ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಚಾಚುಗಳ ‘ಮಹಿಳಾ ಚೈತನ್ಯ ದಿನ’

Last Updated 3 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿರೋಧಿಸುತ್ತ, ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತ ಬಂದಿರುವ ‘ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಕಳೆದ ಕೆಲವು ವರ್ಷಗಳಿಂದ ಮಾರ್ಚ್‌ 8ರ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ಯನ್ನು ‘ಮಹಿಳಾ ಚೈತನ್ಯ’ದ ದಿನವಾಗಿ ಆಚರಿಸುತ್ತಿದೆ. ಈ ಬಾರಿ ಕೊಪ್ಪಳದಲ್ಲಿ ಎರಡು ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮಾರ್ಚ್‌ 8ರಂದು ‘ಮಹಿಳೆ ಮತ್ತು ಪ್ರಜನನ ಹಕ್ಕುಗಳು’ ಕುರಿತ ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ ಮತ್ತು ಸಂವಾದ ನಡೆಯಲಿದೆ. ಮಾರ್ಚ್‌ 9ರಂದು ಹಕ್ಕೊತ್ತಾಯ ಜಾಥಾ ಮತ್ತು ಸಮಾವೇಶ ನಡೆಯಲಿದೆ. ಲೇಖಕಿಯರಾದ ಒರಿಸ್ಸಾ ಮೂಲದ ರಂಜನಾ ಪಾಡಿ ಮತ್ತು ಆಂಧ್ರಪ್ರದೇಶದ ಗೋಗು ಶ್ಯಾಮಲಾ ಹಾಗೂ ದೆಹಲಿಯ ಕವಿತಾ ಕೃಷ್ಣನ್‌ ಅವರು ಕಾರ್ಯಕ್ರಮದ ವಿಶೇಷ ಅತಿಥಿಗಳು.

‘ಬಾಲ್ಯವಿವಾಹ, ಮಾತೃಮರಣ, ಶಿಶುಮರಣ, ರಕ್ತಹೀನತೆ, ದೇವದಾಸಿ ಪದ್ಧತಿ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ, ಅಪೌಷ್ಟಿಕತೆ, ಬಯಲು ಶೌಚಪದ್ಧತಿ, ಗುಳೆ, ಬಾಲಕಾರ್ಮಿಕ ಪದ್ಧತಿ, ಮದ್ಯಪಾನದಂತಹ ಸಾಮಾಜಿಕ ಸಮಸ್ಯೆಗಳು ಕೊಪ್ಪಳ ಜಿಲ್ಲೆಯಲ್ಲಿ ಗಂಭೀರವಾಗಿವೆ. ಈ ಎಲ್ಲ ಸಮಸ್ಯೆಗಳಿಂದ ಹೆಚ್ಚು ಬಾಧಿತಳು ಹೆಣ್ಣೇ ಆಗಿದ್ದಾಳೆ. ಈ ಕುರಿತು ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬಾರಿ ಕೊಪ್ಪಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಒಕ್ಕೂಟದ ದು. ಸರಸ್ವತಿ ಹೇಳುತ್ತಾರೆ.

‘ಅಂತರರಾಷ್ಟ್ರೀಯ ಮಹಿಳಾ ಸಂಶೋಧನಾ ಸಂಸ್ಥೆ’ಯ ಪ್ರಕಾರ 18 ವರ್ಷದೊಳಗೆ ಹೆಣ್ಣುಮಕ್ಕಳು ಮದುವೆಯಾಗುವ ವಿಶ್ವದ ಮೊದಲ 20 ರಾಷ್ಟ್ರಗಳ ಪೈಕಿ ಭಾರತ 11ನೇ ಸ್ಥಾನದಲ್ಲಿದೆ. ಕೊಪ್ಪಳದಲ್ಲಿ ನಡೆಯುವ ಶೇ. 51.4 ಮದುವೆಗಳು ಬಾಲ್ಯವಿವಾಹಗಳಾಗಿವೆ. ಭಾರತದಲ್ಲಿ ಪ್ರತಿವರ್ಷ 45 ಸಾವಿರ ತಾಯಂದಿರು ಹೆರಿಗೆ ಸಮಯದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವೆಲ್ಲವೂ ಹೆಣ್ಣಿಗೆ ತನ್ನ ದೇಹದ ಮೇಲಿರಬೇಕಾದ ಸ್ವಾಯತ್ತತೆಯನ್ನೇ ಕಸಿದುಕೊಂಡಿವೆ. ಆದಕಾರಣ ಈ ಬಾರಿ ‘ನಮ್ಮ ಮಗಳು ಜಗದ ಬೆಳಕು, ನಮ್ಮ ದೇಹ ನಮ್ಮ ಹಕ್ಕು’ ಘೋಷವಾಕ್ಯದಡಿ ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಅವರು.

**

ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ವಿರುದ್ಧ ಭುಗಿಲೆದ್ದ ಹೋರಾಟಗಳಲ್ಲಿ ಕವಿತಾ ಕೃಷ್ಣನ್‌ ಹೆಸರು ಮುಂಚೂಣಿಯಲ್ಲಿತ್ತು. ತಮಿಳುನಾಡಿನ ಭಿಲಾಯಿಯವರಾದ ಅವರು, ವಿದ್ಯಾರ್ಥಿ ದೆಸೆಯಲ್ಲಿಯೇ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ನಲ್ಲಿ ಎಂ.ಫಿಲ್‌. ಮಾಡಿದ್ದಾರೆ. ಶಿವಸೇನಾ ಜೊತೆ ಗುರುತಿಸಿಕೊಂಡಿದ್ದ ವಿದ್ಯಾರ್ಥಿಯೊಬ್ಬರು ಮಹಿಳಾ ವಿರೋಧಿ ಭಾಷಣ ಮಾಡಿದ್ದಕ್ಕೆ ಪ್ರತಿರೋಧವಾಗಿ ಕವಿತಾ ಮತ್ತು ಗೆಳತಿಯರು ತುಂಡು ಲಂಗ ತೊಟ್ಟು ಪ್ರತಿಭಟಿಸಿದ್ದರು. 

‘ಜೆಎನ್‌ಯು’ ವಿದ್ಯಾರ್ಥಿ ಮುಖಂಡರಾಗಿದ್ದ ಚಂದ್ರಶೇಖರ್‌ ಮತ್ತು ಶ್ಯಾಂ ನಾರಾಯಣ ಯಾದವ್‌ ಹತ್ಯೆಗೆ ಕಾರಣರಾದವರನ್ನು ಬಂಧಿಸುವಂತೆ ಒತ್ತಾಯಿಸಿ ನಡೆಸಿದ ಪ್ರತಿಭಟನೆ ವೇಳೆ ಕವಿತಾ ಜೈಲಿಗೂ ಹೋಗಿದ್ದರು. ಪ್ರಸ್ತುತ ಅವರು ‘ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ’ದ ಜಂಟಿ ಕಾರ್ಯದರ್ಶಿ. 
ಮಹಿಳೆಯರ ಹಕ್ಕುಗಳ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ನಿಂದನೆಗೆ ಗುರಿಯಾಗುವುದು ಸಹಜ. ಕವಿತಾ ಕೂಡ ಟೀಕೆಗಳನ್ನು ಎದುರಿಸಬೇಕಾಯಿತು. ಒಬ್ಬ ವ್ಯಕ್ತಿ – ‘ಇಷ್ಟಪಟ್ಟವರ ಜೊತೆ ಮಲಗುವುದು ಹಕ್ಕು ಎನ್ನುವೆ. ನಿನ್ನಮ್ಮನೂ ಇಷ್ಟಪಟ್ಟವರ ಜೊತೆ ಮಲಗಿದ್ದಳೇ ಕೇಳು’ ಎಂದು ಸಂದೇಶ ಕಳುಹಿಸಿದ್ದ. ಅದಕ್ಕೆ ಕವಿತಾ, ‘ಹೌದು, ನನ್ನಮ್ಮ ಅವಳು ಇಷ್ಟಪಟ್ಟವರ ಜೊತೆಯೇ ಮಲಗಿದ್ದಳು. ಬಹುಶಃ ನಿನ್ನಮ್ಮನೂ ಸಹ. ಉಳಿದದ್ದು ಅತ್ಯಾಚಾರ, ತಿಳಿದುಕೊ’ ಎಂದು ಪ್ರತಿಕ್ರಿಯಿಸಿದ್ದರು. ಕವಿತಾ ಅವರನ್ನು ಬೆಂಬಲಿಸಿದ ಅವರ ತಾಯಿ ಲಕ್ಷ್ಮೀ ಕೃಷ್ಣನ್‌ – ‘ಬಂಧನಗಳಿರದ ಲೈಂಗಿಕ ಸ್ವಾತಂತ್ರ್ಯವನ್ನು ಕೊನೆತನಕ ಎತ್ತಿ ಹಿಡಿಯುತ್ತೇನೆ’ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

**

ಮಾರ್ಚ್‌ 8: ‘ಮಹಿಳೆ ಮತ್ತು ಪ್ರಜನನ ಹಕ್ಕುಗಳು’ ಕುರಿತು ವಿಚಾರ ಸಂಕಿರಣ ಮತ್ತು ಪುಸ್ತಕ ಬಿಡುಗಡೆ
ಸಮಯ: ಬೆಳಿಗ್ಗೆ 10.30
ಸ್ಥಳ: ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮೈದಾನ, ಕೊಪ್ಪಳ
ಮಾರ್ಚ್‌ 9: ‘ಬಿಳಿ ಉಡುಪಿನಲ್ಲಿ ನಾವು’ ಮೌನ ಜಾಗೃತಿ ಹಕ್ಕೊತ್ತಾಯ ಜಾಥಾ ಮತ್ತು ಸಾರ್ವಜನಿಕ ಸಮಾವೇಶ
ಮಾಹಿತಿಗೆ: 9482642147, 9480211320

**

ತೆಲುಗು ಸಾಹಿತ್ಯದಲ್ಲಿ ಗೋಗು ಶ್ಯಾಮಲಾ ಅವರದು ಗಮನಾರ್ಹ ಹೆಸರು. ‘ದಲಿತ ಬರಹಗಾರ್ತಿ’ ಎಂದು ಪ್ರಸಿದ್ಧರಾದ ಅವರು, ಕವಯಿತ್ರಿ ಕೂಡ. ತೆಲಂಗಾಣದ ಪೆದ್ದೆಮುಲ ಗ್ರಾಮ ಶ್ಯಾಮಲಾ ಹುಟ್ಟೂರು. ಕೃಷಿ ಕೂಲಿ ಕುಟುಂಬದ ಅವರು, ಬಹಳ ಕಷ್ಟಪಟ್ಟು ಓದಿ ಕಾನೂನು ಪದವಿ ಮತ್ತು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಾಲಾ–ಕಾಲೇಜು ದಿನಗಳಲ್ಲಿಯೇ ವಸತಿ ನಿಲಯದಲ್ಲಿನ ಅವ್ಯವಸ್ಥೆಗಳು ಮತ್ತು ಕಳಪೆ ಗುಣಮಟ್ಟದ ಆಹಾರ ನೀಡುವುದರ ವಿರುದ್ಧ ವಿದ್ಯಾರ್ಥಿಗಳನ್ನು ಸಂಘಟಿಸಿದ್ದರು. ಕೂಲಿ ಕಾರ್ಮಿಕರ ಹಕ್ಕುಗಳ ಕುರಿತಾದ ‘ವೆಟ್ಟಿ’ ಸಂಘಟನೆ ನೇತೃತ್ವ ವಹಿಸಿದ್ದರು. 


ಪ್ರಸ್ತುತ ‘ಅನ್ವೇಷಿ ಮಹಿಳಾ ಅಧ್ಯಯನ ಕೇಂದ್ರ’ದಲ್ಲಿ ಹಿರಿಯ ಸಂಶೋಧಕರಾಗಿರುವ ಶ್ಯಾಮಲಾ, ದಲಿತ ಮಹಿಳಾ ರಾಜಕಾರಣಿಗಳ ಆತ್ಮಕಥೆ ದಾಖಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ‘Father May Be an Elephant and Mother Only a Small Basket, But...’ ಇಂಗ್ಲಿಷ್‌ಗೆ ಅನುವಾದಗೊಂಡಿರುವ ಅವರ ಪ್ರಮುಖ ಕೃತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT