ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೆಗಾಲು ಇಡುತ್ತಿವೆ ಆಶ್ರಮ ಶಾಲೆಗಳು!

ಉಳ್ಳವರಿಗೆ ಉನ್ನತ ಶಾಲೆ, ಬಡವರಿಗೆ ಮತ್ತು ಬುಡಕಟ್ಟು ಮಕ್ಕಳಿಗೆ ‘ಇಟ್ಟಿಗೆ ಗೂಡು’ಗಳು
Last Updated 1 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಶಿಕ್ಷಣದಿಂದ ವ್ಯಕ್ತಿತ್ವ ಅರಳಬೇಕು. ಅರಳಿದ ಆ ಹೂವಿಗೆ ಬುದ್ಧಿಮತ್ತೆಯ ರಂಗು, ವಿಕಸಿತ ಕೌಶಲದ ಪರಿಮಳ ಸೇರಿಕೊಂಡರೆ ಆ ವ್ಯಕ್ತಿ ಪಡೆದ ಶಿಕ್ಷಣಕ್ಕೆ ಸಾಫಲ್ಯ ಬರುತ್ತದೆ, ಅಂಥ ವ್ಯಕ್ತಿಯಿಂದ ಸಮಾಜದ ವಿಕಾಸಕ್ಕೆ ಮಾರ್ಗಗಳು ತೆರೆದುಕೊಳ್ಳುತ್ತವೆ. ಅಂಥ ಶಿಕ್ಷಣದ ಅವಕಾಶ ಎಲ್ಲರಿಗೂ ಸಿಗಬೇಕು ಎನ್ನುವುದು ನಮ್ಮ ಸಂವಿಧಾನದ ಆಶಯ. 
 
ಎಲ್ಲರಿಗೂ ಎಂದರೆ ಕಾಡಿನೊಳಗೆ ಜೀವನ ಮಾಡಿಕೊಂಡು ಬಂದಿರುವ ಅರಣ್ಯಮೂಲ ಬುಡಕಟ್ಟು ಜನರಿಗೂ ಸಿಗಬೇಕಲ್ಲವೇ? ನಾಡಿನ ನಾಗರಿಕರ ಬದುಕಿಗೂ ಕಾಡಿನ ಜನರ ಸಂಸ್ಕೃತಿಗೂ ಅಜಗಜಾಂತರ. ಕಾಡಿನೊಳಗೆ ತಮ್ಮದೇ ಆದ ಭಾಷೆ, ಸಂಸ್ಕೃತಿ, ವಿದ್ಯೆ, ಹಾಡು, ನೃತ್ಯಗಳನ್ನು ಬೆಳೆಸಿ ಪೋಷಿಸಿಕೊಂಡು ಬಂದವರು ಅವರು. ಬುಡಕಟ್ಟು ಜನರಿಗೆ ಸಿಗುವಂಥ ಶಿಕ್ಷಣದಲ್ಲಿ ಅವರ ಜೀವನ ವಿಕಾಸ ಹೊಂದುವಂಥ ಶಿಕ್ಷಣ ಇರಬೇಕು ಎಂದು ವಿಚಾರ ಮಾಡಿದ ಸ್ವತಂತ್ರ ಭಾರತ ಸರ್ಕಾರವು 1952ರಲ್ಲಿ ಆಶ್ರಮ ಶಾಲೆಗಳನ್ನು ತೆರೆಯಿತು. ಹಿಂದಿನ ಕಾಲದಲ್ಲಿದ್ದಂತೆ ಆಶ್ರಮದಲ್ಲಿದ್ದುಕೊಂಡು ಅಕ್ಷರಾಭ್ಯಾಸ, ಜೀವನ ಶಿಕ್ಷಣ ಕಲಿಯುವ ಪರಿಕಲ್ಪನೆಯಿಂದ ತೆರೆದುಕೊಂಡ ವಸತಿ ಶಾಲೆಗಳಿವು.
 
ಕರ್ನಾಟಕದಲ್ಲೂ 23 ಜಿಲ್ಲೆಗಳಲ್ಲಿ 116 ಆಶ್ರಮ ಶಾಲೆಗಳು ಸ್ಥಾಪನೆಯಾಗಿ ಬುಡಕಟ್ಟು ಜನರಿಗೆ ಅಕ್ಷರ ಲೋಕದ ಬಾಗಿಲು ತೆರೆಯಿತು. ಸಮಾಜ ಕಲ್ಯಾಣ ಇಲಾಖೆಯು ಆಶ್ರಮ ಶಾಲೆಗಳ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿತು. ಕಟ್ಟಡ, ವಸತಿ, ಆಹಾರ ಸೌಲಭ್ಯಗಳಿಗಾಗಿ ಹಣ ಹರಿದು ಬಂತು. ಮಕ್ಕಳೂ ಬಂದರು. ಶಾಲೆ ತೆರೆದು ಮಕ್ಕಳಿಗೆ ಊಟ, ವಸತಿಯ ಏರ್ಪಾಡು ಆಗಿ ಅರವತ್ತು ವರ್ಷಗಳ ಮೇಲಾಯಿತು. ತಾವು ಪಡೆದ ಶಿಕ್ಷಣದಿಂದ ಬುಡಕಟ್ಟು ಜನರೀಗ ನಾಡಿನಲ್ಲಿಯೂ, ಕಾಡಿನಲ್ಲಿಯೂ ಬೆಳಗುತ್ತಿರಬೇಕಾಗಿತ್ತಲ್ಲವೇ? ಹಾಗಾಗಿಲ್ಲ.
 
ಇಂದಿಗೂ ಅರಣ್ಯ ಮೂಲ ಬುಡಕಟ್ಟು ಜನರು ಮಾತ್ರ ಎಲ್ಲಿದ್ದಾರೋ ಅಲ್ಲಿಯೇ, ಆಧುನಿಕ ಯುಗದಿಂದ ನೂರು ವರ್ಷ ದೂರವೇ ಉಳಿದಿದ್ದಾರೆ. ಅವರೇ ದೂರ ಉಳಿದಿದ್ದಾರೆಯೇ ಅಥವಾ ಅವರನ್ನು ಮುದ್ದಾಂ ಅಲ್ಲಿಯೇ ಇಡಲಾಗಿದೆಯೇ ಎಂಬುದು ಚಾಮರಾಜನಗರ, ಕೊಡಗಿನಲ್ಲಿರುವ ಆಶ್ರಮ ಶಾಲೆಗಳನ್ನು ನೋಡಿದಾಗ ಸಂಶಯವಾಗಿ ಉಳಿಯುವುದಿಲ್ಲ, ನಿಚ್ಚಳವಾಗುತ್ತದೆ.
 
ಎಲ್ಲಿಯಾದರೂ, ಕಲಿಯಬಾರದೆಂದು ಶಾಲೆಗೆ ಹಾಕುವುದುಂಟೇ? ಉಣ್ಣಬಾರದೆಂದು ಊಟಕ್ಕೆ ಕೂಡ್ರಿಸುವುದುಂಟೇ? ನಿದ್ದೆ ಮಾಡಬಾರದೆಂದು ಮಲಗಿಸುವುದುಂಟೇ? ಉಂಟು. ಇವೆಲ್ಲವೂ ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳ ಆಶ್ರಮ ಶಾಲೆಗಳಲ್ಲುಂಟು. 
 
ನಾಗರಿಕ ಶಿಕ್ಷಣದ ಗಂಧವಿಲ್ಲದ ಒಂದು ಸಮುದಾಯಕ್ಕೆ ಶಿಕ್ಷಣ ನೀಡಲು ಹೊರಟಾಗ, ನೆಹರೂ ಅವರ ಆಶಯದಂತೆ ಅದು ಬುಡಕಟ್ಟು ಜನರ ಜೀವನಕ್ಕೆ ಹತ್ತಿರದ, ಅವರ ಸಂಸ್ಕೃತಿಯನ್ನು ಗೌರವಿಸುವ ಶಿಕ್ಷಣ ಆಗಬೇಕಾಗಿತ್ತು. ಹೊರಲೋಕದ ಅರಿವನ್ನು ಕಾಡಿನ ಮಕ್ಕಳಿಗೆ ನೀಡುವ ಬೆಳಕಾದರೂ ಅದಾಗಬೇಕಿತ್ತು ಅಥವಾ ಅವರದ್ದೇ ಜ್ಞಾನ ಕೌಶಲವನ್ನು ಬೆಳೆಸುವ ವಿಶೇಷ ಶಿಕ್ಷಣವಾದರೂ ಅದಾಗಬೇಕಾಗಿತ್ತು.
 
ಅವರ ಸಾಂಸ್ಕೃತಿಕ ಅನನ್ಯತೆ, ಪಾರಂಪರಿಕ ಕೌಶಲ, ಭಾಷಾ ವೈವಿಧ್ಯಕ್ಕೆ ಗೌರವ ಕೊಡುವ ಉದ್ದೇಶದಿಂದ ಸ್ಥಾಪಿಸಿದ್ದ ಈ ಶಾಲೆಗಳಲ್ಲಿ ಅವರ ಭಾಷೆ, ಸಂಸ್ಕೃತಿಯನ್ನು ಅಧ್ಯಯನ ಮಾಡಿದವರು, ಅವರ ಪರಿಸರವನ್ನು ಅಭ್ಯಸಿಸಿದವರು, ಬುಡಕಟ್ಟು ಮಕ್ಕಳ ಮೇಲೆ ಪ್ರೀತಿ ಇರುವವರು, ಆ ಮಕ್ಕಳಿಗೆ ಅವರದೇ ಜೀವನ ಪದ್ಧತಿಯನ್ನು ಕಲಿಸುವ ಕಲಿಕಾ ವಿಧಾನವನ್ನು ಅಭ್ಯಸಿಸಿದವರು ಶಿಕ್ಷಕರಾಗಿ ಬರಬೇಕಾಗಿತ್ತಲ್ಲವೇ? ದುರಂತ ನೋಡಿ. ಆದಿವಾಸಿಗಳ ಜೀವನದ ಬಗ್ಗೆ ಏನೂ  ಪರಿಚಯವಿಲ್ಲದ, ಆ ಕಲಿಕೆಯೂ ಇಲ್ಲದ, ಗೌರವ ಮೊದಲೇ ಇಲ್ಲದ ಯಾರೋ ಶಿಕ್ಷಕರಾಗಿದ್ದಾರೆ ಇಲ್ಲಿ.
 
ಕೂಲಿ ಕೆಲಸಕ್ಕೆ ಮೇಸ್ತ್ರಿಗಳನ್ನು ಒದಗಿಸುವಂಥ ಹೊರಗುತ್ತಿಗೆಯ ಏಜೆನ್ಸಿಯೊಂದು ಗುತ್ತಿಗೆ ಪಡೆದು ಈ ಶಾಲೆಗಳಿಗೆ ಶಿಕ್ಷಕರನ್ನು ಒದಗಿಸುತ್ತದೆ. ಒಬ್ಬರೂ ಶಿಕ್ಷಣ ಇಲಾಖೆಯಿಂದ ನೇಮಕಗೊಂಡವರಲ್ಲ. ₹ 4,000ದಿಂದ 6,000ಕ್ಕೆ ದುಡಿಯುವ, ದಾಖಲಾತಿಯಲ್ಲಿ ಹೆಸರು ಕೂಡ ಇಲ್ಲದ ಅನಾಮಧೇಯ ಶಿಕ್ಷಕರಿವರು. ‘ಕನ್ನಡ ಶಿಕ್ಷಕರು’, ‘ಗಣಿತ ಶಿಕ್ಷಕರು’ ಎಂದು ಮುಖ್ಯೋಪಾಧ್ಯಾಯಿನಿಯೇ ರೈಟ್‌ಮಾರ್ಕ್ ಹಾಕುತ್ತಾರೆ ಹೊರತು ಈ ಶಿಕ್ಷಕರು ತಮ್ಮ ಹಾಜರಾತಿಯ ಸಹಿ ಮಾಡುವಂತಿಲ್ಲ.
 
ಆ  ಮುಖ್ಯೋಪಾಧ್ಯಾಯಿನಿ ಅಲ್ಲಿನ ಆಶ್ರಮಕ್ಕೆ ಮೇಲ್ವಿಚಾರಕಿ ಕೂಡ. ಜೊತೆಗೆ 20- 30 ಕಿ.ಮೀ. ದೂರವಿರುವ ಇನ್ನೂ ಒಂದು ಆಶ್ರಮ ಶಾಲೆಯ ಮೇಲ್ವಿಚಾರಣೆಯ ಜವಾಬ್ದಾರಿಯೂ ಅವರ ಮೇಲೆಯೇ ಇದೆ. ಎಸ್ಸೆಸ್ಸೆಲ್ಸಿ, ಪಿಯುಸಿವರೆಗೆ ಓದಿದವರನ್ನು ಸಮಾಜ ಕಲ್ಯಾಣ ಇಲಾಖೆಯು ದಿನಗೂಲಿ ನೌಕರರಾಗಿ ನೇಮಿಸಿಕೊಳ್ಳುತ್ತದೆ. ಸಮುದಾಯ ಸ್ವಯಂ ಸೇವಕರೆಂದು ನೇಮಕವಾಗಿ ಕಲಿಸುವ ಕಾರ್ಯದಲ್ಲಿ ತೊಡಗಿರುವ ಅವರನ್ನು ‘ಅಡುಗೆಯವರು’ ಎಂದು ಕರೆಯಲಾಗುತ್ತದೆ.
 
ಆಶ್ರಮ ಶಾಲೆಗಳ ಮಕ್ಕಳಿಗೆ ಶಿಕ್ಷಣ ಸಿಗದಂತೆ ಮಾಡಲು ವ್ಯವಸ್ಥೆಯನ್ನು ಎಷ್ಟು ವ್ಯವಸ್ಥಿತವಾಗಿ ರೂಪಿಸಿಡಲಾಗಿದೆ ಎಂದು ತೋರಿಸುವ ಉದ್ದೇಶಕ್ಕಾಗಿ ಮಾತ್ರ ಈ ಸಂಬಳ, ಸಾರಿಗೆಯ ವಿವರ. ಮೇಲ್ವಿಚಾರಕರು ಸ್ಥಳದಲ್ಲಿರಬಾರದು, ಅಡುಗೆಯವರು ಮಕ್ಕಳಿಗೆ ಬೋಧನೆ ಮಾಡುತ್ತಿರಬೇಕು, ಮಕ್ಕಳ ಕಲಿಕೆ ಶಿಕ್ಷಣ ಇಲಾಖೆಗೆ ಸಂಬಂಧವಿಲ್ಲ. ತಾಯಿ ತಂದೆ ಬಂದು ವಿಚಾರಿಸಬಾರದು.  
 
ವಿಚಾರಿಸುತ್ತಾರಾದರೂ ಹೇಗೆ? ಎಷ್ಟೋ ಗಿರಿಜನ ತಾಯಿ ತಂದೆಗೆ ತಮ್ಮ ಮಕ್ಕಳು ಯಾವ ಆಶ್ರಮ ಶಾಲೆಯಲ್ಲಿದ್ದಾರೆ ಎನ್ನುವುದೇ ಗೊತ್ತಿಲ್ಲ. ಈ ದಿನಗಳಲ್ಲಿಯೂ ಜೀತದಾಳುಗಳಂತೆ ಜೀವಿಸುತ್ತಿರುವ ಅವರಿಗೆ ಇನ್ನೂವರೆಗೆ ಶಿಕ್ಷಣದ ಗಂಧವಿಲ್ಲ. ಮದ್ಯದ ಅಂಗಡಿ ಬಿಟ್ಟರೆ ಇನ್ನಾವ ಹೊರ ಪ್ರಪಂಚದ ಸಂಬಂಧವಿಲ್ಲ. ಮುಂಜಾನೆಯಿಂದ ಸಂಜೆಯವರೆಗೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಅವರಿಗೆ ದುಡಿಯುವುದಲ್ಲದೆ ಇನ್ನೇನೂ ಗೊತ್ತಿಲ್ಲ.
 
ಒಡೆಯರು ಹೇಳಿದಂತೆಯೇ ಎಲ್ಲಾ. ಜೀವನವೆಲ್ಲ ದುಡಿದರೂ ಸಾಲ ತೀರದು. ಇನ್ನು ತಮ್ಮ ಬದುಕು ರೂಪಿಸಿಕೊಳ್ಳುವ, ಮಕ್ಕಳ ಭವಿಷ್ಯದ ಚಿಂತೆ ಮಾಡುವ ವಿಚಾರ, ವ್ಯವಧಾನವೆಲ್ಲಿ? ಬಾಲಕಾರ್ಮಿಕರೆನಿಸಬಾರದು ಎಂದು ಒಡೆಯರು ಜೀಪಿನಲ್ಲಿ ಮಕ್ಕಳನ್ನೊಯ್ದು ಆಶ್ರಮ ಶಾಲೆಗೆ ಹಾಕಿ ಬರುತ್ತಾರೆ. ಮುಗಿಯಿತಷ್ಟೆ. ಆ ಮಕ್ಕಳ ಶಿಕ್ಷಣ ಹೇಗೆ ಸಾಗುತ್ತಿದೆ ಎಂದು ನೋಡಲು ಅವರಿಗೂ ಆಸಕ್ತಿ ಇಲ್ಲ. 
 
ಒಡೆಯರಿಗೆ ಆಸಕ್ತಿ ಇಲ್ಲದ, ತಾಯಿ–ತಂದೆ ವಿಚಾರಿಸಲಾರದ, ಶಿಕ್ಷಣ ಇಲಾಖೆಗೂ ಸಂಬಂಧ ಇಲ್ಲದಂಥ ಜಾಗದಲ್ಲಿ ಮಕ್ಕಳ ಭವಿಷ್ಯ ಹೇಗೆ ರೂಪುಗೊಳ್ಳಬಹುದು? ರೂಪುಗೊಳ್ಳಬಹುದು ಎನ್ನುವುದಕ್ಕಿಂತ ಮಣ್ಣಾಗುತ್ತದೆ ಎನ್ನುವುದೇ ಹೆಚ್ಚು ಸರಿಯೇನೊ. ಆ ಮಕ್ಕಳು ವಾಸಿಸುವ ವಸತಿ ಗೃಹಗಳೋ, ಹೆಚ್ಚಿನವು ದೇವರಿಗೇ ಪ್ರಿಯ. ಮನುಷ್ಯರಂತೂ ಅಲ್ಲಿ ಬದುಕಿರಲು ಸಾಧ್ಯವಿಲ್ಲ.
 
ಕಾಡನ್ನು ಬಿಟ್ಟು ಬೇರೆ ಜೀವನ ವಿಧಾನವೇ ಗೊತ್ತಿಲ್ಲ ಎಂಬ ಒಂದೇ ಕಾರಣಕ್ಕೆ ಈ ಮಕ್ಕಳು ಅಲ್ಲಿನ ವಾತಾವರಣವನ್ನು ಸ್ವೀಕರಿಸುತ್ತಿರಬಹುದು, ಅವರಿಗೆ ಆಯ್ಕೆಯಾದರೂ ಎಲ್ಲಿದೆ? ನಾಡಿನಲ್ಲೂ ಕಾಡಿನಲ್ಲಿರುವಂತೆಯೇ ಜೀವನ. ನಿತ್ಯ ಸ್ನಾನವಿಲ್ಲ. ಸ್ನಾನಗೃಹ, ಶೌಚಾಲಯ ಬಳಸಲಿಕ್ಕೆ ಬಾರದಷ್ಟು ಹೊಲಸು. ಒಟ್ಟೊಟ್ಟಾಗಿ ಹಾಕಿದ ಮಂಚಗಳಲ್ಲಿ ಹರಿದ ಹಾಸಿಗೆ, ತೂತಾದ ಹೊದಿಕೆ, ತಲೆಯಲ್ಲಿ ಹೇನು, ಮೈಯೆಲ್ಲ ಕಜ್ಜಿ, ತುಂಬಿ ಹರಿಯುವ ಗಟಾರದ ಪಕ್ಕದಲ್ಲಿ ಕಳೆಯುತ್ತಿರುವ ಬಾಲ್ಯ. 
 
ದೂರದ ಎಸ್ಟೇಟುಗಳಿಂದ ಮಾಲೀಕರು ತಂದು ಬಿಟ್ಟ ಮಕ್ಕಳು ಉಪಾಯವಿಲ್ಲದೆಯೇ ಇಲ್ಲಿ ಉಳಿದುಕೊಳ್ಳುತ್ತಾರೆ. ಆದರೆ ಹತ್ತಿರದ ಹಾಡಿಗಳಲ್ಲಿರುವ ಮಕ್ಕಳು ಮನೆಗೆ ಹೋಗಿಬಿಡುತ್ತಾರೆ. ಅಕ್ಕರೆಯಿಲ್ಲದ ಆಶ್ರಮ ಶಾಲೆಯ ಕೃತಕ ವಾತಾವರಣಕ್ಕೆ ಅವರ ಮನಸ್ಸು ಒಗ್ಗದು. ಯಾರು ಹೋದರು, ಯಾರು ಉಳಿದರು ಎಂದು ಗಮನಿಸಿ ಇಟ್ಟುಕೊಳ್ಳುವ ‘ಪಾಲಕರು’ ಇಲ್ಲವಲ್ಲ. ಈ ಕಾರಣಕ್ಕೆ ರಿಜಿಸ್ಟರಿನಲ್ಲಿ ತೋರಿಸುವ ಹಾಜರಾತಿ, ಮಕ್ಕಳ ಸಂಖ್ಯೆಯಲ್ಲಿ ಇರುವುದಿಲ್ಲ.
 
ಇಂದು ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಇರುವ 83 ಆಶ್ರಮ ಶಾಲೆಗಳಲ್ಲಿ 6,573 ಮಕ್ಕಳು ದಾಖಲಾಗಿದ್ದಾರೆ. ಆದರೆ ನಾಡಿನ ಮಕ್ಕಳಿಗೆ ಸಿಗುವಂಥ ಯಾವುದೇ ರೀತಿಯ ಶಿಕ್ಷಣವಾಗಲೀ ಸೌಲಭ್ಯವಾಗಲೀ ಈ ಮಕ್ಕಳಿಗೆ ಮಾತ್ರ ಸಿಗುತ್ತಿಲ್ಲ. ವಿಶೇಷವೆಂದರೆ ಬುಡಕಟ್ಟು ಮಕ್ಕಳ ಆಶ್ರಮ ಶಾಲೆಗಳನ್ನು ಇನ್ನೂವರೆಗೆ ಶಿಕ್ಷಣ ಇಲಾಖೆ ಗಮನಿಸಿಯೂ ಇಲ್ಲ. ಗುಣಮಟ್ಟದ ಶಿಕ್ಷಣ, ವಾಸಿಸಬಹುದಾದ ವಸತಿ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯಿಂದ ಒಂದು ಸ್ಪಷ್ಟ ನಿಲುವಾಗಲೀ ನೀತಿಯಾಗಲೀ ರೂಪುಗೊಂಡೂ ಇಲ್ಲ.
 
ಆಶ್ರಮ ಶಾಲೆಗಳನ್ನು ಶಿಕ್ಷಣ ಇಲಾಖೆಯೇ ವಹಿಸಿಕೊಳ್ಳಬೇಕು ಎಂಬುದು ಇಂದು ನಿನ್ನೆಯ ಬೇಡಿಕೆಯಲ್ಲ. ಹುಣಸೂರಿನಲ್ಲಿ, ಹೆಗ್ಗಡದೇವನ ಕೋಟೆಯಲ್ಲಿ, ಬಿಳಿಗಿರಿ ರಂಗನ ಬೆಟ್ಟದಲ್ಲಿ, ಕೊಡಗಿನಲ್ಲಿ, ಚಾಮರಾಜ ನಗರದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ದುಡಿಯುತ್ತಿರುವ ಸಂಘಟನೆಗಳ ಮನವಿಯನ್ನು 30 ವರ್ಷಗಳಿಂದ ಸರ್ಕಾರ  ಕಡೆಗಣಿಸುತ್ತಿದೆ. ಎಂದರೆ ಸರ್ಕಾರಕ್ಕೆ ಆ ಇಚ್ಛಾಶಕ್ತಿಯೇ ಹುಟ್ಟದಂತೆ ಮಟ್ಟಹಾಕಲು ಬಲವಾದ ಇನ್ನೇನೋ ಕಾರಣ ಇರಬೇಕೆಂದು ಯಾರಿಗಾದರೂ ಗುಮಾನಿ ಬಂದೇ ಬರುತ್ತದೆ. ಇಚ್ಛಾಶಕ್ತಿ ಇದ್ದರೆ ಸರ್ಕಾರದ್ದೇ ಆದ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ವರ್ಗಾಯಿಸುವುದು ಕಷ್ಟದ ಕೆಲಸವೇನೂ ಅಲ್ಲ. 
 
ಗ್ರಾಮೀಣ ಮಕ್ಕಳಿಗಾಗಿ ಸಂಪೂರ್ಣ ಉಚಿತ ಶಿಕ್ಷಣ ದೊರೆಯುವ ಕೇಂದ್ರ ಸರ್ಕಾರದ  ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ನಡೆಸುವ ನವೋದಯ ಶಾಲೆಗಳಿವೆ. ಅತಿ ಉನ್ನತ ದರ್ಜೆಯ ನವೋದಯ ಶಾಲೆಯ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ  ಮೊರಾರ್ಜಿ ವಸತಿ ಶಾಲೆಗಳನ್ನು ಆರಂಭಿಸಿತು. ಹೆಣ್ಣು ಮಕ್ಕಳಿಗಾಗಿ ಕಸ್ತೂರಬಾ ಬಾಲಕಿಯರ ಶಾಲೆ ಇದೆ. ಈ ಶಾಲೆಗಳನ್ನು ಸಮರ್ಥವಾಗಿ ನಡೆಸುವ ಮೂಲಕ ಉನ್ನತ ದರ್ಜೆಯ ಶಾಲೆಗಳನ್ನು ನಡೆಸುವ ಶಿಸ್ತು ಮತ್ತು ಸಾಮರ್ಥ್ಯ ತನ್ನಲ್ಲಿದೆ ಎಂದು ಇಲಾಖೆ ತೋರಿಸಿಕೊಟ್ಟಿದೆ.
 
ಆದರದು ತಲುಪುತ್ತಿರುವುದು ಉನ್ನತ ದರ್ಜೆಯ ಜನರಿಗೆ ಮಾತ್ರ. ವಿಶೇಷ ಪರೀಕ್ಷೆ ನಡೆಸಿ ಆಯ್ಕೆಯಾದ ವಿದ್ಯಾರ್ಥಿಗಳು 6ನೇ ಇಯತ್ತೆಯಿಂದ ಇಲ್ಲಿ ಓದುತ್ತಾರೆ. ವಿಶೇಷ ಪರೀಕ್ಷೆ ಮತ್ತು ಆಯ್ಕೆ ಎಂದಾಗಲೇ ಅರ್ಥ ಮಾಡಿಕೊಳ್ಳಬೇಕು, ಆಯ್ಕೆ ಆಗುವುದು ಯಾರು ಎಂದು. ಅಧಿಕಾರದಲ್ಲಿರುವವರು, ಶ್ರೀಮಂತರ ಮಕ್ಕಳದ್ದೇ ಮೇಲುಗೈ ಇಲ್ಲಿ. ಗ್ರಾಮೀಣ ಭಾಗದ ಶಿಕ್ಷಕರು ತಮ್ಮ ಮಕ್ಕಳಿಗೆ ಹೆಚ್ಚಿನ ಟ್ಯೂಷನ್ ಕೊಡಿಸಿ ಪಾಸು ಮಾಡಿಸಿದಾಗ ಮಾತ್ರ ಅವರಿಗೆ ಪ್ರವೇಶ ಸಿಗುತ್ತದೆ. ಅದಕ್ಕಿಂತ ಕೆಳ ಮಟ್ಟದ ಗ್ರಾಮೀಣ ಮಕ್ಕಳಿಗೆ ನವೋದಯ ಶಾಲೆಯೂ ಗನನ ಕುಸುಮವೇ. 
 
ಕೇರಳದಲ್ಲಿರುವ ಆಶ್ರಮ ಶಾಲೆಗಳನ್ನು ನೋಡಿಯಾದರೂ ನಮ್ಮ ಇಲಾಖೆಗಳು ಕಲಿಯಬೇಕು. ಸುಸಜ್ಜಿತವಾದ ವಸತಿಗೃಹಗಳು, ಗುಣಮಟ್ಟದ ಶಿಕ್ಷಣ ಕೊಡುವ ಶಿಕ್ಷಕರು, ಉತ್ತಮ ಊಟ ಇವೆಲ್ಲವುಗಳಿಂದ ಯಾವುದೇ ನವೋದಯ ಶಾಲೆಗೆ ಕಡಿಮೆ ಇಲ್ಲದಂತೆ ಬುಡಕಟ್ಟು ಮಕ್ಕಳಿಗಾಗಿ ಮಾಡಿರುವ ಆ ಶಾಲೆಗಳು ಕೂಡ ಸುವ್ಯವಸ್ಥಿತವಾಗಿವೆ. 
 
ಹೆಗ್ಗಡದೇವನ ಕೋಟೆಯಲ್ಲಿ ಇತ್ತೀಚೆಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಉನ್ನತೀಕರಿಸಿದ  ‘ಏಕಲವ್ಯ ವಸತಿ ಶಾಲೆ’ ಆರಂಭಿಸಲಾಯಿತು. 24 ಎಕರೆ ಭೂಮಿಯಲ್ಲಿ ₹ 14 ಕೋಟಿ ಖರ್ಚು ಮಾಡಿ ಶಾಲೆ ಆರಂಭಿಸಲಾಯಿತು. 40 ಮಕ್ಕಳು ಶಾಲೆಗೆ ಪ್ರವೇಶ ಪಡೆದರು. ಆದರೆ ಶಾಲೆಗೆ ಶಿಕ್ಷಕರ ನೇಮಕಾತಿಯೇ ಇಲ್ಲ! ಶಿಕ್ಷಕರ ನೇಮಕಾತಿ ಇಲ್ಲದೆ ಮಕ್ಕಳ ಪ್ರವೇಶ ಮಾಡಿಸಿದ್ದು ಹೇಗೆ? ಬಹಳ ಪ್ರತಿಭಟನೆ ಆದ ಮೇಲೆ ಈಗ ನಾಲ್ವರು ಶಿಕ್ಷಕರನ್ನು ಮಾತ್ರ ನೇಮಿಸಿಕೊಳ್ಳಲಾಗಿದೆ. 
 
ಆದಿವಾಸಿ ಸಂಘಟನೆಗಳ ಕೂಗಿನ ಪರಿಣಾಮವಾಗಿ ಇಂದು ಆಶ್ರಮ ಶಾಲೆಗಳಲ್ಲಿ ಸಣ್ಣಪುಟ್ಟ ಬದಲಾವಣೆಗಳು ಗೋಚರವಾಗುತ್ತಿವೆ. ಉನ್ನತೀಕರಿಸುವ ಪ್ರಯತ್ನಗಳಾಗುತ್ತಿವೆ. ಆದರೇನು, ಶಿಕ್ಷಣದ ಗುಣಮಟ್ಟಕ್ಕೆ ಸಂಬಂಧವಿಲ್ಲದವು ಅವು. ಹೆಚ್ಚು ಹಣ ಮಂಜೂರಾಗುತ್ತಿದೆ, ಹೊಸ ಕಟ್ಟಡಗಳು ಏಳುತ್ತಿವೆ. ಊಟದಲ್ಲಿ ಮಾಂಸ, ಹಾಲು ಬಂದಿವೆ. ತೀರಾ ಇತ್ತೀಚೆಗೆ ‘ನಲಿ-ಕಲಿ’ ಪದ್ಧತಿಯನ್ನು ಪರಿಚಯಿಸಲಾಗಿದ್ದರೂ ಗುಣಮಟ್ಟದ ಶಿಕ್ಷಣ ಮಾತ್ರ ಇನ್ನೂ ಗಾವುದ ದೂರವೇ ನಿಂತಿದೆ. ಶಿಕ್ಷಣ ಇಲಾಖೆ ಮನಸ್ಸು ಮಾಡುತ್ತಿಲ್ಲ. ತರಬೇತಿಯಾದ ಶಿಕ್ಷಕರನ್ನು ನೇಮಿಸುತ್ತಿಲ್ಲ.
 
ನವೋದಯ ಶಾಲೆಗಳನ್ನು ನಡೆಸಬಲ್ಲ ಶಿಕ್ಷಣ ಇಲಾಖೆಯು ಆಶ್ರಮ ಶಾಲೆಗಳನ್ನು ಕೈಗೆ ತೆಗೆದುಕೊಳ್ಳುವ ಮನೋಬಲವನ್ನು ಯಾಕೆ ತೋರಿಸುತ್ತಿಲ್ಲ? ಉಳ್ಳವರಿಗೆ ಉಚಿತವಾದ ಉನ್ನತವಾದ ಶಾಲೆ ನಡೆಸುವ ನಮ್ಮ ಸರ್ಕಾರ ಬಡವರಿಗೆ, ಬುಡಕಟ್ಟು ಮಕ್ಕಳಿಗೆ ಮಾಡುತ್ತಿರುವ ಈ ತಾರತಮ್ಯ ಅಕ್ಷಮ್ಯ. ಈ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಬೇಡವೆಂದೇ? ನಾಳೆ ಎಸ್ಟೇಟುಗಳಲ್ಲಿ ಕಡಿಮೆ ಕೂಲಿಗೆ ದುಡಿಯಲು ಕೂಲಿಗಳು ಸಿಗಲಿಕ್ಕಿಲ್ಲವೆನ್ನುವ ದೂರದೃಷ್ಟಿಯೇ? 1952ನೇ ಇಸವಿಯಲ್ಲಿ ಸ್ಥಾಪನೆಗೊಂಡಿರುವ ಆಶ್ರಮ ಶಾಲೆಗಳು 64 ವರ್ಷ ವಯಸ್ಸಾದರೂ ಇನ್ನೂವರೆಗೆ ಅಂಬೆಗಾಲನ್ನೇ ಇಡುತ್ತಿವೆ ಎಂದರೇನರ್ಥ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT