ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ ನಗರಸಭೆಯಲ್ಲಿ ಆಪರೇಷನ್‌ ಕಮಲ?

ಅಧ್ಯಕ್ಷ ಸೇರಿ 13 ಜನ ಕಾಂಗ್ರೆಸ್‌ ಸದಸ್ಯರು ಬಿಜೆಪಿಗೆ; ವರಿಷ್ಠರ ಜೊತೆ ಮಾತುಕತೆ; ಪಕ್ಷ ಸೇರ್ಪಡೆಗೆ ಶೀಘ್ರ ಕಾರ್ಯಕ್ರಮ
Last Updated 4 ಮಾರ್ಚ್ 2017, 7:23 IST
ಅಕ್ಷರ ಗಾತ್ರ

ಹೊಸಪೇಟೆ: ನಗರಸಭೆ ಅಧ್ಯಕ್ಷ ಅಬ್ದುಲ್ ಖದೀರ್ ಸೇರಿದಂತೆ ಕಾಂಗ್ರೆಸ್‌ನ 13 ಜನ ಸದಸ್ಯರು ಗುರುವಾರ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಶಾಸಕ ಆರ್‌. ಅಶೋಕ್‌ ಅವರನ್ನು ಭೇಟಿ ಮಾಡಿದ್ದು, ‘ಕಮಲ’ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಮಾಜಿ ಶಾಸಕ ರತನ್‌ ಸಿಂಗ್‌ ಕೂಡ ಬಿಜೆಪಿಯ ಇಬ್ಬರೂ ಹಿರಿಯ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೆಲ ಸದಸ್ಯರು ರತನ್‌ ಸಿಂಗ್‌, ಮತ್ತೆ ಕೆಲವರು ಸ್ಥಳೀಯ ಶಾಸಕ ಆನಂದ ಸಿಂಗ್‌ ಅವರ ಅಣತಿ ಮೇರೆಗೆ ಬೆಂಗಳೂರಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಬಿಜೆಪಿ ಮುಖಂಡರೊಂದಿಗೆ ರತನ್‌ ಸಿಂಗ್‌ ಹಾಗೂ ಸದಸ್ಯರು ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಶೀಘ್ರದಲ್ಲೇ ಹೊಸಪೇಟೆ ನಗರದಲ್ಲಿ ಪಕ್ಷದಿಂದ ಬೃಹತ್‌ ಸಾರ್ವಜನಿಕ ಸಮಾರಂಭ ಆಯೋಜಿಸಿ, ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌, ಬಿ.ಎಸ್‌. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳಲು ತೀರ್ಮಾನಿಸಿದೆ ಎನ್ನಲಾಗಿದೆ.

ಇತ್ತೀಚೆಗೆ ಕಾಂಗ್ರೆಸ್‌ ವಿರುದ್ಧ ಅಸಮಾಧಾನ ಹೊರಹಾಕಿ ಪಕ್ಷ ತೊರೆದಿದ್ದ ರತನ್‌ ಸಿಂಗ್‌ ಅವರು ಬಿಜೆಪಿ ಸೇರುವುದರ ಬಗ್ಗೆ ಪುಕಾರು ಹಬ್ಬಿತ್ತು. ಈಗ ಸ್ವತಃ ಅವರೇ ಬಿಜೆಪಿ ಮುಖಂಡರನ್ನು ಭೇಟಿ ಮಾಡಿರುವುದರಿಂದ ಅವರು ‘ಕಮಲ’ ಪಕ್ಷ ಸೇರುವುದು ಬಹುತೇಕ ಖಚಿತ ಎನ್ನಬಹುದು.

ನಗರಸಭೆ ‘ಕಮಲ’ ತೆಕ್ಕೆಗೆ: ಅಧ್ಯಕ್ಷ ಸೇರಿದಂತೆ 13 ಸದಸ್ಯರು ಒಟ್ಟಿಗೆ ‘ಕಮಲ’ ಪಾಳಯ ಸೇರಿದರೆ ನಗರಸಭೆಯಲ್ಲಿ ಬಿಜೆಪಿ ಬಲ 25ಕ್ಕೆ ಹೆಚ್ಚಿದಂತಾಗಿ, ಆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಅನುಕೂಲವಾಗುತ್ತದೆ. ನಗರಸಭೆಯಲ್ಲಿ ಸದಸ್ಯರ ಒಟ್ಟು ಬಲಾಬಲ 35 ಇದೆ. ಸದ್ಯ 23 ಕಾಂಗ್ರೆಸ್‌ ಸದಸ್ಯರು (ಪಕ್ಷೇತರ ಸೇರಿ) ಹಾಗೂ ಬಿಜೆಪಿ+ಬಿಎಸ್‌ಆರ್‌ನ 12 ಸದಸ್ಯರಿದ್ದಾರೆ.

ಸದ್ಯ ನಗರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ಆ ಪಕ್ಷದಿಂದ ಯಾರು  ಅಧ್ಯಕ್ಷರಾಗಬೇಕು ಎನ್ನುವುದನ್ನು ಶಾಸಕ ಆನಂದ ಸಿಂಗ್‌ ಅವರೇ ತೀರ್ಮಾನಿಸುತ್ತ ಬಂದಿದ್ದಾರೆ. ಈ ವಿಷಯವನ್ನು ಕಾಂಗ್ರೆಸ್‌ ಸದಸ್ಯರೇ ಅನೇಕ ಬಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

2014ರಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ನಗರಸಭೆಯಲ್ಲಿ ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಬಳಿಕ ನಡೆದ ಒಳ ಒಪ್ಪಂದದಂತೆ ಕಣ್ಣಿ ಉಮಾದೇವಿ 20 ತಿಂಗಳ ವರೆಗೆ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದರು. ನಂತರ ಹತ್ತು ತಿಂಗಳು ರೋಹಿಣಿ ವೆಂಕಟೇಶ್‌ ಅಧ್ಯಕ್ಷೆಯಾಗಿದ್ದರು. ಇವರ ನಂತರ ಅಬ್ದುಲ್‌ ಖದೀರ್‌ ಅವರಿಗೆ ಹತ್ತು ತಿಂಗಳ ವರೆಗೆ ಅಧ್ಯಕ್ಷರಾಗಿ ಮುಂದುವರಿಯಲು ತೀರ್ಮಾನಿಸಿ, ಅವರನ್ನು ಅಧ್ಯಕ್ಷ ಗಾದಿಯಲ್ಲಿ ಕೂರಿಸಲಾಗಿದೆ.

ಮತ್ತೊಂದು ಅವಧಿಗೂ ಖದೀರ್‌ ಅವರನ್ನೇ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಸುವುದಾಗಿ ಶಾಸಕರು ಭರವಸೆ ನೀಡಿರುವುದರಿಂದ ಅವರು ಬಿಜೆಪಿ ಸೇರಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನುಳಿದ 12 ಜನ ಸದಸ್ಯರ ಪೈಕಿ ಕೆಲವರಿಗೆ ಸ್ಥಾಯಿ ಸಮಿತಿಯಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ದೊರೆತಿದೆ ಎನ್ನಲಾಗಿದೆ.

ಕಾಂಗ್ರೆಸ್‌ ಮುಖಂಡರ ಒಣ ಪ್ರತಿಷ್ಠೆಯಿಂದಾಗಿ ಕ್ಷೇತ್ರದಲ್ಲಿ ಪಕ್ಷ ಒಡೆದ ಮನೆಯಂತಾಗಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಬ್ಬೊಬ್ಬರಾಗಿ ಪಕ್ಷ ತೊರೆಯುತ್ತಿದ್ದಾರೆ. ಇದು ವಿರೋಧಿಗಳ ಬಲ ಹೆಚ್ಚಿಸುತ್ತಿದೆ.

ಅಧ್ಯಕ್ಷ, ಸದಸ್ಯರ ನಡೆಗೆ ಕಾಂಗ್ರೆಸ್‌ ಬೇಸರ
‘ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಹೆಸರಿನಲ್ಲಿ ಆರಿಸಿ ಬಂದು ಈಗ ಬಿಜೆಪಿ ಸೇರುತ್ತಿರುವ ನಗರಸಭೆ ಅಧ್ಯಕ್ಷ ಹಾಗೂ 12 ಜನ ಸದಸ್ಯರ ತೀರ್ಮಾನ ಜನವಿರೋಧಿಯಾಗಿದೆ. ಇದು ಜನರಿಗೆ ಮಾಡುವ ದೊಡ್ಡ ಮೋಸ’ ಎಂದು ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ನಿಂಬಗಲ್‌ ಪ್ರತಿಕ್ರಿಯಿಸಿದ್ದಾರೆ.

‘ಕಾಂಗ್ರೆಸ್‌ ಮುಖಂಡರಲ್ಲಿ ಸಮನ್ವಯದ ಕೊರತೆ ಇದೆ. ಪಕ್ಷದ ಕೆಳಹಂತದ ಮುಖಂಡರು, ಕಾರ್ಯಕರ್ತರನ್ನು ಯಾರೊಬ್ಬರೂ ಕೇಳುವವರು ಇಲ್ಲ. ಹೀಗಾಗಿಯೇ ಅನೇಕ ಜನ ಪಕ್ಷ ತೊರೆಯುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಎಲ್ಲ ಸುಳ್ಳು ಸುದ್ದಿ’
ಅಭಿವೃದ್ಧಿ ಹಾಗೂ ಹೆಚ್ಚಿನ ಅನುದಾನ ಮಂಜೂರು ಮಾಡಿಸಿಕೊಳ್ಳುವ ಸಂಬಂಧ ಬೆಂಗಳೂರಿಗೆ ಹೋಗಿದ್ದೆ. ಬಿಜೆಪಿ ಸೇರುತ್ತಿದ್ದೇನೆ ಎನ್ನುವುದು ಸುಳ್ಳು ಸುದ್ದಿ’ ಎಂದು ನಗರಸಭೆ ಅಧ್ಯಕ್ಷ ಅಬ್ದುಲ್‌ ಖದೀರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಸಕ ಆನಂದ ಸಿಂಗ್‌ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಈ ಸಂದರ್ಭದಲ್ಲಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಆರ್‌.ಅಶೋಕ್‌ ಕೂಡ ಇದ್ದರು. ಅವರೊಂದಿಗಿನ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

‘ಬಿಜೆಪಿ ಸೇರುವ ಉದ್ದೇಶದಿಂದಲೇ ಎಲ್ಲ ಸದಸ್ಯರು ಪಕ್ಷದ ಮುಖಂಡರನ್ನು ಭೇಟಿ ಮಾಡಿದ್ದಾರೆ. ಶೀಘ್ರದಲ್ಲೇ ಸಮಾರಂಭ ಆಯೋಜಿಸಿ, ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು’ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ನಗರಸಭೆ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ನಗರಸಭೆಯಲ್ಲಿ ಪಕ್ಷಗಳ ಬಲಾಬಲ
ಕಾಂಗ್ರೆಸ್‌=23
ಬಿಜೆಪಿ+ಬಿಎಸ್‌ಆರ್‌=12
ಒಟ್ಟು ಸದಸ್ಯರು=35

*
ಒಂದುವೇಳೆ ಕಾಂಗ್ರೆಸ್‌ ಚುನಾಯಿತ ಸದಸ್ಯರು ಬಿಜೆಪಿ ಸೇರಿದರೆ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಜರುಗಿಸಲಾಗುವುದು.
–ಬಿ.ವಿ.ಶಿವಯೋಗಿ,
ಅಧ್ಯಕ್ಷ, ಕಾಂಗ್ರೆಸ್‌ ಜಿಲ್ಲಾ ಸಮಿತಿ ಗ್ರಾಮೀಣ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT