ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮಿಷಕ್ಕೆ ಶರಣಾಗದಿರಿ

ಸಿಸೇರಿಯನ್‌ ಎಷ್ಟು ಅಗತ್ಯ?
Last Updated 3 ಮಾರ್ಚ್ 2017, 19:35 IST
ಅಕ್ಷರ ಗಾತ್ರ

ಡಾ. ಲೀಲಾವತಿ ದೇವದಾಸ್
ಸ್ತ್ರೀರೋಗ ತಜ್ಞೆ
*

ಸಿಸೇರಿಯನ್ ಶಸ್ತ್ರಚಿಕಿತ್ಸೆಗಳ ಸಂಖ್ಯೆ ಅನಿಯಮಿತವಾಗಿ ಏರುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈಗೇನಾದರೂ ಮಗುವನ್ನು ಕಳೆದುಕೊಂಡಿದ್ದ ತಾಯಿಗೆ ಬುದ್ಧ, ‘ಯಾವ ಕುಟುಂಬದಲ್ಲಿ ಯಾರಿಗೂ ಸಿಸೇರಿಯನ್ ಆಗಿಯೇ ಇಲ್ಲವೋ ಅಲ್ಲಿಂದ ಸಾಸಿವೆ ಪಡೆದು ಬಾ’ ಎಂದು ಹೇಳಿ ಆಕೆಯ ಕಣ್ಣು ತೆರೆಸುತ್ತಿದ್ದನೋ ಏನೋ!

‘ಸಿಸೇರಿಯನ್‌ಗಳು ಸಿಕ್ಕಾಪಟ್ಟೆ ಹೆಚ್ಚುತ್ತಿವೆ’ ಎಂದು ದೇಶದಾದ್ಯಂತ ಹಬ್ಬಿರುವ ಈ ಗುಲ್ಲು ಇಂದು ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ಈ ವಿಷಯದಲ್ಲಿ ಸಾಕಷ್ಟು ಗುಸುಗುಸು ಮಾತಿದ್ದರೂ, ಇಂದು ಕೇಂದ್ರ ಸಚಿವರೇ ಇದರ ಬಗ್ಗೆ ಕಳಕಳಿ ತೋರಿ ಪ್ರಸ್ತಾಪಿಸಿರುವುದು, ಕೆಲವು ದಿಟ್ಟ ಮನಸ್ಸುಗಳು ಇದಕ್ಕಾಗಿ ಒಂದು ಅಭಿಯಾನವನ್ನೇ ಪ್ರಾರಂಭಿಸಿರುವುದು ಜನರಲ್ಲಿ ಅರಿವು ಹೆಚ್ಚುವಂತೆ ಮಾಡಿದೆ. ಹೀಗಾಗಿ, ನಾವು ಈ ಸಮಸ್ಯೆಯ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾದ ಅಗತ್ಯ ಬಂದಿದೆ.



ಅಂದ ಹಾಗೆ, ಸಹಜ ಹೆರಿಗೆ ತಾನೆ ಹೇಗಾಗುತ್ತದೆ? ಕೇಳಿ, ಈ ನಿಟ್ಟಿನಲ್ಲಿ ಪ್ರಕೃತಿ ಸ್ತ್ರೀದೇಹವನ್ನು ಅಚ್ಚರಿ ಮೂಡುವಂತೆ ರೂಪಿಸಿದೆ. ಆದರೂ ಕೆಲವೊಮ್ಮೆ ಎಲ್ಲೋ ಎಡವಟ್ಟಾಗಿ, ಹೆರಿಗೆಗೆ ತಜ್ಞರ ಸಹಾಯ ಬೇಕೇ ಬೇಕಾಗುತ್ತದೆ.

ಸಹಜ ಹೆರಿಗೆಗೆ ಮೂರು ಅಂಶಗಳು ಸಮರ್ಪಕವಾಗಿರಬೇಕು. ಅವುಗಳೆಂದರೆ
1. ಪ್ರಯಾಣಿಕ (ಇಲ್ಲಿ ಗರ್ಭಸ್ಥ ಮಗು), 2) ಪ್ರಯಾಣದ ಹಾದಿ (ಇಲ್ಲಿ ಕಟಿರ ಹಾಗೂ ಪ್ರಜನನಾಂಗಗಳು), 3. ಗರ್ಭಸ್ಥ ಮಗುವನ್ನು ಮುಂದೂಡುವ ಶಕ್ತಿಗಳು (ಗರ್ಭಾಶಯದ ಸ್ನಾಯುಗಳ ಕ್ಷಮತೆ, ಗರ್ಭಿಣಿಯ ಸಮಯೋಚಿತ ಮುಕ್ಕುವಿಕೆ).

ಸ್ವಲ್ಪ ವಿವರವಾಗಿ ನೋಡೋಣ:
ಪ್ರಯಾಣಿಕ: ಗರ್ಭಸ್ಥ ಮಗುವಿನ ಗಾತ್ರ ಸಹಜವಾಗಿರಬೇಕು, ಅದು ಗರ್ಭಿಣಿಯ ಕಟಿರದ (ಪೆಲ್ವಿಸ್) ವಿವಿಧ ಅಳತೆಗಳಿಗೆ ಹೊಂದಿಕೊಳ್ಳುವಂತಿರಬೇಕು. ಗರ್ಭಸ್ಥ ಮಗುವಿನ ನಿಲುವು ಸಹಜ ಹೆರಿಗೆಗೆ ಅನುಕೂಲಕರವಾಗಿರಬೇಕು. ಅದರ ತಲೆ, ಗರ್ಭಕೋಶದ ಕೆಳಭಾಗದಲ್ಲಿದ್ದು, ಅದರ ಪೃಷ್ಠ ಮೇಲ್ಭಾಗದಲ್ಲಿರಬೇಕು. ಮಗು ಅಡ್ಡಲಾಗಿಯೋ, ತಲೆ ಮೇಲಾಗಿಯೋ ಇದ್ದರೆ ಸಹಜ ಹೆರಿಗೆಯನ್ನು ನಾವು ನಿರೀಕ್ಷಿಸುವುದು ಕಷ್ಟ.  ಗರ್ಭಸ್ಥ ಮಗು ಸಾಮಾನ್ಯವಾಗಿ ತುಸು ಬಾಗಿಕೊಂಡು, ಬೆನ್ನು ಮುಂದಾಗಿ ಇಳಿಯಬೇಕು. ಬದಲಾಗಿ ಅದರ ತಲೆ ನಿಮಿರಿಕೊಂಡೋ ಬೆನ್ನು ಹಿಂದಿದ್ದು ತಲೆಯ ನೆತ್ತಿ ಮುಂದಕ್ಕೆ ಬಾರದಿದ್ದಾಗಲೋ ಹೆರಿಗೆ ಅಸಹಜವಾಗಿ ತಾಯಿ, ಮಗುವಿನ ಆರೋಗ್ಯ ಹದಗೆಡುತ್ತದೆ.

ಪ್ರಯಾಣದ ಹಾದಿ: ಇಲ್ಲಿ ಅಡಚಣೆಗಳಿದ್ದರೂ ಹೆರಿಗೆಯ ಪ್ರಗತಿ ಸ್ಥಗಿತವಾಗಿ ನಿರ್ವಾಹಕರಿಗೂ ಮನೆಯವರಿಗೂ ಆತಂಕ ಹುಟ್ಟಿಸುತ್ತದೆ. ಕಟಿರದ ವಿವಿಧ ಅಳತೆಗಳಲ್ಲಿ ಯಾವುದಾದರೂ ಸಂಕುಚಿತವಾಗಿದ್ದರೆ, ಅಲ್ಲಿ ಗಡ್ಡೆಯೇನಾದರೂ ಬೆಳೆದುಕೊಂಡಿದ್ದರೆ, ಗರ್ಭಕಂಠವು ಸೂಕ್ತ ಸಮಯದಲ್ಲಿ ತೆರೆದುಕೊಳ್ಳದಿದ್ದರೆ ಸಹಜ ಹೆರಿಗೆ ಹೇಗೆ ಸಾಧ್ಯ?

ಇವೆಲ್ಲಾ ಕಾರಣಗಳಿಂದ ಹೆರಿಗೆ ತಡವಾದರೆ, ಗರ್ಭಿಣಿಗೆ ತೀವ್ರ ಆಯಾಸವಾಗಿ ಅವಳ ನಾಡಿ ಕ್ಷೀಣವಾಗುತ್ತದೆ, ತ್ವರಿತವೂ ಆಗುತ್ತದೆ. ಗರ್ಭಸ್ಥ ಮಗುವಿನ ಹೃದಯದ ಬಡಿತವೂ ಹೆಚ್ಚೂಕಡಿಮೆಯಾಗಿ ಹೆರಿಗೆಯ ಉತ್ತರದಾಯಿತ್ವ ಹೊತ್ತಿರುವ ತಜ್ಞರನ್ನು ಚಿಂತೆಗೆ ಈಡು ಮಾಡುತ್ತದೆ.

ಗರ್ಭಿಣಿಯ ಮನದಲ್ಲಿ ಭಯ, ಸಂದೇಹ ಒತ್ತಿಕೊಂಡು ಬರುವಾಗ ಅವು ಗರ್ಭಕಂಠದ ಮೇಲೂ ಪರಿಣಾಮ ಬೀರಿ, ಹೆರಿಗೆಯ ಪ್ರಗತಿ ಕುಂಠಿತವಾಗುತ್ತದೆ. ಐಶ್ವರ್ಯಾ ರೈ ಇದೇ ಸಮಯದಲ್ಲಿ ಅಭಿವ್ಯಕ್ತಗೊಳಿಸಿದ ತಾಳ್ಮೆ ಹಾಗೂ ಇಚ್ಛಾಶಕ್ತಿ ಇಂಥವರಿಗೆ ಮಾದರಿಯಾಗಬೇಕು!

ಶಕ್ತಿಗಳು: ಕೆಲವೊಮ್ಮೆ ಗರ್ಭಕೋಶದ ಸ್ನಾಯುಗಳು ಧರಣಿ ಹೂಡುತ್ತವೆ! ಆಗ, ವೈದ್ಯರು ಹೆರಿಗೆ ನೋವನ್ನು ಚುರುಕುಗೊಳಿಸುವ ಔಷಧಿಗಳನ್ನು ಗ್ಲೂಕೋಸ್ ದ್ರಾವಣದಲ್ಲಿ ಬೆರೆಸಿ, ಗರ್ಭಿಣಿಯ ಧಮನಿಗಳಿಗೆ ಹರಿಸುತ್ತಾರೆ.

ಈ ಮೂರೂ ಅಂಶಗಳಲ್ಲಿ ಯಾವುದಾದರೊಂದು ಅಸಮರ್ಪಕವಾದರೂ, ಗರ್ಭಿಣಿ ಹಾಗೂ ಅವಳಲ್ಲಿನ ಮಗುವಿನ ಜೀವ ಅಪಾಯದ ಅಂಚನ್ನು ಮುಟ್ಟುತ್ತವೆ. ಆ ಸಂದಿಗ್ಧ ಸಮಯದಲ್ಲಿ ತಜ್ಞರು ಸಿಸೇರಿಯನ್ ಮಾಡುವ ನಿರ್ಧಾರವನ್ನು ಮಾಡುತ್ತಾರೆ.

ಈಗಂತೂ ಸಿಸೇರಿಯನ್‌ಗೆ ಅನಿವಾರ್ಯವಾದ ಅರಿವಳಿಕೆ ಶಾಸ್ತ್ರ ತುಂಬಾ ಮುಂದುವರಿದಿದೆ. ಹಿಂದೆ ಕಾಡುತ್ತಿದ್ದ ಸೋಂಕುಗಳೂ, ನಂಜುಗಳೂ, ಜೀವಿರೋಧಕಗಳ (ಆ್ಯಂಟಿಬಯೊಟಿಕ್ಸ್) ಬಳಕೆಯಿಂದ ನಿವಾರಣೆಯಾಗಿವೆ. ಹಾಗಾಗಿ ಸಿಸೇರಿಯನ್ ಈಗಂತೂ ತುಂಬಾ ಸುರಕ್ಷಿತವಾಗಿದೆ. ಹಾಗಿದ್ದರೂ, ಅದರಲ್ಲಿ ಶೇ ಅರ್ಧದಿಂದ ಒಂದರಷ್ಟು ಪ್ರಮಾಣದ ಅಪಾಯಗಳಿದ್ದೇ ಇರುತ್ತವೆ. ನಾವು ನಮ್ಮ ನೆಚ್ಚಿನ ಕಾದಂಬರಿಗಾರ್ತಿ ತ್ರಿವೇಣಿಯನ್ನು ಕಳೆದು ಕೊಂಡಿದ್ದು, ಆಕೆಗೆ ಸಿಸೇರಿಯನ್ ಆಗಿ ಒಂದು ವಾರದಲ್ಲಿ.

ಸಿಸೇರಿಯನ್ ಆದ ಮೇಲೆ ಹೆಣ್ಣಿಗೆ ಬೊಜ್ಜು ಬರುತ್ತದೆ, ಸೊಂಟ ನೋವು ಇದ್ದೇ ಇರುತ್ತದೆ ಎನ್ನುವ ನಂಬಿಕೆಗಳಿಗೆ ಬುಡವಿಲ್ಲ. ಆಪರೇಷನ್ ನಂತರ ತಿಂಗಳುಗಟ್ಟಲೆ ಆಕೆಗೆ ನೀಡುವ ಅನಗತ್ಯ ವಿಶ್ರಾಂತಿ, ಆರೈಕೆಗಳೇ ಇವುಗಳಿಗೆ ಕಾರಣ.

ಸಿಸೇರಿಯನ್ ವೆಚ್ಚ, ಸಹಜ ಹೆರಿಗೆಯ ವೆಚ್ಚಕ್ಕಿಂತ ಸಾಮಾನ್ಯವಾಗಿ ಹತ್ತು ಪಟ್ಟಿಗಿಂತಲೂ ಹೆಚ್ಚಾಗಿರುತ್ತದೆ. ಹಾಗಾಗಿ ಆರ್ಥಿಕವಾಗಿ ದುರ್ಬಲರಾಗಿರುವವರು, ಕೆಳ ಮಧ್ಯಮ ಕುಟುಂಬದವರು ಈ ಅಪಾರ ವೆಚ್ಚವನ್ನು ಭರಿಸಲು ಮಾಡಿದ ಸಾಲದಲ್ಲಿ ಮುಳುಗಿ ಅದರಿಂದ ಚೇತರಿಸಿಕೊಳ್ಳಲು ಅವರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ತಾಯಿ, ಮಗುವಿನ ಆರೋಗ್ಯವನ್ನು ಹೊರತುಪಡಿಸಿ, ಹಣ ಮುಂತಾದ ಆಮಿಷಗಳು ತಜ್ಞರ ನಿರ್ಧಾರಕ್ಕೆ ಎಂದೂ ಕಾರಣವಾಗಕೂಡದು. ಇದು ವೈದ್ಯ ನೀತಿ ಸಂಹಿತೆಗೆ ತೀರಾ ವಿರುದ್ಧವಾದದ್ದು.

ಹಾಗೆಂದು, ತುಂಬಾ ಕಠಿಣ ಕ್ರಮಗಳನ್ನು ಕೈಗೆತ್ತಿಕೊಂಡು ವೈದ್ಯರು ಹಾಗೂ ಆಸ್ಪತ್ರೆಗಳ ಹೆಸರುಗೆಡಿಸುವ ಕ್ರಮಗಳನ್ನು ಜಾರಿಗೆ ತರುವ ಮುನ್ನ ಸಾಕಷ್ಟು ಚರ್ಚೆ ಹಾಗೂ ಗಂಭೀರ ಚಿಂತನೆಗಳ ನಂತರವೇ ಹೆಜ್ಜೆಯಿಡುವುದು ಕ್ಷೇಮಕರ.

ಕೌಶಲ ಅಭಿವೃದ್ಧಿ ಕಾರ್ಯಾಗಾರ
ಸಹಜ ಹೆರಿಗೆಗಳ ಪ್ರಮಾಣ ಹೆಚ್ಚಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ನರ್ಸ್‌ಗಳಿಗೆ ಹೆರಿಗೆ ಮಾಡಿಸುವ ಕೌಶಲ ಅಭಿವೃದ್ಧಿ ಕಾರ್ಯಾಗಾರ ನಡೆಸಲಾಗಿದೆ. ಮೊದಲ ಹೆರಿಗೆ ಸಹಜವಾಗಿ ಆಗುವಂತೆ ಸಾಧ್ಯವಿರುವ ಪ್ರಯತ್ನ ಮಾಡಿ ಎಂಬ ಸಲಹೆ ನೀಡಲಾಗಿದೆ. ಏಕೆಂದರೆ, ಮೊದಲ ಹೆರಿಗೆಯೇ ಸಿಸೇರಿಯನ್‌ ಮೂಲಕವಾದರೆ ಎರಡನೇ ಹೆರಿಗೆಗೆ ಆಕೆ ಮತ್ತೆ ಸಿಸೇರಿಯನ್‌ ಮೊರೆ ಹೋಗುತ್ತಾಳೆ.

ಖಾಸಗಿ ಆಸ್ಪತ್ರೆಗಳ ಪ್ರಸೂತಿತಜ್ಞರ ಸಮಾವೇಶದಲ್ಲಿ ಸಹಜ ಹೆರಿಗೆಗೆ ಉತ್ತೇಜನ ನೀಡುವಂತೆ ಸೂಚನೆ ನೀಡಿದ್ದೇವೆ.
ಗರ್ಭಿಣಿಯು ರಕ್ತಹೀನತೆಯಿಂದ ಬಳಲುತ್ತಿದ್ದರೆ ಸಿಸೇರಿಯನ್‌ಗೆ ಒಳಗಾಗಬೇಕಾದ ಸಂಭವ ಹೆಚ್ಚು. ಹೀಗಾಗಿ ರಕ್ತಹೀನತೆಯನ್ನು ಮೊದಲೇ ಗುರುತಿಸಿ, ಆ ಸಮಸ್ಯೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರಧಾನಮಂತ್ರಿ ಮಾತೃತ್ವ ಸುರಕ್ಷಿತ ಅಭಿಯಾನವೂ 9 ತಿಂಗಳುಗಳಿಂದ ನಡೆಯುತ್ತಿದೆ.
ಶಾಲಿನಿ ರಜನೀಶ್‌,
ಪ್ರಧಾನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT