ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ ಕೆ.ಟಿ. ಗಟ್ಟಿ ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ ವಾಪಸ್‌!

₹4,260ಕ್ಕೆ ಆದಾಯ ದೃಢೀಕರಣ ಪತ್ರ ಕೇಳಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Last Updated 2 ಮಾರ್ಚ್ 2017, 18:47 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿ ಕೆ.ಟಿ. ಗಟ್ಟಿ ಅವರು ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ದೃಢೀಕರಣ ಪತ್ರ ಕೊಟ್ಟಿಲ್ಲ ಎಂಬ ಕಾರಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಾಪಸ್ ಕಳುಹಿಸಿದೆ.

ಗಟ್ಟಿ ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ವಾಸವಿದ್ದಾರೆ. ಇತ್ತೀಚೆಗೆ ಅವರು ಮಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗೆ ಸಲ್ಲಿಸಿದ್ದ ₹4,260 ವೈದ್ಯಕೀಯ ವೆಚ್ಚದ ಬಿಲ್‌ ಅನ್ನು ಆದಾಯ ದೃಢೀಕರಣ ಪತ್ರ ಲಗತ್ತಿಸಿಲ್ಲ ಎಂಬ ಕಾರಣ ನೀಡಿ ವಾಪಸ್‌ ಕಳುಹಿಸಲಾಗಿದೆ.

ಇದರಿಂದ ಬೇಸರಗೊಂಡಿರುವ ಗಟ್ಟಿ, ‘ನಾನು ವೈದ್ಯಕೀಯ ವೆಚ್ಚ ಪಡೆಯುವ ಇಚ್ಛೆ ತೊರೆದಿದ್ದೇನೆ. ಮರಣ ನಂತರ ದೇಹದಾನ ಮಾಡಲು ಈಗಾಗಲೇ ತೀರ್ಮಾನಿಸಿರುವುದರಿಂದ ಪ್ರಾಣದ ಮೇಲೆ ಹೆಚ್ಚು ಆಸೆ ಇಟ್ಟುಕೊಂಡಿಲ್ಲ’ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯ ಸರ್ಕಾರ ಸಾಹಿತಿ ಮತ್ತು ಕಲಾವಿದರಿಗೆ ವೈದ್ಯಕೀಯ ಚಿಕಿತ್ಸೆ  ಕೊಡಿಸುವ ಯೋಜನೆಯನ್ನು ಮೂರು ದಶಕಗಳಿಂದ ಆರಂಭಿಸಿದೆ. ಅದಕ್ಕೆ ಅರ್ಹರಾದ ಕಲಾವಿದರು ಮತ್ತು ಸಾಹಿತಿಗಳಿಗೆ ಗುರುತಿನ ಚೀಟಿಯನ್ನೂ ನೀಡಲಾಗಿದೆ ಎಂದಿದ್ದಾರೆ.

‘ಈ ಹಿಂದೆ ನಿಗದಿತ ಅರ್ಜಿಯಲ್ಲಿ ನನ್ನ ವಾರ್ಷಿಕ ಆದಾಯವನ್ನು ನಮೂದಿಸಿದರೆ ಸಾಕಿತ್ತು.  ಆದಾಯ ದೃಢೀಕರಣ ಪತ್ರ ನೀಡಬೇಕೆಂಬ ನಿಯಮ ಇರಲಿಲ್ಲ. ಈಗ ಆದಾಯ ದೃಢೀಕರಣ ಪತ್ರ ಕಳಿಸಲು ಸೂಚಿಸಿದ್ದೀರಿ. ಇದು ಕಲಾವಿದ ಅಥವಾ ಸಾಹಿತಿಗೆ ಬೇಕಾದ ಅರ್ಹತೆಯೇ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಸರ್ಕಾರಿ ಕಚೇರಿಯಿಂದ ಆದಾಯ ದೃಢೀಕರಣ ಪತ್ರ ಪಡೆಯುವುದು ಎಷ್ಟು ಕಷ್ಟದ ಕೆಲಸ ಎಂದು ನನಗೆ ಗೊತ್ತಿದೆ. ಈಗ ನನಗೆ 80 ವರ್ಷ ವಯಸ್ಸು. ಆರೋಗ್ಯ ಚೆನ್ನಾಗಿಲ್ಲ. ಕಚೇರಿಗಳಿಗೆ ಹೋಗುವ ತ್ರಾಣ ಇಲ್ಲ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಓಡಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಎಷ್ಟೋ ಕಲಾವಿದರು, ಸಾಹಿತಿಗಳು ಇದ್ದಾರೆ. ಆದಾಯ ದೃಢೀಕರಣ ಪತ್ರ ಮಾಡಿಸಲು ಎಲ್ಲರಿಗೂ ಸಾಧ್ಯವಿಲ್ಲ. ಹೀಗಾಗಿ ಸರ್ಕಾರಕ್ಕೆ ಈ ಪತ್ರ ಬರೆದಿದ್ದೇನೆ. ಶಾಸಕರು, ವಿಧಾನ ಪರಿಷತ್ ಸದಸ್ಯರಿಗೂ ವೈದ್ಯಕೀಯ ವೆಚ್ಚವನ್ನು ಸರ್ಕಾರ ಮರುಪಾವತಿಸುತ್ತದೆ. ಅವರಿಂದಲೂ ಆದಾಯ ದೃಢೀಕರಣ ಪತ್ರ ಪಡೆಯಲಾಗುತ್ತಿದೆಯೇ’ ಎಂದೂ ಅವರು ಪ್ರಶ್ನಿಸಿದರು.
*
ಅಶಕ್ತರಿಗೆ ವೈದ್ಯಕೀಯ ವೆಚ್ಚ ಪಾವತಿಸುವ ಕಾರಣ ಆದಾಯ ದೃಢೀಕರಣ ಪತ್ರ ಪಡೆಯಲಾಗುತ್ತಿದೆ. ಕೆ.ಟಿ. ಗಟ್ಟಿ ಅವರ ಅರ್ಜಿ ಬಗ್ಗೆ ಗೊತ್ತಿಲ್ಲ, ಪರಿಶೀಲಿಸುತ್ತೇನೆ.
ಕೆ.ಎ. ದಯಾನಂದ,
ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT