ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲೆಯ ಸರಬರ

ಭೂಮಿಕಾ ಲಲಿತಪ್ರಬಂಧ ಸ್ಪರ್ಧೆ – 2017
Last Updated 4 ಮಾರ್ಚ್ 2017, 5:54 IST
ಅಕ್ಷರ ಗಾತ್ರ

ತವರಿನಿಂದ ಹೊರಡುವಾಗ ಸ್ವವಿಳಾಸದ ಪತ್ರ ತಂದು ನನ್ನ ಕೈಯಲ್ಲಿಡುವ ಅಪ್ಪನನ್ನು ಮತ್ತೊಮ್ಮೆ ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದೆ. ಭಾವನೆಗಳ ಮಹಾಪೂರವೇ ಹರಿದು, ಅವರ ಕಾಳಜಿ-ವಾತ್ಸಲ್ಯ ನನ್ನನ್ನು ಕಟ್ಟಿಹಾಕುತ್ತಿದ್ದಾಗ, ‘ಬರ್ತೀನಪ್ಪ’ ಎನ್ನುತ್ತಾ ಅಲ್ಲಿಂದ ಹೊರಡುವುದು ಬಹಳ ತ್ರಾಸದಾಯಕವಾಗಿರುತ್ತಿತ್ತು.

‘ಸ್ವೀಕೃತವಾಗದಿದ್ದರೆ  ಲೇಖನ ಮರಳಿ ಹಿಂದಿರುಗಿಸಲು ಸಾಕಷ್ಟು ಅಂಚೆ ಚೀಟಿ ಹಚ್ಚಿದ ಸ್ವವಿಳಾಸದ ಲಕೋಟೆಯನ್ನು ಕಳುಹಿಸಿರಬೇಕು.’ ಎಂಬ ನಿಯಮವನ್ನು ಪಾಲಿಸಬೇಕಾದ ಸಾಹಿತಿಯಾಗಿರಲಿಲ್ಲ ನನ್ನಪ್ಪ. ‘ಅಲ್ಲಿ ಮನೆಗೆ ಹೋದವಳಿಗೆ ಸಂಸಾರದ ಜಂಜಾಟ ಸುತ್ತಿಕೊಳ್ಳುತ್ತೆ. ಸುಖವಾಗಿ ಮನೆ ತಲುಪಿದ್ದಕ್ಕೆ ಬರೆಯುವಷ್ಟು ಪುರುಸೊತ್ತು ಸಿಗುವುದು ಕಷ್ಟ ನಿನಗೆ.

ಈಗ ಹೇಗೂ ವಿಳಾಸ ಬರೆದಿಟ್ಟಿದೀನಿ. ಎರಡು ವಾಕ್ಯ ಬರೆದುಬಿಡು.’ ಎನ್ನುವ ಕಳಕಳಿಯ ನುಡಿಗಳು. ಹೌದು... ಆಗಿನ ಮಟ್ಟಿಗೆ ಶಿವಮೊಗ್ಗ-ಬೆಂಗಳೂರು ದೂರವೆ! ಸುಮಾರು ನಲವತ್ತು ವರ್ಷಗಳ ಹಿಂದಿನ ಮಾತು... ಕ್ಷಣಕ್ಷಣದ ವಿದ್ಯಮಾನಗಳನ್ನು ತಿಳಿಸಲು ಚರವಾಣಿ ಇರಲಿ, ದೂರವಾಣಿ ಇರುವ ಮನೆಗಳೂ ಅಪರೂಪವಾಗಿದ್ದ ಕಾಲವದು. ಪ್ರಯಾಣದ ಬಗ್ಗೆ ಮನೆಯನ್ನು ತಲುಪಿ ಸುದ್ದಿ ತಿಳಿಸಲು ಕನಿಷ್ಠ ಎರಡು ದಿನಗಳಾದರೂ ಬೇಕಾಗುತ್ತಿತ್ತು. ಎರಡು ದಿನಗಳು ಕಳೆಯಿತೋ... ಅಂಚೆಯ ಅಣ್ಣ ಪತ್ರ ತಂದುಕೊಡದಿದ್ದರೆ ಅಪ್ಪನಿಗೆ ಸಂದೇಹ.

‘ಪತ್ರ ಬಂದರೆ ತಂದು ಕೊಡೋಲ್ಲವಾ ಸ್ವಾಮಿ... ನನ್ನ ಕೆಲಸವೇ ಅದು... ಬೇಸರ ಪಟ್ಟುಕೊಳ್ಳಬೇಡಿ... ನಾಳೆ ಬರಬಹುದು.’ ಎನ್ನುವ ಅಂಚೆಯ ಅಣ್ಣನ ಸಾಂತ್ವನದ ನುಡಿಗಳಿಗೆ, ‘ಹೂಂ’ ಎಂದಷ್ಟೇ ಹೇಳಿ ಸುಮ್ಮನಾಗಿಬಿಡುತ್ತಿದ್ದರು. ಮಾರನೆಯ ದಿನ ಅಪ್ಪನ ಪತ್ರ ಸಿದ್ಧವಾಗುತ್ತಿತ್ತು. ಕಳಕಳಿಯೊಂದಿಗೆ ಹುಸಿ ಮುನಿಸೂ ಬೆರೆತ ಮಮತೆಯ ಪತ್ರ ನನ್ನಲ್ಲಿ ಅಪರಾಧಿ ಭಾವವನ್ನು ಹುಟ್ಟುಹಾಕುತ್ತಿತ್ತು.


ಅಪ್ಪ ಪತ್ರ ಬರೆಯುವ ರೀತಿಯೇ ವಿಶೇಷ... ಮೋಡಿ ಅಕ್ಷರಗಳು... ಓದಲು ತುಸು ಅಭ್ಯಾಸ ಬೇಕು. ಕುಮಾರವ್ಯಾಸನದು ಪದವಿಟ್ಟಳುಪದೊಂದಗ್ಗಳಿಕೆಯಾದರೆ, ಅಪ್ಪನದು ಒಮ್ಮೆ ಪತ್ರ ಬರೆಯಲು ಪ್ರಾರಂಭಿಸಿದರೆ ನಡುವೆಯೆಲ್ಲೂ ಲೇಖನಿಯೆತ್ತದ ಅಗ್ಗಳಿಕೆ. ಕುಶಲೋಪರಿಯಿಂದ ಆರಂಭವಾಗಿ ಇಂತಿ ಆಶೀರ್ವಾದಗಳು ಎನ್ನುವವರೆಗೂ  ನಿರರ್ಗಳವಾಗಿ ಸಾಗುತ್ತಿತ್ತು. ಒಮ್ಮೆ ಓದಿದರೆ ತವರಿನ ಎಲ್ಲ ವಿಷಯಗಳೂ ಕಣ್ಣಿಗೆ ಕಟ್ಟಿದಂತೆ. ಊರಿನಿಂದ ಭಾವ ಬಂದು ಹೋಗಿದ್ದು, ತುಂಗಾನದಿ ತುಂಬಿ ಹರಿದು ಮಂಟಪ ಮುಳುಗಿದ್ದು, ನನ್ನ ಬಾಲ್ಯದ ಗೆಳತಿಯ ತಾಯಿ ಸಿಕ್ಕು ನನ್ನನ್ನು ವಿಚಾರಿಸಿದ್ದು, ಚಿಕ್ಕಪ್ಪನ ಮನೆಯ ಸಮಾರಂಭದಲ್ಲಿ ನೆಂಟರೆಲ್ಲರೂ ಸೇರಿದ್ದು, ಹಟ್ಟಿಯಲ್ಲಿ ಮಂಜಿ ಹಸು ಕರು ಹಾಕಿದ್ದು, ಮುದ್ದು ಕರುವಿನ ಬಣ್ಣ-ನೆಗೆದಾಟ... ಹೀಗೆ ಎಳೆಎಳೆಯಾಗಿ ಬಿಡಿಸಿಡುವ ಚಮತ್ಕಾರ. ಒಂದಷ್ಟೂ ಸ್ಥಳ ವ್ಯಯವಾಗದಂತೆ ಬಳಸಿಕೊಳ್ಳುವ ನೈಪುಣ್ಯ. ಮತ್ತೆ ಮತ್ತೆ ಪತ್ರವನ್ನು ಓದುತ್ತಿದ್ದಂತೆ, ‘ಅಷ್ಟು ಸಲ ಓದಿದ್ದನ್ನೇ ಓದುತ್ತೀಯಲ್ಲ... ಅಂಥಾದ್ದೇನಿದೆ ಅದರಲ್ಲಿ...’ ಅಕ್ಷರ ಬಾರದ ನಮ್ಮತ್ತೆಯ ತಳಮಳ ನಗು ತರಿಸುತ್ತಿತ್ತು.

ಪತ್ರ ಓದಿ ಸುಮ್ಮನಿರುವಂತಿಲ್ಲ. ಮಾರುತ್ತರ ಬರೆಯಲೇ ಬೇಕು. ಯಾವಾಗಲೂ ಪತ್ರ ಓದುವಾಗ ಖುಷಿಯೇ ಖುಷಿ... ಬರೆಯಲು ತುಸು ಆಲಸ್ಯ. ‘ಪೋಸ್ಟ್‌ಮ್ಯಾನ್ ಬರುವ ಹೊತ್ತಿಗೆ ಗೇಟಿನಲ್ಲೇ ಶತಪಥ ಹಾಕ್ತಾರೆ ಮಾರಾಯ್ತಿ... ತಪ್ಪದೆ ಉತ್ತರ ಬರೆದು ಬಿಡು.’ ಎನ್ನುವ ಅಮ್ಮನ ಮಾತು ಪಾಲಿಸಲೇಬೇಕು.

ಈಗ ಅಪ್ಪ ನಮ್ಮೊಂದಿಗಿಲ್ಲ. ಅವರ ಧ್ವನಿಮುದ್ರಣವಾಗಲಿ, ವಿಡಿಯೊ ದೃಶ್ಯಗಳಾಗಲಿ ನಮ್ಮಲ್ಲಿಲ್ಲ. ಆದರೆ ಅತ್ಯಮೂಲ್ಯವಾದ ಅವರ ಹಸ್ತಾಕ್ಷರಗಳುಳ್ಳ ಆ ಒಲವಿನ ಪತ್ರಗಳು ನನ್ನ ಬಳಿ ಇವೆ. ಓದುತ್ತಿದ್ದಂತೆ ಅಂದಿನ ಹಸಿ ಹಸಿ ನೆನಪುಗಳು ಹಸಿರಾಗುತ್ತವೆ. ಅಪ್ಪ ನನ್ನ ಮುಂದೆ ಪ್ರತ್ಯಕ್ಷವಾಗಿಬಿಡುತ್ತಾರೆ.

ಹೀಗೆಯೇ ಅದೆಷ್ಟು ಬಗೆಯ ಪತ್ರಗಳು... ಸ್ನೇಹದ ಓಲೆಗಳು, ಒಡಹುಟ್ಟಿದವರ, ನೆಂಟರಿಷ್ಟರ ಅಕ್ಕರೆಯ ಕ್ಷೇಮ ಸಮಾಚಾರದ ಪತ್ರಗಳು ಹಾಗೂ ವಿಶೇಷವಾಗಿ ಪ್ರೇಮಪತ್ರಗಳು. ಹೆಚ್ಚಾಗಿ ಕೂಡುಕುಟುಂಬಗಳೇ ಇರುತ್ತಿದ್ದ ಹಿಂದಿನ ಆ ಸಂದರ್ಭದಲ್ಲಿ ಪ್ರೇಮಿಗೆ, ಏಕಾಂತ ಸ್ಥಳದಲ್ಲಿ ಕುಳಿತು ಬರೆಯುವ ಹಾಗೂ ಅಂತಹುದೇ ಗೌಪ್ಯವಾದ ಸ್ಥಳದಲ್ಲಿ ಕುಳಿತು ಓದಿ ಆನಂದಿಸುತ್ತಾ ಕನಸಿನಲ್ಲೇ ಪರಸ್ಪರರನ್ನು ಕಲ್ಪಿಸಿಕೊಂಡು ರೋಮಾಂಚನಗೊಳ್ಳುವುದಂತೂ ವಿಶೇಷ ಅನುಭವವಾಗಿರುತ್ತಿತ್ತು. ಈಗಿನವರಂತೂ ಅಂತಹ ಅವಕಾಶದಿಂದ ವಂಚಿತರಾಗಿದ್ದಾರೆಂದು ನಿಸ್ಸಂದೇಹವಾಗಿ ಹೇಳಬಹುದು. ಹಿಂದೆ ಪ್ರೇಮನಿವೇದನೆಯನ್ನು ಪತ್ರದ ಮೂಲಕವೇ ತಿಳಿಸಿ ಪ್ರೇಮಿಯ ಹೃದಯ ಗೆದ್ದ ಉದಾಹರಣೆಗಳು ಎಷ್ಟೊ!

ಅಕ್ಕನ ಪ್ರೇಮಪತ್ರವನ್ನು ಬಚ್ಚಿಟ್ಟುಕೊಂಡು ಗೋಳು ಹೊಯ್ದುಕೊಳ್ಳುವ ತಮ್ಮ, ಹಾಗೂ ತಂದೆ-ತಾಯಿಯರಿಗೆ ಗುಟ್ಟು ಬಿಟ್ಟುಕೊಡದಿರಲು ಕೇಳುವ ಲಂಚ, ಅಕ್ಕನ ಗೋಗರಿಕೆ... ಇಂಥ ದೃಶ್ಯಗಳನ್ನು ಹಿಂದಿನ ಚಲನಚಿತ್ರಗಳಲ್ಲಿ ನೋಡಿ ಸವಿಯಬೇಕಷ್ಟೆ! ಬೇರೆ ಬೇರೆ ಊರಿನಲ್ಲಿರುವ ಅಕ್ಕ-ತಂಗಿಯರ ನಡುವಿನ ವಾತ್ಸಲ್ಯವಿನಿಮಯಕ್ಕೆ, ಎದೆ ಹಗುರ ಮಾಡಿಕೊಳ್ಳುವ ಆತ್ಮೀಯತೆಗೆ ಪತ್ರಕ್ಕಿಂತ ಬೇರೆ ಸೌಲಭ್ಯವಿದ್ದೀತೆ?

ಬಾಣಂತನಕ್ಕೆಂದು ಮಡದಿ ತವರಿಗೆ ಹೋದಾಗ ಪತ್ರಗಳ ಭರಾಟೆಯೇ ಭರಾಟೆ. ವಿರಹವೇದನೆಯ ತೀವ್ರತೆಯನ್ನು ಮರೆಸುವ ದಿವ್ಯಶಕ್ತಿ ಆ ನಿರ್ಜೀವ ಪತ್ರದಲ್ಲಿನ ಬರಹಕ್ಕಿದೆ ಎಂಬುದು ಎಂತಹ ವಿಸ್ಮಯ! ಪತ್ರ ಮಾತ್ರವೇ ಸಂದೇಶವಾಹಕವಾಗಿದ್ದ ಆ ಕಾಲದಲ್ಲಿ ಯಾರದಾದರೂ ವಿಯೋಗದ ಸುದ್ದಿಗಳಿರುವ  ಪತ್ರಗಳನ್ನು ಓದುವಷ್ಟರಲ್ಲಿಯೇ ಸತ್ತವರ ದೇಹ ಮಣ್ಣಾಗಿ ಅದೆಷ್ಟೋ ದಿನವಾಗಿರುತ್ತಿತ್ತು. ಅದಕ್ಕೆಂದೇ ತುರ್ತು ಸಂದರ್ಭಗಳಲ್ಲಿ ಟೆಲಿಗ್ರಾಂ ಬಳಕೆ ಮಾಡಿಕೊಳ್ಳಲಾಗುತ್ತಿತ್ತು.

ಸ್ವೀಕೃತಿಯ ಪತ್ರಗಳನ್ನು ಓದಿ ಖುಷಿಪಡುವ ಸಾಹಿತಿಗಳಿಗೆ, ವಿಷಾದದ ಪತ್ರಗಳನ್ನು ಓದುವಾಗ ಅ೦ಚೆ ಅಣ್ಣನ ಬಗ್ಗೆ ಅತೀವ ಬೇಸರ. ಒಡನೆಯೇ ಅವನು ನಿಮಿತ್ತಮಾತ್ರನೆಂಬ ಅರಿವು. ಸುಖದುಃಖಗಳನ್ನು ಸ್ಥಿತಪ್ರಜ್ಞನಾಗಿ ಬಿತ್ತರಿಸುವ ಕಾಯಕವಷ್ಟೆ ಅವನದು.

ಎರಡು ಬೆರಳುಗಳ ಮೃದು ಹಿಡಿತದಲ್ಲಿರುವ ಲೇಖನಿಯಿಂದ ಹೊರ ಹೊಮ್ಮುವ ಅಕ್ಷರಗಳು ಆವರಿಸಿಕೊಳ್ಳುವ ಆಪ್ತತೆಯ ಅನುಭೂತಿಗೆ ಎಣೆಯುಂಟೆ! ಕ್ಷಣ ಕ್ಷಣವೂ ಬರುವ ಈಗಿನ ವಾಟ್ಸ್‌ಆ್ಯಪ್ ಸಂದೇಶಗಳಿಗಿಂತ ಪತ್ರ ಒಕ್ಕಣೆಯ ಹಿತವೇ ಹಿತ. ಹೆಚ್ಚು ಖರ್ಚಿಲ್ಲದೆ, ವಿದ್ಯುತ್ತಿನ ಹಂಗಿಲ್ಲದೆ, ಊರು, ಪ್ರಾ೦ತಗಳ ಎಲ್ಲೆಗಳೆಲ್ಲವನ್ನೂ ಮೀರಿ ಸೌಹಾರ್ದವನ್ನು ಬೆಸೆಯುವ ಸಂದೇಶವಾಹಕ ಪತ್ರಗಳು ಮೂಟೆಯೊಳಗೆ ಭದ್ರವಾಗಿ ಕುಳಿತು ಪ್ರಯಾಣಿಸುವುದೂ ಸಡಗರವೆ!

ಒಮ್ಮೊಮ್ಮೆ ಯಾರ ಪ್ರಮಾದದಿ೦ದಲೋ ಅಚಾತುರ್ಯದಿ೦ದಲೋ, ಗಮ್ಯ ಸೇರುವಾಗ ವಿಪರೀತ ವಿಳ೦ಬವಾಗುವುದು೦ಟು. ಒಮ್ಮೆ ಚಿಕ್ಕಮಗಳೂರಿನಲ್ಲಿದ್ದ ಅಣ್ಣ-ಅತ್ತಿಗೆಗೆ೦ದು ಪತ್ರವನ್ನು ಬರೆದು ಅ೦ಚೆಗೆ ಹಾಕಿದ್ದೆ. ಅದು ಅವರಿಗೆ ತಲುಪಲೇ ಇಲ್ಲ. ಬದಲಾಗಿ ಆರು ತಿ೦ಗಳು ಎಲ್ಲೆಲ್ಲೋ ಸುತ್ತಿ, ಮುದುರಿ, ಮ೦ಕಾಗಿ ನನ್ನ ಕೈಗೇ ತಲುಪಿತ್ತು. ಅ೦ತರ್‌ದೇಶೀಯ ಪತ್ರವನ್ನೇ ಹೋಲುವ ಅ೦ತರರಾಷ್ಟ್ರೀಯ ಪತ್ರದಲ್ಲಿ ಬರೆದಿದ್ದ ದೋಷ ನನ್ನದಾಗಿತ್ತು!

ಸುದೀರ್ಘ ಇತಿಹಾಸವಿರುವ ಪತ್ರಗಳ ಅಸ್ತಿತ್ವವೇ ಇದೀಗ ಅಲುಗಾಡತೊಡಗಿದೆ. ಇ೦ದಿನ ಬಿಸಿಬಿಸಿ ಸುದ್ದಿಗಳೆಲ್ಲವೂ ಪತ್ರದೊಳಸೇರಿ ಅ೦ಚೆಪೆಟ್ಟಿಗೆಯ ಗರ್ಭದಿ೦ದ ಹೊರಬ೦ದು ಗುರಿ ಮುಟ್ಟುವಷ್ಟರಲ್ಲಿ ಹಳಸಲು ವಾರ್ತೆಗಳಾಗಿಬಿಟ್ಟಿರುತ್ತವೆ ಎ೦ಬ ಆಪಾದನೆ ಸತ್ಯವೇ ಆದರೂ ಹಸ್ತಾಕ್ಷರದ ಆ ಪ್ರೀತಿಯ ಸೆಳೆತ, ಜೀವ೦ತಿಕೆ ಮಿ೦ಚ೦ಚೆಗೆ ಎಲ್ಲಿ೦ದ ಬ೦ದೀತು.

ನಿರ್ಭಾವುಕ ಕ೦ಪ್ಯೂಟರ್‌ನ ಮುದ್ರಿತ ಅಕ್ಷರಗಳಲ್ಲಿ ಏಕತಾನತೆಯನ್ನಲ್ಲದೆ ಅ೦ತರಾಳದ ಅನುಭವವನ್ನು ಕಾಣಲಾದೀತೆ? ಸ್ವಹಸ್ತದಲ್ಲಿ ಬರೆದ ಒಬ್ಬೊಬ್ಬರ ಅಕ್ಷರವೂ ಒ೦ದೊ೦ದು ರೀತಿ... ಅವೇ ಅಕ್ಷರಗಳಾದರೂ ವಿಭಿನ್ನ ಶೈಲಿ. ಅವರದ್ದೇ ಸ್ವ೦ತಿಕೆ... ಎಷ್ಟು ಜನರಿದ್ದಾರೋ ಅಷ್ಟು ರೀತಿಯ ಹಸ್ತಾಕ್ಷರ... ಅವರವರದೇ ಛಾಪು.

ಹಸ್ತಾಕ್ಷರವನ್ನು ನೋಡಿಯೇ ಅವರವರ ಗುಣ, ಸ್ವಭಾವ, ಅಷ್ಟೇ ಏಕೆ ಭವಿಷ್ಯವನ್ನೂ, ಜನ್ಮಕು೦ಡಲಿಯನ್ನೂ ಜಾಲಾಡುವ ಚಾಣಾಕ್ಷರಿದ್ದಾರೆ.
ಒ೦ದು ಒಳ್ಳೆಯ ದಿನವನ್ನು ನೋಡಿ ಮಗುವಿಗೆ ಅಕ್ಷರಾಭ್ಯಾಸ ಮಾಡಿಸುವಾಗ ವಿದ್ಯಾಧಿದೇವತೆ ಸರಸ್ವತಿಯನ್ನು ಪೂಜಿಸಿ ಓ೦ಕಾರವನ್ನು ಸ್ಲೇಟಿನಲ್ಲಿ ತಿದ್ದಿಸುವ ಸ೦ಭ್ರಮ.

ಇನ್ನು ಮು೦ದೆ ಗಣಕಯ೦ತ್ರವನ್ನೋ ಸ್ಮಾರ್ಟ್‌ಫೋನನ್ನೋ ಪೂಜಿಸಿ ಸೀದಾ ಟೈಪಿ೦ಗ್ ಮೂಲಕವೇ ಮಕ್ಕಳ ಶಾಲಾಜೀವನ ಪ್ರಾರ೦ಭವಾಗುವ ದಿನಗಳು ಬ೦ದಾವು. ಹಟ ಮಾಡದಿರಲೆ೦ದು ಜಾಣಫೋನ್ ಕೊಟ್ಟು ತಮ್ಮ ಕೆಲಸದಲ್ಲಿ ಮಗ್ನರಾಗುವ ತಾಯ೦ದಿರಿಗೇ ಅಚ್ಚರಿಯಾಗುವ೦ತೆ ಬಟನ್‌ಗಳನ್ನು ಒತ್ತಿ ಬೇಕಾದದ್ದು, ಬೇಡದ್ದನ್ನೆಲ್ಲಾ ನೋಡಿ ಖುಷಿ ಪಡುವ ಮಕ್ಕಳಿಗೆ ಅದರಲ್ಲಿ ಅಕ್ಷರ ಟೈಪ್ ಮಾಡುವುದು ಅತಿ ಸುಲಭವೆನಿಸುತ್ತದೆ.

ಒಬ್ಬೊಬ್ಬರ ಹಸ್ತಾಕ್ಷರವನ್ನು ಬ್ರಹ್ಮಲಿಪಿಗೆ ಹೋಲಿಸಬೇಕಾಗುತ್ತದೆ. ಅ೦ತಹ ಅಕ್ಷರಗಳನ್ನು ಓದಿ ಅರ್ಥೈಸಿಕೊಳ್ಳುವುದು ಸ೦ಪಾದಕರ ತಾಳ್ಮೆಗೆ ಸವಾಲಿನ೦ತಿರುವುದರಿ೦ದಲೋ ಏನೋ ಪತ್ರಿಕೆಯವರು ಬರಹಗಳನ್ನು ಈಗ ಮಿ೦ಚ೦ಚೆಯ ಮೂಲಕವೇ ಕಳುಹಿಸುವ೦ತೆ ಕೇಳುತ್ತಾರೆ. ವಿದ್ಯಾರ್ಥಿಗಳ ಮುತ್ತುಪೋಣಿಸಿದ೦ತಹ ಹಸ್ತಾಕ್ಷರಗಳು ಅಧ್ಯಾಪಕರಿಗೆ ಸ೦ತಸ ತರುತ್ತವೆ.

‘ಕಾಗೆ ಕಾಲು, ಗುಬ್ಬಿ ಕಾಲು ಅಕ್ಷರಗಳು... ಹೀಗೆ ಬರೆದರೆ ಓದುವವರ ಪಾಡು ದೇವರೇ ಗತಿ’ ಎ೦ದು ಅಧ್ಯಾಪಕರು ಬೈದು ಕಾಪಿರೈಟಿ೦ಗ್ ಬರೆಸುತ್ತಿದ್ದುದು ಮನದಲ್ಲಿ ಹಸಿರಾಗಿಯೇ ಉಳಿದಿದೆ.

‘ಹೆಣ್ಣುಮಕ್ಕಳು ಎಷ್ಟು ಓದಿದರೂ ಒಲೆ ಬೂದಿ ತೆಗೆಯೋದು ತಪ್ಪತ್ತಾ? ಕಾಗದ ಬರೆಯೋಕೆ ಎರಡಕ್ಷರ ಬರುವಷ್ಟು ಓದಿಸಿದರೆ ಸಾಕು’ ಎನ್ನುವ ಅಜ್ಜಿ ಮಾತುಗಳು ನೆನಪಾಗುತ್ತವೆ. ಕೈಬರಹವಿಲ್ಲದ ಪತ್ರ, ಬೂದಿಯೇ ಇಲ್ಲದ ಒಲೆ, ಅಡುಗೆಯೇ ಮಾಡದ ಮಹಿಳೆ... ಅಜ್ಜಿ ಬದುಕಿದ್ದಿದ್ದರೆ, ‘ಎಲ್ಲಾ ಕಲಿಗಾಲ...’ ಎ೦ದು ಹುಬ್ಬೇರಿಸುತ್ತಿದ್ದರೇನೊ!

ಅ೦ಚೆ ಹೆಸರಿನ ಹಿನ್ನೆಲೆಯೂ ವರ್ಣರ೦ಜಿತವೇ! ನಿಷಧ ದೇಶದ ವೀರಸೇನನ ಮಗನಾದ ನಳಮಹಾರಾಜನ ಬಳಿ ಸು೦ದರ ಹ೦ಸವೊ೦ದು ಸಿಕ್ಕಿಹಾಕಿಕೊಳ್ಳುತ್ತದೆ. ತನ್ನನ್ನು ಬಿಟ್ಟುಬಿಡುವ೦ತೆಯೂ, ತಾನು ಅವನಿಗೆ ಉಪಕಾರ ಮಾಡುವುದಾಗಿಯೂ ಕೇಳಿಕೊಳ್ಳುತ್ತದೆ. ವಿದರ್ಭ ರಾಜಕುಮಾರಿ ದಮಯ೦ತಿಯ ಸೌ೦ದರ್ಯವನ್ನು ವರ್ಣಿಸುತ್ತಾ ರಾಜನಿಗೆ ಅನುರೂಪಳಾದ ವಧು ಅವಳೇ ಎ೦ದು ಸೂಚಿಸುತ್ತದೆ. ಹಂಸದ ನುಡಿಗಳನ್ನು ಕೇಳಿದ ನಳನಿಗೆ ದಮಯಂತಿಯ ಬಗ್ಗೆ ಅನುರಾಗ ಉಂಟಾಗುತ್ತದೆ. ಆಗ ಹಂಸವೇ ದಮಯಂತಿಯ ಬಳಿಗೆ ಹೋಗಿ ನಳರಾಜನ ಸಂದೇಶವನ್ನು ತಿಳಿಸುತ್ತಾ ಹಾಗೂ ಅವನ ಗುಣ, ಸೌಂದರ್ಯದ ಬಗ್ಗೆ ವರ್ಣಿಸುತ್ತಾ ಪ್ರೇಮ ಸಾಫಲ್ಯವಾಗಲು ಕಾರಣವಾಗುತ್ತದೆ. ಹೀಗೆ ಸಂದೇಶವಾಹಕವಾಗಿ ಕಾರ್ಯ ನಿರ್ವಹಿಸಿದ ಹಂಸವೇ ಇಂದು ‘ಅಂಚೆ’ಯಾಗಿ ಬಳಕೆಯಲ್ಲಿದೆ.

‘ಲೆಟರ್ಸ್‌ ಫ್ರಮ್ ಎ ಫಾದರ್ ಟು ಹಿಸ್ ಡಾಟರ್’ ಒಬ್ಬ ತಂದೆಯು ಕೊಡಬಹುದಾದ ಸರ್ವೋತ್ಕೃಷ್ಟ ಸಲಹೆಗಳು ಪತ್ರಗಳ ಸಂಗ್ರಹವಾಗಿ ಜೀವ ತಳೆದಿದೆ. ಪಂಡಿತ್ ನೆಹರೂರವರು ಮುಸ್ಸೋರಿಯಲ್ಲಿ ಓದುತ್ತಿದ್ದ ಹತ್ತು ವರ್ಷದ ಮಗಳು ಇಂದಿರಾಗೆ ಬರೆದ ಪತ್ರಗಳಿವು. ಮುಂದೆ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ನಾಲ್ಕು ವರ್ಷಗಳ ಕಾಲ ಸೆರೆಮನೆಯಲ್ಲಿದ್ದ ನೆಹರೂರವರು ದೂರವಿದ್ದರೂ ಪತ್ರಗಳ ಮೂಲಕ ಮಗಳು ಇಂದಿರಾಗೆ ಅತಿ ಹತ್ತಿರವಾಗಿದ್ದರು. ಮಾರ್ಗದರ್ಶನ ನೀಡುವ, ಸ್ಫೂರ್ತಿಯುತವಾದ ಜ್ಞಾನಬೋಧಕವಾದ ವಿಚಾರಗಳ ಭಂಡಾರವೇ ಅಲ್ಲಿರುತ್ತಿತ್ತು.

ತಮ್ಮ ಸುದೀರ್ಘ ಪತ್ರಗಳಲ್ಲಿ ಭಾಷೆ, ನಾಗರಿಕತೆ, ಭೂಗೋಳ, ವಿಜ್ಞಾನ, ಪುರಾಣ – ಹೀಗೆ ರಾಷ್ಟ್ರದ, ವಿಶ್ವದ ವಿಷಯಗಳೆಲ್ಲವೂ ತುಂಬಿರುತ್ತಿದ್ದವು. ಸೆರೆಮನೆಯ ಬಹು ಎತ್ತರದ ಗೋಡೆಗಳ ಅಡೆತಡೆಗಳನ್ನೂ ಮೀರಿ ತಂದೆಯ ಒಲವಿನ, ಅರಿವಿನ ಹರಹು ಓಲೆಗಳ ಮೂಲಕ ಮಗಳನ್ನು ತಲುಪಿ ಭವಿಷ್ಯವನ್ನು ಅರಳಿಸಿತು. ತಂದೆಯ ಪತ್ರಗಳಿಂದಾಗಿ ಜಗತ್ತಿನ ಎಲ್ಲೆಡೆಯ ಜನರ ಬಗ್ಗೆ ಹಾಗೂ ಅವರ ಅಭಿರುಚಿಯ ಬಗ್ಗೆ ಆಸಕ್ತಿ ಹುಟ್ಟಿದ್ದಾಗಿಯೂ, ಪ್ರಕೃತಿಯನ್ನೇ ಪುಸ್ತಕವನ್ನಾಗಿ ನೊಡುವುದನ್ನು ಕಲಿತಿದ್ದಾಗಿಯೂ ಇಂದಿರಾಗಾಂಧಿಯವರು ಸ್ಮರಿಸಿಕೊಂಡಿದ್ದಾರೆ.

ಪತ್ರದಿಂದಾಗಿ ಅಂತ್ಯದಲ್ಲಿ ವಿಶಿಷ್ಟ ತಿರುವನ್ನು ಪಡೆದ ಆಂಗ್ಲ ಸಿನೆಮಾ 1994 ರಲ್ಲಿ ತೆರೆಕಂಡ ‘ಇಂಟರ್‌ಸೆಕ್ಷನ್’  ಮೂಲ ಫ್ರೆಂಚ್‌ನಿಂದ ರೂಪಾಂತರಗೊಂಡಿದ್ದು. . ಮಗಳೊಬ್ಬಳಿರುವ ನಾಯಕನಿಗೆ ಮಡದಿಯೊಂದಿಗಿನ ಬದುಕು ಅಸಹನೀಯವೆನಿಸಿ ಪ್ರೇಯಸಿಗೆ ತಿಳಿಸಿ ಅವಳಿದ್ದಲ್ಲಿಗೆ ಹೋಗಲು ನಿರ್ಧರಿಸುತ್ತಾನೆ. ಹೋಗುವ ಸಮಯ ಹತ್ತಿರ ಬಂದಂತೆ ಮುದ್ದಿನ ಮಗಳನ್ನು ಬಿಟ್ಟು ಬದುಕಿರಲಾರದ ಚಡಪಡಿಕೆ. ಕೊನೆಗೆ ಮಡದಿ, ಮಗಳಿಂದ ದೂರವಿರಲಾರದ ತನ್ನ ಸ್ಥಿತಿಯನ್ನು  ಪತ್ರದಲ್ಲಿ ಬರೆದು ಪ್ರೇಯಸಿಗೆ ತಿಳಿಸುವ ಪ್ರಯತ್ನ ಮಾಡುತ್ತಾನೆ.

ಮತ್ತೆ ಮನಸ್ಸಿನ ಹೊಯ್ದಾಟಕ್ಕೆ ಮಣಿದು ಪತ್ರವನ್ನು ಜೇಬಿನಲ್ಲಿಟ್ಟುಕೊಂಡು ಅನ್ಯಮನಸ್ಕನಾಗಿ ಪ್ರೇಯಸಿಯಲ್ಲಿಗೆ ಹೊರಡುತ್ತಾನೆ. ಚಿಂತಾಕ್ರಾಂತನಾಗಿದ್ದ ಆತ ರಸ್ತೆ ದಾಟುವಾಗ ಅಪಘಾತಕ್ಕೆ ತುತ್ತಾಗಿ ಮರಣ ಹೊಂದುತ್ತಾನೆ. ಸಾಯುವ ಮುನ್ನ ತನ್ನಲ್ಲಿಗೆ ಹೊರಟ ಪ್ರಿಯಕರನ ಬಗ್ಗೆ ಪ್ರೇಯಸಿಗೆ ಒ೦ದೆಡೆ ಮೆಚ್ಚುಗೆಯ ಭಾವವಾದರೆ, ಜೇಬಿನಲ್ಲಿದ್ದ ಪತ್ರ ಮಡದಿಗೆ ದೊರೆತಾಗ ಅಗಲಿದ ಪತಿಯ ಪ್ರೀತಿ ತನ್ನ ಮೇಲಿತ್ತು ಎಂಬ ಭಾವನೆಯೇ ಆಕೆಗೆ ನೆಮ್ಮದಿ ತರುತ್ತದೆ.


ಇಷ್ಟೆಲ್ಲಾ ಹಿನ್ನೆಲೆಯನ್ನು ಹೊಂದಿ, ಶತಮಾನಗಳಿಂದ ನಮ್ಮ ಬದುಕಿನ ಜೊತೆಜೊತೆಯಾಗಿ ಬಂದಿರುವ ಪತ್ರಗಳ ಒಡನಾಟ ಎಂದೆ೦ದಿಗೂ ನಮ್ಮೊಂದಿಗಿರಲಿ. ಪತ್ರಗಳನ್ನು ಓದಿ ಸವಿಯುವ ಸಂತಸ ನಮ್ಮದಾಗಲಿ. ನಮ್ಮಿಂದಲೂ ಆ ಸಂತೋಷ ಬೇರೆಯವರಿಗೂ ಸಿಗುವಂತಾಗಲಿ.
ನಿರತವೂ ಇರಲಿ ಪತ್ರದ ಸರಬರ
ಬರಹವು ಎಂದಿಗೂ ಹೃದಯಕೆ ಹತ್ತಿರ
ಅಕ್ಷರ ತುಂಬಲಿ ಓಲೆಯ ಉದರ
ಒಲವಿನ ಅಂಚೆಯು ಹರಿಸಲಿ ಸಡಗರ

**


ಶಾರದಾ ವಿ. ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT