ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವದಲ್ಲಿ ಭಾರತದ ಸಂವಿಧಾನವೇ ಶ್ರೇಷ್ಠ’

ಕಾನೂನು ಕಾಲೇಜಿನ ಸಂವಾದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಶಿವರಾಜ್ ಪಾಟೀಲ ಭಾಗಿ
Last Updated 2 ಮಾರ್ಚ್ 2017, 5:34 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಸಾಮಾನ್ಯರು, ಶ್ರೇಷ್ಠರು ಎಂಬ ಭೇದವಿಲ್ಲದೇ ಎಲ್ಲರಿಗೂ ಒಂದೇ ನ್ಯಾಯ ಎಂಬ ತತ್ವದಡಿ ನಂಬಿಕೆ ಹೊಂದಿದ ಕಾರಣಕ್ಕೆ ವಿಶ್ವದಲ್ಲಿಯೇ ನಮ್ಮದು ಶ್ರೇಷ್ಠ ಸಂವಿಧಾನ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ ಹೇಳಿದರು.

ನಗರದ ಬಿ.ವಿ.ವಿ ಸಂಘದ ಮಿನಿ ಸಭಾಭವನದಲ್ಲಿ ಬುಧವಾರ ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತ ಎಂದರೇ ಜ್ಞಾನ ಎಂದು ಚಿಂತಕ ಮ್ಯಾಕ್ಸ್ ಮುಲ್ಲರ್ ಹೇಳಿದ್ದಾರೆ. ಹಾಗಿದ್ದರೂ ಇಂದು ಜಾತಿ, ಅಪರಾಧ, ಭ್ರಷ್ಟಾಚಾರ ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ದೊಡ್ಡ ರೋಗಗಳಾಗಿವೆ. ಇವು ದೇಶದ ಅಭಿವೃದ್ಧಿಗೆ ಮಾರಕವಾಗಿವೆ’ ಎಂದು ವಿಷಾದಿಸಿದರು.

ಜಾತೀಯತೆ, ಭ್ರಷ್ಟಾಚಾರದ ವಿರುದ್ಧ ವಕೀಲರು, ಯುವ ಸಮುದಾಯ  ಧ್ವನಿ ಎತ್ತಬೇಕು. ಸರ್ಕಾರದ ಪ್ರತಿನಿಧಿಗಳು ಕೆಲಸ ಮಾಡದಿದ್ದಾಗ ಜನರು ಅವರನ್ನು ಎಚ್ಚರಿಸಬೇಕು. ಇಲ್ಲದಿದ್ದರೇ ಪ್ರಜಾಪ್ರಭುತ್ವ ಇದ್ದು ಇಲ್ಲದಂತಾಗುತ್ತದೆ. ನ್ಯಾಯ, ಅನ್ಯಾಯ ನಡೆದಾಗ ಸರ್ಕಾರ ಮತ್ತು ಜನರು ಸ್ಪಂದಿಸಬೇಕು ಎಂದರು.

ವಕೀಲರು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಸಾಮಾನ್ಯ ಜನರು  ತಮಗೆ ಆಗಿರುವ ಅನ್ಯಾಯ, ನೋವು, ನಲಿವು ಪರಿಹರಿಸಿಕೊಳ್ಳಲು ಬರುತ್ತಾರೆ. ಅಂತವರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕಿದೆ ಎಂದರು.

‘ಸುಪ್ರೀಂಕೋರ್ಟ್ ನ್ಯಾಯಾಧೀಶರು ದೊಡ್ಡವರು, ಹೈಕೋರ್ಟ್‌ ಇಲ್ಲವೇ ಅಧೀನ ನ್ಯಾಯಾಲಯದ ನ್ಯಾಯಾಧೀಶರು ಚಿಕ್ಕವರು ಎಂಬ ಬೇಧ ಸಲ್ಲದು. ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶದ ನಾನು.

ಅಷ್ಟು ಅಕ್ಷರ ಜ್ಞಾನ ಹಾಗೂ ಆರ್ಥಿಕವಲ್ಲದವ ಪಾಲಕರ ಪ್ರೋತ್ಸಾಹ, ಆಶಿರ್ವಾದದಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಯವರೆಗೆ ಹೋಗಿದ್ದೇನೆ. ಕಾರಣ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ. ನಿಮಗೂ ಅವಕಾಶವಿದೆ. ಒಳ್ಳೆಯ ಜ್ಞಾನ ಸಂಪಾದನೆ ಮಾಡಿ’ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಬಿ.ವಿ.ವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಅನಿಲ್ ಕಟ್ಟಿ, ಎನ್.ಶರಣಪ್ಪ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಅಶೋಕ ಸಜ್ಜನ, ಪ್ರಾಚಾರ್ಯ ಎಸ್.ಜಿ.ಗೌಡಪ್ಪನವರ ಇದ್ದರು.

‘ಜಾತಿ ನಾಶಕ್ಕೆ  ಕಟಿಬದ್ಧರಾಗಿ’
‘ಜಾತಿ ವ್ಯವಸ್ಥೆಯನ್ನು ಕಾನೂನು ಮೂಲಕ ತೊಡೆದು ಹಾಕುತ್ತೇವೆ ಎಂಬುದು ಸುಳ್ಳು. ಸಾವಿರಾರು ವರ್ಷಗಳಿಂದ ಜನರ ಭಾವನೆಗಳಲ್ಲಿ ಬೇರೂರಿದ ಈ ವ್ಯವಸ್ಥೆ ಕಿತ್ತೊಗೆಯಲು ಯುವ ಸಮುದಾಯ ಮುಂದೆ ಬರಬೇಕು. ಅಂದಾಗ ಮಾತ್ರ ಅದು ತೊಲಗಲು ಸಾಧ್ಯ’ ಎಂದು  ಸಂವಾದದ ವೇಳೆ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಶಿವರಾಜ ಪಾಟೀಲ ಉತ್ತರಿಸಿದರು.

ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಮ್ಮ ಪ್ರಜಾಪ್ರಭುತ್ವ ಹಕ್ಕು ನೀಡಿದೆ. ಯಾರ ಬೇಕಾದರು ಅರ್ಜಿ ಹಾಕಬಹುದು. ಆದರೆ, ಅದಕ್ಕೆ ತನ್ನದೇ ಆದ ನಿಯಮಗಳಿವೆ. ಸುಮ್ಮನೆ ಯಾರ ವಿರುದ್ಧವೂ ಅರ್ಜಿ ಸಲ್ಲಿಸುವಂತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT