ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಿನೊಳಗಿನ ವಿಧ್ವಂಸಕ ಕೃತ್ಯ ತಡೆಗೆ ತರಬೇತಿ

ಯೋಧರಿಂದ ಅಣಕು ಪ್ರದರ್ಶನ; ಮರಾಠಾ ಲಘು ಪದಾತಿ ದಳ ಕೇಂದ್ರಕ್ಕೆ ಭೇಟಿ ನೀಡಿದ್ದ ಕಮಾಂಡಂಟ್‌ ಅಭಿಮತ
Last Updated 4 ಮಾರ್ಚ್ 2017, 7:02 IST
ಅಕ್ಷರ ಗಾತ್ರ

ಬೆಳಗಾವಿ: ಯುದ್ಧಭೂಮಿಯಲ್ಲದೇ ನಾಡಿನ ಒಳಗೆ ನಡೆಯುವ ವಿಧ್ವಂಸಕ ಕೃತ್ಯಗಳನ್ನು ಎದುರಿಸಲು ಯೋಧರಿಗೆ ಅತ್ಯಾಧುನಿಕ ತರಬೇತಿ ನೀಡಲಾಗುತ್ತಿದೆ ಎಂದು ಮರಾಠಾ ಲಘು ಪದಾತಿದಳ ಕೇಂದ್ರದ (ಎಂಎಲ್‌ಐಆರ್‌ಸಿ) ಕಮಾಂಡಂಟ್‌, ಬ್ರಿಗೇಡಿಯರ್‌ ಪ್ರವೀಣ್‌ ಶಿಂಧೆ ಹೇಳಿದರು.

‘ಸಾಂಪ್ರದಾಯಕ ಯುದ್ಧ ತರಬೇತಿ­ಯನ್ನು ಈಗಾಗಲೇ ನೀಡಲಾಗುತ್ತಿದೆ. ಇದರ ಜೊತೆ ಅತ್ಯಾಧುನಿಕ ತಂತ್ರಜ್ಞಾನ­ಗಳನ್ನು ಬಳಸಿ, ಇಂದಿನ ಅಗತ್ಯಕ್ಕೆ ತಕ್ಕಂತೆ ವಿಧ್ವಂಸಕ ಕೃತ್ಯಗಳನ್ನು ಎದುರಿಸಲು ತರಬೇತಿ ನೀಡಲಾಗುತ್ತಿದೆ’ ಎಂದು ಶುಕ್ರವಾರ ಕೇಂದ್ರಕ್ಕೆ ಭೇಟಿ ನೀಡಿದ ಸುದ್ದಿಗಾರರಿಗೆ ತಿಳಿಸಿದರು.

‘ಸಾಂಪ್ರದಾಯಿಕ ಯುದ್ಧದಲ್ಲಿ ವೈರಿ­ಯ ಜೊತೆ ಮುಖಾಮುಖಿ ಹೋರಾಟ ಮಾಡಲಾಗುತ್ತದೆ. ಆದರೆ ಈಗ ತಂತ್ರ ಬಳಸಿ ವೈರಿಯನ್ನು ಎದುರಿಸಲು ಎಲ್ಲ ತರಬೇತಿ ನೀಡಲಾಗುತ್ತಿದೆ’ ಎಂದರು.

‘1800ರಲ್ಲಿ ಬಾಂಬೆ ನೆಟಿವ್‌ ಇನ್‌ಫಂಟ್ರಿಯ 7ನೇ ರೆಜಿಮೆಂಟ್‌ನ 2ನೇ ಬೆಟಾಲಿಯನ್‌ ಸ್ಥಾಪನೆಯಾಯಿತು. 1942ರಲ್ಲಿ ಮರಾಠಾ ಲಘು ಪದಾತಿದಳ ಕೇಂದ್ರ (ಎಂಎಲ್‌ಐಆರ್‌ಸಿ) ಮರು­ನಾಮ­ಕರಣವಾಯಿತು’ ಎಂದರು.

ತರಬೇತಿ 
ಬೇರೆ ಬೇರೆ ರೆಜಿಮೆಂಟಲ್‌ನಲ್ಲಿ ನೇಮಕವಾದ ಸೈನಿಕರಿಗೆ ಇಲ್ಲಿ ಪ್ರಾಥಮಿಕ ಹಂತದ ತರಬೇತಿ ನೀಡಲಾಗುತ್ತದೆ. 10 ತಿಂಗಳ ಕಾಲಾವಧಿ ಇರುತ್ತದೆ. ಡ್ರಿಲ್‌, ಶಸ್ತ್ರಾಸ್ತ್ರಗಳ ತರಬೇತಿ, ವಿವಿಧ ಮಾದರಿಯ ಯುದ್ಧ ಕಲೆಗಳ ತರಬೇತಿ ಹೇಳಿಕೊಡಲಾಗುತ್ತದೆ. ಪ್ರತಿ­ವರ್ಷ ಅಂದಾಜು 2,000 ಯೋಧರಿಗೆ ತರಬೇತಿ ನೀಡಲಾಗುತ್ತದೆ.

ಇವರಲ್ಲಿ ಉತ್ತಮ ಸಾಮರ್ಥ್ಯ­ವೆನಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಮಾಂಡೊ ತರಬೇತಿ ನೀಡಲಾಗುತ್ತದೆ. ಸುಮಾರು 30ರಿಂದ 35 ದಿನಗಳವರೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬಳಕೆ, ಗೆರಿಲ್ಲಾ ಯುದ್ಧ ತಂತ್ರಗಾರಿಕೆ, ಪರ್ವತಾರೋಹಣ (ರಾಕ್‌ ಕ್ಲೈಂಬಿಂಗ್‌) ತರಬೇತಿ ನೀಡಲಾಗುತ್ತದೆ. 

ಯೋಧರಲ್ಲಿ ಇರುವ ಇತರ ವಿಶೇಷ ಪ್ರತಿಭೆಯನ್ನು ಪರೀಕ್ಷಿಸಿ ಅದಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. ಕುಸ್ತಿ, ಚಿತ್ರಕಲೆ, ಸಂಗೀತ, ರೈಫಲ್‌ ಶೂಟಿಂಗ್‌, ಈಜು, ಕುದುರೆ ಸವಾರಿ, ಸೇರಿದಂತೆ ವಿವಿಧ ಕ್ರೀಡೆಗಳಿಗೂ ಉತ್ತೇಜನ ನೀಡಲಾ­ಗುತ್ತಿದೆ. ಭಾರತೀಯ ಸೇನೆಗೆ ಸೇರಿದ ಹಲವು ಯೋಧರು ವಿವಿಧ ಅಂತರ­ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪದಕಗಳನ್ನು ಜಯಗಳಿಸಿದ್ದನ್ನು ಸ್ಮರಿಸಬಹುದು.

*
ವೈರಿ  ಅಡಗಿ ಕುಳಿತು ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕು­ತ್ತಿರುತ್ತಾನೆ. ಇಂತಹವರನ್ನು ಹುಡುಕಿ, ಹೊಡೆದು­ರುಳಿಸುವ ಯುದ್ಧ ತಂತ್ರಗಾರಿಕೆಯನ್ನು ಯೋಧರಿಗೆ ಕಲಿಸಿಕೊಡಲಾಗುತ್ತಿದೆ.
-ಪ್ರವೀಣ್‌ ಶಿಂಧೆ,
ಎಂಎಲ್‌ಐಆರ್‌ಸಿ  ಕಮಾಂಡಂಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT