ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾ ‘ಸಿಹಿ ಅಂಗಡಿ’

Last Updated 2 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಹೆಚ್ಚು ಇಂಗ್ಲಿಷ್‌ ಬೆರೆತ ವಿಶಿಷ್ಟಗನ್ನಡದ ತಮ್ಮ ಎಂದಿನ ಶೈಲಿಯಲ್ಲಿ ಮಾತಿಗಿಳಿದ ನಟಿ–ನಿರ್ಮಾಪಕಿ ಪೂಜಾ ಗಾಂಧಿ ದನಿಯಲ್ಲಿ ‘ಸಿಹಿತನ’ ತುಸು ಹೆಚ್ಚಾಗಿತ್ತು. ‘ಜಿಲೇಬಿ’ಯ ಪದರಗಳ ಸೊಗಸನ್ನು ವರ್ಣಿಸುವುದೆಂದರೆ ಅವರಿಗೆ ಬಲು ಖುಷಿ. ‘ಜಿಲೇಬಿ’ ಎಂದರೆ ಗಾಢ ಸಿಹಿ ಇರಲೇಬೇಕಲ್ಲ? ಸುರುಳಿಯಾಕಾರದ ಜಿಲೇಬಿ ಬಾಯಲ್ಲಿ ನೀರೂರಿಸುತ್ತದೆ. ಅದರ ತುಣುಕನ್ನು ಬಾಯಿಗಿರಿಸಿದರೆ ಸಣ್ಣನೆ ಜಿನುಗುವ ಸಕ್ಕರೆ ಪಾಕದ ರಸ ನಾಲಿಗೆ ಸ್ಪರ್ಶಿಸಿದಾಗ ಆಹಾ! ಎನಿಸುವಷ್ಟು ರುಚಿ. ಅದರ ಸಿಹಿಯಲ್ಲಿ ಅಂಟಿಕೊಳ್ಳುವ ಗುಣವಿದೆ. ಕೊನೆಯಲ್ಲಿ ಬೆರಳನ್ನು ನಾಲಿಗೆ ಮೇಲೆ ಹೊರಳಿಸುವ ತುಂಟತನಕ್ಕೆ ಸಾಟಿಯಿಲ್ಲ. ಬಿಸಿಬಿಸಿಯಿದ್ದಾಗ ಗರಿಗರಿಯೂ ಆಗಿರುತ್ತದೆ. ತಿಂದು ಅರ್ಧಗಂಟೆಯ ಬಳಿಕವೂ ಅದರ ಘಮಲು ಮತ್ತು ಸಿಹಿ ಉಳಿದಿರುತ್ತದೆ. ಜಿಲೇಬಿ ತಿನಿಸಿನ ರಸಾಸ್ವಾದ ತಮ್ಮ ಸಿನಿಮಾದಲ್ಲಿಯೂ ಇದೆ ಎಂಬ ವರ್ಣನೆ ಅವರದು.
 
‘ಅಭಿನೇತ್ರಿ’ ಚಿತ್ರದ ಸಿಹಿ–ಕಹಿ ಅನುಭವದ ಒಂದು ವರ್ಷದ ಬಳಿಕ ಪೂಜಾ ಗಾಂಧಿ ನಟಿಸಿರುವ ‘ಜಿಲೇಬಿ’ ಈ ವಾರ ತೆರೆಕಾಣುತ್ತಿದೆ. ಈ ಸಿನಿಮಾ ತಮಗೆ ವಿಶೇಷ ಎಂದು ಅವರು ಹೇಳಿಕೊಳ್ಳಲು ಹಲವು ಕಾರಣಗಳಿವೆ. ನಿರ್ಮಾಪಕಿಯಾಗಿ ಮೊದಲ ಪ್ರಯತ್ನದಲ್ಲಿ ಸೋಲುಂಡ ನಂತರ ಮತ್ತೆ ಅವರು ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಬೆನ್ನಲ್ಲೇ ಎರಡು ಸಿನಿಮಾಗಳ ನಿರ್ಮಾಣದ ಸಾಹಸಕ್ಕೆ ಕೈ ಹಾಕಿದ್ದಾರೆ. ಪಾತ್ರಗಳಲ್ಲಿ ವೈವಿಧ್ಯ ಹುಡುಕುತ್ತಿದ್ದ ಅವರಿಗೆ ‘ಜಿಲೇಬಿ’ಯಲ್ಲಿ ಕಚಗುಳಿ ಇರಿಸುವ ಅವಕಾಶ ದೊರೆತಿದೆ. ‘ಕಾಮಿಡಿ–ಸಸ್ಪೆನ್ಸ್‌’ ಜಾನರ್‌ನಲ್ಲಿ ಮೊದಲ ಬಾರಿಗೆ ನಟಿಸಿರುವುದು ಅವರಿಗೆ ಹೊಸ ಪ್ರಯೋಗಕ್ಕೆ ಒಡ್ಡಿಕೊಂಡ ಖುಷಿ ನೀಡಿದೆ.
 
‘ಜಿಲೇಬಿ’ ‘ಅಡಲ್ಟ್‌–ಕಾಮಿಡಿ’ ಚಿತ್ರ ಎಂದು ನಿರ್ದೇಶಕ ‘ಲಕ್ಕಿ’ ಶಂಕರ್‌ ಹೇಳಿಕೊಂಡಿದ್ದಾರೆ. ಆದರೆ ಇದು ವಯಸ್ಕರ ಚಿತ್ರ ಅಲ್ಲವೇ ಅಲ್ಲ ಎನ್ನುವುದು ಪೂಜಾ ವಾದ. ತಮ್ಮ ಸಿನಿಮಾವನ್ನು ‘ಅಡಲ್ಟ್‌’ ವರ್ಗಕ್ಕೆ ಸೇರಿಸಲು ಅವರು ಬಯಸುವುದಿಲ್ಲ. ಇಂದಿನ ಯುವಜನರು ಹೇಗೆ ಸಹಜವಾಗಿ ಮಾತನಾಡುತ್ತಾರೋ ಅಂತಹ ಸಹಜ ಸಂಭಾಷಣೆಗಳೇ ಚಿತ್ರದಲ್ಲಿರುವುದು. ಯಾರಾದರೂ ಏನಾದರೂ ಕೇಳಿದಾಗ ತುಂಟತನದಿಂದ ಉತ್ತರ ನೀಡುತ್ತೇವಲ್ಲ, ಅದರಲ್ಲಿ ಅಶ್ಲೀಲತೆ ಇರುವುದಿಲ್ಲ. ಇದು ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ನೀಡಬಹುದಾದ ನೀಟ್ ಸಿನಿಮಾ ಎಂದು ಸಮರ್ಥಿಸಿಕೊಳ್ಳುತ್ತಾರೆ.
 
ಗಂಭೀರ ಪಾತ್ರಗಳಿಂದ ಹೊರಬರುವ ಪ್ರಯತ್ನದಲ್ಲಿ ಪೂಜಾ ಅವರಿಗೆ ದೊರೆತ ಮೊದಲ ಹಾಸ್ಯ ಪ್ರಧಾನ ಸಿನಿಮಾ ಇದು. ಇಲ್ಲಿನ ಹಾಸ್ಯ ಸಾಂದರ್ಭಿಕವಾಗಿ ಹುಟ್ಟುವಂಥದ್ದು ಇದರಲ್ಲಿ ನವಿರುತನವಿದೆ. ಜತೆಗೆ ಪ್ರೇಕ್ಷಕರನ್ನು ಸೀಟಿನ ಅಂಚಿಗೆ ಕೂರಿಸುವಂತಹ ಸಸ್ಪೆನ್ಸ್‌ ಇದೆ ಎನ್ನುವ ಪೂಜಾ, ಜನರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ಹೊಂದಿದ್ದಾರೆ. 
 
ಲಕ್ಕಿ ಶಂಕರ್ ಮೊದಲ ಬಾರಿಗೆ ಕಥೆ ಹೇಳಿದಾಗಲೇ ಪೂಜಾ ಅದನ್ನು ಮೆಚ್ಚಿಕೊಂಡರಂತೆ. ತಾಂತ್ರಿಕವಾಗಿ ಹೆಚ್ಚು ಕೌಶಲವುಳ್ಳ ವೃತ್ತಿಪರ ನಿರ್ದೇಶಕ ಶಂಕರ್‌. ಇಂದಿನ ಸಿನಿಮಾಗಳಲ್ಲಿ ಕಥೆಯೇ ಮುಖ್ಯ. ಒಳ್ಳೆಯ ಗಟ್ಟಿ ಕಥೆ ಇದ್ದರೆ ಮಾತ್ರ ಜನ ಸಿನಿಮಾ ನೋಡುತ್ತಾರೆ. ಅಂತಹ ಗಟ್ಟಿತನ ‘ಜಿಲೇಬಿ’ಯಲ್ಲಿದೆ ಎನ್ನುತ್ತಾರೆ ಮಳೆ ಹುಡುಗಿ. 
 
ನಿರ್ಮಾಣದ ಹೆಮ್ಮೆ!
ನಿರ್ಮಾಪಕಿಯಾಗಿ ದೊಡ್ಡ ಗೆಲುವಿನ ನಿರೀಕ್ಷೆಯೊಂದಿಗೆ ಮಾಡಿದ್ದ ‘ಅಭಿನೇತ್ರಿ’ ಯಶಸ್ಸಿನ ವಿಚಾರದಲ್ಲಿ ಅವರ ಕೈಹಿಡಿಯಲಿಲ್ಲ. ‘‘ಸಿನಿಮಾ ಹಣ ಮಾಡಿತೇ, ಸೋತಿತೇ ಎನ್ನುವುದು ಇಲ್ಲಿ ಮುಖ್ಯವಲ್ಲ. ಅದು ಕೊಟ್ಟ ಅನುಭವ ದೊಡ್ಡದು. ಸಿನಿಮಾ ನಿರ್ಮಾಣ ಸುಲಭವಲ್ಲ. ಎಷ್ಟೋ ಸಿನಿಮಾಗಳು ಶುರುವಾಗುತ್ತವೆ. ಆದರೆ ಮುಗಿಯುವುದೇ ಇಲ್ಲ. ಅಂಥದ್ದರಲ್ಲಿ ಸಿನಿಮಾ ಮಾಡಿ ಬಿಡುಗಡೆ ಮಾಡಿದ್ದೇನೆ. ಹೀಗಾಗಿ ‘ಅಭಿನೇತ್ರಿ’ ನನ್ನ ಪಾಲಿಗೆ ವಿಶೇಷ ಸಿನಿಮಾ’’ ಎಂದು ಹೇಳಿಕೊಳ್ಳುತ್ತಾರೆ. 
 
ಕಲಾವಿದರ ಕೆಲಸ ನಟಿಸುವುದಷ್ಟೇ. ಆದರೆ ನಿರ್ಮಾಪಕರು ಇಡೀ ಸಿನಿಮಾದ ಹೊಣೆ ಹೊರಬೇಕು. ಅದು ಸುಲಭದ ಕೆಲಸವಲ್ಲ. ನಿರ್ಮಾಪಕಿಯಾಗಿ ನೋಡುವುದಕ್ಕೂ ನಟಿಯಾಗಿ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕಥೆಯ ಆಯ್ಕೆಯಿಂದ ಹಿಡಿದು ಸಿನಿಮಾ ಬಿಡುಗಡೆ ಬಳಿಕವೂ ವಿವಿಧ ಜವಾಬ್ದಾರಿಗಳಿರುತ್ತವೆ. ನಟನೆಯಲ್ಲಿ ಸೃಜನಶೀಲತೆ ಇರುವಂತೆ, ನಿರ್ಮಾಣದಲ್ಲಿಯೂ ಸೃಜನಶೀಲತೆ ಇರುತ್ತದೆ. ಹೀಗಾಗಿ ನಿರ್ಮಾಣವೂ ಒಂದು ಕಲೆ ಎಂದು ಸ್ವಾನುಭಾವದ ಸಾರವನ್ನು ಅವರು ವಿಶ್ಲೇಷಿಸುತ್ತಾರೆ. 
 
ತಾವು ಮೊದಲು ನಟಿ, ಬಳಿಕವೇ ನಿರ್ಮಾಪಕಿ ಎಂದು ನಟನೆಗೇ ಆದ್ಯತೆ ನೀಡುವುದಾಗಿ ಹೇಳಿಕೊಳ್ಳುತ್ತಾರೆ. ನಟಿಯಾಗಿ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತಿದ್ದೇನೆ. ನಿರ್ಮಾಣ ನನ್ನ ಪಾಲಿಗೆ ಹೊಸ ಪಯಣ. ಇನ್ನೂ ಕಲಿಯುತ್ತಿದ್ದೇನೆ ಎನ್ನುವ ಪೂಜಾ, ನಿರ್ಮಾಪಕಿಯಾಗಿ ಪ್ರಯೋಗಾತ್ಮಕ ಮತ್ತು ಒಳ್ಳೆಯ ಕಥೆಗಳನ್ನು ತರುವ ಹೆಬ್ಬಯಕೆ ವ್ಯಕ್ತಪಡಿಸುತ್ತಾರೆ. ಅದರ ಜತೆಗೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶವನ್ನೂ ಹಂಚಿಕೊಳ್ಳುತ್ತಾರೆ. 
 
ಎರಡೆರಡು ಸಿನಿಮಾ
‘ಅಭಿನೇತ್ರಿ’ ನಂತರ ಪೂಜಾ ಗಾಂಧಿ ಎರಡು ಸಿನಿಮಾಗಳಿಗೆ ಹೂಡಿಕೆ ಮಾಡುತ್ತಿದ್ದಾರೆ. ತೆಲುಗಿನ ಜೆ.ಡಿ. ಚಕ್ರವರ್ತಿ ನಿರ್ದೇಶನದಲ್ಲಿ ‘ಭಾನುಮತಿ’ ಚಿತ್ರ ಏಪ್ರಿಲ್‌ನಲ್ಲಿ ಶುರುವಾಗಲಿದೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಚಿತ್ರ ಸಿದ್ಧವಾಗಲಿದೆ. ಆಂಧ್ರಪ್ರದೇಶದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿದ ಚಿತ್ರವಿದು ಎನ್ನುತ್ತಾರೆ ಪೂಜಾ. ಅತಿಮಾನುಶ ಶಕ್ತಿಯ ಕುರಿತ ಕಥೆ ಇದರಲ್ಲಿದೆ. ಇದು ಅವರಿಗೆ ಹೊಸ ಅನುಭವ ನೀಡಲಿದೆಯಂತೆ. ಈ ಸಿನಿಮಾ ಹಾಲಿವುಡ್‌ ಮಟ್ಟಕ್ಕೆ ಇರಲಿದೆ ಎನ್ನುವುದ ಅವರ ಬಣ್ಣನೆ.
 
‘ದಂಡುಪಾಳ್ಯ’ ಚಿತ್ರದ ಎರಡನೆಯ ಆವೃತ್ತಿ ಸಿದ್ಧವಾಗುತ್ತಿದೆ. ಅದರ ಮೂರನೇ ಭಾಗವೂ ಸೆಟ್ಟೇರಲಿದೆ. ಅದಕ್ಕೆ ಸ್ವತಃ ಪೂಜಾ ಅವರೇ ನಿರ್ಮಾಪಕರು. ಮೊದಲ ಭಾಗಕ್ಕಿಂತಲೂ ಈ ಎರಡು ಭಾಗಗಳು ಹೆಚ್ಚು ಗಟ್ಟಿಯಾಗಿವೆ ಎನ್ನುತ್ತಾರೆ ಅವರು.
 
***
ನಾನು ಒಳ್ಳೆಯ ನಟಿ
10 ವರ್ಷದ ಪಯಣ ಅದ್ಭುತ. ಅದರಲ್ಲಿ ಸೋಲು–ಗೆಲುವು ಎರಡನ್ನೂ ಕಂಡಿದ್ದೇನೆ. ಸಿನಿಮಾ ಆಯ್ಕೆ ಮಾಡುವುದು ನಮ್ಮ ಆರನೇ ಇಂದ್ರಿಯದ ಸೂಚನೆಯಂತೆ! ಸಿನಿಮಾ ಒಪ್ಪಿಕೊಳ್ಳುವಾಗ ನಿರ್ದೇಶಕರನ್ನು ಪರೀಕ್ಷಿಸಲು ಆಗುವುದಿಲ್ಲ. ಎಷ್ಟೋ ದೊಡ್ಡ ಸ್ಟಾರ್‌ ನಟರಿಗೆ ಆ್ಯಕ್ಷನ್‌ ಕಟ್‌ ಹೇಳಿ ಸೋತವರು, ಹೊಸಬರಿಗೆ ಸಿನಿಮಾ ಮಾಡಿ ಗೆದ್ದಿರುತ್ತಾರೆ. ಸಿನಿಮಾದ ಸೋಲು ಗೆಲುವು ಕಲಾವಿದರ ಕೈಯಲ್ಲಿ ಇರುವುದಿಲ್ಲ. ನಾವಿಲ್ಲಿ ನಿರ್ದೇಶಕರು ಆಡಿಸುವ ಗೊಂಬೆಗಳು. ಈ ಸಿನಿಮಾ ಏಕೆ ಮಾಡಿದೆ ಎಂದು ಕೆಲವೊಮ್ಮೆ ಬೇಸರ ಮೂಡಬಹುದು. ಆದರೆ ಅದನ್ನು ಒಪ್ಪಿಕೊಳ್ಳಬೇಕಷ್ಟೇ ಎನ್ನುತ್ತಾರೆ.
 
ಈಗ ಪಾತ್ರಗಳ ಆಯ್ಕೆ ವಿಚಾರದಲ್ಲಿ ಬದಲಾಗಿದ್ದೇನೆ. 2009–10ರ ವೇಳೆ ವರ್ಷಕ್ಕೆ 8 ಸಿನಿಮಾ ಬಿಡುಗಡೆಯಾಗಿದ್ದಿದೆ. ಅನುಭವ ಇಲ್ದ ಹೊಸತರಲ್ಲಿ ದಾರಿಯೇ ತಿಳಿದಿರುವುದಿಲ್ಲ. ಅನುಭವ ಪಡೆದಂತೆ ಚೂಸಿಯಾಗತೊಡಗುತ್ತೇವೆ. ನಾನು ಒಳ್ಳೆಯ ನಟಿ. ಅದರಲ್ಲಿ ಅನುಮಾನವೇ ಇಲ್ಲ. ಒಂದು ಸಿನಿಮಾ ಒಪ್ಪಿಕೊಳ್ಳುವಾಗ ಅದರಲ್ಲಿ ಏನು ಮಾಡಲಿದ್ದೇನೆ ಎಂಬುದರ ಕುರಿತು ಯೋಚಿಸುತ್ತೇನೆ. ಹಾಗೆ ಅಳೆದು ತೂಗಿಯೇ ಈಗ ಸಿನಿಮಾಗಳನ್ನು ಮಾಡುತ್ತಿರುವುದು. ಅದಕ್ಕೂ ಮೀರಿ ಸೋಲು ಗೆಲುವು ನಮ್ಮ ಕೈಯಲ್ಲಿ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT