ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕಾರಣ ಬೇಡ, ಒಂದೇ ಸಮಿತಿ ಇರಲಿ’

ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಸದಸ್ಯರ ಒತ್ತಾಯ
Last Updated 3 ಮಾರ್ಚ್ 2017, 7:04 IST
ಅಕ್ಷರ ಗಾತ್ರ

ವಿಜಯಪುರ:  ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಲ್ಲಿ ರಾಜಕಾರಣ ಬೆರೆಸುವುದು ಬೇಡ, ಒಂದೇ ಸಮಿತಿ ಇರಲಿ, ಈಗಿರುವ ಅಧ್ಯಕ್ಷರೇ ಮುಂದುವರೆಯಲಿ, ಸಮಿತಿಯಲ್ಲಿ ರಾಜಕಾರಣ ಬೆರೆಸಿದರೆ ಹೋರಾಟಕ್ಕೆ ಹಿನ್ನೆಡೆಯಾಗುತ್ತದೆ ಎಂದು ರೈತರು ಒಕ್ಕೊರಲಿನಿಂದ ಆಗ್ರಹಿಸಿದರು.

ತಾಲ್ಲೂಕಿನ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಗುರುವಾರ ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಈ ಹಿಂದೆ ಅಧ್ಯಕ್ಷರಾಗಿದ್ದ ದಿ.ವಾಸಣ್ಣ ದೇಸಾಯಿ ಅವರ ಒಡನಾಡಿ ಎಸ್.ಟಿ. ಪಾಟೀಲ ಅವರೇ ಅಧ್ಯಕ್ಷರಾಗಿ ಮುಂದುವರೆಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಿತಿ ಮುಖಂಡ ಹಣಮಂತ ಕೋರಡ್ಡಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಪಕ್ಷಾತೀತವಾದದ್ದು, ಈ ಸಮಿತಿಯಲ್ಲಿ ರಾಜಕಾರಣ ಬೆರೆಸುವುದು ಬೇಡ. ಕೆಲವು ವ್ಯಕ್ತಿಗಳು ಪರ್ಯಾಯ  ಸಮಿತಿ ರಚನೆ ಮಾಡುವ ನಿಟ್ಟಿನಲ್ಲಿ ಉತ್ಸಕುತೆ ಪ್ರದರ್ಶಿಸುತ್ತಿದ್ದಾರೆ. ಇದರಿಂದ ಒಡಕು ಉಂಟಾಗುತ್ತದೆ, ಹೋರಾಟಕ್ಕೆ ಹಿನ್ನೆಡೆಯಾಗುತ್ತದೆ ಎಂದರು.

ಯಾವುದೇ ಕಾರಣಕ್ಕೂ ಸಮಿತಿ ಹೋಳಾಗಬಾರದು. ಎರಡು ಸಮಿತಿ ರಚನೆಯಾದರೆ ಹೋರಾಟಕ್ಕೆ ನಿಜಸ್ವರೂಪ ಬರುವುದಿಲ್ಲ. ಅವರೊಂದು ಹೋರಾಟ, ನಾವೊಂದು ಹೋರಾಟ, ಅವರೊಂದು ಸಾರಿ ಮನವಿ ಕೊಡುವುದು, ನಾವೊಂದು ಸಾರಿ ಮನವಿ ಕೊಡುವುದು ಇಷ್ಟರಲ್ಲೇ ಕಾಲಹರಣವಾಗುತ್ತದೆ ಹೊರತು ರೈತರಿಗೆ ದೊರಕಿಸಬೇಕಾದ ನ್ಯಾಯ ದೊರಕಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಪ್ರಸ್ತುತ ಅಧ್ಯಕ್ಷರಾಗಿರುವ ಎಸ್.ಟಿ. ಪಾಟೀಲ ಅವರಿಗೆ  ಈ ಹೋರಾಟದ ಪ್ರತಿಯೊಂದು ಅಂಶಗಳ ಬಗ್ಗೆಯೂ ಅರಿವಿದೆ ಮತ್ತು ಅಧ್ಯಕ್ಷರನ್ನು ಮಾಡಿ ಎಂದು ಪಾಟೀಲರು ಎಂದಿಗೂ ಹೇಳಿಲ್ಲ. ರೈತರೆಲ್ಲರೂ ಸೇರಿ ಅವರೇ ಅಧ್ಯಕ್ಷರಾಗುವುದು ಸೂಕ್ತ ಎಂಬ ಅಭಿಪ್ರಾಯ ನೀಡಿದಾಗ ಅವರು ಅಧ್ಯಕ್ಷರಾಗಿದ್ದಾರೆ ಎಂದು ಕೋರಡ್ಡಿ ಸ್ಪಷ್ಟೀಕರಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಅನೇಕ ರೈತ ಮುಖಂಡರು ಸಹ, ಸಂತ್ರಸ್ತರ ಸಮಿತಿಯಲ್ಲಿ ರಾಜಕೀಯ ಬೆರೆಸುವುದು ಬೇಡವೇ ಬೇಡ. ನಮಗೆ ಒಂದೇ ಪಕ್ಷ ಅದೇ ಸಂತ್ರಸ್ತರ ಪಕ್ಷ ಎಂಬ ಅಭಿಪ್ರಾಯ ಮಂಡಿಸಿದರು.

ಇನ್ನೊಮ್ಮೆ ಕುಳಿತು ಚರ್ಚಿಸಿ: ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಸ್ಥಾನ ಅತ್ಯಂತ ಜವಾಬ್ದಾರಿಯುತ ಸ್ಥಾನವಿದೆ. ಇಲ್ಲಿ ರೈತರ ಹಿತ ರಕ್ಷಿಸುವ ಮಹತ್ವದ ಹೊಣೆಗಾರಿಕೆ ಈ ಸ್ಥಾನಕ್ಕೆ ಇದೆ. ಇಬ್ಬರ ಜಗಳಗಳ ನಡುವೆ ಕೂಸು ಬಡವಾಗುವುದು ಬೇಡ. ಇಲ್ಲಿ ರೈತ ಹಿತ ಮುಖ್ಯ.
ಬೇರೆ ಬೇರೆ ಅಭಿಪ್ರಾಯವುಳ್ಳವರು ಒಂದೆಡೆ ಕುಳಿತು ಈ ವಿಷಯದ ಕುರಿತು ಚರ್ಚಿಸಬೇಕು.

ಆತುರದ ನಿರ್ಣಯ ಬೇಡ ಎಂದು ಅಧ್ಯಕ್ಷ ಎಸ್.ಟಿ. ಪಾಟೀಲ ಹೇಳಿದರು. ಮುಖಂಡರಾದ ಎಸ್.ಜಿ. ಪುರಾಣಿಕಮಠ, ಶಂಕರಗೌಡ ಪಾಟೀಲ, ಬಸವರಾಜ ದೇಸಾಯಿ, ಶಿವನಗೌಡ ಪಾಟೀಲ ಚಿಕ್ಕಗಲಗಲಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕುಮಾರ ದೇಸಾಯಿ, ಮೋಹನ ಜಾಧವ, ಎಸ್.ಎಸ್. ಹುಗ್ಗಿ, ಹಣಮಂತಗೌಡ ಪಾಟೀಲ, ಬಿ.ಡಿ. ಪಾಟೀಲ, ಚಂದ್ರಶೇಖರ ಇಮ್ಮಣ್ಣವರ, ನಾರಾಯಣ ಗಡದಾನಿ ಮಾತನಾಡಿದರು.

*
ಸಂತ್ರಸ್ತರ ವೇದಿಕೆ ಇಬ್ಭಾಗ ಆಗುವುದರಲ್ಲಿ ಅರ್ಥವಿಲ್ಲ. ಒಬ್ಬರೇ ಅಧ್ಯಕ್ಷರಿದ್ದರೆ ಹೋರಾಟ ಯಶಸ್ವಿಯಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿ ರಾಜಕಾರಣ ಬೆರೆಸುವುದು ಬೇಡ.
-ಕಲ್ಲಪ್ಪ ಕೊಡಬಾಗಿ,
ಸದಸ್ಯ, ಜಿಲ್ಲಾ ಪಂಚಾಯಿತಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT