ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಹಕ್ಕು: ತ್ವರಿತ ಕ್ರಮಕ್ಕೆ ಸೂಚನೆ

ಮಾಹಿತಿ ಹಕ್ಕು ಅಧಿನಿಯಮ 2005ರ ಅನುಷ್ಠಾನದ ಕುರಿತು ಸಭೆ
Last Updated 3 ಮಾರ್ಚ್ 2017, 8:47 IST
ಅಕ್ಷರ ಗಾತ್ರ

ರಾಮನಗರ: ‘ಮಾಹಿತಿ ಹಕ್ಕು ಅಧಿನಿಯಮ- 2005’ ಅನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಂಡು ಅನುಸರಿಸಿದಾಗ ಯಾವುದೇ ರೀತಿ ತೊಂದರೆಗೆ ಆಸ್ಪದ ಇರುವುದಿಲ್ಲ’ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಸುಚೇತನ ಸ್ವರೂಪ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮ 2005ರ ಅನುಷ್ಠಾನದ ಕುರಿತು ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಇದರಿಂದ ನಿಗದಿತ ಅವಧಿಯಲ್ಲಿ ಸಾರ್ವಜನಿಕರು ಕೇಳಿರುವ ಅಗತ್ಯ ಮಾಹಿತಿ ಅಧಿಕಾರಿಗಳು ದೊರಕಿಸಿ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ಮಾಹಿತಿ ಹಕ್ಕಿನ ಬಗ್ಗೆ ಅರಿವಿನ ಕೊರತೆ ಇದ್ದಾಗ ಅಧಿಕಾರಿಗಳು ತೊಂದರೆಗೆ ಸಿಲುಕುವ ಆತಂಕ ಇರುತ್ತದೆ. ಪರಿಪೂರ್ಣವಾಗಿ ಅರ್ಥ ಮಾಡಿಕೊಂಡು ಆ ನಿಯಮಾವಳಿ ಪ್ರಕಾರ ನಡೆದುಕೊಂಡರೆ ತೊಂದರೆ ಇರುವುದಿಲ್ಲ’ ಎಂದರು.

‘ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಮಾಹಿತಿ ದೊರಕಿಸುವಲ್ಲಿ ವಿಳಂಬ ಮಾಡಬಾರದು. ಇಂಥ ಬೆಳವಣಿಗೆಗೆ ಅವಕಾಶ ಕೊಡಬಾರದು. ಮಾಹಿತಿಗಾಗಿ ಅರ್ಜಿ ಸಲ್ಲಿಸಿದಾಗ ಲಭ್ಯ ಇರುವ ಮಾಹಿತಿಯನ್ನು ನಿರಾಂತಕವಾಗಿ ದೊರಕಿಸಬೇಕು’ ಎಂದು ತಿಳಿಸಿದರು.

‘ಯಾವ ಮಾಹಿತಿಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ, ಮಾಹಿತಿಯನ್ನು ಹೇಗೆ ನೀಡಬೇಕು, ಎಷ್ಟು ಅವಧಿಯಲ್ಲಿ ನೀಡಬೇಕು ಎಂಬುದು ಸೇರಿದಂತೆ ಅನೇಕ ಅಂಶಗಳ ಬಗ್ಗೆ ಅಧಿಕಾರಿಗಳು ತಿಳಿದುಕೊಳ್ಳಬೇಕು. ಮಾಹಿತಿ ಅಧಿನಿಯಮದಡಿ ಮಾಹಿತಿ ಕೇಳುವವರಿಗೆ ಸಾರ್ವಜನಿಕ ಹಿತಾಸಕ್ತಿ ಇರಬೇಕು. ಯಾವುದೇ ದುರುದ್ಧೇಶ, ಸ್ವ ಹಿತಾಸಕ್ತಿ ಇರಬಾರದು. ಆಗ ಮಾತ್ರ ಮಾಹಿತಿ ನೀಡಲು ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದರು.

‘ಅರ್ಜಿ ಬಂದ ಕೂಡಲೇ ಮಾಹಿತಿ ಕೊಡಬೇಕು. ಇಲ್ಲವೇ 30 ದಿನದೊಳಗೆ ಮಾಹಿತಿ ಎಲ್ಲಿ ಸಿಗುತ್ತದೆ ಎಂಬ ಬಗ್ಗೆ ಹಿಂಬರಹ ಕೊಡಬೇಕು. ಯಾವುದೇ ಕಾರಣಕ್ಕೂ ಅರ್ಜಿಯನ್ನು ಇಟ್ಟುಕೊಳ್ಳಬಾರದು. ಅರ್ಜಿ ಬರೆಯುವ ಮತ್ತು ವಿಲೇವಾರಿ ಮಾಡುವ ವಿಧಾನ ಕುರಿತು ಮಾಹಿತಿ ನೀಡಿ ಸರ್ಕಾರಿ ಕಚೇರಿಗಳಲ್ಲಿ ಸಿಗುವ  ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರೆ ಅರ್ಜಿಯೇ ಬರುವುದಿಲ್ಲ’ ಎಂದು ತಿಳಿಸಿದರು.

‘ಮಾಹಿತಿ ಹಕ್ಕು ಅಧಿನಿಯಮದ ಮುಖ್ಯ ಭಾಗವೆಂದರೆ ದಾಖಲೆ. ಈ ದಾಖಲೆ ಸರಿಯಾಗಿ ಇಲ್ಲದಿದ್ದರೆ ಮಾಹಿತಿ ಕೊಡಲು ಪರದಾಡಬೇಕಾಗುತ್ತದೆ. ದಾಖಲೆ ಕೊಠಡಿ ನಿರ್ವಹಣೆ ಅತ್ಯಂತ ಮುಖ್ಯವಾಗಿದೆ. 4 ಓನ್ ಬಿ ಅಡಿಯಲ್ಲಿ ಸರಿಯಾಗಿ ಮಾಹಿತಿ ನೀಡಿದರೆ ಯಾವುದೇ ಅರ್ಜಿ ಬರುವುದಿಲ್ಲ.

ಸರಿಯಾಗಿ ಮಾಹಿತಿ ನೀಡದಿದ್ದಾಗ ಅರ್ಜಿ ಬರುವುದು ಸಹಜ. ಒಂದು ಕಚೇರಿಯಲ್ಲಿ ಎಷ್ಟು ನೌಕರರು ಕೆಲಸ ಮಾಡುತ್ತಾರೆ ಅವರ ಕೆಲಸವೇನು ಮೊಬೈಲ್ ಸಂಖ್ಯೆ, ಕಚೇರಿಯಲ್ಲಿ ಸಿಗುವ ಸೌಲಭ್ಯಗಳು, ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ಮೊದಲೇ ಪ್ರಕಟಿಸಿದ್ದರೆ ಯಾರೂ ಸಹ ಮಾಹಿತಿ ಬಯಸಿ ಅರ್ಜಿ ಸಲ್ಲಿಸುವುದಿಲ್ಲ’ ಎಂದು ಹೇಳಿದರು.

ಕೆಲವೊಂದು ಬಾರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳು ನಿರ್ದೇಶನ ನೀಡಿದರೂ ತಹಶೀಲ್ದಾರ್ ಮಟ್ಟದ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದಿಲ್ಲ. ಇದರಿಂದಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಅನೇಕ ಪ್ರಕರಣಗಳು  ಮೇಲ್ಮನೆ ಮೆಟ್ಟಿಲೇರುತ್ತಿದೆ.

ಮಾಹಿತಿ ನಕಲು ಪ್ರತಿಗೆ ಮುದ್ರೆ ಹಾಕಿ ಸಹಿ ಮಾಡಿ ನೀಡಬೇಕು. ಮಾಹಿತಿ ಕೇಳಿದ್ದನ್ನು ಅರ್ಥ ಮಾಡಿಕೊಂಡು ಅಷ್ಟೇ ಮಾಹಿತಿಯನ್ನು ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು. ಜಿಲ್ಲಾಧಿಕಾರಿ ಬಿ.ಆರ್‌. ಮಮತಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌. ಪ್ರಶಾಂತ್‌, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಪಿ. ಶೈಲಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT