ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘‘ಪ್ರತಿಯೊಬ್ಬರಿಗೂ ತಮ್ಮದೇ ಪಿತೂರಿ ಕಥೆಗಳಿರುತ್ತವೆ...

Last Updated 4 ಮಾರ್ಚ್ 2017, 19:30 IST
ಅಕ್ಷರ ಗಾತ್ರ

* ನೀವು ಯಾವಾಗಲೂ ನಿಮ್ಮ ಮಾತಿನಲ್ಲಿ ಬಡವರ ಅದರಲ್ಲೂ ಬಡಮಹಿಳೆಯರ ಒಳ್ಳೆಯತನದ ಬಗ್ಗೆ – ಅವರು ಕೊಟ್ಟ ಸಾಲವನ್ನು ನಿಯತ್ತಿನಿಂದ ಹಿಂದಿರುಗಿಸುವುದರ ಬಗ್ಗೆ ಮಾತಾಡುತ್ತೀರಿ. ಆದರೆ ನೀವು ‘ಗ್ರಾಮೀಣ್’ ಬ್ಯಾಂಕಿನ ಶಿಸ್ತಿನ ಪದ್ಧತಿಗಳನ್ನು ರೂಪಿಸುವುದಕ್ಕೆ ಮುನ್ನ ನಡೆಸಿದ ಪ್ರಯೋಗಗಳಲ್ಲಿ ಇದೇ ಬಡ ಮಹಿಳೆಯರು ಸಾಲವನ್ನು ಮರುಪಾವತಿ ಮಾಡಲಿಲ್ಲ ಎಂದೂ ನಿಮ್ಮ ಆತ್ಮಕತೆಯಲ್ಲಿ ಬರೆದಿದ್ದೀರಿ. ಹಾಗೆಯೇ ‘ಗ್ರಾಮೀಣ್’ ಬ್ಯಾಂಕಿನ ಶಿಸ್ತಿನ ಪದ್ಧತಿಯನ್ನು ಬದಲಾಯಿಸಿದಾಗ ಆ ಬಗ್ಗೆ ಬಂದ ಪುಸ್ತಕವೂ ಪ್ರಾರಂಭವಾಗುವುದು ಸಾಲದ ಮರುಪಾವತಿಯನ್ನು ತಪ್ಪಿಸುವ ಕಥೆಯಿಂದಲೇ. ಹಾಗಿದ್ದಾಗ ಬಡವರೆಲ್ಲರೂ ನಿಜಕ್ಕೂ ಪ್ರಾಮಾಣಿಕರೇ ಅಥವಾ ಅವರು ಪ್ರಾಮಾಣಿಕರಾಗಿ ವರ್ತಿಸಲು ನಾವು ನೀತಿ ನಿಯಮಗಳನ್ನು ರೂಪಿಸಬೇಕೇ? 
ಮೊದಲಿಗೆ ನಾವು ಬಡವರು ವ್ಯವಹಾರವನ್ನು ಸರಳವಾಗಿ ಹೇಗೆ ಮಾಡಬಹುದು ಎನ್ನುವುದನ್ನು ಯೋಚಿಸಬೇಕು. ವ್ಯವಹಾರವು ಕಠಿಣವೂ ಸಂಕೀರ್ಣವೂ ಅವರಿಗೆ ಅರ್ಥವಾಗದಂತೆಯೂ ರೂಪಿಸಿದರೆ ಅವರುಗಳು ಅಂಥ ಸಂಸ್ಥೆಗಳಿಂದ ದೂರವಾಗುತ್ತಾರೆ. ಜಗತ್ತಿನ ಸಂಕೀರ್ಣತೆ ಅವರಿಗೆ ಭಾರವಾಗುತ್ತದೆ. ಹೀಗಾಗಿ ನಾವು ‘ಗ್ರಾಮೀಣ್’ ಸಂಸ್ಥೆಯನ್ನು ಪ್ರಾರಂಭಿಸಿದಾಗ ಯಾವುದೇ ಆದೇಶ–ನಿಯಮಗಳನ್ನು ಬರವಣಿಗೆಗೆ ಇಳಿಸಲೇ ಇಲ್ಲ. ಅವರಿಗೆ ನಿಯಮಗಳು ಸಂಕೀರ್ಣ ಎನ್ನಿಸುತ್ತವೆ. ನಾವು ಬಾಯಿಮಾತಿನಿಂದ ಎಲ್ಲವನ್ನೂ ವಿವರಿಸುತ್ತಿದ್ದೆವು. ಅದು ಗೆದ್ದಿತು.

***

* ಈ ಟೀಕೆಯನ್ನು ನೀವು ಹಿಂದೆಯೂ ಕೇಳಿರಬೇಕು. ಪ್ರತೀ ವಾರದ ನಿಯಮಿತ ಮರುಪಾವತಿಯ ಸಾಲ ಕೊಡುವ ಗ್ರಾಮೀಣ್ ಸಂಸ್ಥೆಯ ನಿಯಮ ಕಟಾವಿನ ವೇಳೆಗೆ ಧನಾರ್ಜನೆಯಾಗುವ ಕೃಷಿಗೆ ಅನ್ವಯಿಸುವುದಿಲ್ಲ. ಹೀಗಾಗಿ ನಿಮ್ಮ ಸಂಸ್ಥೆ ಗ್ರಾಮೀಣವಾದರೂ ಕೃಷಿಗೆ ಒಗ್ಗದ ಸಂಸ್ಥೆಯಾಗಿದೆಯಲ್ಲವೇ?
ನೀವು ಕೃಷಿಯೆಂದಾಗ ಅದು ಫಸಲು ತೆಗೆಯುವ ಬೇಸಾಯಕ್ಕೆ ಸಂಬಂದಿಸಿದ್ದು ಅನ್ನಿಸುತ್ತದೆ. ಬೇಸಾಯವನ್ನು ಹೆಚ್ಚಿನಂಶ ಮಾಡುವುದು ಗಂಡಸರು. ನಾವು ಗಂಡಸರಿಗೆ ಸಾಲವನ್ನು ಕೊಡುವುದಿಲ್ಲವಾದ್ದರಿಂದ ಈ ಪ್ರಶ್ನೆ ನಮ್ಮ ಸಂಸ್ಥೆಗೆ ಸಮರ್ಪಕವಾದುದಲ್ಲ.

***

* ‘ಗ್ರಾಮೀಣ್’ ಸಂಸ್ಥೆಯನ್ನು ಸ್ಥಾಪಿಸಿದಾಗ ನಿಮಗೆ ಶಿಸ್ತೇ ಮುಖ್ಯವಾಗಿತ್ತು. ಪ್ರತೀವಾರವೂ ಸಾಲದ ಮರುಪಾವತಿ ಮತ್ತು ಹಾಗಾಗದಿದ್ದಲ್ಲಿ ಕಠಿಣ ಕ್ರಮ – ಈ ಶಿಸ್ತಿನಿಂದ ನೀವು ಇದ್ದಕ್ಕಿದ್ದಂತೆ ‘ಗ್ರಾಮೀಣ್–2’ ಪದ್ಧತಿಗೆ ಹೋದಿರಿ. ಹೊಸ ಮಾದರಿಯಲ್ಲಿ ಜನ ತಮಗೆ ಬೇಕಾದಾಗ, ಬೇಕಾದ ರೀತಿಯಲ್ಲಿ ಸಾಲವನ್ನು ಮರುಪಾವತಿ ಮಾಡಬಹುದು. ಈ ಶಿಸ್ತಿನ ಪದ್ಧತಿಯಿಂದ ಆಯ್ಕೆಯ ಪದ್ಧತಿಗೆ ನೀವು ಬದಲಾಗಿದ್ದು ಯಾಕೆ?
ಮೊದಲಿಗೆ ನಂಬಿಕೆ ಮತ್ತು ಸಾಲ ಎರಡೂ ಹೇಗೆ ಕೆಲಸ ಮಾಡಬಹುದೆಂದು ನಮಗೆ ಗೊತ್ತಿರಲಿಲ್ಲ. ಹೀಗಾಗಿ ನಾವು ಯಾವುದನ್ನೂ ಸಡಿಲ ಬಿಡದೇ ಶಿಸ್ತಿನಿಂದ ನಮ್ಮ ಕೆಲಸವನ್ನು ನಡೆಸಿದೆವು. ಶಿಸ್ತಿನ ನಿಯಮಬದ್ಧ ಪದ್ಧತಿಯಾದರೆ ಜನರಿಗೆ ತರಬೇತಿ ನೀಡುವುದೂ ಸುಲಭವೇ. ಹೀಗಾಗಿ ನಾವು ಐದು ಜನರ ಗುಂಪುಗಳೇ ಇರಬೇಕೆಂದೂ, ಸಾಲವನ್ನು ಒಂದು ವರ್ಷದಲ್ಲಿ ವಾರದ ಕಂತಿನಲ್ಲಿ ಮರುಪಾವತಿ ಮಾಡಬೇಕೆಂದೂ ನಿಯಮವನ್ನು ಮಾಡಿದೆವು. ಆದರೆ ಆಮೇಲೆ ನಮಗೆ ಮನವರಿಕೆಯಾದದ್ದೇನೆಂದರೆ – ಹೇಗೂ ಅವರು ನಿಯಮಿತವಾಗಿ ಸಾಲವನ್ನು ಮರುಪಾವತಿ ಮಾಡುವುದಾದರೆ, ಅದನ್ನು ಆರು ತಿಂಗಳಲ್ಲಿ ಅಥವಾ ಹನ್ನೆರಡು ತಿಂಗಳಲ್ಲಿ ಮರುಪಾವತಿ ಮಾಡುವುದರಿಂದ ನಮಗೆ ಯಾವ ವ್ಯತ್ಯಾಸವೂ ಆಗುವುದಿಲ್ಲ ಎಂದು ಗೊತ್ತಾಯಿತು. ಹೀಗೆ ನಾವು ಮರುಪಾವತಿಯ ಕಾಲಾವಧಿಯನ್ನು ಮಹಿಳೆಯರೇ ಆಯ್ಕೆ ಮಾಡುವುದಕ್ಕೆ ಬಿಟ್ಟುಬಿಟ್ಟೆವು.

ಹೊಸ ಪದ್ಧತಿ ಹಾಗೇ ರೂಪುಗೊಳ್ಳುತ್ತಾ ಹೋಯಿತು. ನಾನು ಮೊದಲೇ ಹೇಳಿದಹಾಗೆ ಈ ಪದ್ಧತಿಯು ಸುಲಭವಾಗಿಯೂ, ಸರಳವಾಗಿಯೂ ಇರಬೇಕೆನ್ನುವುದೇ ನಮ್ಮ ಆಶಯವಾಗಿತ್ತು. ಕಾಲಾಂತರದಲ್ಲಿ ಅವಧಿಯನ್ನು ಬದಲಾಯಿಸಿದ್ದಲ್ಲದೇ, ಮರುಪಾವತಿಯ ಕಾಲಕ್ಕಿದ್ದ ಮಿಕ್ಕ ಸಮಯಧಾರಿತ ಅಡಚಣೆಗಳನ್ನೂ (ಎಷ್ಟು ಕಿಸ್ತುಗಳು, ಎಷ್ಟು ದಿನಕ್ಕೊಮ್ಮ ಕಂತು ಕಟ್ಟುವುದು) ಇಲ್ಲವಾಗಿಸಿದೆವು. ಇದಕ್ಕೆ ನಾವು ಸಾಕಷ್ಟು ವಿರೋಧ ಎದುರಿಸಬೇಕಾಯಿತು. ಒಮ್ಮೆ ಸಾಲದ ಕಾಲಾವಧಿಯನ್ನು ಒಪ್ಪಿಕೊಂಡನಂತರ ಅದನ್ನು ಪಾಲಿಸದಿದ್ದರೆ ನಾವು ತೊಂದರೆಗೆ ಒಳಗಾಗುತ್ತೇವೆ ಎಂದು ಜನ ಹೇಳಿದರು. ನಾನು ಒಪ್ಪಲಿಲ್ಲ. ಸಾಲವನ್ನು ಪಡೆದಾಕೆ ತನಗೆ ಬೇಕಾದಾಗ ಅದರ ಮರುಪಾವತಿಯ ಕಾಲಾವಧಿಯನ್ನು ಬದಲಾಯಿಸಲು ಆಕೆಗೆ ಸ್ವಾತಂತ್ರ್ಯವಿರಬೇಕು ಎಂದು ವಾದಿಸಿದೆ. ನನ್ನ ವಾದ ಇಂತಿತ್ತು – ನಿಯಮಿತವಾಗಿ ಆಕೆ ಸಾಲದ ಮರುಪಾವತಿ ಮಾಡುತ್ತಿದ್ದಾಳೆ, ಆಕೆಗೆ ತೊಂದರೆಯಾದಾಗ ಅದನ್ನು ಬದಲಾಯಿಸುವ ಸ್ವಾತಂತ್ರ ಸಾಲ ತೆಗೆದುಕೊಂಡ ಮಹಿಳೆಗೆ ಇರಬೇಕು. ಆಕೆ ಯಾವ ಒತ್ತಡಕ್ಕೂ ಒಳಗಾಗಬಾರದು. ಈಗ ತಂತ್ರಜ್ಞಾನವೂ ಇದೆ, ಕಂಪ್ಯೂಟರುಗಳೂ ಇವೆ. ಹೀಗಾಗಿ ಇದು ಸರಳವೇ ಆಗಿರಬೇಕಲ್ಲ! ನಾವು ಕಂಪ್ಯೂಟರಿನಲ್ಲಿ ಅವಳ ಮರುಪಾವತಿಯ ದಿನಾಂಕವನ್ನು ಬದಲಾಯಿಸಬೇಕು ಅಷ್ಟೇ. ಆನಂತರ ಎಲ್ಲವೂ ಸರಿಯಾಗಿಯೇ ಇರುತ್ತೆ.

(ಮುಹಮ್ಮದ್ ಯೂನಸ್ ಅವರೊಂದಿಗೆ ಸಂದರ್ಶಕ ಎಂ.ಎಸ್. ಶ್ರೀರಾಮ್)

***

* ಈ ಬದಲಾವಣೆಯನ್ನು ಸಂಸ್ಥೆಯಲ್ಲಿ ತರೋದು ಎಷ್ಟು ಕಷ್ಟವಾಯಿತು? ಇದು ನಮಗೆಲ್ಲಾ ತಿಳಿದ ಬ್ಯಾಂಕಿಂಗ್ ನಿಯಮಗಳಿಗೆ ತದ್ವಿರುದ್ಧವಾಗಿದೆಯಲ್ಲಾ.
ಹೌದು. ಇತರೆ ಬ್ಯಾಂಕರುಗಳು ಇದನ್ನು ಅನುಮಾನದಿಂದಲೇ ನೋಡಿದರು. ಆದರೆ ನಾವು ಬ್ಯಾಂಕಿಂಗ್ ನಿಯಮಾವಳಿಯನ್ನು ಗೌರವಿಸಲು ಈ ಸಾಲಗಳಿಗೆ ತಕ್ಕ ಧನವನ್ನು ಲಾಭವನ್ನಾಗಿ ಗುರುತಿಸದೇ ಕಾಪಿರಿಸಿದೆವು. ಬ್ಯಾಂಕಿಂಗ್ ನಿಯಮಾವಳಿಯೇನಿದೆಯೋ ಅದನ್ನೆಲ್ಲಾ ನಾವು ನಮ್ಮ ಲೆಕ್ಕಪತ್ರದಲ್ಲಿ ಸಂಪೂರ್ಣವಾಗಿ ಪಾಲಿಸುತ್ತೇವೆ. ನಾವು ನಿಧಿನಿಕ್ಷೇಪಗಳಿಗೆಂದು ಕಾಪಿಡುವ ಮೊತ್ತ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿಯೇ ಅತ್ಯಂತ ಉದಾರವಾದದ್ದು. ನಮ್ಮ ಗ್ರಾಹಕರು ಹೇಗೂ ಸಾಲಮರುಪಾವತಿ ಮಾಡಿಯೇ ಮಾಡುತ್ತಾರಾದ್ದರಿಂದ ಆ ದುಡ್ಡನ್ನು ನಾವು ಈಗ ಲಾಭವೆಂದು ಪರಿಗಣಿಸದಿದ್ದರೂ ಕಡೆಗೆ ನಮ್ಮ ಬೊಕ್ಕಸಕ್ಕೇ ಬರುತ್ತದೆ. ಹೀಗಾಗಿ ಅದರಲ್ಲಿ ನನಗೆ ತಪ್ಪೇನೂ ಕಾಣುವುದಿಲ್ಲ.

***

* ನೀವು ಹಳೆಯ ಪದ್ಧತಿಯಿಂದ ಹೊಸ ಪದ್ಧತಿಯತ್ತ ಹೋದಾಗ ಗುಂಪುಗಳನ್ನು ಹಾಗೇ ಇರಿಸಿದಿರಿ.
ಹೌದು. ಪ್ರತೀ ವಾರ ಗುಂಪುಗಳು ಒಂದೆಡೆ ಸೇರುವುದನ್ನು ನಾವು ಹಾಗೇ ಉಳಿಸಿಕೊಂಡಿದ್ದೇವೆ. ಮಿಕ್ಕ ನಿಯಮಗಳೆಲ್ಲವೂ ಇವೆ. ನಾವು ಎಷ್ಟೋ ಜಾಗಗಳಲ್ಲಿ ಮುಖಾಮುಖಿಯಾಗುತ್ತೇವೆ, ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತೇವಾದ್ದರಿಂದ ಎಲ್ಲರನ್ನೂ ಅರ್ಥಮಾಡಿಕೊಳ್ಳಲು ಸಾಧ್ಯ. ಯಂತ್ರ, ತಂತ್ರಾಂಶಗಳು ಸಾಮಾಜಿಕ ಸಂದರ್ಭವನ್ನು ಕಿತ್ತೊಗೆಯಬಹುದು. ಅದು ನಮ್ಮ ಚಳವಳಿಗೇ ಒಂದು ದೊಡ್ಡ ಧಕ್ಕೆಯನ್ನುಂಟು ಮಾಡಿದಂತೆ. ನಮ್ಮದು ಸಾಮಾಜಿಕ ಚಳವಳಿ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದು ಕೇವಲ ಸಾಲದ ಕಾರ್ಯಕ್ರಮದಷ್ಟು ಸರಳವಲ್ಲ.

***

* ಹಿಂದೆ ನಾನು ಕೆನಡಾದಲ್ಲಿ ಫ್ರಾಂಟನ್ ಎನ್ನುವ ಹಳ್ಳಿಗೆ ಭೇಟಿನೀಡಿದ್ದೆ. ಅಲ್ಲಿನ ಗ್ರಾಹಕರನ್ನು ನಗದಿನ ಕೌಂಟರಿನಿಂದ ಅಟ್ಟಿ ಎಟಿಎಂ ಉಪಯೋಗಿಸುವುದನ್ನು ಹೇಳಿಕೊಡಬೇಕೆಂದು ಬ್ಯಾಂಕಿನ ಮ್ಯಾನೇಜರ್‌ಗೆ ಅವನ ಉನ್ನತಾಧಿಕಾರಿಗಳು ಹೇಳಿದ್ದರಂತೆ. ಆದರೆ ಅಲ್ಲಿಗೆ ಬಂದ ಗ್ರಾಹಕರೆಲ್ಲರೂ, ‘ನಮಗೇನೂ ಸಮಯಾಭಾವವಿಲ್ಲ, ನಾವು ಕೌಂಟರಿನಲ್ಲೇ ಕಾಯುತ್ತೇವೆ, ಇಲ್ಲಿ ನಿನ್ನ ಜೊತೆ ಹರಟೆಯೂ ಕೊಚ್ಚಬಹುದು, ಆದ್ದರಿಂದ ಎಟಿಎಂ ಬೇಡ’ ಅಂದರಂತೆ.
ಜನರ ಸಂಪರ್ಕ, ಜನರೊಂದಿಗೆ ಒಡನಾಡುವುದು ಮುಖ್ಯ. ಅಮೆರಿಕದಲ್ಲಿ ನಾವು ‘ಗ್ರಾಮೀಣ್’ ಪ್ರಾರಂಭಿಸಿದಾಗಲೂ ನಮಗೆ ಈ ಅನುಭವವಾಯಿತು. ಅಲ್ಲಿಯವರೆಗೆ ತಮ್ಮ ಪಕ್ಕದಮನೆಯವರು ಯಾರೆಂದೂ ತಿಳಿಯದೇ ತಮ್ಮಷ್ಟಕ್ಕೆ ತಾವು ತಮ್ಮ ಕುಶಲವನ್ನೇ ನೋಡಿಕೊಳ್ಳುತ್ತಿದ್ದ ಮಹಿಳೆಯರಿಗೆ ನಮ್ಮ ನಿಯಮಗಳು ಹೊಸ ಅನುಭವ ನೀಡಿದವು. ಇದ್ದಕ್ಕಿದ್ದ ಹಾಗೆ ‘ಗ್ರಾಮೀಣ್’ ಬ್ಯಾಂಕಿನ ಕಾರ್ಯಕ್ರಮದಡಿಯಲ್ಲಿ ಅವರು ಒಬ್ಬರನ್ನೊಬ್ಬರು ಭೇಟಿಯಾಗಬೇಕಾಯಿತು. ಗುಂಪು ಏರ್ಪಾಟು ಮಾಡಬೇಕಾಯಿತು. ‘ನನಗೆ ಯಾರೂ ಗೊತ್ತಿಲ್ಲವಾದರೆ ಯಾವ ಗುಂಪನ್ನು ಸೇರಲಿ?’ ಎಂದವರಿಗೆ – ‘ಪಕ್ಕದ ಮನೆಯವರ ಕದ ತಟ್ಟು. ಆಕೆಗೆ ನಿನ್ನನ್ನು ನಮಗೆ ಪರಿಚಯ ಮಾಡಿಸಬಲ್ಲವರು ಯಾರಾದರೂ ಗೊತ್ತಿರಬಹುದು. ಅಥವಾ ನೀನೇ ನಿನ್ನ ಪರಿಚಯ ಹೇಳಿ ನಾನೂ ಸಾಲದ ಗುಂಪನ್ನು ಸೇರಲೇ ಎಂದು ಕೇಳು. ಆಗ ಆಕೆಗೂ ಇದೇ ಸಮಸ್ಯೆಯಿದೆಯೆಂದು ತಿಳಿದುಬರುತ್ತದೆ’ ಎನ್ನುವ ಉತ್ತರ ನೀಡಿದೆವು. ನಾವು ಏನೇ ಬದಲಾವಣೆ ಮಾಡಿದರೂ ವಾರಕ್ಕೊಮ್ಮೆ ಕೇಂದ್ರದಲ್ಲಿ ನಡೆಯುವ ಗುಂಪಿನ ಸಭೆಯನ್ನು ನಾವು ಬಿಟ್ಟುಕೊಡುವುದಿಲ್ಲ. ಖಂಡಿತವಾಗಿಯೂ ಅದರ ಬಗ್ಗೆ ಯಾವ ಚರ್ಚೆಗೂ ಆಸ್ಪದವಿಲ್ಲ.

***

* ಅದರ ಬಗ್ಗೆ ಯಾವ ರಾಜಿಯೂ ಇಲ್ಲ ಅಂದಂತಾಯಿತು...
ಅಮೆರಿಕದಲ್ಲೂ ನಮಗೆ ಜನ ಹೇಳಿದರು – ‘ನೀವು ಪ್ರಪಂಚದ ಇತರೆ ಕ್ಷೇತ್ರದಲ್ಲಿ ಏನೇ ಮಾಡಿ, ಆದರ ಅಮೆರಿಕದಲ್ಲಿ ಗುಂಪಿನ ಸಭೆ ಸೇರಿಸುವುದು ಸಾಧ್ಯವಿಲ್ಲ’ ಅಂದರು. ಇಲ್ಲಿ ಜನರು ವ್ಯಕ್ತಿಕೇಂದ್ರಿತವಾಗಿರುತ್ತಾರೆ ಎಂದೆಲ್ಲಾ ಹೇಳಿದರು. ಎಲ್ಲವೂ ಉಲ್ಟಾ ಆಯಿತು. ಅಲ್ಲಿನ ನಮ್ಮ ಸದಸ್ಯರಿಗೂ ಗುಂಪಿನಲ್ಲಿ ತಮ್ಮ ಗೆಳೆಯರನ್ನು ಭೇಟಿ ಮಾಡುವ ಆಸಕ್ತಿಯಿದೆ. ನಾವೇ, ತಿಂಗಳಿಗೊಮ್ಮೆ ಸೇರೋಣ ಅಂದರೆ ಅವರೆಲ್ಲಾ “ಬೇಡ ಬೇಡ, ವಾರಕ್ಕೊಮ್ಮೆ ಸೇರುವುದೇ ಚೆನ್ನಾಗಿದೆ” ಅಂದರು.

***

* ಹಾಗೆ ನೋಡಿದರೆ ಗ್ರಾಮೀಣ ಪದ್ಧತಿಯ ಅಂತರಾಳದಲ್ಲಿ ಇರೋದು ಸಹಕಾರ ಸಿದ್ಧಾಂತವೇ. ನಿಮ್ಮ ಇಡುವಳಿ ಇಟ್ಟವರು ಸಾಲ ಪಡೆಯುವ ಸದಸ್ಯರೇ ಅಲ್ಲವೇ. ಆದರೆ ಇದು ಸಹಕಾರ ಸೂತ್ರದ ಮೇಲೆ ನಡೆದರೂ ನೀವು ಇದನ್ನು ಭಿನ್ನವಾಗಿ ರೂಪಿಸಿದ್ದೀರಿ. ಇತರೆ ಜಾಗದಲ್ಲಿರುವ ಸಹಕಾರ ಚಳವಳಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಸಹಕಾರ ಅನ್ನುವುದು ಒಳ್ಳೆಯ ಸಿದ್ಧಾಂತವೇ ಆದರೂ, ಅದು ಸರಿಯಾಗಿ ನಿಂತಿಲ್ಲ. ಕುಸಿದುಹೋಗಿದೆ. ಕೆಲವೇ ಜನರ ಕೈಯಲ್ಲಿ ಉಳಿದಿದ್ದರಿಂದ ಕುಸಿದುಹೋಗಿದೆ. ಒಂದು ರೀತಿಯಿಂದ ಎಲ್ಲರನ್ನೂ ಒಳಗೊಳ್ಳದೇ ಇರುವುದರಿಂದ, ಹೊಸ ಐಡಿಯಾಗಳನ್ನು ಗ್ರಹಿಸುವ ಶಕ್ತಿ ಸಾಮಾನ್ಯತಃ ಸಹಕಾರ ಕ್ಷೇತ್ರಕ್ಕೆ ಇಲ್ಲ. ಹೊಸರೀತಿಯ ಒಳಗೊಳ್ಳುವಿಕೆ, ತಂತ್ರಜ್ಞಾನ, ಹೊಸ ವಿಧಾನಗಳು ಹೆಚ್ಚು ಜನರನ್ನು ಒಳಗೊಳ್ಳುವುದರಿಂದ ಬರುತ್ತದೆ. 200 ಜನ ಸದಸ್ಯರಿದ್ದರೆ ಸಹಕಾರಿಗಳು ನಿಧಾನವಾಗಿ 250 ಸದಸ್ಯರ ಸಂಖ್ಯೆಯನ್ನು ತಲುಪುತ್ತಾರೆ. ಅದೇ ಕಾಲದಲ್ಲಿ ನಾವು 400 ಜನರನ್ನು ಮುಟ್ಟಿರುತ್ತೇವೆ.

***

* ನೀವಂತೂ ಒಂದು ಹೊಸ ಸಂಸ್ಥೆಯನ್ನು ಹುಟ್ಟು ಹಾಕಿ ಬಡವರ ಆರ್ಥಿಕ ಅವಶ್ಯಕತೆಗಳನ್ನು ನೋಡಿಕೊಂಡಿರಿ. ಆದರೆ ಅದನ್ನು ಬೇರೆ ರೀತಿಯಿಂದಲೂ ಸಾಧಿಸಲು ಸಾಧ್ಯವೇ – ಉದಾಹರಣೆಗೆ ನಮ್ಮಲ್ಲಿ ಕೃಷಿ, ಮಹಿಳೆಯರು, ಅಲ್ಪಸಂಖ್ಯಾತರಿಗೆ ವಿಶೇಷವಾಗಿ (ಆದ್ಯತಾ ವಿಭಾಗಕ್ಕೆ) ಸಾಲವನ್ನು ಕಡ್ಡಾಯವಾಗಿ ನೀಡಬೇಕು ಎನ್ನುವ ನಿಯಮವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕುಗಳು ಕಡ್ಡಾಯವಾಗಿ ಶಾಖೆಗಳನ್ನು ತೆಗೆಯಬೇಕೆಂಬ ನಿಯಮವೂ ಇದೆ. ‘ಗ್ರಾಮೀಣ್’ ರೀತಿಯ ವ್ಯವಸ್ಥೆಗೆ ಬೇರೆಯೇ ಕಾನೂನಿನ ಚೌಕಟ್ಟು ಬೇಕೆಂದು ನೀವು ಹಲವು ಬಾರಿ ಹೇಳಿದ್ದೀರಿ. ಆದರೆ ನಮ್ಮ ಮುಖ್ಯಧಾರೆಯಲ್ಲಿರುವ ಬ್ಯಾಂಕುಗಳೂ ಈ ಕೆಲಸವನ್ನು ಸರ್ಕಾರ ಹೇರುವ ನಿಯಮಾನುಸಾರ ಸಾಧಿಸಲು ಸಾಧ್ಯವಲ್ಲವೇ?
ನೀವು ಒಂದು ಸಂಸ್ಥೆಯನ್ನು ಬ್ಯಾಂಕೆಂದು ಕರೆದ ಕೂಡಲೇ ಅದು ಈ ಕೆಲಸಗಳನ್ನು ಮಾಡುವುದನ್ನು ಬಿಟ್ಟುಬಿಡುತ್ತದೆ. ಯಾರಾದರೊಬ್ಬರು ಈ ಕೆಲಸವನ್ನು ಮಾಡಬೇಕೆಂದು ತಿವಿದು ನೆನಪು ಮಾಡಬೇಕು. ಹೀಗೆ ಒಮ್ಮೆ ತಿವಿದು ಒಂದು ಕರ್ತವ್ಯವನ್ನು ನೆನಪು ಮಾಡಿ. ಆನಂತರ ಮತ್ತೊಂದು ಬಾರಿ ತಿವಿಯಿರಿ. ಇದಲ್ಲಾ ಚಿಲ್ಲರೆ ಚಿಲ್ಲರೆಯಾಗಿ ನಡೆಯುತ್ತದೆ. ಆದರಿದು ಜನರಿಗೆ ಉಪಯೋಗವಾಗುವ ಹಾಗೆ ಕೆಲಸ ಮಾಡಬೇಕೆಂದರೆ ಬೇರೊಂದು ರೀತಿಯಲ್ಲೇ ರೂಪಿಸಬೇಕು. ಈ ನಿಯಮಗಳು ಪ್ರಭಾವಿಯಾಗಿ ಕೆಲಸಮಾಡುವುದಿಲ್ಲ.

***

* ನಾನು ಈ ಪ್ರಶ್ನೆಯನ್ನು ಬೇರೆ ರೀತಿಯಿಂದ ಕೇಳುತ್ತೇನೆ. ಮೊನ್ನೆ ಮಧ್ಯಾಹ್ನ ನೀವು ‘ಗ್ರಾಮೀಣ್ ದಾನೋನ್’ ಸಾಮಾಜಿಕ ವ್ಯಾಪಾರದ ಬಗ್ಗೆ ಮಾತಾಡುತ್ತಿದ್ದಿರಿ. ಆಗ ನೀವು ಹೇಳಿದ್ದು ಇದು – “ಬಡವರಿಗೆ ಪೌಷ್ಟಿಕಾಂಶ ತುಂಬಿರುವ ಮೊಸರನ್ನು ನಾನು ನಿಗದಿತ ಬೆಲೆಗೆ ಮಾರುತ್ತೇನೆ, ಅದರಿಂದ ನಷ್ಟವಾಗುವುದಾದರೆ ಅದೇ ಮೊಸರನ್ನು ಭಿನ್ನವಾಗಿ ಪ್ಯಾಕಿಂಗ್ ಮಾಡಿ ಸೂಪರ್ ಮಾರ್ಕೆಟ್‌ನಲ್ಲಿ ಶ್ರೀಮಂತರಿಗೆ ಮಾರಾಟ ಮಾಡಿ ನಷ್ಟವನ್ನು ತುಂಬಿಕೊಳ್ಳುತ್ತೇನೆ”. ಅದನ್ನೇ ತಿರುಚಿ ನಾನು ಹೇಳಿದರೆ – ನೀವು ಸೂಪರ್ ಮಾರ್ಕೆಟ್‌ನಲ್ಲಿ ಲಾಭವನ್ನು ಈಗಾಗಲೇ ಗಳಿಸುತ್ತಿದ್ದೀರಿ, ಈಗ ಬಡವರಿಗೆ ಒಂದು ನಿಗದಿತ ಬೆಲೆಗೆ ಮಾರಲೇಬೇಕೆಂದು ಉಲ್ಟಾ ನಿಯಮ ಮಾಡಿದರೆ ಯಾವುದು ಮೊದಲು – ಯಾವುದು ನಂತರ ಅನ್ನುವ ವಿವರವನ್ನು ಬಿಟ್ಟರೆ, ನೀವು ಹೇಳುತ್ತಿರುವುದಕ್ಕೂ ನಾನು ಪ್ರಸ್ತಾಪಿಸುತ್ತಿರುವುದಕ್ಕೂ ಮೂಲದಲ್ಲಿ ವ್ಯತ್ಯಾಸವಿಲ್ಲ. ಸಾಲದ ವಿಷಯಕ್ಕೂ ಈ ತತ್ವ ಯಾಕಾಗಬಾರದು?
ರಾಷ್ಟ್ರಮಟ್ಟದ ಅರ್ಥವ್ಯವಸ್ಥೆಯಲ್ಲಿ ಇದನ್ನು ನೋಡಿದಾಗ ಅದರ ಸಂಕೀರ್ಣತೆ ನಿಮಗೆ ಅರ್ಥವಾಗುತ್ತದೆ. ಅದರಲ್ಲಿ ಯಾವುದೂ ಖಾತ್ರಿಯಿಲ್ಲ. ಯಾಕೆಂದರೆ, ಇದನ್ನೆಲ್ಲಾ ನೀವು ನಿಮ್ಮ ಲೆಕ್ಕದ ಪುಸ್ತಕದೊಳಗೇ ಮಾಡಿಕೊಳ್ಳುತ್ತೀರ. ಅಲ್ಲೇ ಏನಾದರು ಅಡ್ಜೆಸ್ಟ್‌ಮೆಂಟ್ ಆಗುತ್ತೆ. ಒಂದೇ ಸೂಪರ್ ಮಾರ್ಕೆಟ್‌ನಲ್ಲಿ ಬಡವರ–ಶ್ರೀಮಂತರ ಭಿನ್ನ ವಿಭಾಗಗಳನ್ನು ತೆರೆಯುವ ಮಾತದು. ಅದು ಗೆಲ್ಲುವುದಿಲ್ಲ.

***

* ಜಯಮಹಲ್ಲಿನಲ್ಲಿ ಮರ ಕತ್ತರಿಸಿ ಬ್ರೆಜಿಲ್‌ನ ಕಾಡಿನಲ್ಲಿ ಗಿಡ ನೆಟ್ಟು ಪರಿಸರದ ಸಮತೋಲನವನ್ನು ಕಾಪಾಡುತ್ತೇವೆ ಎನ್ನುವ ಹಾಗೆ ಈ ಬಾಬತ್ತು ಅನ್ನುತ್ತಿದ್ದೀರಿ. ಇದರಲ್ಲಿ ನಿಮಗೆ ನಿರಂತರತೆಯ ತೊಂದರೆಯಿದೆ ಅನ್ನಿಸುತ್ತಿದೆಯೇ? ಹಾಗೆ ನೋಡಿದರೆ ಪ್ರಾದೇಶಿಕ ಸಮತೋಲನ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲೂ ಇಲ್ಲ. ಈ ರೀತಿಯ ಕೋಟಾಗಳು ಮಾರುಕಟ್ಟೆಯಿರುವ ಜಾಗಗಳಿಗೇ ಹೋಗುತ್ತಿವೆಯೇ ಹೊರತು, ಬೇಕಾದ ಜಾಗಕ್ಕೆ ಹೋಗುತ್ತಿಲ್ಲ.
ಹೌದು, ಇದು ನಿರಂತರತೆಯ ಪ್ರಶ್ನೆಯೇ. ಹೀಗೆ ಮಾಡುವುದು ಮಹಾಪರಾಧ. ನೀವು ಯಾವ ಭಾಗದ ಸಮತೋಲನ ಕಾಪಾಡುತ್ತಿದ್ದೀರಿ ಎನ್ನುವುದು ತಿಳಿಯುವುದೇ ಇಲ್ಲ.

***

* ನಿಯಂತ್ರಣದ ವಿಷಯದಲ್ಲಿ ಮಾತನಾಡುತ್ತಾ ನೀವು ಆರ್ಥಿಕ ಜಗತ್ತಿಗೆ ಇಬ್ಬರು ಭಿನ್ನ ಅಂಪೈರುಗಳು ಬೇಕು ಎಂದು ಹೇಳಿದ್ದಿರಿ. ಬ್ಯಾಂಕುಗಳನ್ನು ನಿಯಂತ್ರಿಸಲು ಒಬ್ಬರು, ಮೈಕ್ರೋ ಫೈನಾನ್ಸ್‌ ನಿಯಂತ್ರಿಸಲು ಮತ್ತೊಬ್ಬ ಅಂಪೈರು ಎಂದಿದ್ದಿರಿ.
ಹೌದು. ಇಬ್ಬರು ಅಂಪೈರುಗಳು. ಮೈಕ್ರೋ ಫೈನಾನ್ಸ್‌ಗೆ ಬೇರೆಯೇ ನಿಯಂತ್ರಕರು ಬೇಕು.

***

* ಸಡಿಲವಾದ, ನಮ್ಮ ಲೋಕದ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಬಲ್ಲ ನಿಯಂತ್ರಕರು ಎನ್ನುತ್ತೀರಾ?
ಅಷ್ಟೇ ಅಲ್ಲ, ನಿಯಂತ್ರಕರು ಬೆಳವಣಿಗೆಯನ್ನೂ ಹೊಸತನವನ್ನೂ ಪ್ರೋತ್ಸಾಹಿಸಬೇಕು. ಎಲ್ಲವನ್ನೂ ತಡೆಯುವುದೇ ನಿಯಂತ್ರಕರ ಕೆಲಸವಲ್ಲ. ಸಾಮಾನ್ಯವಾಗಿ “ನೀವು ಇದನ್ನು ಮಾಡಬಾರದು, ಇದನ್ನು ಮಾಡಕೂಡದು” ಅಂತ ಹೇಳುವುದಕ್ಕೆ ಬದಲು – “ಬೇಕಾದರೆ ಈ ಕೆಲಸವನ್ನು ಮಾಡು, ಏನಾದರೂ ಸಹಕಾರ ಬೇಕಿದ್ದರೆ ನಾವು ಕೊಡುತ್ತೇವೆ”. ಹೀಗೆ ಹೇಳುವವರು ಬೇಕಿದ್ದಾರೆ. ಬೆನ್ನು ತಟ್ಟಿ ಒಳ್ಳೆಯ ಕೆಲಸವನ್ನು ಗುರುತಿಸುವ ಮಾತನ್ನು ಆಡುವ ನಿಯಂತ್ರಕರು ಬೇಕಾಗಿದ್ದಾರೆ. ಮಾಡಿದ್ದನ್ನೆಲ್ಲ ಕೆಂಗಣ್ಣಿನಿಂದ ನೋಡುವವರು ನಮಗೆ ಬೇಕಿಲ್ಲ.

***

* ನೀವು ‘ಗ್ರಾಮೀಣ್’ ಸಂಸ್ಥೆಯನ್ನು ಸ್ಥಾಪಿಸಿದಾಗ ಎದುರಿಸಿದ ಸವಾಲುಗಳೇನು?
ಆರಂಭದ ದಿನಗಳು ಬಹಳ ಕಷ್ಟಗಳಿಂದ ಕೂಡಿದ್ದುವು. ಎಲ್ಲ ಜನರೂ ಯಾವಯಾವುದೋ ಆಪಾದನೆಗಳನ್ನು ನಮ್ಮ ಮೇಲೆ ಹೇರುತ್ತಿದ್ದರು. ಮುಲ್ಲಾಗಳೂ ನನಗೆ ತೊಂದರೆಯನ್ನು ಕೊಟ್ಟರು. ರಾಜಕಾರಣಿಗಳೂ ನಮ್ಮನ್ನು ಬಿಡಲಿಲ್ಲ. ಅದೂ ಸಾಲದೆಂಬಂತೆ ಎಡಪಂಥೀಯರೂ ನಾವು ಬಂಡವಾಳಶಾಹಿತನವನ್ನು ದೇಶಕ್ಕೆ ಆಮದು ಮಾಡುತ್ತಿದ್ದೇವೆಂದು – ಅದರಲ್ಲೂ ಈ ಬಂಡವಾಳಶಾಹಿ ಗ್ರಾಮದ ಮೂಲಕ್ಕೇ ಬರುತ್ತಿದೆ ಎಂದು ವಿರೋಧಿಸುತ್ತಿದ್ದರು. ನನಗೆ ಲಾಭದ ಅಮಲು ಹತ್ತಿ ಅದರ ದಾಸನಾಗುತ್ತೇನೆಂದು ಹೇಳಿದರು. ನಾನು ‘ನೀವೇ ನಿರ್ಧರಿಸಿ’ ಎಂದು ಬಿಟ್ಟುಬಿಟ್ಟೆ. 200 ಗ್ರಾಮಗಳಲ್ಲಿ ನಾವು ಕೆಲಸ ಮಾಡುತ್ತಿದ್ದಾಗಲೇ ಇಷ್ಟು ಕೂಗಾಡುತ್ತಿದ್ದರು. ‘ನಮ್ಮ ದೇಶದಲ್ಲಿ ಇನ್ನೂ 80,000 ಗ್ರಾಮಗಳನ್ನು ನಿಮಗಾಗಿ ಬಿಟ್ಟಿದ್ದೇವೆ. ನಮ್ಮನ್ನು ಟೀಕಿಸುವುದಕ್ಕೆ ಬದಲು ಅಲ್ಲೀ ಕ್ರಾಂತಿ ತನ್ನಿ’ ಎನ್ನುತ್ತಿದ್ದೆ.

***

* ನೊಬೆಲ್ ಪುರಸ್ಕಾರ ಬಂದನಂತರ ನಿಮ್ಮ ಜೀವನದಲ್ಲಾದ ಬದಲಾವಣೆಯೇನು?
ಮೊದಲಿಗೆ ಪ್ರತೀ ವರ್ಷ ಜನ ಈ ಬಗ್ಗೆ ಮಾತಾಡುತ್ತಿದ್ದರು. ‘ನಿನಗೆ ಈ ಬಹುಮಾನ ಬರುತ್ತೆ’ ಅಂತ ಬಹಳ ಜನ ಹೇಳುತ್ತಿದ್ದರು. ನಂತರ ನನಗೆ ಬರಲಿಲ್ಲ ಅನ್ನುವುದೇ ಒಂದು ಕೊರತೆ ಎನ್ನುವಂತೆ ಮಾತಾಡುತ್ತಿದ್ದರು. ನಾನು ಯಾವುದೇ ಮಾತಾಡದಿದ್ದಾಗಲೂ, ನನಗೆ ನೊಬೆಲ್ ಬಾರದೇ ಇರುವುದು ನನ್ನದೇ ತಪ್ಪು ಅನ್ನುವ ಹಾಗೆ ಮಾತಾಡುತ್ತಿದ್ದರು. ಆಮೇಲೆ ಈ ವಿಷಯವನ್ನು ಎಲ್ಲರೂ ಮರೆತಿದ್ದಾರೆ ಎಂದುಕೊಳ್ಳುವ ಕಾಲಕ್ಕೆ ನನಗಿದು ಇದ್ದಕ್ಕಿದ್ದ ಹಾಗೆ ದಕ್ಕಿತು! ಅಲ್ಲಿದ್ದ ನಮ್ಮವರಿಗೆ ಉತ್ಸಾಹವೂ ಹೆಚ್ಚಿತು. ಬಾಂಗ್ಲಾದೇಶದಲ್ಲಲ್ಲದೇ ಪಶ್ಚಿಮ ಬಂಗಾಳದಲ್ಲೂ ಉತ್ಸಾಹವಿತ್ತು. ಒಂದು ಘನತೆ. ಇದರಿಂದ ನಮ್ಮ ಗ್ರಾಮೀಣ್ ಸಂಸ್ಥೆ ಹಾಗೂ ಮೈಕ್ರೋಫೈನಾನ್ಸ್ ಮನೆಮಾತಾಯಿತು. ನನ್ನ ಜೊತೆಗೇ ಗ್ರಾಮೀಣ್ ಬ್ಯಾಂಕಿಗೂ ಈ ಬಹುಮಾನ ಸಂದಿತ್ತು. ನಮ್ಮ ಕೆಲಸವನ್ನು ವಿವರಿಸುವುದಕ್ಕೆ, ಹಬ್ಬುವುದಕ್ಕೆ ಇದು ತುಂಬಾ ಸಹಾಯ ಮಾಡಿತು.

***

* ನಿಮ್ಮ ಮಾತೂ ಮೈಕ್ರೋ ಫೈನಾನ್ಸ್ ದಾಟಿ ಸಾಮಾಜಿಕ ವ್ಯಾಪಾರದತ್ತ ತಿರುಗಿತು ಅಲ್ಲವೇ?
ನನ್ನ ನೊಬೆಲ್ ಭಾಷಣದ ಕಾರಣವಾಗಿ ಹಾಗಾಯಿತು. ನನ್ನ ಭಾಷಣವನ್ನು ಈ ಸಾಮಾಜಿಕ ವ್ಯಾಪಾರದ ಮೇಲೇ ಕೇಂದ್ರೀಕರಿಸಿದ್ದೆ. ಇದೊಂದು ವಿಚಿತ್ರ. ನೊಬೆಲ್ ಭಾಷಣಗಳನ್ನು ತುಂಬಾ ಜಾಗರೂಕವಾಗಿ ಜನ ಓದುತ್ತಾರೆ. ಅದರಲ್ಲೂ ಯುವಕರು. ಹೀಗಾಗಿ ನಾನು ಹೇಳಿದ್ದರ ಬಗೆಗಿನ ಅರಿವು ಹೆಚ್ಚಾಗುತ್ತಾ ಹೋಯಿತು. ನಾನು ಭಾಷಣದಲ್ಲಿ ಈ ಮಾತನ್ನು ತೆಗೆದದ್ದರಿಂದ ಎಲ್ಲರೂ “ಓ, ಇವನು ನೊಬೆಲ್ ಬಂದಮೇಲೆ ಸಾಮಾಜಿಕ ವ್ಯಾಪಾರದ ಬಗ್ಗೆ ಮಾತಾಡುತ್ತಿದ್ದಾನೆ” ಅನ್ನೋ ಮಾತು ಬಂತು. ಮೊದಲಿನಿಂದಲೂ ನಾನು ಮಾಡಿದ್ದು ಸಾಮಾಜಿಕ ವ್ಯಾಪಾರವನ್ನೇ. ನಾನು ಮೈಕ್ರೋ ಫೈನಾನ್ಸ್‌ನಲ್ಲಿ ಮಾಡಿದ್ದನ್ನೇ ಸೌರಶಕ್ತಿಯ ವ್ಯಾಪಾರದಲ್ಲೂ ಮಾಡಿದ್ದೆ. ಎರಡರ ಸಾಫಲ್ಯ ಭಾವವೂ ಒಂದೇ! ಹೀಗಾಗಿ ಸಾಮಾಜಿಕ ವ್ಯಾಪಾರ ನಮಗೆ ಒಗ್ಗಿಬಂದಿತ್ತು. ಆದರೆ ನೊಬೆಲ್ ಕಾರಣವಾಗಿ ಅದರ ಬಗ್ಗೆ ಹೆಚ್ಚು ಜನ ಗಮನ ಕೊಡುವಂತಾಯಿತು. ನಾನೂ ಆ ಬಗ್ಗೆ ಪುಸ್ತಕಗಳನ್ನು ಬರೆಯುವುದಕ್ಕೆ ಶುರು ಮಾಡಿದೆ. ನೊಬೆಲ್‌ಗೆ ಮುಂಚೆ ಸಾಮಾಜಿಕ ವ್ಯಾಪಾರ ಮಾಡಿದ್ದೆನಾಗಲೀ ಆ ಬಗ್ಗೆ ಯಾವ ಟಿಪ್ಪಣಿಯನ್ನೂ ಮಾಡಿರಲಿಲ್ಲ. ಅದಕ್ಕೊಂದು ಸೈದ್ಧಾಂತಿಕ ಚೌಕಟ್ಟನ್ನು ಕಟ್ಟುವುದಕ್ಕಾಯಿತು. ಆ ಚೌಕಟ್ಟನ್ನು ಕಟ್ಟಿಕೊಟ್ಟಾಗ ವಾದವಿವಾದ, ಮಾತುಕತೆ, ಪ್ರಶ್ನೋತ್ತರಗಳು ನಡೆದವು. ಹೀಗಾಗಿ ನಾನು ಹೆಚ್ಚು ಬರೆದೆ. ಜನರು ಓದಿಯಾದರೂ ಇದನ್ನು ಅರ್ಥ ಮಾಡಿಕೊಳ್ಳಲಿ ಅನ್ನಿಸಿತು. ಎರಡು ಪುಸ್ತಕಗಳನ್ನು ನಾನು ಬರೆದೆ. ಅವುಗಳಿಂದ ಕೆಲವು ವಿಷಯಗಳೂ ಸ್ಪಷ್ಟವಾದುವು.

***

* ಯಾವಾಗಲೂ ಜನರ ನಡುವೆಯೇ ಇರುತ್ತೀರಿ. ನಿಮಗೆ ಖಾಸಗಿ ಬದುಕೆಂಬುದಿದೆಯೇ?
ಇದು ಬಿಟ್ಟರೆ ನನಗೆ ಬೇರೇನೂ ಆಸಕ್ತಿಗಳೇ ಇಲ್ಲ. ನಾನು ಒಂಟಿ ವಿಷಯ ಪ್ರವೀಣ. ಅದು ನನಗೆ ನೆಮ್ಮದಿಯನ್ನು ತಂದಿದೆ.

***

* ಎಂದಾದರೂ ರಜೆ ಮೇಲೆ ಹೋಗಿದ್ದೀರಾ?
ನಾನು ನಿರಂತರ ರಜೆಯ ಮೇಲೆಯೇ ಇರುವವನು. ನಿಮಗಿಷ್ಟವಾದದ್ದು ಮಾಡುವುದೇ ರಜೆಯಲ್ಲವೇ. ಕಲಾವಿದನೊಬ್ಬನ ರಜೆ ಹೆಚ್ಚಿನ ಪೇಂಟಿಂಗ್ ಮಾಡೋದಕ್ಕೇ ತಾನೆ. ಹಾಗೇ ನನಗೂ. ಕೆಲಸವೂ ಇದೇ. ರಜೆಯೂ ಇದೇ.

***

* ಅಲ್ಪಕಾಲದ ಮಟ್ಟಿಗೆ ನೀವು ರಾಜಕೀಯಕ್ಕೆ ಇಳಿಯುವ ಮಾತಿತ್ತು. ನಮ್ಮವರೇ ಆದ ನಂದನ್ ನೀಲೇಕಣಿಯ ಹಾಗೆ – ನೀವು ಅದನ್ನು ಮುಟ್ಟಿ ಅಲ್ಲಿಂದ ದೂರಸರಿದಿರಿ. ಚುನಾವಣೆ – ರಾಜಕೀಯಗಳಿಗೆ ಬೇರೆಯೇ ಮನಸ್ಥಿತಿ ಬೇಕೆಂದು ನಿಮಗನ್ನಿಸುತ್ತದೆಯೇ? ನೀವು ರಾಜಕೀಯ ನಾಯಕರಾಗಿದ್ದರೆ ಒಳ್ಳೆಯದೇ ಆಗುತ್ತಿತ್ತು. ನಿಮ್ಮಲ್ಲಿ ಉತ್ತಮ ವಿಚಾರಗಳಿವೆ, ಹಾಗೂ ಅದನ್ನು ಜಾರಿಗೊಳಿಸುವ ತಂತ್ರವೂ ಇದೆ. ಈ ಎಲ್ಲವೂ ಇದ್ದಾಗ್ಯೂ ನೀವು ರಾಜಕೀಯ ಕೈಬಿಟ್ಟಿರಿ ಏನಾಯಿತು?
ನನಗೆ ರಾಜಕೀಯ ಸೇರಬೇಕೆಂದೇನೂ ಇರಲಿಲ್ಲ. ಆ ಸಂದರ್ಭ ವಿಚಿತ್ರವಾಗಿತ್ತು. ನಮ್ಮ ದೇಶದಲ್ಲಿ ಮಿಲಿಟರಿ ಆಡಳಿತವಿತ್ತು. ರಾಜಕೀಯ ನಾಯಕರೆಲ್ಲಾ ಜೈಲಿನಲ್ಲಿದ್ದರು. ಬಂಧನದಲ್ಲಿರಿಸಿದ್ದ ರಾಜಕೀಯ ನಾಯಕರಿಗೆ ಶಿಕ್ಷೆಯೂ ಬೀಳುವುದರಲ್ಲಿತ್ತು. ಜನರೂ ಅವರಿಗೆ ಶಿಕ್ಷಯಾಗಲೇಬೇಕೆಂಬ ಮಾತನ್ನು ಆಡುತ್ತಿದ್ದರು. ರಾಜಕೀಯ ನಾಯಕರೆಲ್ಲಾ ಶಿಕ್ಷೆಗೊಳಗಾಗಿ ಜೈಲಿನಲ್ಲಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸುವವರು ಯಾರು? ಚುನಾವಣೆ ಆಗುವುದಾದರೂ ಹೇಗೆ?

ಜನ ನನ್ನ ಬಳಿಗೆ ಬಂದು “ಈಗ ನೀನೇ ಏನಾದರೂ ಮಾಡು; ಜನರಿಗೆ ನೀನು ಗೊತ್ತು; ಅವರು ನಿನ್ನನ್ನು ಗೌರವಿಸುತ್ತಾರೆ, ಅಭಿಮಾನದಿಂದ ನೋಡುತ್ತಾರೆ; ನೀನು ರಾಜಕೀಯಕ್ಕಿಳಿದರೆ ರಾಜಕಾರಣದ ಶುದ್ಧೀಕರಣವೂ ಆಗುತ್ತೆ” ಎಂದೆಲ್ಲಾ ಹೇಳಿದರು. ನಾನು, ‘‘ಇಲ್ಲ, ಇದು ನನ್ನ ಕೆಲಸವಲ್ಲ. ನಾನು ರಾಜಕಾರಣಿಯಾಗಿ ನಿಲ್ಲುವುದಕ್ಕೆ ಬೇಕಾದ ಮನಸ್ಥಿತಿ ನನಗಿಲ್ಲ. ಇದು ಗಿಟ್ಟುವುದಿಲ್ಲ’’ ಅಂತ ಹೇಳಿದೆ. ಆದರೆ ನನ್ನ ಸುತ್ತಲಿದ್ದವರು “ಇದು ನಿನ್ನ ಜವಾಬ್ದಾರಿ. ನೀನು ನಿನ್ನ ಜವಾಬ್ದಾರಿಯನ್ನು ನಿಭಾಯಿಸದಿದ್ದರೆ ಹೇಗೆ” ಎಂದು ಕೇಳಿದರು. ನಾನೇ ನನ್ನ ಜವಾಬ್ದಾರಿಯಿಂದ ಓಡಿಹೋಗುತ್ತಿದ್ದಂತೆ, ದೇಶಕ್ಕೆ ಅವಶ್ಯವಾದ ಕೆಲಸದಿಂದ ತಪ್ಪಿಸಿಕೊಳ್ಳುತ್ತಿರುವಂತೆ ಮಾತಾಡಿದರು. ‘‘ನಿನಗೆ ನೊಬೆಲ್ ಬಂದು ಜೀವನ ಸಾರ್ಥಕವಾಗಿದೆ, ಬೇರೆ ಯಾವುದರ ಬಗ್ಗೆಯೂ ನಿನಗೆ ಈಗ ಕಾಳಜಿಯಿಲ್ಲ’’ ಅಂದುಬಿಟ್ಟರು. ಬಹುಶಃ ನಾನು ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿಲ್ಲವೇನೋ ಅನ್ನಿಸಿತು. ಆ ಗಳಿಗೆಯಲ್ಲಿ – ಯಾರೊಂದಿಗೂ ಮಾತಾಡದೇ ನಾನೇ ಒಂದು ಪತ್ರಿಕಾ ಹೇಳಿಕೆಯನ್ನು ನೀಡಿದೆ. ನಾನು ರಾಜಕೀಯ ಸೇರುತ್ತಿರುವುದಾಗಯೂ, ಒಂದು ಪಕ್ಷವನ್ನು ಕಟ್ಟುವುದಾಗಿಯೂ ಘೋಷಿಸಿದೆ. ಇಂಟರ್ನೆಟ್ ಮೂಲಕ ಈ ಪಕ್ಷದ ರೂಪುರೇಷೆ ಹೇಗಿರಬೇಕು, ನಾನು ಯಾವರೀತಿಯಲ್ಲಿ ರಾಜಕಾರಣ ಮಾಡಬೇಕು – ಹಾಗೂ ಮಾಡಬಾರದು ಎನ್ನುವ ಸಲಹೆ ಸೂಚನೆಗಳನ್ನು ಕಳುಹಿಸುವಂತೆ ಜನರನ್ನು ಕೇಳಿಕೊಂಡೆ. ಬಹಳಷ್ಟು ಜನ ನಾನು ಮಾಡುತ್ತಿರುವುದು ಸರಿಯಾಗಿದೆ ಎಂದರು. ನನ್ನ ನಾಯಕತ್ವವನ್ನು ಸ್ವಾಗತಿಸಿದರು. ಕೆಲವರು ನನ್ನನ್ನು ಮೂರ್ಖನೆಂದು ಕರೆದರು. ಕೆಲವರಂತೂ ನಾನು ಸೈನ್ಯದ ಕೀಲುಬೊಂಬೆಯೆಂದೂ ವಿವರಿಸಿದರು. ಈಗಲೂ ಜನ ನನ್ನನ್ನು ಸೈನ್ಯವೇ ಎತ್ತಿಕಟ್ಟಿತು ಅಂದುಕೊಳ್ಳುತ್ತಾರೆ.

ಪ್ರತಿಯೊಬ್ಬರಿಗೂ ತಮ್ಮದೇ ಪಿತೂರಿ ಕಥೆಗಳಿರುತ್ತವೆ; ರಾಜಕಾರಣಿಗಳು ಯೋಚಿಸುವುದೂ ಪಿತೂರಿಗಳ ಮೂಲಕವೇ. ಆದರೆ ನಾನು ನನಗೆ ತಕ್ಷಣಕ್ಕೆ ತೋಚಿದ್ದನ್ನು ಮಾಡಿದ್ದೆ. ಆಗ ಈ ಬಗ್ಗೆ ಉತ್ಸಾಹವೂ ಸಮಾಚಾರವೂ ಇತ್ತು. ಸಮಯ ಕಳೆಯುತ್ತಿದ್ದಂತೆ ಜನ ಪಕ್ಷದ ಘೋಷಣೆ ಯಾವಾಗ ಮಾಡುತ್ತೀರಿ, ಪಕ್ಷ ಕಟ್ಟುವುದಾಗಿ ಹೇಳಿದಿರಿ, ಇನ್ನೂ ಏನೂ ಆಗಿಲ್ಲವೇ ಎಂದೆಲ್ಲಾ ಕೇಳುತ್ತಿದ್ದರು. ನಾನು ಸಮಯ ಬರಲಿ ಎಂದಷ್ಟೇ ಹೇಳಿದ.

ಪಕ್ಷ ಹೇಗಿರಬೇಕೆಂದು ನಾನು ಸಾಕಷ್ಟು ಯೋಚಿಸಿದೆ. ಹೇಗೆ ಘೋಷಿಸಬೇಕೆಂದೂ ನನ್ನ ಸಹಚರರು ಯಾರಿರಬೇಕೆಂದೂ ಯೋಚಿಸಿದೆ. ಹೀಗೆ ಯೋಚಿಸುತ್ತಿರುವಾಗ ನಾನು ನನಗೆ ತಿಳಿದವರನ್ನು ನನ್ನ ಜೊತೆ ಸೇರಲು ಕೇಳಿಕೊಂಡೆ. ಯಾರನ್ನು ಕೇಳಿದರೂ ನನಗೆ ಬಂದ ಉತ್ತರ “ಒಹ್ ಇಲ್ಲ! ಇದು ನಮಗಲ್ಲ”…  ಆದರೆ ನನ್ನನ್ನು ಇಲ್ಲಿಗೆ ತಳ್ಳಿದವರು ಇವರೇ ಆಗಿದ್ದರು.

ನನಗೆ ಬರುತ್ತಿದ್ದ ಪ್ರತಿಕ್ರಿಯೆಗಳು ಹೀಗಿರುತ್ತಿದ್ದುವು: “ನೋಡಿ, ನಾನು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದೇನೆ. ನಾನು ರಾಜಕೀಯ ಸೇರುವ ಹಾಗಿಲ್ಲ. ಆದರೆ ನೀವು ಮಾಡಿ, ನಾನು ನಿಮ್ಮ ಬೆಂಬಲಿಗನಾಗಿರುತ್ತೇನೆ”,  “ಓ! ನಾನು ಪತ್ರಿಕಾ ಸಂಪಾದಕ. ನನ್ನ ಕೆಲಸ ಬರವಣಿಗೆ ಮತ್ತು ಸಮಾಚಾರವನ್ನು ಸಂಪಾದಿಸುವುದು. ಆದರೆ ಇದು ನಿಮಗೆ ಹೇಳಿ ಮಾಡಿಸಿದ್ದು. ನಿಮಗೆ ಜಯವಾಗಲಿ, ನಾನು ನಿಮ್ಮ ಬೆಂಬಲಕ್ಕಿದ್ದೇನೆ”. ನನಗೆ ಈ ರೀತಿಯ ಪ್ರತಿಕ್ರಿಯೆಗಳು ಬೇಕಾದಷ್ಟು ಬಂದುವು. ತಾವು ರಾಜಕಾರಣದಲ್ಲಿಲ್ಲದ ಕಾರಣ ಎಲ್ಲರೂ ನನ್ನ ಜೊತೆಗಿರಲು ನಿರಾಕರಿಸುತ್ತಿದ್ದರು.

ಆಮೇಲೆ ಮತ್ತೊಂದು ಗಮ್ಮತ್ತಿನ ವಿಚಾರವಾಯಿತು. ಭ್ರಷ್ಟ ರಾಜಕಾರಣಿಗಳೆಲ್ಲರೂ ನನ್ನನ್ನು ಸೇರಬೇಕೆಂದು ಬಯಸಿದರು. ಸೈನ್ಯ ಅವರ ಹಿಂದೆ ಬಿದ್ದಿತ್ತು. ಎಲ್ಲರೂ ಜೈಲಿನ ದಾರಿಯಲ್ಲಿದ್ದರು. ನನ್ನ ಜೊತೆಯಲ್ಲಿ ಗುರ್ತಿಸಿಕೊಂಡರೆ ಸೈನ್ಯದವರು ಕಿರುಕುಳ ಕೊಡುವುದಿಲ್ಲ ಎಂದು ಅವರಿಗನ್ನಿಸಿತ್ತು. ಸೇನೆ ನನ್ನ ಬಗ್ಗೆ ಒಲವು ತೋರುತ್ತಿದೆ ಎನ್ನುವ ಅಭಿಪ್ರಾಯವಂತೂ ಇದ್ದೇ ಇತ್ತಲ್ಲ... ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನನ್ನ ಹಿಂದೆ ಅಡಗಬೇಕೆಂದು ಕೆಲವರು ಯೋಚಿಸಿದರು.

ಹಲವು ವಾರಗಳ ನಂತರ ನಾನು ಯೋಚಿಸಿದೆ: “ದೇವರೇ ಇವರುಗಳನ್ನು ಕಟ್ಟಿಕೊಂಡು ನಾನು ಪಕ್ಷ ಕಟ್ಟಿದರೆ ಜನ ಏನೆಂದಾರು?”. ನಾನು ಈ ಕೆಲಸವನ್ನು ಮಾಡಲು ಅಸಮರ್ಥನಾಗಿದ್ದೆ. ಹೀಗಾಗಿ ನಾನು ವಾಪಸ್ಸು ಪತ್ರಿಕೆಗಳ ಬಳಿಹೋಗಿ – ‘‘ಆಗ ನಾನು ಯಾರೊಂದಿಗೂ ಚರ್ಚಿಸಲಿಲ್ಲ. ನಾನು ಪಕ್ಷವನ್ನು ಕಟ್ಟುತ್ತಿಲ್ಲ, ನನ್ನ ರಾಜಕೀಯ ಪಯಣ ಮುಗಿಯಿತು’’ ಎಂದು ಹೇಳಿದೆ. ಅಲ್ಲಿಗೆ ಮುಗಿಯಿತು. ರಾಜಕೀಯ ನನಗೆ ಒಗ್ಗಿದ್ದಲ್ಲ, ಅಷ್ಟೇ.

(ಸಂದರ್ಶಕರು ಕಥೆಗಾರರು ಹಾಗೂ ಬೆಂಗಳೂರಿನ ‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೇನೇಜ್‌ಮೆಂಟ್‌’ನಲ್ಲಿ ಸಂದರ್ಶಕ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT