈಸಿ ನುಡಿಸಬೇಕು, ಹಾಡಬೇಕು. ಅದು ನಮ್ಮ ಜೀವದಲ್ಲಿ ಜೀವವಾಗಿ ಬೆರೆತುಹೋಗಬೇಕು. ಆಗಷ್ಟೇ ಅದು ನಮ್ಮ ಒಡನಾಡಿಯಾಗಲು ಸಾಧ್ಯ. ಅದೇ ಸಂಗೀತದ ಸುಮಧುರ ಅನುಭವ. ನನಗೆ ಕೊಳಲೆಂದರೆ ಹಾಗೇ. ಉಸಿರು ತುಂಬಿ ಬೆರಳಾಡಿಸುತ್ತಿರುವಾಗ ಎಲ್ಲೋ ತೇಲಿ ಹೋದಂಥ ಅನುಭವ’ ಎಂದು ವ್ಯಾಖ್ಯಾನಿಸುತ್ತಾರೆ ಅನಿರುದ್ಧ.

ಸೌಂಡ್ ಆಫ್ ಪ್ಯಾರಡೈಸ್
ಅನಿರುದ್ಧ ಅವರ ಕೊಳಲು ವಾದನದ ಮೊದಲ ಸಿ.ಡಿ.ಯೇ ‘ಸೌಂಡ್ ಆಫ್ ಪ್ಯಾರಡೈಸ್’. ‘ಹಿಂದೂಸ್ತಾನಿ ಸಂಗೀತದೆಡೆಗಿನ ಒಲವನ್ನು ಎತ್ತಿ ತೋರುವ ಪುಟ್ಟ ಪ್ರಯತ್ನ ಈ ಧ್ವನಿಮುದ್ರಿಕೆ’ ಎನ್ನುತ್ತಾರೆ ಅವರು. ‘ಟೋಟಲ್‌ ಕನ್ನಡ’ ಹೊರತಂದಿರುವ ಈ ಸಿ.ಡಿ.ಯಲ್ಲಿ ಅನಿರುದ್ಧ ಹೆಗಡೆ ಹಾಗೂ ಅವರ ಗುರು ಪ್ರಕಾಶ್ ಹೆಗಡೆ ಕಲ್ಲಾರೆಮನೆಯವರ ಕೊಳಲು ವಾದನವಿದೆ. ಇವರ ಕೊಳಲ ನಿನಾದಕ್ಕೆ ತಬಲದ ಸಾಥ್ ನೀಡಿರುವವರು ಗುರುಮೂರ್ತಿ ವೈದ್ಯ. ಸಿ.ಡಿಯಲ್ಲಿ 17 ನಿಮಿಷ, 7 ನಿಮಿಷ, 25 ನಿಮಿಷ ಹಾಗೂ 9 ನಿಮಿಷದ ಕೊಳಲಿನ ವಾದನವಿದೆ. ಯಮನ್ ರಾಗ, ರಾಗೇಶ್ವರಿ, ಮಿಶ್ರ ಮಾಂಡ್ ಹಾಗೂ ಹಂಸಧ್ವನಿ ರಾಗದಲ್ಲಿ ಕೊಳಲಿನ ನಾದ ಝರಿಯಿದೆ. 

‘ಸೌಂಡ್‌ ಆಫ್ ಪ್ಯಾರಡೈಸ್ – ನಾದದ ನಂದನವನ’ ಸಿ.ಡಿ. ಮೂಲಕ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿನ ಒಂದು ಪ್ರಯತ್ನ. ಕೇಳುಗರಿಗೆ ಹಿತವೆನಿಸುವ, ಶಾಂತಿಯನ್ನು ಮನಸ್ಸಿಗೆ ತುಂಬುವಂಥ ನಾದದೊಂದಿಗೆ ಈ ಸಿ.ಡಿ. ರೂಪುಗೊಂಡಿದೆ. ಅನಿರುದ್ಧ ‘ಹಂಸಧ್ವನಿ’ ರಾಗದಲ್ಲಿ ಕೊಳಲು ನುಡಿಸಿರುವುದು ಮನಮೋಹಕವಾಗಿದೆ’ ಎಂದು ಸಿ.ಡಿ. ಹೊರತಂದ ಉದ್ದೇಶದ ಕುರಿತು ಮಾತನಾಡಿದರು ಪ್ರಕಾಶ್ ಹೆಗಡೆ ಕಲ್ಲಾರೆಮನೆ.

ಮ್ಯೂಸಿಕ್ ಥೆರಪಿಯ ನಂಟು: ‘ಸಂಗೀತವನ್ನು ಥೆರಪಿಯಂತೆ ಬಳಸುವುದು ಇಂದು ನಿನ್ನೆಯ ಸಂಗತಿಯಲ್ಲ. ಈ ಸಿ.ಡಿ. ಯಲ್ಲೂ ಸಂಗೀತವನ್ನು ಥೆರಪಿಯಂತೆ ಬಳಸಿಕೊಳ್ಳಲಾಗಿದೆ. ಹೆಚ್ಚು ವಾದ್ಯಗಳಿಂದ ಗೊಂದಲಕ್ಕೀಡುಮಾಡದೆ ಕೊಳಲು, ತಬಲಾವನ್ನಷ್ಟೇ ಬಳಸಿಕೊಂಡು ಶಾಸ್ತ್ರೀಯ ಸಂಗೀತದ ಘಮಲನ್ನು ಹರಡಲಾಗಿದೆ. ಧ್ಯಾನಕ್ಕೆ ನೆರವಾಗುವುದಷ್ಟೇ ಅಲ್ಲದೆ, ಮನಸ್ಸನ್ನು ಶಾಂತವಾಗಿಡಬಲ್ಲ ಮನೋಚಿಕಿತ್ಸೆಯಂತೆಯೂ ಈ ಸಿ.ಡಿ. ಕೆಲಸ ಮಾಡಬಲ್ಲದು. ಸದಾ ಬಿಝಿಯಾಗಿರುವ ಮಂದಿಗೆ ರಿಲ್ಯಾಕ್ಸೇಷನ್‌ನಂತೆಯೂ ಈ ಸಿ.ಡಿ.ಯಲ್ಲಿನ ವಾದನವಿದೆ’ ಎನ್ನುತ್ತಾರೆ ಅವರು.

ಓದಿನೊಂದಿಗೆ ಸಂಗೀತ...: ನಗರದ ನೆಹರೂ ಸ್ಮಾರಕ  ವಿದ್ಯಾ ಕೇಂದ್ರದಲ್ಲಿ ಹನ್ನೊಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅನಿರುದ್ಧ ಅವರು ಓದಿನೊಂದಿಗೆ ಸಂಗೀತದಲ್ಲೂ ಭವಿಷ್ಯ ಅರಸುತ್ತಿದ್ದಾರೆ. ಸದ್ಯಕ್ಕೆ ಕೊಳಲು ವಾದನದ ಮತ್ತೊಂದು ಸಿ.ಡಿ. ಹೊರತರುವ ತಯಾರಿಯಲ್ಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT